ರಾಜ್ಯ ರಾಜಕೀಯದಲ್ಲಿ ಅಡಗೂರು ಹೆಚ್ ವಿಶ್ವನಾಥ್ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಅವರ ಹೇಳಿಕೆ ಮತ್ತು ನಡೆ ನುಡಿಯತ್ತ ಪ್ರತಿಯೊಬ್ಬರೂ ದೃಷ್ಟಿ ನೆಟ್ಟಿರುತ್ತಾರೆ. ಇದೀಗ ಅವರು ತಮ್ಮ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುವ ಮನಸ್ಸು ಮಾಡಿದ್ದಾರೆ… ಇವತ್ತಿನ ಪರಿಸ್ಥಿತಿಯಲ್ಲಿ ಅವರಿಗೆ ಅದು ಅನಿವಾರ್ಯವೇ… ಏಕೆಂದರೆ ಸದ್ಯಕ್ಕೆ ಯಾವ ಪಕ್ಷವೂ ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರುವ ಮನಸ್ಸು ಮಾಡುವ ಲಕ್ಷಣಗಳಿಲ್ಲ.
ಅವರ ವಿಧಾನಸಭಾ ಸದಸ್ಯತ್ವವೂ ಮುಗಿಯಲಿದೆ. ಆ ನಂತರ ಬಿಜೆಪಿ ಸೇರಿದಂತೆ ಯಾವ ಪಕ್ಷವೂ ಅವರ ಬಗ್ಗೆ ಒಲವು ತೋರಿಸುವುದು ಕಡಿಮೆಯೇ.. ಏಕೆಂದರೆ ಅವರ ನೇರ ನಡೆ ನುಡಿಗಳು, ಸ್ವ ಪಕ್ಷದ ಬಗೆಗಿನ ನಾಯಕರ ಬಗ್ಗೆಯೇ ನೀಡುವ ಹೇಳಿಕೆಗಳು ಹಲವು ಬಾರಿ ಇರಿಸು ಮುರಿಸು ತರಿಸಿದೆ. ಹೀಗಾಗಿ ಅವರಿಂದ ಅಂತರ ಕಾಪಾಡಿಕೊಳ್ಳಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ತಯಾರಾಗಿವೆ.

ರಾಜಕೀಯ ಪಕ್ಷಗಳು ಅವರನ್ನು ಬದಿಗೆ ಸರಿಸಿದರೆ ಅವರು ಪತ್ರಿಕಾ ಹೇಳಿಕೆಗಷ್ಟೆ ಸೀಮಿತರಾಗುವ ಲಕ್ಷಣಗಳಿವೆ. ಇಲ್ಲಿ ತನಕ ಬಿಜೆಪಿಯಲ್ಲಿದ್ದರೂ ಬಿಜೆಪಿ ನಾಯಕರನ್ನೇ ಟೀಕಿಸುತ್ತಾರೆ. ಇದೀಗ ಬಿಎಸ್ ಯಡಿಯೂರಪ್ಪನವರಿಗೆ ನಡೆಸುತ್ತಿರುವ ಅಭಿಮಾನೋತ್ಸವದ ಬಗ್ಗೆಯೇ ಕಿಡಿಕಾರಿರುವುದು ಅಭಿಮಾನಿಗಳಿಗೆ ಇರಿಸುಮುರಿಸು ತರಿಸಿದೆ. ಹೀಗಾಗಿ ಮೇಲ್ಮನೆ ಅಧಿಕಾರವಧಿ ಮುಗಿದ ಮೇಲೆ ಅವರ ಮುಂದಿನ ನಡೆ ಏನು? ಸದ್ಯಕ್ಕೆ ನಿಗೂಢವಾಗಿದೆ.
ಬಿಜೆಪಿ ಅವರನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ಅಲ್ಲಿದ್ದರೂ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬ ಸ್ಥಿತಿ. ಜೆಡಿಎಸ್ ಮುಚ್ಚಿದ ಬಾಗಿಲಾಗಿದೆ. ಉಳಿದಂತೆ ಕಾಂಗ್ರೆಸ್ ಒಳಗೆ ಬಿಟ್ಟುಕೊಳ್ಳುತ್ತಾ? ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲುವುದು ಸುಲಭವಾಗಿ ಉಳಿದಿಲ್ಲ. ಇದೆಲ್ಲವನ್ನು ಗಮನಿಸಿದರೆ ನೇರ ನಿಷ್ಠುರವಾಗಿ ಹೆಚ್. ವಿಶ್ವನಾಥ್ ಅವರು ರಾಜಕೀಯದಿಂದ ದೂರ ಸರಿದು ಬಿಡುತ್ತಾರಾ? ಎಂಬ ಸಂಶಯಗಳು ಹುಟ್ಟಿಕೊಳ್ಳುತ್ತಿವೆ.

