ಮಂಗಳೂರು: ಕಾರು ಬಿಟ್ಟು ಜನ ಸಾಮಾನ್ಯರಂತೆ ಶಾಸಕಿಯೊಬ್ಬರು ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಇದು ಖುಷಿಪಡುವ ವಿಚಾರವೇ.. ಆದರೆ ಇದನ್ನು ಕಾಂಗ್ರೆಸ್ ನಾಯಕರು ಲೇವಡಿ ಮಾಡುತ್ತಿದ್ದಾರೆ. ಇದೆಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಈಗಾಗಲೇ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಶಕ್ತಿಯೋಜನೆ ಕೊಟ್ಟ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ವಿಚಾರದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಲೇ ಇರುತ್ತದೆ. ಅದರಲ್ಲೂ ಶಕ್ತಿಯೋಜನೆ ಬಗ್ಗೆ ಟೀಕೆ ಮಾಡುವ ಬಿಜೆಪಿಯವರು ಏಕೆ ಶಕ್ತಿಯೋಜನೆಯನ್ನು ಬಳಸಿಕೊಳ್ಳುತ್ತೀರಾ ಎಂದು ಕಾಂಗ್ರೆಸ್ ನಾಯಕರು ಕೇಳುತ್ತಿರುತ್ತಾರೆ.
ಇದೀಗ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರು ಮಿತವ್ಯಯದ ಬಗ್ಗೆ ಕರೆ ನೀಡಿದ್ದು ಅದನ್ನು ಬಿಜೆಪಿ ನಾಯಕರು ಅಲ್ಲಲ್ಲಿ ಅನುಸರಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಕೇಂದ್ರ ಸಚಿವ ವಿ.ಸೋಮಣ್ಣ ಮೊದಲಾದವರು ಮೆಟ್ರೋದಲ್ಲಿ ಪ್ರಯಾಣ ಮಾಡಿ ಗಮನಸೆಳೆದಿದ್ದರು.

ಇದೀಗ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಕಾರು ಬಿಟ್ಟು ಬಸ್ ನಲ್ಲಿ ಸಂಚರಿಸಿದ್ದಾರೆ. ಇದು ಸುದ್ದಿಯಾಗಿದ್ದು ಅವರ ಬಸ್ ಪ್ರಯಾಣದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ ಇದಕ್ಕೂ ಕಾಂಗ್ರೆಸ್ ನಾಯಕರು ಅಡ್ಡಗಾಲು ಹಾಕುತ್ತಿದ್ದು ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ. ಅವರು, ಶಾಸಕಿ ಭಾಗೀರಥಿ ಮುರುಳ್ಯ ಕಾರು ಬಿಟ್ಟು ಬಸ್, ಆಟೋದಲ್ಲಿ ಪ್ರಯಾಣ ಸ್ವಾಗತಾರ್ಹ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ನೀಡಿರುವ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಯ ಪ್ರಯೋಜನ ಅವರೂ ಪಡೆದುಕೊಳ್ಳುತ್ತಿರುವುದು ಸಂತೋಷದ ವಿಚಾರ. ಎಂದಿದ್ದಾರೆ.
ಆ ಮೂಲಕ ಶಕ್ತಿ ಯೋಜನೆ ಪ್ರಚಾರ ಇನ್ನಷ್ಟು ಆಗಲಿ. ಇನ್ನು ಮುಂದೆ ದಿನಂಪ್ರತಿ ಬಸ್ಸಿನಲ್ಲೇ ಪ್ರಯಾಣಿಸಿ ಶಕ್ತಿ ಯೋಜನೆಯನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳುವಂತೆ ಪ್ರೇರಣೆ ನೀಡಲಿ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ದೂರಿದವರು ಇಂದು ಅನುಭವಿಸುತ್ತಿರುವುದು ಸಂತಸ ತಂದಿದೆ. ಎಂದು ವ್ಯಂಗ್ಯವಾಡಿದ್ದಾರೆ.








