ಹುಣಸೂರು ಜಿ.ಪಂ. ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಿಟ್ಟು ದಲಿತರಿಗೆ ನ್ಯಾಯ ನೀಡಿ:ಎಚ್.ಪಿ. ಮಂಜುನಾಥ್

ಹುಣಸೂರು( ನಂಜಾಪುರ ಮನುಕುಮಾರ್): ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲಾತಿ ಕರಡು ಪಟ್ಟಿಯಲ್ಲಿ ಹುಣಸೂರು ತಾಲೂಕಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ಅವಕಾಶ ತಪ್ಪಿರುವ ಹಿನ್ನೆಲೆಯಲ್ಲಿ, ಪಟ್ಟಿಯಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ.ಖಂಡ್ರೆ, ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಡಾ. ಜಿ.ಎಸ್. ಸಂಗ್ರೇಶಿ, ಹಾಗೂ ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿ ಕೆ.ಎಚ್, ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿದ ಎಚ್.ಪಿ. ಮಂಜುನಾಥ್, ಮನವಿ ಸಲ್ಲಿಸಿ ಸಮಸ್ಯೆಯ ಕುರಿತು ಚರ್ಚಿಸಿದರು .

ಹುಣಸೂರು ತಾಲೂಕಿನಲ್ಲಿ ಈ ಹಿಂದೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕನಿಷ್ಠ ಒಂದು ಕ್ಷೇತ್ರವನ್ನಾದರೂ ಪರಿಶಿಷ್ಟ ಜಾತಿಗೆ ಮೀಸಲಿಡುವ ಅವಕಾಶವಿತ್ತು. ಆದರೆ, ಪ್ರಸ್ತುತ ಪ್ರಕಟಿಸಿರುವ ಮೀಸಲಾತಿ ಕರಡು ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ಯಾವುದೇ ಕ್ಷೇತ್ರವನ್ನು ಮೀಸಲಿಡದಿರುವುದು ಸಮುದಾಯದ ಜನರಲ್ಲಿ ಅಸಮಾಧಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ನಿಗದಿಯಲ್ಲಿನ ಲೋಪದೋಷಗಳನ್ನು ಪರಿಶೀಲಿಸಿ, ಅರ್ಹ ಸಮುದಾಯಕ್ಕೆ ನ್ಯಾಯಯುತ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಎಲ್ಲ ಸಮುದಾಯಗಳಿಗೂ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ಈ ನಿಟ್ಟಿನಲ್ಲಿ ಹುಣಸೂರು ತಾಲೂಕಿನ ಪರಿಶಿಷ್ಟ ಜಾತಿ ಸಮುದಾಯಕ್ಕೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಹರಿಸಿ ಎಂದು ಎಚ್.ಪಿ. ಮಂಜುನಾಥ್ ತಿಳಿಸಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು, ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ದಲಿತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.







