ArticlesLatest

ಮರೆಯಲಾಗದ ಮಹಾಪ್ರಭು, ನಾಡ ಕಟ್ಟಿದ ದೊರೆ  ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್       

ಜೂನ್ 4 ಅವರ ಜನ್ಮದಿನ ಆ ಪ್ರಯುಕ್ತ ಈ ಲೇಖನ

ನಾಡಿನ ಪ್ರಾತಃಸ್ಮರಣೀಯರಲ್ಲಿ ಮೈಸೂರಿನ ಯದುವಂಶದ ಅರಸರಾದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಹೆಸರು ಕಳಶಪ್ರಾಯವಾಗಿದೆ. ಅವರು ಹುಟ್ಟು, ಬಾಲ್ಯ, ಪಟ್ಟಾಭಿಷೇಕ, ರಾಜಾಡಳಿತದ ಕುರಿತಂತೆ ಬರಹಗಾರದಾದ ಮೈ ನಾ ಲೋಕೇಶ್ ಇಲ್ಲಿ ಬರೆದಿದ್ದಾರೆ.

ಇಂದು ಕರ್ನಾಟಕ ಮತ್ತು ರಾಜ್ಯದ ರಾಜಧಾನಿ ಬೆಂಗಳೂರು ವಿಶ್ವ ಮಾನ್ಯತೆ ಪಡೆದಿರುವುದಕ್ಕೆ, ಅಂದು ನಾಲ್ವಡಿಯವರು ಕೈಗೊಂಡ ದೂರದರ್ಶತ್ವದ ಯೋಜನೆಗಳೇ  ಪ್ರಮುಖ ಕಾರಣ.  ಅವರ  ಪ್ರಗತಿಪರ ಚಿಂತನೆ, ಜನಪರ ಆಡಳಿತ, ನಾಡನ್ನು, ಮಾದರಿ ಮೈಸೂರು ಸಂಸ್ಥಾನವನ್ನಾಗಿಸಿತು. ಹಾಗಾಗಿ ಅವರನ್ನು  ‘ಆಧುನಿಕ ಕನ್ನಡ ನಾಡಿನ ಮಹಾಶಿಲ್ಪಿ’ ಎಂದು ಕರೆದರೆ ಅತಿಶಯೋಕ್ತಿಯಾಗಲಾರದು.

ಯದುವಂಶದ ಮೈಸೂರು ಸಂಸ್ಥಾನದ ಒಡೆಯರ್ ರಾಜ ವಂಶದ 24ನೇ   ರಾಜರಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಳ್ವಿಕೆಯ ಕಾಲ ಅಭಿವೃದ್ದಿಯ ಮಹಾಪರ್ವ ಎನ್ನಬಹುದು.  ಹತ್ತನೇ ಶ್ರೀ  ಚಾಮರಾಜ ಒಡೆಯರ್, ಮಹಾರಾಣಿ    ಕೆಂಪನಂಜಮ್ಮಣಿ, ವಾಣಿವಿಲಾಸ ಸನ್ನಿಧಾನ ದಂಪತಿಗಳಿಗೆ  ಶ್ರೀ ಕೃಷ್ಣರಾಜ ಒಡೆಯರ್  4-6-1884 ರಲ್ಲಿ ಜೇಷ್ಠ ಪುತ್ರರಾಗಿ ಜನಿಸಿದರು. ತಂದೆಯ ಅಕಾಲಿಕ ಮರಣದಿಂದಾಗಿ ಹತ್ತು ವರ್ಷದ ಬಾಲಕನಿದ್ದಾಗಲೇ ಕೃಷ್ಣರಾಜ ಒಡೆಯರ್ ರವರಿಗೆ ಪಟ್ಟಾಭಿಷೇಕವಾಯಿತು

