LatestMysore

ಸಣ್ಣಪುಟ್ಟ ಸಮುದಾಯಗಳು  ಶಿಕ್ಷಣಕ್ಕೆ  ಒತ್ತು ನೀಡಿ, ಒಗ್ಗಟ್ಟಿನಿಂದ ಅಭಿವೃದ್ಧಿ ಸಾಧಿಸಬೇಕು:ಹೆಚ್.ಪಿ.ಮಂಜುನಾಥ್

ಹುಣಸೂರು: ಸಣ್ಣಪುಟ್ಟ ಸಮುದಾಯಗಳು  ಶಿಕ್ಷಣಕ್ಕೆ ಮಹತ್ವ ನೀಡುವುದರ ಜೊತೆಗೆ  ಒಗ್ಗಟ್ಟಿನಿಂದ ಇದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ,   ತಾಲೂಕಿನ ಗಾಣಿಗ ಸಮಾಜವು ನಿಮ್ಮೊಳಗಿನ ಬಿನ್ನಾಭಿಪ್ರಾಯ ಬಿಟ್ಟು  ಒಗ್ಗಟ್ಟು ಪ್ರದರ್ಶಿಸುವಂತೆ ಮಾಜಿ ಶಾಸಕ  ಎಚ್.ಪಿ.ಮಂಜುನಾಥ್ ಮನವಿ ಮಾಡಿದರು.

ನಗರದ ಅರ್ಯವೈಶ್ಯ ಕಲ್ಯಾಣ  ಮಂಟಪದಲ್ಲಿ ತಾಲೂಕು ಪ್ರಗತಿಪರ ಗಾಣಿಗರ ವೇದಿಕೆವತಿಯಿಂದ ಆಯೋಜಿಸಿದ್ದ  ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ  ಕಾರ್ಯಕ್ರಮದಲ್ಲಿ  ಮಾತನಾಡಿದ  ಅವರು, ನಿಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ,  ರಾಜಕೀಯ ಸ್ಥಾನಮಾನ ಸೇರಿದಂತೆ ಯಾವುದೇ ಸವಲತ್ತು  ಸಿಗದೆ ಅಭಿವೃದ್ದಿಗೆ ತೊಡಕಾಗಲಿದೆ. ನಿಮ್ಮ ಸಮಾಜವನ್ನು ಗೌರವಿಸುವ, ಪ್ರೀತಿಸುವವರನ್ನು ನಿಮ್ಮ ನಾಯಕನಾಗಿಸಿಕೊಳ್ಳಿ. ಸಮಾಜದವತಿಯಿಂದ ಯಾರೇ ಕಾರ್ಯಕ್ರಮ ನಡೆಸಿದರೂ  ಸಕ್ರೀಯವಾಗಿ ತೊಡಗಿಸಿಕೊಳ್ಳಿರೆಂದರು.

ತಾಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಗಾಣಿಗ  ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದ್ದು, ಇದನ್ನು ಮುಂದುವರೆಸಿ ಸಾಧಕರನ್ನು  ವಿದ್ಯಾರ್ಥಿಗಳು ಆದರ್ಶವಾಗಿಸಿಕೊಳ್ಳಿ. ಹುಣಸೂರಿನಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ.  ಇಲ್ಲಿ ಜಿಟಿಟಿಸಿ, ಐಟಿಐ, ಸಂಶೋಧನಾ(ಪಿಎಚ್‌ಡಿ) ಕೇಂದ್ರಗಳಿದ್ದು ಬಳಸಿಕೊಳ್ಳಿ ಎಂದರು.

ಗಾಣಿಗ ಅಭಿವೃದ್ದಿ ನಿಗಮದ ಅಧ್ಯಕ್ಷ ಅನಂತು ಮಾತನಾಡಿ, ಗಾಣಿಗ ಸಮುದಾಯವು ಸಾಮಾಜಿಕ, ಆರ್ಥಿಕ,ರಾಜಕೀಯವಾಗಿ ಹಿಂದುಳಿದಿದೆ. ಇಲ್ಲಿನ ಸಮಾಜದಲ್ಲಿ ಒಗ್ಗಟ್ಟಿಲ್ಲದಿರುವುದು ರಾಜಕೀಯದವರಿಗೆ  ಖುಷಿಯಾಗಲಿದೆ ಎಂಬ ಎಚ್ಚರಿಕೆಯಿಂದಾದರೂ ಒಗ್ಗಟ್ಟಾಗಬೇಕು. ನಮ್ಮ ಸಮಾಜ ಇತರೆ ಸಮಾಜದೊಂದಿಗೆ ಬೆರೆಯಬೇಕೆಂದು ಅಭಿಪ್ರಾಯಪಟ್ಟ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯನವರು  ಸಣ್ಣಪುಟ್ಟ ಸಮುದಾಯವನ್ನು ಗುರುತಿಸಿ  ಅಧಿಕಾರ ನೀಡಿದ್ದಾರೆ.ನನ್ನನ್ನು ಮೇಯರ್  ಮಾಡಿದ್ದರು. ಇದೀಗ ಗಾಣಿಗ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿಸಿದ್ದಾರೆ.

