ಕಾವೇರಿಯ ತವರಿನಲ್ಲಿ ಬರದ ಛಾಯೆ….. ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ…
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-2

ಈ ಬಾರಿ ಕೊಡಗಿಗೆ ಕೃಪೆ ತೋರಲು ವರುಣ ಹಿಂದೇಟು ಹಾಕುತ್ತಿದ್ದಾನೆ.. ಪರಿಣಾಮ ಕಾವೇರಿಗೆ ಜೀವಕಳೆ ಬರುವಂತೆ ಕಾಣುತ್ತಿಲ್ಲ.. ಕಾವೇರಿ ಬರಿದಾದರೆ ಆಕೆಯನ್ನು ನಂಬಿಕೊಂಡವರ ಕಥೆ ಏನು? ಕೊಡಗಿನಲ್ಲಿ ಬರಕಾಣಿಸಿಕೊಳ್ಳಲು ಕಾರಣವೇನು? ಇದೆಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ ಸಾಮಾಜಿಕ ಕಳಕಳಿಯಿಂದ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ತೆರೆದಿಟ್ಟಿದ್ದಾರೆ
ಬತ್ತಿದ ಬಾವಿಯ ಅಳಲು
ಕೊಡಗಿನಲ್ಲಿ ಜೂನ್ ಬಂತೆಂದರೆ ಮಲೆನಾಡು ಮೈದುಂಬಿ ಮಳೆಗೆ ಮೀಯುತ್ತಿತ್ತು. ಈಗ ಜೂನ್ ಕಳೆಯುತ್ತಾ ಬಂದರೂ ಆಕಾಶ ಬರಡಾಗಿದೆ. ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಹಿಂದೆ ಹಿಂಗಾರು ಮಳೆಯಲ್ಲೇ ತುಂಬಿ ಹರಿಯುತ್ತಿದ್ದ ಮರೆನಾಡಿನ ಬಾವಿಗಳು ಇಂದು ಬಾಯಾರಿ ಬರಿದಾಗಿವೆ. ಅಜ್ಜಿ ಹೇಳುತ್ತಿದ್ದಳು, “ಮಗಾ, ನಮ್ಮ ಮರೆನಾಡಲ್ಲಿ ಬಾವಿ ಬತ್ತಿದ್ರೆ ಲೋಕಾನೇ ಮುಳುಗಿದಂಗೆ” ಅಂತ. ಇಂದು ಆ ಮಾತು ನಿಜವಾಗುವ ಕಾಲ ಬಂದಿದೆ.

ಕಾವೇರಿ ಮಣ್ಣಿನಲ್ಲಿ ನೀರಿಗೆ ಹಾಹಾಕಾರ
ಕಾವೇರಿ ಹುಟ್ಟಿನ ಮಣ್ಣಿನಲ್ಲಿ, ಕಾವೇರಿ ತಾಯಿಯ ತವರಿನಲ್ಲಿ ಇಲ್ಲಿನ ಸ್ಥಳೀಯರಿಗೆ ಕುಡಿಯುವ ನೀರಿಗೆ ಹಾಹಾಕಾರ ಬಂದಿರುವುದು ಅತ್ಯಂತ ಆತಂಕಕಾರಿ. ಜಗತ್ತಿಗೆ ನೀರುಣಿಸುವ ತಾಯಿಯ ಮಕ್ಕಳೇ ಇಂದು ಒಂದು ಕೊಡ ನೀರಿಗೆ ಪರದಾಡುವ ಸ್ಥಿತಿ ಬಂದಿದೆ. ತಲಕಾವೇರಿಯ ಪುಣ್ಯಭೂಮಿಯಲ್ಲಿ ಟ್ಯಾಂಕರ್ ನೀರಿಗೆ ಕಾಯುವಂತಾಗಿದೆ. ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ.
ಗದ್ದೆ ಇಲ್ಲದ ಊರು, ನೀರಿಲ್ಲದ ಬದುಕು
ಒಂದು ಕಾಲದಲ್ಲಿ ಕೊಡಗಿನ ಕಣಿವೆಗಳೆಲ್ಲ ಹಸಿರು ಗದ್ದೆಗಳಿಂದ ಕಂಗೊಳಿಸುತ್ತಿದ್ದವು. ಭತ್ತದ ಪೈರು ಗಾಳಿಗೆ ತೂಗಿದರೆ ಅದು ಭೂಮಿಯ ಹಸಿರು ಸೀರೆ ಇದ್ದಂತೆ. ಇಂದು ಆ ಗದ್ದೆಗಳು ಮಾಯವಾಗಿವೆ. ಗದ್ದೆಯಲ್ಲಿ ನಿಂತ ನೀರೇ ಭೂಮಿಯೊಳಗಿನ ಬತ್ತದ ಜೀವಾಳವಾಗಿತ್ತು. ಈಗ ಕಾಂಕ್ರೀಟ್ ಕಾಡು ಬೆಳೆದಿದೆ, ಬೋರ್‌ವೆಲ್‌ಗಳ ಹಾವಳಿ ಹೆಚ್ಚಿದೆ. ಅಪ್ಪ 50 ಅಡಿಗೆ ನೀರು ತೆಗೆದ ಜಾಗದಲ್ಲಿ ಈಗ ಮಗ 500 ಅಡಿ ಕೊರೆದರೂ ಹನಿ ಸಿಗುತ್ತಿಲ್ಲ.