ಈ ಸಂದರ್ಭದಲ್ಲಿ ನಾಲ್ವಡಿಯವರ ಮಾತೋಶ್ರೀ  ವಾಣಿವಿಲಾಸ ಸನ್ನಿಧಾನರವರು ರೀಜೆಂಟ್ ಆಗಿ ಆಡಳಿತದ ಉಸ್ತುವಾರಿ ನಿಭಾಯಿಸಿದರು. ನಾಲ್ವಡಿಯವರನ್ನು  ನಾಡಿನ ಸಮರ್ಥ ಆಡಳಿತಗಾರರಾಗಿ ರೂಪಿಸುವಲ್ಲಿ ಮಹಾರಾಣಿಯವರ ಶ್ರಮ ತ್ಯಾಗ ಅವಿಸ್ಮರಣೀಯವಾದದ್ದು

2-2-1902 ರಂದು ತಮ್ಮ ತಾಯಿಯವರಿಂದ ಅಧಿಕೃತವಾಗಿ ಅಧಿಕಾರದ ಸೂತ್ರವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಅನಂತರದಲ್ಲಿ  ಕರ್ನಾಟಕದಲ್ಲಿ ನಡೆದದ್ದು, ಸುವರ್ಣಾಕ್ಷರಗಳಲ್ಲಿ ಬರೆದಿಡುವ ಇತಿಹಾಸ. ನಾಲ್ವಡಿಯವರ ಆಳ್ವಿಕೆಯನ್ನು ಕರ್ನಾಟಕದ ಸುವರ್ಣ ಯುಗವೆಂದೇ ಬಣ್ಣಿಸಲಾಗಿದೆ …     8-8-1902 ರಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಭಾರತದ ವೈಸ್ ರಾಯ್    ಲಾರ್ಡ್ ಕರ್ಜನ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ವಿಧ್ಯುಕ್ತವಾಗಿ, ‘ಮೈಸೂರಿನ ಮಹಾರಾಜ’ ರೆಂದು ಘೋಷಿಸಿದರು.

ಇಂದು ನಾಡು ರಾಜರ್ಷಿ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ. 142 ನೇ ಜಯಂತಿಯನ್ನು ಆಚರಿಸುತ್ತಿದೆ.  ಬ್ರಿಟಿಷರು ನಾಲ್ವಡಿಯವರನ್ನು ಸಾಮ್ರಾಟ ಅಶೋಕನಿಗೆ ಹೋಲಿಸಿದರೆ, ಗಾಂಧೀಜಿ ನಾಲ್ವಡಿಯವರನ್ನು ರಾಜರ್ಷಿ ಎಂದು ಕರೆದರು. ಮೈಸೂರು ಸಂಸ್ಥಾನ ಸರ್ವರಂಗಗಳಲ್ಲಿಯೂ ಅಭೂತಪೂರ್ವ ಸಾಧನೆಗೈಯಲು ಕಾರಣೀಭೂತರಾದ, ನಿಜವಾದ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಿದವರು ಸಂತ ರಾಜ ಮಹಾಪ್ರಭು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್.

ಸಾಮಾಜಿಕ ನ್ಯಾಯ, ಗ್ರಾಮೀಣಾಭಿವೃದ್ಧಿ , ಕೈಗಾರಿಕೆ, ನೀರಾವರಿ ಆರ್ಥಿಕತೆ ,ಆರೋಗ್ಯ  ಶಿಕ್ಷಣ ಸ್ಥಳೀಯ ಆಡಳಿತ  ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಜೊತೆಗೆ ಲಲಿತ ಕಲೆಗಳಿಗೆ. ಅವರ ಆಡಳಿತದಲ್ಲಿ ರಾಜಾಶ್ರಯ ದೊರೆಯಿತು.  ನಾಲ್ವಡಿಯವರ  ಆಡಳಿತ ಹಲವಾರು ಮೊದಲುಗಳಿಗೆ ಮುನ್ನುಡಿ ಬರೆಯಿತು . ನಾಲ್ವಡಿಯವರು, ಪ್ರಜಾಪ್ರಭುತ್ವ ಚಿಂತನೆಯ ರಾಜರಾಗಿದ್ದರಿಂದ, ನೂರಾರು ಕ್ರಾಂತಿಕಾರಿ ಕಾನೂನುಗಳನ್ನು ಜಾರಿಗೆ ತಂದರು.

