LatestMysore

ಹುಣಸೂರು ನಗರದಲ್ಲಿ ಸ್ನೇಹಜೀವಿ ಸೆಂಟರ್ ಫಾರ್ ಎಜುಕೇಷನ್‌ ಲೋಕಾರ್ಪಣೆ

ಯುವಜನರ ಶೈಕ್ಷಣಿಕ, ವೃತ್ತಿಪರ ಉನ್ನತಿಯೇ ನಮ್ಮ ಧ್ಯೇಯ:ಎಚ್ ಪಿ ಮಂಜುನಾಥ್

ಹುಣಸೂರು(ನಂಜಾಪುರ ಮನುಕುಮಾರ್): ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಆಸಕ್ತ ಯುವಜನರ ಶೈಕ್ಷಣಿಕ ಹಾಗೂ ವೃತ್ತಿಪರ ಉನ್ನತಿಯೇ ನಮ್ಮ ಮುಖ್ಯ ಧ್ಯೇಯವಾಗಿದೆ  ಎಂದು ಮಾಜಿ ಶಾಸಕರಾದ ಎಚ್ ಪಿ ಮಂಜುನಾಥ್ ತಿಳಿಸಿದರು.

ಹುಣಸೂರು ನಗರದ ಬಸ್ ನಿಲ್ದಾಣದ ಸಮೀಪ ಅಪೋಲೋ ಆಸ್ಪತ್ರೆ ಎದುರು ಪ್ರಾರಂಭವಾಗಿರುವ ನಮ್ಮ ಸ್ನೇಹಜೀವಿ ಸೆಂಟರ್ ಫಾರ್ ಎಜುಕೇಷನ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರವು ಡಿಜಿಟಲ್ ಬೋರ್ಡ್ ಮತ್ತು ಹವಾನಿಯಂತ್ರಿತ ಕೊಠಡಿಗಳನ್ನು ಒಳಗೊಂಡ ಸುಸಜ್ಜಿತ ಕೊಠಡಿಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ನವೀನ ರೀತಿಯಲ್ಲಿ ಕಲಿಯಲು ಉತ್ತಮ ವಾತಾವರಣ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದರೆ ಮಾತ್ರ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ. ತಂದೆ- ತಾಯಿ ಹಾಗೂ ಯಾರಾದರೂ ಬುದ್ದಿ, ಕಿವಿಮಾತು ಹೇಳಿದರೆ ಕೇಳಿ, ಭವಿಷ್ಯದಲ್ಲಿ ತಿಳಿವಳಿಕೆ ಹೇಳಲು ಯಾರು ಇರುವುದಿಲ್ಲ,   ಕಲಿಯುವುದು ಜೀವನಪೂರ್ತಿ ಇರುತ್ತದೇ. ಅಕಾಡೆಮಿಗಳು ಮುಂದಿನ ಭವಿಷ್ಯಕ್ಕೆ ದಾರಿಯಾಗಲಿದೆ. ಶಾಸಕನಾಗುವ ಮುಂಚೆಯೂ 10 ವರ್ಷಗಳಿಂದಲೇ ಉಚಿತವಾಗಿ ತಾಲ್ಲೂಕಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಹಾಗೂ ಇಂತಹ ತರಬೇತಿಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ ಸರಿಯಾದ ರೀತಿಯಲ್ಲಿ ಅಕಾಡೆಮಿಯ ತರಗತಿಗಳನ್ನು ಸದ್ಭಳಕೆ ಮಾಡಿಕೊಳ್ಳಲು ಸಲಹೆ ನೀಡಿದರು.

ಸ್ನೇಹಜೀವಿ ಅಕಾಡೆಮಿ ಸಂಸ್ಥೆ ಪ್ರಾಂಶುಪಾಲ ಜಗದೀಶ್ ಮಾತನಾಡಿ,  ನಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ಪ್ರಮುಖ ಶೈಕ್ಷಣಿಕ ತರಬೇತಿಗಳಲ್ಲಿ ನೀಟ್ ಕೋಚಿಂಗ್ ಒಂದಾಗಿದ್ದು, ಮೈಸೂರಿನ ಪ್ರತಿಷ್ಠಿತ ‘ಭವಿಷ್ಯ ಅಕಾಡೆಮಿ’ ಯವರಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು, ಈ ವರ್ಷಕ್ಕೆ ಮಾತ್ರ ವಿಶೇಷ ರಿಯಾಯಿತಿಯೊಂದಿಗೆ ಕೇವಲ ರೂ. 35,000 ಶುಲ್ಕವಿರುತ್ತದೆ.

ಇದರೊಂದಿಗೆ ಎಲ್ಲಾ ಅಧ್ಯಯನ ಸಾಮಗ್ರಿಗಳು ಮತ್ತು ಉಚಿತ ಟೀ-ಶರ್ಟ್ ಸಮವಸ್ತ್ರವನ್ನು ನೀಡಲಾಗುತ್ತದೆ, ಸಮಯ ಮಧ್ಯಾಹ್ನ 3:30 ರಿಂದ ಸಂಜೆ 5:30 ರವರೆಗೆ ಇರುತ್ತದೆ. ಅಲ್ಲದೆ, ಮೈಸೂರಿನ ‘ತೇಜ್ ಅಕಾಡೆಮಿ’ಯವರಿಂದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 6:30 ರಿಂದ 8:00 ರವರೆಗೆ ವಿಶೇಷ ಸಿಬಿಎಸ್‌ಇ ತರಬೇತಿ ನಡೆಸಿಕೊಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಹುಣಸೂರು ನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಪಿ. ಅಮರನಾಥ್, ಟ್ಯಾಲೆಂಟ್ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ನವೀನ್ ರೈ, ಕಾರ್ಯದರ್ಶಿ ಡಾ. ಶ್ರೀನಾಥ್,  ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಂತೋಷ ಕಾಶ್ಯಪ್, ಭವಿಷ್ಯ ಅಕಾಡೆಮಿಯ ಸಂಸ್ಥೆ ಮುಖ್ಯಸ್ಥ ಸುಧೀಂದ್ರ, ತೇಜಾ ಅಕಾಡೆಮಿ ಸಂಸ್ಥೆಯ ಆನಂದ್, ಶಿಕ್ಷಕ ಮಂಜುನಾಥ್, ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

 

admin
the authoradmin

ನಿಮ್ಮದೊಂದು ಉತ್ತರ