ಹಾಗೆನೋಡಿದರೆ ರಾಜಕೀಯದಲ್ಲಿ ಶಾಸಕ, ಸಚಿವ, ಸಂಸದ ಹೀಗೆ ಎಲ್ಲ ಸ್ಥಾನವನ್ನು ಅಲಂಕರಿಸಿರುವ ಅವರು ಎಲ್ಲ ಪಕ್ಷಗಳಲ್ಲಿ ಸೇವೆ ಸಲ್ಲಿಸಿರುವುದರಿಂದ ಎಲ್ಲ ಪಕ್ಷಗಳ ಒಳಮರ್ಮವೂ ಅವರಿಗೆ ಗೊತ್ತಿದೆ. ಆದರೆ ಅವರ ಕೆಲವೊಂದು ನಡೆ ನುಡಿಗಳೇ ಅವರು ಯಾವುದೇ ಪಕ್ಷದಲ್ಲಿ ಗಟ್ಟಿಯಾಗಿ ನೆರೆಯೂರಲು ಸಾಧ್ಯವಾಗಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪುತ್ರನನ್ನು ರಾಜಕೀಯವಾಗಿ ಬೆಳೆಸಲು ಸಾಧ್ಯವಾಗಿಲ್ಲ. ಈಗ ಅವರು ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ. ಈಗಿನ ಅವರ ತೀರ್ಮಾನಗಳತ್ತ ಕುತೂಹಲಗಳಂತು ಇದ್ದೇ ಇದೆ.
ಸುಮಾರು ಐದು ದಶಕಗಳ ಅವರ ರಾಜಕೀಯ ಜೀವನದಲ್ಲಿ ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದಾರೆ. ಶಾಸಕರಾಗಿ, ಸಚಿವ, ಸಂಸತ್ ಸದಸ್ಯರಾಗಿ ಜವಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಚಿವರಾಗಿ ನೆನಪಾಗಿ ಉಳಿಯುವ ಕಾರ್ಯಗಳನ್ನು ಮಾಡಿದ್ದಾರೆ. ಹೀಗಿದ್ದರೂ ಅವರು ಒಂದು ಪಕ್ಷದಲ್ಲಿ ಗಟ್ಟಿಯಾಗಿ ನೆಲೆಯೂರಲಿಲ್ಲ. ಇದಕ್ಕೆ ಕಾರಣವಾಗಿರುವುದು ಕಂಡಿದ್ದನ್ನು ಕಂಡಂತೆ ಹೇಳುವ ನಿಷ್ಠೂರವಾದಿತನ. ಇವತ್ತು ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ನೆಲೆಕಂಡುಕೊಂಡು ಮುಖ್ಯಮಂತ್ರಿ ಆಗಿದ್ದಾರೆಂದರೆ ಅದರಲ್ಲಿ ವಿಶ್ವನಾಥ್ ಅವರ ಶ್ರಮವೂ ಇಲ್ಲದಿಲ್ಲ.