ಸಮಾಜದಲ್ಲಿ ಶೋಷಿತ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಅವರಿಗೆ ಸಾಮಾಜಿಕ ಸ್ಥಾನಮಾನಗಳನ್ನು ಕಲ್ಪಿಸಲು, ದುರ್ಬಲ ವರ್ಗಗಳ, ದೀನ ದಲಿತರ, ಸಬಲೀಕರಣಕ್ಕಾಗಿ ಅವರ ಮನ ಸದಾ ತುಡಿಯುತ್ತಿತ್ತು. 1918ರಲ್ಲಿ ಸರ್ ಲೆಸ್ಲಿ ಮಿಲ್ಲರ್ ನೇತೃತ್ವದಲ್ಲಿ ರಚಿಸಿದ ಆಯೋಗ, ಭಾರತದ ಮೊದಲ ಹಿಂದುಳಿದ ವರ್ಗಗಳ ಮೀಸಲಾತಿ ಆಯೋಗ ಎಂಬ ಹೆಗ್ಗಳಿಕೆ ಪಡೆಯಿತು ಜೊತೆಗೆ ಕರ್ನಾಟಕದ ಇತಿಹಾಸವನ್ನು ಬದಲಾಯಿಸುವ ಮೈಲಿಗಲ್ಲಾಯಿತು.

ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಜೊತೆಗೆ 1918ರಲ್ಲಿ ಜಾತಿ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶಾಲೆಗಳಿಗೆ ದಲಿತ ಮಕ್ಕಳ ಪ್ರವೇಶವನ್ನು ಪ್ರಾರಂಭಿಸಲಾಯಿತು. ಅಸ್ಪೃಶ್ಯತೆ ಅಪರಾಧವೆಂದು ಪರಿಗಣಿಸಲು ಕಾನೂನು ಜಾರಿಗೆ ತರಲಾಯಿತು. ಬಾಲ್ಯ ವಿವಾಹ ಪದ್ಧತಿಯನ್ನು ನಿಷೇಧಿಸಲಾಯಿತು.   ಬಾಲ ವಿಧವೆಯರಿಗೆ ವಿದ್ಯಾರ್ಥಿ ವೇತನ ಜಾರಿಗೆ ತರಲಾಯಿತು  ದೇವದಾಸಿ, ಬಸವಿ ಪದ್ಧತಿಯ ನಿರ್ಮೂಲನೆಗೆ ಕಾನೂನನ್ನು ಜಾರಿಗೊಳಿಸಲಾಯಿತು. ಮಹಾರಾಣಿ ಕಾಲೇಜು ಸ್ಥಾಪನೆ ಮಾಡಲಾಯಿತು.

ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಹಿಂದೂ  ಲಾ ವುಮನ್ ರೈಟ್ಸ್ ಆಕ್ಟ್ 29 .6 1933 ರಂದು ಅಂಕಿತ ಹಾಕಲಾಯಿತು. ಈ ಕಾನೂನಿನ ಮೂಲಕ ಹಿಂದೂ ಸ್ತ್ರೀಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ದೊರಕುವ ಅವಕಾಶ ದೊರೆಯಿತು. ಅಮೆರಿಕ ಮತ್ತು ಪ್ರಪಂಚದ ಇತರ ದೇಶದ ಮಹಿಳೆಯರಿಗೆ ಮತದಾನ ಅವಕಾಶ ನೀಡುವ ಮೊದಲೇ ಮೈಸೂರಿನಲ್ಲಿ ಈ ಹಕ್ಕು ನೀಡಲಾಗಿತ್ತು ಎಂಬುದು ಉಲ್ಲೇಖನೀಯ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳ ಪಟ್ಟಿಗೆ ಕೊನೆಯೇ ಇಲ್ಲ . ಸಂಸ್ಥಾನದಲ್ಲಿ ನೆಪಮಾತ್ರಕ್ಕೆ ಸೀಮಿತವಾಗಿದ್ದ ‘ ಪ್ರಜಾ ಪ್ರತಿನಿಧಿ ಸಭೆ’ ಗೆ ‌ ಹೊಸ ರೂಪ , ಶಕ್ತಿಯನ್ನು ನಾಲ್ವಡಿ ಯವರು  ತುಂಬಿದರು. 1923ರಲ್ಲಿ ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಅಂಗೀಕಾರ ನೀಡಿದರು.    ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿ ಎಂಬ ಸತ್ಯವನ್ನು ಅರಿತಿದ್ದ  ನಾಲ್ವಡಿ ಯವರು  ರೈತರ ಬವಣೆಯನ್ನು ನೀಗಿಸಲು ಅವರಿಗೆ ಸುಲಭವಾಗಿ ಸಾಲ ಸೌಲಭ್ಯ ಗಳನ್ನು ದೊರಕಿಸಿಕೊಡಲು 1905ರಲ್ಲಿ  ‘ಸಹಕಾರಿ ಸೊಸೈಟಿಗಳನ್ನು ತೆರೆಯಲು ಉತ್ತೇಜನ ನೀಡಿದರು.

ಈ ಪ್ರಯತ್ನಗಳ ಫಲವಾಗಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಭೂ ಅಭಿವೃದ್ಧಿ ಬ್ಯಾಂಕ್ ಗಳು ಪ್ರಾರಂಭಗೊಂಡವು. ನಂತರ 1918ರಲ್ಲಿ ಅನ್ನದಾತರನ್ನು  ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಶೋಷಣೆಯಿಂದ ತಪ್ಪಿಸಲು ‘ಅಗ್ರಿಕಲ್ಚರಿಷ್ಟ್ ಡೆಬಿಟ್ ರಿಲೀಫ್ ಆಕ್ಟ್ ‘ ಜಾರಿಗೆ ತಂದರು.    1916 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸ್ಥಾಪಿಸಿದರು.  ಮೈಸೂರಿನ ಸಂಸ್ಕೃತ ಶಾಲೆಗೆ ಸಹಾಯ ಹಸ್ತ. ಚಾಚಿದರು.   ವಿಜ್ಞಾನ ಸಂಸ್ಥೆಗೆ ಭೂಮಿ ದಾನ ನೀಡಿದರು. 1924ರಲ್ಲಿ ಮೈಸೂರಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲಾಯಿತು.

ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಪ್ರಗತಿ ಸಂಘ ಸ್ಥಾಪಿಸಲಾಯಿತು. ವಿಶೇಷ ಚೇತನ ಮಕ್ಕಳಿಗೆ ವಿಶೇಷ ಅನುದಾನ ನೀಡಲಾಯಿತು. 1913 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ        1913ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆ, ಮಿಂಟೋ ಕಣ್ಣಿನ ಆಸ್ಪತ್ರೆ ಸ್ಥಾಪನೆ,   ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ 1933 ರಲ್ಲಿ ಸ್ಥಾಪನೆ.   ಮೈಸೂರು  ಪೈಂಟ್ ಅಂಡ್ ವಾರ್ನಿಶ್ ಕಾರ್ಖಾನೆ ಸ್ಥಾಪನೆ.   1915ರಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಾರಂಭಿಸಲು 371 ಎಕರೆ ಭೂಮಿ ಹಾಗೂ ಹಣವನ್ನು ಉಡುಗೊರೆಯಾಗಿ ನೀಡಲಾಯಿತು.

