
ಪ್ರತಿಯೊಂದು ಗ್ರಾಮ ಪಂಚಾಯಿತಿ ಗಳಲ್ಲೂ ಸಹ ಒಂದೊಂದು ಗ್ರಂಥಾಲಯ ಇದೆ. ಪ್ರಾರಂಭದಿಂದ ಇತ್ತೀಚಿನ ಹಲವು ವರ್ಷಗಳವರೆಗೂ ಕೂಡ ಗ್ರಂಥಾಲಯ ಇಲಾಖೆ ಬಹಳ ಸಮರ್ಪಕವಾಗಿ ಕೆಲಸ ನಿರ್ವಹಣೆ ಮಾಡಿದ್ದು, ಆ ಗ್ರಾಮಗಳ ಗ್ರಂಥಾಲಯದಲ್ಲಿ ಅತ್ಯುತ್ತಮ ಸವಲತ್ತುಗಳನ್ನು ನೀಡಿ, ಅಲ್ಲಿ ಪುಸ್ತಕಗಳು ಎಲ್ಲಾ ವಿದ್ಯಾರ್ಥಿಗಳಿಗೂ, ಸಾರ್ವಜನಿಕರಿಗೂ ಉಚಿತವಾಗಿ, ಮಾರ್ಗದರ್ಶನ ನೀಡಲು ಓದಲು ನೆರವಾಗುತ್ತಿದೆ. ಇದೊಂದು ಸಂತಸದ ವಿಷಯ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರ್ಪಡೆಗೊಂಡ ನಂತರ ಹೆಚ್ಚು ಮಕ್ಕಳನ್ನು ಮತ್ತು ಓದುಗರನ್ನು ಸೆಳೆಯಲು ಸಲುವಾಗಿ ಕಳೆದ ಮೂರು ವರ್ಷಗಳಿಂದಲೂ ಕೂಡ ಬೇಸಿಗೆ ಶಿಬಿರದಂತಹ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಈ ಬಾರಿ ಮೂರನೆಯ ವರ್ಷವಾಗಿದೆ ಎಂದು ಸಾಲಿಗ್ರಾಮ ಗ್ರಂಥಾಲಯದ ಗ್ರಂಥ ಪಾಲಕಿ ದಿವ್ಯಕುಮಾರಿ ಎಸ್ ಎಸ್ ಹೇಳಿದ್ದಾರೆ.

ಇವರು ಕಳೆದ 19 ವರ್ಷಗಳಿಂದಲೂ ಕೂಡ ಇಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ನಮ್ಮ ಗ್ರಂಥಾಲಯ ಪುಸ್ತಕಗಳ ಜೊತೆಗೆ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇಂತಹ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಲ್ಲೂ ಕೂಡ ಅನೇಕ ಕಾರ್ಯ ಚಟುವಟಿಕೆಗಳನ್ನು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಹಮ್ಮಿಕೊಂಡು ಗ್ರಂಥಾಲಯವು ಸಾರ್ವಜನಿಕ ಕ್ಷೇತ್ರಕ್ಕೆ ಮತ್ತಷ್ಟು ತೆರೆದುಕೊಳ್ಳಲು ಅನೇಕ ವಿನೂತನ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡು ಸಾಗುತ್ತಿರುವುದು ಹೆಮ್ಮೆಯ ವಿಷಯ.
ಪ್ರಸ್ತುತ ದಿನಗಳಲ್ಲಿ ಈಗ ಸಾರ್ವಜನಿಕ ಗ್ರಂಥಾಲಯ ತನ್ನ ಹೆಸರನ್ನ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿಕೊಂಡು “ಸಾರ್ವಜನಿಕ ಗ್ರಂಥಾಲಯ ಮತ್ತು ಅರಿವು ಕೇಂದ್ರ” ಎಂಬುದರೊಂದಿಗೆ ಮುನ್ನಡೆಯುತ್ತಿದೆ. ಇಂತಹ ಗ್ರಾಮ ಪಂಚಾಯಿತಿಗಳಲ್ಲಿ ಬೇಸಿಗೆ ಶಿಬಿರ ಎಂಬ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಯಶಸ್ವಿಯಾಗಿ ನಿರ್ವಹಣೆ ಮಾಡಿರುವುದು ಮತ್ತೊಂದು ವಿಶೇಷ. ಆಯಾ ಗ್ರಾಮ ಪಂಚಾಯಿತಿಯು ಕೂಡ ಒಂದಲ್ಲ ಒಂದು ರೀತಿಯಲ್ಲಿ ನೆರವನ್ನು ಕೂಡ ನೀಡುತ್ತಿದೆ.