ಕಾಫಿ ಬೆಳೆಗಾರನ ಕಣ್ಣೀರು
ಕೊಡಗಿನ ಪ್ರತಿ ಮನೆಯ ಉಸಿರು ಕಾಫಿ. ಕಳೆದ ಮೂರು ವರ್ಷದಿಂದ ಕಾಫಿ ಬೆಳೆಗಾರನ ಬದುಕು ಕಣ್ಣೀರಲ್ಲೇ ಕಳೆದಿದೆ. ಹೂ ಅರಳುವ ಹೊತ್ತಿಗೆ ಮಳೆ ಬರಲಿಲ್ಲ, ಕಾಯಿ ಕಟ್ಟುವಾಗ ಬಿಸಿಲು ಸುಟ್ಟಿತು, ಕೊಯ್ಲಿಗೆ ಬಂದಾಗ ಅಕಾಲಿಕ ಮಳೆ ಹೊಡೆದು ಹಾಕಿತು. ರೈತನ ಬೆವರಿಗೆ ಬೆಲೆ ಇಲ್ಲ, ನಷ್ಟಕ್ಕೆ ಲೆಕ್ಕ ಇಲ್ಲ. ಸರ್ಕಾರದ ಕಡೆ ಕೈಚಾಚಿದರೆ ಭರವಸೆಯ ಮಾತು ಬಿಟ್ಟರೆ ಒಂದು ರೂಪಾಯಿ ಪರಿಹಾರವೂ ಸಿಕ್ಕಿಲ್ಲ.
ನಮ್ಮ ಭೂಮಿ, ನಮ್ಮ ಹಕ್ಕು, ಜಮ್ಮ ಕೊಡಗು
ಕೊಡಗು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾಡು ಕಡಿದು ದೊಡ್ಡ ರೆಸಾರ್ಟ್ ಹಾಗೂ ದೊಡ್ಡ ದೊಡ್ಡ ಉದ್ದಿಮೆ ಆಗುವುದನ್ನು ನಿಲ್ಲಿಸಲೇಬೇಕು. ಕೆಲವು ಎಕರೆ ಅಲ್ಲ, ಸಾವಿರಾರು ಎಕರೆ ಕಾಡು ಇಂದು ಕಾಂಕ್ರೀಟ್ ಆಗುತ್ತಿದೆ. ಹಸಿರು ಹೊದ್ದು ಮಲಗಿದ್ದ ಬೆಟ್ಟಗುಡ್ಡಗಳು ಇಂದು ಹಣದ ದಾಹಕ್ಕೆ ಬಲಿಯಾಗುತ್ತಿವೆ. ಒಂದು ಮರ ಕಡಿದರೆ ಹತ್ತು ಮಳೆ ಹನಿ ಕಡಿಮೆಯಾಗುತ್ತದೆ ಎಂಬುದು ಹಿರಿಯರ ನಂಬಿಕೆ. ಕಾಡು ಕಡಿದರೆ ನಾಡು ಸಾಯುತ್ತದೆ.

