LatestMysore

ಬೈಲುಕುಪ್ಪೆಯ ‘ಶತಾಕ್ಷಿ ವನ’ವನ್ನು ಪ್ರಶಂಸಿಸಿದ ಮೋದಿ – ಮನ್ ಕಿ ಬಾತ್‌ನಲ್ಲಿ ಹೇಳಿದ್ದೇನು…?

ಪಿರಿಯಾಪಟ್ಟಣ(ರವಿಚಂದ್ರ ಬೂದಿತಿಟ್ಟು): ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಟಿಬೆಟಿಯನ್ ಶಿಬಿರದಲ್ಲಿ ರೂಪುಗೊಂಡಿರುವ ‘ಶತಾಕ್ಷಿ ವನ’(satakshi vana) ಕಿರು ಅರಣ್ಯ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್ ನಲ್ಲಿ ಈ ಯೋಜನೆಯನ್ನು ಉಲ್ಲೇಖಿಸಿ, ಪರಿಸರ ಸಂರಕ್ಷಣೆಯಲ್ಲಿನ ಜನರ ಪಾತ್ರವನ್ನು ಪ್ರಶಂಸಿಸಿದರು. ಬೈಲುಕುಪ್ಪೆಯ ಟಿಬೆಟಿಯನ್ ನಿವಾಸಿಗಳು ಸುಮಾರು 100 ಎಕರೆ ಪಾಳು ಭೂಮಿಯನ್ನು ಕೆಲವೇ ವರ್ಷಗಳಲ್ಲಿ ಹಸಿರಿನಿಂದ ಕಂಗೊಳಿಸುವ ದಟ್ಟ ಅರಣ್ಯವಾಗಿ ಪರಿವರ್ತಿಸಿರುವುದು ಗಮನಾರ್ಹ ಸಾಧನೆಯಾಗಿದೆ. ಪರಿಸರದ ಮೇಲಿನ ಬದ್ಧತೆ ಮತ್ತು ಸಮರ್ಪಣೆ ಇದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ.

ಬುದ್ಧನು ಮರದ ಕೆಳಗೆ ಜ್ಞಾನೋದಯ ಪಡೆದಂತೆ, ಪ್ರಕೃತಿಯೇ ದೈವ ಎಂದು ನಂಬುವ ಟಿಬೆಟಿಯನ್ ಸನ್ಯಾಸಿಗಳು ಈ ಕಾಡನ್ನು ನಿರ್ಮಿಸಿದ್ದಾರೆ. ಪ್ರವಾಸಿಗರು ಮತ್ತು ಪರಿಸರ ಪ್ರೇಮಿಗಳಿಗೆ ಇದು ಇಂದು ಜ್ಞಾನದ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಈ ‘ಶತಾಕ್ಷಿ ವನ’ದಲ್ಲಿ ಸಾವಿರಾರು ಔಷಧೀಯ ಸಸ್ಯಗಳು, ಹಣ್ಣು ಮರಗಳು ಹಾಗೂ ಸ್ಥಳೀಯ ತಳಿಯ ಗಿಡಗಳನ್ನು ಬೆಳೆಸಲಾಗಿದ್ದು, ಇದು ಇಂದು ವಿವಿಧ ಪಕ್ಷಿ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿ ಬೆಳೆಯುತ್ತಿದೆ. ಜೀವ ವೈವಿಧ್ಯತೆಯನ್ನು ಕಾಪಾಡುವ ದಿಕ್ಕಿನಲ್ಲಿ ಈ ಪ್ರಯತ್ನ ಮಾದರಿಯಾಗಿದೆ.

ಈ ಯೋಜನೆಯ ವಿಶೇಷತೆ ಎಂದರೆ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ. ಟಿಬೆಟಿಯನ್ ಸನ್ಯಾಸಿಗಳು ಮತ್ತು ಸ್ಥಳೀಯ ನಿವಾಸಿಗಳು ಶ್ರಮದಾನದ ಮೂಲಕ ಈ ಕಾಡನ್ನು ಬೆಳೆಸಿದ್ದು, ಅವರ ಸಮೂಹ ಪ್ರಯತ್ನಕ್ಕೆ ದೇಶದ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮೈಸೂರು ಜಿಲ್ಲೆಯಲ್ಲಿರುವ ಬೈಲುಕುಪ್ಪೆ ಈಗಾಗಲೇ ತನ್ನ ಬೌದ್ಧ ಮಂದಿರಗಳಿಗಾಗಿ ಪ್ರಸಿದ್ಧಿಯಾಗಿದ್ದು, ‘ಶತಾಕ್ಷಿ ವನ’ ಯೋಜನೆ ಆ ಪ್ರದೇಶದ ಹೆಗ್ಗಳಿಕೆಗೆ ಮತ್ತೊಂದು ಮೆರಗು ನೀಡಿದೆ. ಪರಿಸರ ಸಂರಕ್ಷಣೆಯತ್ತ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ಯೋಜನೆ ಪ್ರೇರಣಾದಾಯಕ ಉದಾಹರಣೆಯಾಗಿ ಪರಿಣಮಿಸಿದೆ.

ಪ್ರಧಾನಿ ಮೋದಿ ಹೇಳಿದ್ದೇನು?

ಶೂನ್ಯ ಇಂಗಾಲ ಹೊರಸೂಸುವಿಕೆ (Net Zero Emission) ಗುರಿಯನ್ನು ತಲುಪಲು ಇಂತಹ ಸಣ್ಣ ಪ್ರಯತ್ನಗಳು ಹೇಗೆ ದೊಡ್ಡ ಬದಲಾವಣೆ ತರಬಲ್ಲವು ಎಂಬುದಕ್ಕೆ ಬೈಲುಕುಪ್ಪೆಯ ಶತಾಕ್ಷಿ ವನ ಒಂದು ಅತ್ಯುತ್ತಮ ಉದಾಹರಣೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದರು.

ಬುದ್ಧನು ಮರದ ಕೆಳಗೆ ಜ್ಞಾನೋದಯ ಪಡೆದಂತೆ, ಪ್ರಕೃತಿಯೇ ದೈವ ಎಂದು ನಂಬುವ ಟಿಬೆಟಿಯನ್ ಸನ್ಯಾಸಿಗಳು ಈ ಕಾಡನ್ನು ನಿರ್ಮಿಸಿದ್ದಾರೆ. ಪ್ರವಾಸಿಗರು ಮತ್ತು ಪರಿಸರ ಪ್ರೇಮಿಗಳಿಗೆ ಇದು ಇಂದು ಜ್ಞಾನದ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ ಎಂಬುದಾಗಿ ಸಂತಸ ವ್ಯಕ್ತಪಡಿಸಿದ್ದರು. ಮೋದಿ ಪ್ರಸ್ತಾಪ ಮಾಡಿದ ಬಳಿಕ ಶತಾಕ್ಷಿವನದ ಬಗ್ಗೆ ಸರ್ಚ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

admin
the authoradmin

Leave a Reply

Translate to any language you want