ಹೌದು ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಈ ಕ್ರಿಯೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸಮಾಜದಲ್ಲಿ ಮುಂದೆ ಬರಬಹುದು. ಜೊತೆಗೆ ಇವತ್ತಿನ ದಿನಗಳಲ್ಲಿ ಎಷ್ಟು ಓದಿದರು ಕೂಡ ಸಾಲದು. ಅಂದರೆ ಪಠ್ಯ ವಿಷಯವನ್ನು ಹೊರತುಪಡಿಸಿ, ನಾವು ತಿಳಿದುಕೊಳ್ಳಬೇಕಾದದ್ದು ಬಹಳಷ್ಟು ಇದೆ. ಅಂತಹ ಎಲ್ಲಾ ತಿಳುವಳಿಕೆಗೆ ಮುಖ್ಯ ವೇದಿಕೆಯಾಗಿ ಮುನ್ನುಡಿಯಾಗಿ ಗ್ರಂಥಾಲಯಗಳು ನಮ್ಮ ಕಣ್ಮುಂದೆ ಕಾಣಸಿಗುತ್ತವೆ. ಅವುಗಳನ್ನು ಸಮರ್ಪಕವಾಗಿ ಯಾರು ಬಳಸಿಕೊಳ್ಳುತ್ತಾರೋ ಅವರು ಒಂದಲ್ಲ ಒಂದು ದಿನ ತಮ್ಮ ಯಶಸ್ಸಿನ ಮೆಟ್ಟಿಲನ್ನ ಏರುವುದರಲ್ಲಿ ಸಂಶಯವೇ ಇಲ್ಲ
ಗ್ರಂಥಾಲಯಗಳಲ್ಲಿ ಒಂದಲ್ಲ ಒಂದು ರೀತಿಯ ಪುಸ್ತಕಗಳನ್ನ ಓದಿ ಇವತ್ತಿನ ದಿನಗಳಲ್ಲಿ ಹಲವರು ಅತ್ಯುನ್ನತ ಹುದ್ದೆಗಳನ್ನು, ಸ್ಥಾನಮಾನಗಳನ್ನ ಪಡೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಾಲ್ಯದ ಹಂತದಲ್ಲಿಯೇ ಓದುವಿನ ಮಹತ್ವವನ್ನ ತಿಳಿಸಬೇಕು. ಜೊತೆಗೆ ಅನೇಕ ಚಟುವಟಿಕೆಗಳನ್ನ ಮಾಡಿಸಿಕೊಂಡು ಇದರ ಜೊತೆ ಜೊತೆಗೆ ಅವರು ಗ್ರಂಥಾಲಯಕ್ಕೆ ಬರಲು ಅನೇಕ ಯೋಜನೆಗಳನ್ನು ಕೂಡ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೊಸ ಕಾರ್ಯ ಸೂಚಿಯನ್ನು ಕೂಡ ಮಾಡುತ್ತಾ ಬರುತ್ತಿದೆ.

ಹೇಗಿದ್ದರೂ ಮಕ್ಕಳಿಗೆ ರಜೆ ಇದ್ದುದ್ದರಿಂದ “ಬೇಸಿಗೆ ಶಿಬಿರ”ದ ನೆಪದಲ್ಲಿ ಅನೇಕ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳು ತಮ್ಮ ಕೇಂದ್ರ ಇಲಾಖೆಯ ನೆರವಿನೊಂದಿಗೆ ಅನೇಕ ವಿನೂತನ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಯಶಸ್ಸು ಪಡೆದಿವೆ. ಅಂತಹ ಗ್ರಂಥಾಲಯಗಳಲ್ಲಿ ಹೊಸದಾಗಿ ತಾಲೂಕಾಗಿರುವ ಸಾಲಿಗ್ರಾಮ ತಾಲೂಕಿನ ವ್ಯಾಪ್ತಿಗೆ ಬರುವ ಸಾಲಿಗ್ರಾಮದಲ್ಲೇ ಇರುವ ಸಾರ್ವಜನಿಕರ ಗ್ರಂಥಾಲಯ ಮತ್ತು ಅರಿವು ಕೇಂದ್ರ ಈ ನಿಟ್ಟಿನಲ್ಲಿ ಗಮನ ಸೆಳೆದಿದೆ.