ಮುಂದೆ ಕಾದಿದೆ ಮಹಾ ಆಪತ್ತು
ಇಲ್ಲವಾದರೆ ತಮಿಳುನಾಡಿಗೆ ಕೃಷಿ ಇಲ್ಲ, ಬೆಂಗಳೂರು ಜನರಿಗೆ ಹಾಗೂ ಮೈಸೂರು ಜನರಿಗೆ ಕುಡಿಯಲು ನೀರಿಲ್ಲದ ಅಂತಹ ಪರಿಸ್ಥಿತಿ ಖಂಡಿತ ಬರುತ್ತದೆ. ಕಾವೇರಿ ತಾಯಿ ಹುಟ್ಟುವ ತಲಕಾವೇರಿಯ ಕಾಡು ನಾಶವಾದರೆ, ನಾಳೆ ಬೆಂಗಳೂರಿನ ನಲ್ಲಿಯಲ್ಲಿ ನೀರು ಬರಲ್ಲ, ತಂಜಾವೂರಿನ ಗದ್ದೆಗೆ ನೀರು ಹರಿಯಲ್ಲ. ಮುಂದಿನ 10 ವರ್ಷದಲ್ಲಿ ನಮ್ಮ ಮಕ್ಕಳು “ಹಸಿರಿನ ಕೊಡಗು” ಎಂಬ ಪಾಠವನ್ನು ಇತಿಹಾಸ ಪುಸ್ತಕದಲ್ಲಿ ಮಾತ್ರ ಓದಬೇಕಾಗುತ್ತದೆ.
ಕೊಡಗು ಉಳಿಸುವ ಸಂಕಲ್ಪ ಮಾಡೋಣ
ಕಣ್ಣೀರೊರೆಸುವ ಕೆಲಸ ಮೊದಲು ಆಗಲಿ… ಮೂರು ವರ್ಷದಿಂದ ನಷ್ಟ ಅನುಭವಿಸಿದ ಕಾಫಿ ಬೆಳೆಗಾರನ ಮನೆಗೆ ಸರ್ಕಾರ ತಕ್ಷಣ ಪರಿಹಾರ ತಲುಪಿಸಲಿ. ಭೂಮಿ ತಾಯಿಯ ಒಡಲು ತುಂಬಿಸೋಣ ಕೆರೆ-ಕಟ್ಟೆ ತುಂಬಿಸೋಣ, ಗದ್ದೆಗಳನ್ನು ಮತ್ತೆ ಹಸಿರಾಗಿಸೋಣ, ಮಳೆ ನೀರಿನ ಒಂದು ಹನಿಯೂ ಪೋಲಾಗದಂತೆ ನೋಡಿಕೊಳ್ಳೋಣ.

ಕಾಡು ಉಳಿದರಷ್ಟೆ ನಾಡು ಉಳಿಯುತ್ತದೆ
ಇನ್ನು ಒಂದು ಗುಲಗಂಜಿ ಅಷ್ಟು ಕಾಡು ನಾಶವಾಗಲು ಬಿಡಬಾರದು. ರೆಸಾರ್ಟ್ ಮತ್ತು ಉದ್ದಿಮೆಗಳ ಹೆಸರಿನಲ್ಲಿ ನಡೆಯುವ ಅರಣ್ಯ ನಾಶವನ್ನು ತಕ್ಷಣ ನಿಲ್ಲಿಸಬೇಕು. ಎಲ್ಲರ ಹೊಣೆ ಇದು ಕೇವಲ ಕೊಡಗಿನವರ ಹೋರಾಟ ಅಲ್ಲ. ಬೆಂಗಳೂರಿನಲ್ಲಿ ನೀರು ಕುಡಿಯುವವನು, ಮೈಸೂರಿನಲ್ಲಿ ಅನ್ನ ಉಣ್ಣುವವನು, ತಮಿಳುನಾಡಿನಲ್ಲಿ ಭತ್ತ ಬೆಳೆಯುವವನು ಎಲ್ಲರೂ ಕೊಡಗಿಗಾಗಿ ದನಿ ಎತ್ತಬೇಕು. ಮುಂಗಾರು ಕೈಕೊಟ್ಟಿದೆ, ಆದರೆ ನಾವು ಕೈಚೆಲ್ಲುವಂತಿಲ್ಲ. ಕಾವೇರಿಯ ತವರಿನಲ್ಲಿ ಕಾವೇರಿಯ ಮಕ್ಕಳಿಗೇ ನೀರಿಲ್ಲ ಎಂದರೆ ಅದು ಪ್ರಕೃತಿಯ ಶಾಪ. ಇಂದು ನಾವು ಮೌನವಾಗಿದ್ದರೆ, ನಾಳೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ. ಮಳೆ ಬರಲಿ, ಕಾಡು ನಗಲಿ, ಕಾವೇರಿ ಮತ್ತೆ ಹರಿಯಲಿ. ಹಸಿರು ಕೊಡಗು ಶಾಶ್ವತವಾಗಿರಲಿ.

“ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ” ಏನಿದು ಸ್ಟೋರಿ..?