ಹೆಚ್ ಎ ಎಲ್ ಕಾರ್ಖಾನೆ ಸ್ಥಾಪನೆ.  ನಿಮಾನ್ಸ್  ಆಸ್ಪತ್ರೆ ಸ್ಥಾಪನೆ, ಕೆ ಆರ್ ಮಾರುಕಟ್ಟೆ ಸ್ಥಾಪನೆ, ಭದ್ರಾವತಿ ಪೇಪರ್ ಮಿಲ್ ಸ್ಥಾಪನೆ, ಭದ್ರಾವತಿಯ ಮೈಸೂರು-ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆ. ಬೆಂಗಳೂರಿನಲ್ಲಿ ಸರ್ಕಾರಿ ಸಾಬೂನು ಕಾರ್ಖಾನೆ.  ಮೈಸೂರು  ಬಾಯ್ ಸ್ಕೌಟ್ಸ್ 1990ರಲ್ಲಿ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಸ್ಥಾಪನೆ.  ಬೆಂಗಳೂರು, ಬೀದಿ ದೀಪಗಳ ಪಡೆದ ಏಷ್ಯಾದ ಮೊದಲ ನಗರವಾಗಿ ಹೆಗ್ಗಳಿಕೆ. ಕೃಷ್ಣರಾಜೇಂದ್ರ ಆಸ್ಪತ್ರೆ ಸ್ಥಾಪನೆ,  ಮೈಸೂರು ಶುಗರ್ ಮಿಲ್, ಮಂಡ್ಯ ಸ್ಥಾಪನೆ.

ಸಮಾಜದ ಮತ್ತೊಂದು ಪಿಡುಗಾದ ವೇಶ್ಯಾವೃತ್ತಿಯನ್ನು ತಡೆಗಟ್ಟಲು.    ‘ಸಪ್ರೇಷನ್ ಆಫ್ ಇಮ್ಮಾರಲ್ ಟ್ರಾಫಿಕ್ ಆಕ್ಟ್ ‘  ಜಾರಿಗೆ ತಂದರು.    ಅಪ್ರಾಪ್ತ ಬಾಲಕರನ್ನು  ಧೂಮಪಾನ ಚಟದಿಂದ ದೂರವಿಡಲು ‘ದಿ ಪ್ರಿವೆನ್ಷನ್ ಆಫ್ ಜುವೈನಲ್ ಸ್ಮೋಕಿಂಗ್ ಆಕ್ಟ್’ ಜಾರಿಗೆ ತಂದರು.   ಮೈಸೂರಿನಲ್ಲಿ  ,’ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ (  ಸಿಐಟಿಬಿ)   ದೇಶದಲ್ಲಿ ಮೊದಲ ಬಾರಿಗೆ ಸ್ಥಾಪನೆ ಮಾಡಿದರು.   ಮೈಸೂರು ಕೆಮಿಕಲ್ ಅಂಡ್ ಫರ್ಟಿಲೈಜರ್  ಕಾರ್ಖಾನೆ ಸ್ಥಾಪಿಸಿದರು. ಹೀಗೆ   ಅಭಿವೃದ್ಧಿಯ ಮಹಾಪರ್ವದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ

ಇನ್ನು  ಕೃಷಿ,  ನೀರಾವರಿ  ದೇಶದ ಜೀವನಾಡಿ ಎಂಬ ಸರ್ವಕಾಲಿಕ ಸತ್ಯವನ್ನು ಅರಿತಿದ್ದ ನಾಲ್ವಡಿಯವರು ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳ ಮೂಲಕ ಲಕ್ಷಾಂತರ ರೈತರ ಜೀವನವನ್ನು ಹಸನಾಗಿಸಿದ   ಪುಣ್ಯ ಪುರುಷರು. ಅವರ, ಆಡಳಿತದಲ್ಲಿ ಅನೇಕ ಕೆರೆಕಟ್ಟೆಗಳು, ಕಾಲುವೆಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಯಿತು .ಹಲವನ್ನು ದುರಸ್ತಿಗೊಳಿಸಲಾಯಿತು. ಚಿತ್ರದುರ್ಗದ, ವಾಣಿವಿಲಾಸ ಸಾಗರ ಅಣೆಕಟ್ಟು  ಕರ್ನಾಟಕದ ಮೊದಲ ಅಣೆಕಟ್ಟು.