ಈ ಗ್ರಂಥಾಲಯದ ಆವರಣದಲ್ಲಿ ನಿರಂತರವಾಗಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಅನೇಕ ವಿನೂತನ ಚಟುವಟಿಕೆಗಳನ್ನ ಮಕ್ಕಳಿಗೆ ಮಾಡಿಸುವುದರ ಮೂಲಕ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಬರಲು ಮಾರ್ಗದರ್ಶನ ನೀಡಿದೆ.
ಪ್ರಕೃತಿಯೊಂದಿಗೆ ಕಲಿಕೆ: ಮಕ್ಕಳು ಆಟವಾಡುತ್ತಾ ಕಲಿಯಲು ಆಟಿಕೆಗಳು ಬಣ್ಣಗಳು ಅಥವಾ ಬೆಲೆ ಬಾಳುವ ವಸ್ತುಗಳೆ ಬೇಕೆಂದೇನಿಲ್ಲ ನಮ್ಮ ಸುತ್ತಮುತ್ತ ಸಿಗುವ ಅನೇಕ ಎಲೆಗಳು, ಕಡ್ಡಿಗಳು ಇತರ ಪ್ರಕೃತಿ ಸಹಜ ವಸ್ತುಗಳಿಂದಲೂ ಸಹ ಅನೇಕ ವಿಧವಾದ ಕಲಾತ್ಮಕ ವಸ್ತುಗಳನ್ನು ತಯಾರಿಸಿ ಸಂತೋಷಪಡಬಹುದು. ಈ ನಿಟ್ಟಿನಲ್ಲಿ ಅವಗಳೆಲ್ಲ ಸಾಮಗ್ರಿಗಳೊಂದಿಗೆ ಶಿಬಿರದಲ್ಲಿ ಪ್ರಧಾನವಾಗಿ ಕಾರ್ಯಕ್ರಮ ರೂಪಿಸಲಾಗಿತ್ತು ಎನ್ನುತ್ತಾರೆ ಸಾಲಿಗ್ರಾಮದ ಗ್ರಂಥ ಪಾಲಕಿ ದಿವ್ಯಕುಮಾರಿ ಎಸ್ ಎಸ್.
ಎಲೆಗಳು ಋತುಮಾನದ ಪ್ರತೀಕವಾಗಿ ಅವುಗಳ ಬಣ್ಣಗಳು ಬದಲಾಗುತ್ತವೆ. ಬೇಸಿಗೆಯಲ್ಲಿ ಉದುರಿದ ಎಲೆಗಳಿಂದ ಅನೇಕ ಮಾದರಿಯ ಕೀಟಗಳು, ಪ್ರಾಣಿಗಳು, ಪಕ್ಷಿಗಳು ಹಾಗೂ ವಿವಿಧ ವಿನ್ಯಾಸಗಳನ್ನು ರಚಿಸಿ ಸಂತೋಷ ಪಡಬಹುದು ಇವು ಮಕ್ಕಳ ಮನೋವಿಕಾಸಕ್ಕೆ ಸಹಕಾರಿ. ಈ ಎಲ್ಲಾ ಅಂಶಗಳನ್ನು ನಾವು ಶಿಬಿರದಲ್ಲಿ ಮಕ್ಕಳಿಗೆ ಕಲಿಸಿದೆವು. ಅವರು ಅದರಿಂದ ಸಂಭ್ರಮ ಪಡುವುದರ ಜೊತೆಗೆ ತಮ್ಮ ಚಟುವಟಿಕೆಗಳನ್ನ ಹೆಚ್ಚಿಸಿಕೊಂಡಿದ್ದಾರೆ ಎನ್ನುತ್ತಾರೆ.

