LatestNews

ಶರಣರ ವಿಚಾರ  ಜನಮಾನಸಕ್ಕೆ ತಲುಪಿಸಲು ರಸಪ್ರಶ್ನೆ ಅತ್ಯುತ್ತಮ ಮಾಧ್ಯಮ: ವಚನ ಕುಮಾರಸ್ವಾಮಿ

 ಕೊಳ್ಳೇಗಾಲ : ಶರಣರ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸಲು ರಸಪ್ರಶ್ನೆ ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಕೊಳ್ಳೇಗಾಲ ತಾಲ್ಲೂಕಿನ ಮುಡಿಗುಂಡದಲ್ಲಿರುವ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿ ನಿಲಯದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಹಾಗೂ ಕೊಳ್ಳೇಗಾಲದ ಅಕ್ಕನ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಶರಣರ ವಚನ ಮತ್ತು ಜೀವನಾಧಾರಿತ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟು ಮಾತನಾಡಿದರು.

ಯಾವಾಗ ನಾವು ಪ್ರಶ್ನೆ ಮಾಡಲು ಆರಂಭಿಸುತ್ತೇವೆಯೋ, ಆಗಲೇ ಕಲಿಕೆಯೂ ಆರಂಭವಾಗುತ್ತದೆ. ಆದ್ದರಿಂದ ಶರಣರ ವಚನಗಳು, ಜೀವನಾದರ್ಶಗಳು ಮತ್ತು ಮೌಲ್ಯಗಳನ್ನು ಜನರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ಸದುದ್ದೇಶದಿಂದ ಶಾಲಾ-ಕಾಲೇಜುಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದರು.

ನವದೆಹಲಿಯ ವಿಜ್ಞಾನ ಭವನದಲ್ಲಿ ಬಸವ ಸಮಿತಿಯ ವತಿಯಿಂದ ನಡೆದ ವಚನಗಳ ವಿವಿಧ ಭಾಷೆಗಳ ಅನುವಾದಿತ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶರಣರ ವಿಚಾರಗಳನ್ನು ವಿಶ್ವದಾದ್ಯಂತ ಪರಿಚಯಿಸಲು ರಸಪ್ರಶ್ನೆ ಸೇರಿದಂತೆ ವಿವಿಧ ಜ್ಞಾನಾಧಾರಿತ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು ಎಂದು ಕರೆ ನೀಡಿದ್ದರು.

ಆ ಸಂದೇಶವನ್ನು ಮನದಟ್ಟು ಮಾಡಿಕೊಂಡು ಶರಣು ವಿಶ್ವವಚನ ಫೌಂಡೇಷನ್ ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶರಣರ ವಚನಗಳು ಮತ್ತು ಜೀವನ ಸಂದೇಶಗಳನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.

ಶರಣು ವಿಶ್ವವಚನ ಫೌಂಡೇಷನ್‌ನ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಮಾತನಾಡಿ, ರಸಪ್ರಶ್ನೆಗಳು ಕೇವಲ ಸ್ಪರ್ಧೆಗಳಲ್ಲ. ಅವು ಕಲಿಕೆಯ ಅತ್ಯುತ್ತಮ ಮಾಧ್ಯಮಗಳಾಗಿವೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ಓದುವ ಅಭಿರುಚಿಯನ್ನು ಬೆಳೆಸುತ್ತವೆ.

ಅಲ್ಲದೆ ವಿಷಯವನ್ನು ಆಳವಾಗಿ ಅಧ್ಯಯನ ಮಾಡಲು ಹಾಗೂ ಸಂಶೋಧನೆಯ ಕಡೆಗೆ ಮುಖ ಮಾಡುವ ಮನೋಭಾವವನ್ನು ರೂಪಿಸುತ್ತವೆ. ಶರಣರ ವಚನಗಳು ಮತ್ತು ಜೀವನ ಸಂದೇಶಗಳನ್ನು ಅರಿತು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ರಸಪ್ರಶ್ನೆಗಳು ಪರಿಣಾಮಕಾರಿ ವೇದಿಕೆಯಾಗಿವೆ ಎಂದು ಹೇಳಿದರು.

