LatestMysore

ಮೈಸೂರಿನಲ್ಲಿ ಅಪರೂಪದ ವಚನ ಕಲ್ಯಾಣ…  ಶರಣರ ಹಾದಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನವಜೋಡಿ…

ಮೈಸೂರು: ಇಂದಿನ ಕಾಲದ ಅದ್ಧೂರಿ ವಿವಾಹಗಳು ಮತ್ತು ಮುಹೂರ್ತದ ಗಡಿಬಿಡಿಗಳ ನಡುವೆ, ಮೈಸೂರಿನ ಜೆ.ಪಿ. ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪವು ಒಂದು ಅಪರೂಪದ ಹಾಗೂ ವೈಚಾರಿಕ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಯಿತು. ಶರಣರ ವಚನಗಳನ್ನೇ ಮಂತ್ರವಾಗಿಸಿಕೊಂಡು, ಯಾವುದೇ ವಾದ್ಯ ಪರಿಕರಗಳಿಲ್ಲದೆ, ರಾಹುಕಾಲ-ಗುಳಿಕಾಲಗಳ ಹಂಗಿಲ್ಲದೆ ‘ವಚನ ಕಲ್ಯಾಣ ಮಹೋತ್ಸವ’ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.

ಚಾಮರಾಜನಗರ ತಾಲ್ಲೂಕಿನ ಮೇಲಾಜಿಪುರದ ನಿವಾಸಿಗಳಾದ  ಮಂಜುಳ ಮತ್ತು  ಸ್ವಾಮಿ ಅವರ ಪುತ್ರ  ಮಂಜೇಶ್ ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಬಸ್ತೀಪುರದ ನಿವಾಸಿಗಳಾದ ಲಕ್ಷ್ಮಮ್ಮ ಮತ್ತು ಆರ್. ನಂಜುಂಡಸ್ವಾಮಿ ಅವರ ಪುತ್ರಿ  ದಾಕ್ಷಾಯಿಣಿ ಅವರು ವಚನ ಸಾಕ್ಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಶರಣರ ತತ್ವಗಳು ಕೇವಲ ಪುಸ್ತಕದಲ್ಲಿರದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಕ್ಕೆ ಈ ವಿವಾಹ ಸಾಕ್ಷಿಯಾಗಿ ಸಹಸ್ರಾರು ಜನರ ಸಮ್ಮುಖದಲ್ಲಿ ನಡೆದ ಈ ವಚನ ಕಲ್ಯಾಣ ಸಮಾಜಕ್ಕೆ ಹೊಸ ದಿಕ್ಸೂಚಿಯಾಯಿತು. ಜ್ಯೋತಿಷ್ಯ, ಶುಭಕಾಲ ಅಥವಾ ರಾಹುಕಾಲಗಳನ್ನು ನೋಡದೆ, ಮನಸ್ಸು ಚೆನ್ನಾಗಿದ್ದಾಗ ಅದೇ ಶುಭಕಾಲ ಎಂಬ ಸಂದೇಶದೊಂದಿಗೆ ವಿವಾಹ ಜರುಗಿತು. ಯಾವುದೇ ಕರ್ಕಶ ವಾದ್ಯಗಳಿಲ್ಲದೆ, ಶರಣರ ವಚನಗಳ ಗಾಯನ ಮತ್ತು ಪಠಣದ ನಡುವೆ ವಿವಾಹ ಸಂಪನ್ನವಾಯಿತು.

ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರು ಶರಣರ ವಚನಗಳ ಆಧಾರದ ಮೇಲೆ ಈ ವಿವಾಹ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.