ಇದು ಮಕ್ಕಳ ಮನೋವಿಕಾಸಕ್ಕೂ ಸಹ ಉಪಯೋಗ ಮತ್ತು ನಿರೂಪಯುಕ್ತ ವಸ್ತುಗಳಿಂದ ಆಕರ್ಷಕ ವಸ್ತುಗಳ ತಯಾರಿಕೆಗೆ ಸಹಕಾರಿ ಹಾಗೂ ಪ್ರಕೃತಿಗೂ ಮಾರಕವಲ್ಲ ಎನ್ನುವ ಅಂಶವನ್ನು ಮಕ್ಕಳ ಮನದಲ್ಲಿ ಮೂಡಿಸಿದವು. ಅದು ಬಹಳ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬಂದಿತು ಎನ್ನುತ್ತಾರೆ.
ಸಾಲಿಗ್ರಾಮ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಒಂದು ತಿಂಗಳ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಕಲೆ, ಪೇಪರ್ ಕ್ರಾಫ್ಟ್, ಕ್ಲೇ ಮಾಡೆಲ್ ತಯಾರಿ, ವಿಜ್ಞಾನ ಪ್ರಯೋಗ, ಕಥೆ ಹೇಳುವುದು, ಗಟ್ಟಿ ಓದು ಚಟವಟಿಕೆ, ‘ಎಲೆಗಳ ಕ್ರಾಫ್ಟ್ ಪಕ್ಷಿವೀಕ್ಷಣೆ ಕಾರ್ಯಕ್ರಮ, ಕೇರಂ, ಹಾವು ಏಣಿ ಆಟ, ಪಗಡೆ ಮುಂತಾದ ಆಟ ಹಾಗೂ ಪಾಠಗಳನ್ನು ಕಲಿತು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಾಲಿಗ್ರಾಮ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿ ಎ ಎನ್ ರವರು ಕೂಡ ಕಥೆ ಹೇಳುವುದರ ಜೊತೆಗೆ ಅನೇಕ ಹೊಸ ಚಟುವಟಿಕೆಗಳನ್ನ ಮಕ್ಕಳಿಂದಲೇ ಮಾಡಿಸಿದರು. ಇದೇ ರೀತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್ ರವರು ಕೂಡ ಭಾಗಿಯಾಗಿದ್ದರು.
ಅಂತಿಮವಾಗಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ರವಿ ಎ ಎನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ತಿಲಕ್ ರಾಜ್, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಮಾಜಿ ಗ್ರಾ.ಪಂ ಅಧ್ಯಕ್ಷರಾದ ಸುಮಾ ರವರು ಹಾಗೂ ಶ್ರೀ ಯೋಗನರಸಿಂಹ ಸ್ವಾಮಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಜ್ಯೋತಿ ಜಯಸೇನ್ ಕುಮಾರ್ ಅವರು, ಶಿಬಿರಾರ್ಥಿಗಳು ಮತ್ತು ಗ್ರಂಥಾಲಯದ ಮೇಲ್ವಿಚಾರಕರು ಹಾಜರಿದ್ದರು. ಭಾಗವಹಿಸಿದ ಎಲ್ಲರಿಗೂ ಗ್ರಾಮ ಪಂಚಾಯತಿ ಗ್ರಂಥಾಲಯದ ವತಿಯಿಂದ ಧನ್ಯವಾದಗಳನ್ನು ಅರ್ಪಿಸಲಾಗಿದೆ ಎನ್ನುತ್ತಾರೆ ದಿವ್ಯಕುಮಾರಿ ರವರು.
ಒಟ್ಟಿನಲ್ಲಿ ಗ್ರಂಥಾಲಯ ನಗರ ಪ್ರದೇಶ ಅಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಕೂಡ ತಾಲೂಕು ಹಾಗೂ ಗ್ರಾಮ ಪಂಚಾಯಿತಿಯ ಮಟ್ಟದಲ್ಲೂ ಕೂಡ ಇರುವುದರಿಂದ ಮಕ್ಕಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಬೇಸಿಗೆ ಶಿಬಿರದ ನೆಪದಲ್ಲಿ ಮಕ್ಕಳು ಗ್ರಂಥಾಲಯಕ್ಕೆ ಬರುವುದನ್ನ ಮೊದಲು ಕಲಿತುಕೊಂಡರು ಎನ್ನುವುದು ಶಿಬಿರಾರ್ಥಿಗಳ ಅನಿಸಿಕೆ. ಜೊತೆಗೆ ತಾಲೂಕು ಅಧಿಕಾರಿಗಳ ಅನಿಸಿಕೆಯು ಕೂಡ ಆಗಿದೆ.