ಇನ್ನು ನಾಲ್ವಡಿಯವರು ನಿರ್ಮಿಸಿದ ಕನ್ನಂಬಾಡಿ ಕಟ್ಟೆ (ಕೃಷ್ಣರಾಜ ಜಲಾಶಯ) ಮಂಡ್ಯ ಜಿಲ್ಲೆಯ ರೈತರಿಗೆ ಜೀವನಾಧಾರವಾಗಿ ಮೈಸೂರು -ಬೆಂಗಳೂರು ಜನತೆಗೆ ಕುಡಿಯಲು ನೀರಿನ ಆಸರೆಯಾಗಿ ಲಕ್ಷಾಂತರ ಜನರಿಗೆ ನೆರವಾಗಿದೆ. ಈ ಸಂದರ್ಭದಲ್ಲಿ, ಮಹಾತಾಯಿ ವಾಣಿವಿಲಾಸ ಸನ್ನಿಧಾನ , ತಮ್ಮ ಒಡವೆಗಳನ್ನು ಮಾರಿ ಕನ್ನಂಬಾಡಿ ಕಟ್ಟೆಯ ನಿರ್ಮಾಣಕ್ಕೆ ಮಾಡಿದ ತ್ಯಾಗವನ್ನು ಸ್ಮರಿಸಬೇಕಾದದ್ದು ಕನ್ನಡಿಗರ ಆದ್ಯ ಕರ್ತವ್ಯವಾಗಿದೆ .

*1902 ರಲ್ಲಿ ಶಿವನಸಮುದ್ರದಲ್ಲಿ ಜಲವಿದ್ಯುತ್ ಯೋಜನೆ *1939ರಲ್ಲಿ ಹಿರೇಭಾಸ್ಕರ ಅಣೆಕಟ್ಟು ಯೋಜನೆ. ದಳವಾಯಿಕೆರೆ ಕೇತೋಹಳ್ಳಿ ಕೆರೆ, ಮರಳವಾಡಿ ಕೆರೆ ತಂಬಾಡಿ ಕೆರೆ, ಕಾಮಸಮುದ್ರ ಕೆರೆ, ಹೀಗೆ ಸಾವಿರಾರು ಕೆರೆಗಳನ್ನು ಜೀರ್ಣೋದ್ಧಾರ  ಮಾಡಿದ ಶ್ರೇಯಸ್ಸು ನಾಲ್ವಡಿಯವರಿಗೆ ಸಲ್ಲುತ್ತದೆ

ಕಲೆಗಳ ತವರೂರು ಮೈಸೂರು’ :   ಸಂಗೀತ , ಸಾಹಿತ್ಯ ಚಿತ್ರಶಿಲ್ಪ, ನಾಟಕ ಮೊದಲಾದ ಲಲಿತ ಕಲೆಗಳಲ್ಲಿ ಆಸಕ್ತಿ, ಅಪಾರ ಜ್ಞಾನವುಳ್ಳವರೂ ಆಗಿದ್ದ ನಾಲ್ವಡಿಯವರು  ಅಸಂಖ್ಯಾತ ಕಲಾವಿದರು, ವಿದ್ವಾಂಸರಿಗೆ ಪ್ರೋತ್ಸಾಹ ನೀಡಿದರು.  ಶ್ರೀ ದೇವೋತ್ತಮ ದೀಕ್ಷಿತರು,  ಶ್ರೀ ಮುತ್ತಯ್ಯ ಭಾಗವತರು, ಶ್ರೀ ಬಿಡಾರಂ ಕೃಷ್ಣಪ್ಪನವರು, ಶ್ರೀ ವಾಸುದೇವಾಚಾರ್ಯರು, ಶ್ರೀ ಬಿ ದೇವೇಂದ್ರಪ್ಪನವರು ಸಂಗೀತ ರತ್ನ ಶ್ರೀ ಟಿ ಚೌಡಯ್ಯನವರು ವೈಣಿಕ ಶಿಖಾಮಣಿ  ಶ್ರೀ  ಶೇಷಣ್ಣನವರು, ಬೆಂಗಳೂರು ಶ್ರೀಮತಿ ನಾಗರತ್ನಮ್ಮ  ,ಶ್ರೀ ವೀಣೆ ಸುಬ್ಬಣ್ಣನವರು,  ಶ್ರೀ ಫಯಾಜ್ ಖಾನ್ ..  ಹೀಗೆ ಕಲಾವಿದರ  ಸ್ವರ್ಗವಾಗಿತ್ತು.