ಈ ನಿಗಮದ ವತಿಯಿಂದ ಸ್ವಯಂ ಉದ್ಯೋಗ, ಉನ್ನತ ಶಿಕ್ಷಣಕ್ಕೂ ನೆರವು ಸಿಗಲಿದೆ. ವಿದ್ಯಾರ್ಥಿಗಳು ವೃತ್ತಿಪರಶಿಕ್ಷಣ, ಉನ್ನತ ಶಿಕ್ಷಣ ಪಡೆಯಿರೆಂದ ಅವರು, ಮುಂಬರುವ ಜಿ.ಪಂ ತಾ.ಪಂ ಚುನಾವಣೆಯಲ್ಲಿ ಸಮಾಜದ  ಮಂದಿಗೆ ಟಿಕೆಟ್ ನೀಡುವಂತೆ ಮಾಜಿ ಶಾಸಕ ಮಂಜುನಾಥರಲ್ಲಿ ಮನವಿ ಮಾಡಿದರು.

ಶಿಕ್ಷಣಇಲಾಖೆಯ ನಿವೃತ್ತ ಅಧಿಕಾರಿ ಬಿ.ಕೆ.ಬಸವರಾಜ್, ಬೆಂಗಳೂರಿನ ಸ್ಕಂದ ಲೈಫ್‌ಸೈನ್ಸ್ನ ಸಿಇಒ ಡಾ.ಯೋಗೇಶ್  ಮಾತನಾಡಿ ಇದು ಸ್ಪರ್ಧಾತ್ಮಕ ಯುಗ, ಮಕ್ಕಳಲ್ಲಿ ಸಾಧಿಸುವ ಛಲ ಇರಬೇಕು. ಪುಸ್ತಕ ಓದುವ ಪ್ರವೃತ್ತಿ ಬೆಳೆಸಿಕೊಳ್ಳಿ, ನಿಮ್ಮ ಗುರಿ ನಿಖರವಾಗಿರಲಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತಯಾರಾಗಿ, ಯುವಜನತೆ ಮನಸ್ಸು ಮಾಡಿದರೆ ದೇಶವನ್ನು ಸುಬಿಕ್ಷೆಯಾಗಿಸಬಹುದು.  ಉದ್ಯಮಿಗಳಾಗಿ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಬಹುದು. ಈನಿಟ್ಟಿನಲ್ಲಿ  ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚಿನ  ಪ್ರೋತ್ಸಾಹ ನೀಡಬೇಕೆಂದು ಆಶಿಸಿದರು.

ಪೌರಾಯುಕ್ತೆ ಎಂ.ಮಾನಸ, ಡಿವೈಎಸ್ಪಿ  ಶಿವಕುಮಾರ್, ನಿವೃತ್ತ ಪ್ರಾಚಾರ್ಯ ಪುಟ್ಟಶೆಟ್ಟಿ, ಗಾಣಿಗರ ವೇದಿಕೆಯ  ಅಧ್ಯಕ್ಷ ಮನುಕುಮಾರ್,  ಪ್ರಧಾನಕಾರ್ಯದರ್ಶಿ ಪ್ರಸಾದ್, ಗೌರವಾಧ್ಯಕ್ಷ ಕೆ.ರಮೇಶ್, ಕೃಷಿಅಧಿಕಾರಿ ವೆಂಕಟಾಚಲಪತಿ ಸೇರಿದಂತೆ ಅನೇಕರು ಮಾತನಾಡಿದರು. ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ,೭೩ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೆರವೇರಿಸಲಾಯಿತು. ಜನಪ್ರತಿನಿಧಿಗಳು, ಯಜಮಾನರು,  ನಿವೃತ್ತ ನೌಕರರನ್ನು ವೇದಿಕೆವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಉದ್ಯಮಿ ಶಿವಕುಮಾರ್, ಮಂಡ್ಯ ಜಿಲ್ಲಾಗಾಣಿಗರ ಸಂಘದ ಅಧ್ಯಕ್ಷ  ಶಿವಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ವಿ.ಮಹದೇವ್, ರವಿ, ಮುಖಂಡರಾದ ಕೃಷ್ಣ, ವೇದಿಕೆಯ ಪದಾಧಿಕಾರಿಗಳಾದ ಶಿವಸ್ವಾಮಿ,  ಗೋವಿಂದಶೆಟ್ಟಿ, ನಾಗೇಂದ್ರ, ಶಿವಣ್ಣ, ಕೃಷ್ಣಕುಮಾರ್, ಸುರೇಶ್, ರವಿಚಂದ್ರ ಹಾಗೂ ನಿರ್ದೇಶಕರು ಸೇರಿದಂತೆ ಸಮಾಜದ ನೂರೂರು ಮಂದಿ ಭಾಗವಹಿಸಿದ್ದರು.

ವರದಿ:ಮನುಕುಮಾರ್

admin
the authoradmin

Leave a Reply

Translate to any language you want