ಇಲ್ಲಿ ಮಕ್ಕಳು ಅಷ್ಟೇ ಅಲ್ಲದೆ ದೊಡ್ಡವರು ಕೂಡ ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಖ್ಯವಾಗಿ ತಂದೆ-ತಾಯಿಗಳು, ಶಿಕ್ಷಕರು, ಪಠ್ಯ ವಿಷಯಗಳ ಜೊತೆಗೆ ಗ್ರಂಥಾಲಯಗಳಲ್ಲಿ ಓದಿನ ಅರಿವನ್ನ ಹೆಚ್ಚಿಸುವಂತಹ ಪುಸ್ತಕಗಳು ಇರುವುದರಿಂದ ಅಲ್ಲಿ ವಾರಕ್ಕೆ ಎರಡು ಮೂರು ಬಾರಿಯಾದರೂ ನಾವೇ ಕರೆದುಕೊಂಡು ಹೋಗುವಂತಹ ವಾತಾವರಣ ನಿರ್ಮಾಣವಾಗಬೇಕು.
ದೊಡ್ಡವರಾದ ನಾವೇ ಹೆಚ್ಚು ಓದುತ್ತಿಲ್ಲ ಯಾವಾಗಲೂ ಮೊಬೈಲ್ ಹಿಡಿದುಕೊಂಡಿರುತ್ತೇವೆ. ಇದರ ಪ್ರಭಾವದಿಂದ ಮಕ್ಕಳು ಕೂಡ ಅವರ ಹಾದಿಯನ್ನೇ ಹಿಡಿಯುತ್ತಿದ್ದಾರೆ. ಆದುದರಿಂದ ನಾವು ಮನೆಯಲ್ಲಿ ಒಂದು ಗ್ರಂಥಾಲಯವನ್ನು ಮಾಡಬೇಕು. ಮಕ್ಕಳನ್ನ ಮಾಲ್ ಸಂಸ್ಕೃತಿಯತ್ತ ಕರೆದುಕೊಂಡು ಹೋಗದೆ ಅವರಿಗೆ ಓದಿನ ಅರಿವನ್ನ ಮೂಡಿಸಬೇಕು.
ಆದುದರಿಂದ ಮಕ್ಕಳಿಗೆ ಹುಟ್ಟು ಹಬ್ಬ, ಇನ್ನಿತರ ಶುಭ ಸಮಾರಂಭಗಳಲ್ಲಿ ಪುಸ್ತಕಗಳನ್ನ ಉಚಿತವಾಗಿ ನೀಡುವ ಸಂಸ್ಕೃತಿಯನ್ನು ನಾವು ಮೊದಲು ಮಾಡಬೇಕು. ತಿಂಗಳಿಗೆ ಒಂದು ಪುಸ್ತಕವನ್ನಾದರೂ ಕೊಂಡು ತರಬೇಕು. ದಿನಪತ್ರಿಕೆಗಳನ್ನ ಓದಲು ತಿಳಿಸಬೇಕು. ಆಗ ಮಾತ್ರ ಮಕ್ಕಳ ಜ್ಞಾನದ ವಿಸ್ತಾರ ಹೆಚ್ಚಾಗುತ್ತದೆ. ಪಠ್ಯ ವಿಷಯಗಳಷ್ಟೇ ಓದು ಎನ್ನುವಂತಾಗಬಾರದು. ಮಕ್ಕಳಿಗೆ ಓದಿನ ಆಸಕ್ತಿಯು ಕೂಡ ಗ್ರಂಥಾಲಯಗಳು ಮೂಡಿಸುತ್ತವೆ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸುವುದು ಒಳಿತು.