ಮೈಸೂರು ಸಂಸ್ಥಾನ ,ಕಲೆಗಳ ತವರೂರಾಗಿ  ವಿಶ್ವ ಭೂಪಟದಲ್ಲಿ ಗುರುತಿಸಿ ಕೊಂಡಿತು.   ಗುಬ್ಬಿ ನಾಟಕ ಕಂಪನಿ ,ಇನ್ನು ಚಿತ್ರಕಲೆಯಲ್ಲಿ *ಮೈಸೂರು ಶೈಲಿಯೇ ಒಂದು ಹೊಸ ಪರಂಪರೆಯಾಗಿ ಬೆಳೆಯಿತು. ಕಲಾವಿದರಾದ ಶ್ರೀ ವೆಂಕಟಪ್ಪ, ಶ್ರೀ ಕೇಶವಯ್ಯ  ಶ್ರೀ ರಾಜ ರವಿವರ್ಮ ಮೊದಲಾದವರ ಚಿತ್ರಗಳು ಜಗನ್ಮೋಹನ ಅರಮನೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿದವು. ವಾಸ್ತು ಶಿಲ್ಪ ,ಮೂರ್ತಿ ಶಿಲ್ಪ  ಕಲೆಗಳಿಗೂ ಪ್ರೋತ್ಸಾಹ, ರಾಜಾಶ್ರಯ ದೊರೆಯಿತು.   ಹೀಗೆ ,ನಿಬ್ಬೆರಗಾಗುವಂತಹ ಸಾಧನೆಗಳ ಮೂಲಕ  ಸಾವಿರ ವರ್ಷ ಕಳೆದರೂ  ಅಳಿಯದ, ಜನಪರ ಆಡಳಿತದ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ವೇಗೋತ್ಕರ್ಷ ನೀಡಿದವರು ಮಹಾಪ್ರಭು ಶ್ರೀ  ನಾಲ್ವಡಿ ಕೃಷ್ಣರಾಜ ಒಡೆಯರ್.

ಸ್ವಜನಪಕ್ಷಪಾತ , ಭ್ರಷ್ಟಾಚಾರ, ಸ್ವಹಿತವೇ ತಾಂಡವವಾಡುತ್ತಿರುವ ಪ್ರಸ್ತುತ ರಾಜಕಾರಣದ ಕಾಲಮಾನದಲ್ಲಿ ‘ಪ್ರಜಾಹಿತ’ ವನ್ನೇ ಉಸಿರಾಗಿಸಿಕೊಂಡು ಆಡಳಿತ ನಡೆಸಿದ  ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಪ್ರಭುಗಳಿಗೆ,  ನಾಲ್ವಡಿ ಯವರೇ ಸಾಟಿ.     ನಿಜ ಅರ್ಥದಲ್ಲಿ  ರಾಜರ್ಷಿ   ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು,’ ಆಧುನಿಕ ಕರ್ನಾಟಕದ ನಿರ್ಮಾತೃಗಳು…

ಲೇಖಕ  ಮೈ ನಾ ಲೋಕೇಶ್ ಅವರ ಇನ್ನಷ್ಟು ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

 

 

admin
the authoradmin

Leave a Reply

Translate to any language you want