ಎನ್ರಿಚ್ ಮಹಾದೇವಸ್ವಾಮಿ ಮಾತನಾಡಿ, ಉಪನ್ಯಾಸಗಳು ಜ್ಞಾನವನ್ನು ನೀಡುವ ಉತ್ತಮ ಮಾಧ್ಯಮವಾಗಿದ್ದರೂ ಅವು ಹೆಚ್ಚಾಗಿ ಏಕಮುಖ ಸಂವಹನಕ್ಕೆ ಸೀಮಿತವಾಗಿರುತ್ತವೆ. ಆದರೆ ರಸಪ್ರಶ್ನೆಗಳು ಭಾಗವಹಿಸುವವರು ವಿಷಯವನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯಲು ಉತ್ತಮ ಅವಕಾಶ ಕಲ್ಪಿಸುತ್ತವೆ. ಪ್ರಶ್ನೆ ಮತ್ತು ಉತ್ತರಗಳ ಮೂಲಕ ಸ್ಪರ್ಧಿಗಳಷ್ಟೇ ಅಲ್ಲದೆ ವೀಕ್ಷಕರೂ ಹೊಸ ಜ್ಞಾನವನ್ನು ಪಡೆಯುತ್ತಾರೆ.

ಶರಣು ವಿಶ್ವವಚನ ಫೌಂಡೇಷನ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ, ಮನಮುಟ್ಟುವ ಹಾಗೂ ಹೃದಯಸ್ಪರ್ಶಿ ಪ್ರಯತ್ನವಾಗಿದೆ. ಶರಣರ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ವಿಸ್ತಾರಗೊಳ್ಳಬೇಕು” ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರನ್ನು ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ ಹಾಗೂ ಸತ್ಯಕ್ಕ ಎಂಬ ನಾಲ್ಕು ತಂಡಗಳಾಗಿ ವಿಭಾಗಿಸಿ ರಸಪ್ರಶ್ನೆ ನಡೆಸಲಾಯಿತು. ನಂದಿನಿ ರಾಜೇಶ್, ಗೀತಾ ಮಂಜುನಾಥ್, ಅನುಪಮ ಗುರಪ್ಪ, ವಾಣಿ ರಮೇಶ್, ಕಾತ್ಯಾಯಿನಿ ಶಿವಲಿಂಗಸ್ವಾಮಿ, ಸ್ವರ್ಣಲತಾ ರಾಜಶೇಖರ್, ಮಮತಾ ರಾಜೇಶ್, ನಾಗಮಣಿ ಮಲ್ಲಿಕಾರ್ಜುನ, ನಾಗವೇಣಿ ನಾಗಣ್ಣ, ವಿಜಯ ಗುರುರಾಜು, ಜಗದಾಂಬ ಹಾಗೂ ಸವಿತ ಲೋಕೇಶ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಲ್ಲ ಸ್ಪರ್ಧಿಗಳಿಗೆ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ವಚನದೀವಿಗೆ ಪ್ರಮಾಣಪತ್ರ ಹಾಗೂ ವಚನ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಸವಿತ ಲೋಕೇಶ್, ಕಾರ್ಯದರ್ಶಿ ಶ್ವೇತಾ ಸ್ವಾಮಿ, ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ವೀರಭದ್ರಸ್ವಾಮಿ, ತಾಲ್ಲೂಕು ಅಧ್ಯಕ್ಷೆ ಜಗದಾಂಬ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಡಾ. ಸೋಮಪ್ರಭ, ಡಾ. ಲೋಕೇಶ್, ಸುಮಾ ವೀರಭದ್ರಸ್ವಾಮಿ, ಸಾಂಬಶಿವಯ್ಯ, ವೇದಮೂರ್ತಿ ಹಾಗೂ ಎಂ. ಮಹದೇವಸ್ವಾಮಿ ಉಪಸ್ಥಿತರಿದ್ದರು.

admin
the authoradmin

Leave a Reply