ಮುಡುಗೂರು ಉದ್ಧಾನೇಶ್ವರ ವಿರಕ್ತ ಮಠದ ಪರಮಪೂಜ್ಯ ಶ್ರೀ ಇಮ್ಮಡಿ ಉದ್ದಾನ ಸ್ವಾಮಿಗಳು ಆಶೀರ್ವಚನ ನೀಡಿ ಬಸವಾದಿ ಶರಣರು ಕಲ್ಯಾಣದಲ್ಲಿ ಹಚ್ಚಿದ ಜ್ಞಾನದ ಜ್ಯೋತಿ ಇಂದಿನ ಈ ವಚನ ಕಲ್ಯಾಣದ ಮೂಲಕ ಮೈಸೂರಿನಲ್ಲಿ ಬೆಳಗುತ್ತಿದೆ. ಮದುವೆ ಎಂದರೆ ಕೇವಲ ಶಾಸ್ತ್ರವಲ್ಲ, ಅದು ಎರಡು ಆತ್ಮಗಳ ಸಂಸ್ಕಾರ.

ಇಂದು ಮಂಜೇಶ್ ಮತ್ತು ದಾಕ್ಷಾಯಿಣಿ ಅವರು ರಾಹುಕಾಲ, ಗುಳಿಕಾಲಗಳಂತಹ ಕಾಲದ ಬಂಧನಕ್ಕೆ ಸಿಲುಕದೆ, ಕಾಲವ ಜಯಿಸಿದವನೇ ಶರಣ ಎಂಬ ತತ್ವದಂತೆ ದಾಂಪತ್ಯಕ್ಕೆ ಕಾಲಿಟ್ಟಿರುವುದು ಸಂತಸ ತಂದಿದೆ.  ಈ ನವಜೋಡಿಯು ವಚನಗಳ ಬೆಳಕಿನಲ್ಲಿ ಸುಖಿ ಸಂಸಾರ ನಡೆಸಲಿ ಎಂದು ಹರಸಿದರು.

ಮೇಲಾಜಿಪುರ ಬಸವಾನುಭವ ಮಂಟಪದ  ಪರಮಪೂಜ್ಯ ಶ್ರೀ ಶಿವಬಸವಸ್ವಾಮಿಗಳು ಆಶೀರ್ವಚನ ನೀಡಿ ಜಾತಿ-ಮತಗಳ ಆಡಂಬರವಿಲ್ಲದೆ, ಕರ್ಕಶ ವಾದ್ಯಗಳ ಗದ್ದಲವಿಲ್ಲದೆ, ಮನಸ್ಸಿನ ಶಾಂತಿಯೇ ಪರಮ ಮಂತ್ರವಾಗಿ ಇಲ್ಲಿ ವಿವಾಹ ಜರುಗುತ್ತಿದೆ. ಮನುಷ್ಯನ ಮನಸ್ಸು ಶುದ್ಧವಾಗಿದ್ದರೆ ಪ್ರತಿಯೊಂದು ಕ್ಷಣವೂ ಶುಭ ಮುಹೂರ್ತವೇ ಆಗಿರುತ್ತದೆ.

ಬಸವಾನುಭವ ಮಂಟಪದ ಆಶಯದಂತೆ, ಶರಣ ಜೀವನ ಪದ್ಧತಿಯನ್ನು ಮೈಗೂಡಿಸಿಕೊಂಡು ಈ ಜೋಡಿ ಸಮಾಜಕ್ಕೆ ಮಾದರಿಯಾಗಿದೆ. ಶರಣರ ವಚನಗಳೇ ಮಂತ್ರವಾಗಿ, ದಾಸೋಹವೇ ಸಂಸ್ಕೃತಿಯಾಗಿ ಈ ಕುಟುಂಬ ಸದಾ ಹಸನಾಗಿರಲಿ. ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಮೂಢನಂಬಿಕೆಗಳನ್ನು ಬದಿಗಿಟ್ಟು, ವೈಚಾರಿಕತೆಯ ಹಾದಿಯಲ್ಲಿ ನಡೆಯುತ್ತಿರುವ ಈ ಕಾರ್ಯ ನಿಜಕ್ಕೂ ಸಮಾಜಕ್ಕೆ ಹೊಸ ದಿಕ್ಸೂಚಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೇಲಾಜಿಪುರ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಮಹದೇವಸ್ವಾಮಿಗಳು ಬಲಚವಾಡಿ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ರಾಜೇಂದ್ರಸ್ವಾಮಿಗಳು ಉಪಸ್ಥಿತರಿದ್ದರು

admin
the authoradmin

Leave a Reply

Translate to any language you want