ವಿಶ್ವನಾಥ್ ರಾಜ್ಯ ಮತ್ತು ಕೇಂದ್ರ ಎರಡು ರಾಜಕೀಯವನ್ನೂ ಹತ್ತಿರದಿಂದ ನೋಡಿದ್ದಾರೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಅವರು ಕಾಂಗ್ರೆಸ್ ನಲ್ಲಿ ಮೂಲೆ ಗುಂಪಾಗಿದ್ದರು. ಅವತ್ತು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರೆ ವಿಶ್ವನಾಥ್ ಅವರಿಗೆ ಒಂದೊಳ್ಳೆಯ ಹುದ್ದೆಯನ್ನು ನೀಡಬಹುದಿತ್ತು. ಆದರೆ ಹಾಗೆ ಆಗಲಿಲ್ಲ. ಹೀಗಾಗಿ ಅವತ್ತಿನ ದಿನಗಳು ಒಂಥರಾ ರಾಜಕೀಯ ಸನ್ಯಾಸದ ದಿನಗಳಾಗಿತ್ತು. ಇಂಥ ಸಂದರ್ಭದಲ್ಲಿ ಅವರನ್ನು ಜೆಡಿಎಸ್ ಗೆ ಸೇರಿಸಿಕೊಂಡು ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಗೆಲ್ಲಿಸಿಕೊಂಡು ಬರುವಲ್ಲಿ ಸಹಾಯ ಮಾಡಿದ್ದು ಜೆಡಿಎಸ್ ವರಿಷ್ಠ ಹೆಚ್.ಡಿ,ದೇವೇಗೌಡರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಆ ನಂತರ ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರವಾಗಿ ಅಧಿಕಾರ ನಡೆಸಿದಾಗ ಹಿರಿಯ ನಾಯಕರಾಗಿದ್ದ ವಿಶ್ವನಾಥ್ ಅವರಿಗೆ ಸಂಪುಟಲ್ಲಿ ಸ್ಥಾನಮಾನ ನೀಡಬಹುದಿತ್ತು. ಆದರೆ ನೀಡದೆ ಬದಿಗೆ ತಳ್ಳಲಾಗಿತ್ತು. ಇದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸಿಡಿದೆದ್ದ ಅವರು ಸಮ್ಮಿಶ್ರ ಸರ್ಕಾರವನ್ನು ಕೆಡವುವಲ್ಲಿ ತಮ್ಮದೇ ಆದ ಪಾತ್ರ ವಹಿಸಿದರು. ಆದರೆ ಹೆಚ್.ವಿಶ್ವನಾಥ್ ಅವರ ನಸೀಬು ನೆಟ್ಟಗಿರಲಿಲ್ಲ. ಜೆಡಿಎಸ್ ಗೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿಯಿಂದ ಹುಣಸೂರಿನ ಉಪಚುನಾವಣೆಗೆ ನಿಂತರೂ ಗೆಲ್ಲಲು ಸಾಧ್ಯವಾಗಲಿಲ್ಲ.

ಅವತ್ತು ಅಧಿಕಾರಕ್ಕೆ ಬಂದ ಬಿಜೆಪಿ ಎಂಎಲ್ ಸಿ ಮಾಡಿ ಕೈತೊಳೆದುಕೊಂಡಿತ್ತು. ಆದರೆ ಸಂಪುಟದಲ್ಲಿ ಯಾವುದೇ ಸ್ಥಾನಮಾನ ನೀಡಲಿಲ್ಲ. ಬಿಜೆಪಿಯಲ್ಲಿದ್ದರೂ ಬಿಜೆಪಿ ನಾಯಕರ ವಿರುದ್ಧ ಮಾತನಾಡುವಲ್ಲಿ ಹಿಂದೆ ಬಿದ್ದಿಲ್ಲ. ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ನ್ನು ಅದರಲ್ಲೂ ಸಿಎಂ ಸಿದ್ದರಾಮಯ್ಯರನ್ನು ಟೀಕಿಸುತ್ತಲೇ ಬರುತ್ತಿರುವ ವಿಶ್ವನಾಥ್ ಸದ್ಯಕ್ಕೆ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರ ಕೆಂಗೆಣ್ಣಿಗೆ ಬಿದ್ದಿದ್ದಾರೆ. ಹೀಗಾಗಿ ಅವರಿಂದ ಅಂತರ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಬಿಜೆಪಿಯಲ್ಲಿದ್ದರೂ ಇಲ್ಲದಂತೆ ಇದ್ದ ವಿಶ್ವನಾಥ್ ಅವರು ಮುಂದೆಯೂ ಹಾಗೆಯೇ ಇದ್ದು ಬಿಡುತ್ತಾರಾ? ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರಾ? ಸದ್ಯಕ್ಕೆ ಯಾವುದನ್ನೂ ಹೇಳುವಂತಿಲ್ಲ. ಅವರ ಮುಂದಿನ ನಡೆಯತ್ತ ರಾಜಕೀಯದಲ್ಲಿ ಕುತೂಹಲವಂತು ಇದ್ದೇ ಇದೆ.
ಹೆಚ್ಚಿನ ರಾಜಕೀಯ ಸುದ್ದಿಗಳು ಇಲ್ಲಿವೆ…. ಕ್ಲಿಕ್ ಮಾಡಿ…
ನಿಷ್ಠುರವಾದಿತನವೇ ಹಳ್ಳಿಹಕ್ಕಿ ವಿಶ್ವನಾಥ್ ರವರ ರಾಜಕೀಯ ಬದುಕಿಗೆ ಮುಳುವಾಯಿತಾ?
-ಬಿ.ಎಂ.ಲವಕುಮಾರ್








