ಕೊಡಗಿನ ಹಾಕಿಯಿಂದ ನಾಟಿ ಓಟದವರೆಗೆ… ಹಳ್ಳಿ ಆಟಕ್ಕೆ ವೇದಿಕೆ ಬೇಕಾಗಿದೆ… ಬಾಲ್ಯದ ದಿನಗಳು ಮರುಕಳಿಸಲಿ…
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-12

ಶ್ರೀಮಂತಿಕೆ, ಬಡತನ, ಜಾತಿ, ಮತ ಎಲ್ಲವನ್ನು ಬದಿಗಿಟ್ಟು ನಮ್ಮನ್ನು ಒಂದಾಗಿಸಿದ್ದು ಬಾಲ್ಯದ ಹಳ್ಳಿ ಆಟಗಳು.. ಅವತ್ತಿನ ಆಟಗಳೆಲ್ಲವೂ ಸಾಮೂಹಿಕವಾಗಿ ಆಡಲೇ ಬೇಕಾದ ಆಟಗಳಾಗಿದ್ದವು. ಹೀಗಾಗಿ ಈ ಆಟಗಳು ನಮಗೆ ಗೊತ್ತಿಲ್ಲದಂತೆ ಬದುಕಿಗೆ ಹತ್ತು ಹಲವು ಪಾಠಗಳನ್ನು ಕಲಿಸಿವೆ, ಬೆಳೆಸಿವೆ.. ಅದಕ್ಕಿಂತ ಹೆಚ್ಚಾಗಿ ನಮ್ಮ ಬಾಲ್ಯವನ್ನು ಶ್ರೀಮಂತಗೊಳಿಸಿವೆ. ಅದು ಹೇಗೆಂದರೆ ನಾವೆಲ್ಲರೂ ಆ ದಿನಗಳೇ ಚೆನ್ನಾಗಿತ್ತು ಎಂದು ನೆನಪಿಕೊಳ್ಳುವ ಮಟ್ಟಿಗೆ… ಬಾಲ್ಯದ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ…
ಕೊಡವ ಹಾಕಿ ಹಬ್ಬ ಎಂದರೆ ಕೇವಲ ಪಂದ್ಯವಲ್ಲ, ಅದು ಒಂದು ಜನಾಂಗದ ಎದೆಯ ಬಡಿತ. ತಾತನ ಕಾಲದ ಸ್ಟಿಕ್ ಮೊಮ್ಮಗನ ಕೈ ಸೇರುವ ಕ್ಷಣ, ಅಪ್ಪ ಮಗನಿಗೆ ಪಾಸ್ ಕೊಟ್ಟು ಗೋಲ್ ಹೊಡೆಸುವ ಸಂಭ್ರಮ, ಅಣ್ಣ ತಮ್ಮನಿಗೆ ಗುರಾಣಿಯಾಗಿ ನಿಲ್ಲುವ ಪ್ರೀತಿ. ರೆಫ್ರಿ ವಿಸಿಲ್ ಊದಿದರೆ ಸಾಕು, ವಯಸ್ಸಿನ ಅಂತರ ಮರೆಯಾಗುತ್ತದೆ. 60ರ ಅಜ್ಜ 16ರ ಮೊಮ್ಮಗನಿಗೆ “ಓಡೋ ಮಾರಾಯ” ಅಂತ ಕೂಗೋದು ನೋಡಿದ್ರೆ ಯಾರು ಅಜ್ಜ ಯಾರು ಮೊಮ್ಮಗ ಅಂತಾನೇ ಗೊತ್ತಾಗಲ್ಲ. ಉಳಿಯುವುದು ಒಂದೇ ಮಂತ್ರ: ‘ನಾವು ಗೆಲ್ಲಬೇಕು’. ಆ ಮೈದಾನದಲ್ಲಿ ಸೋತವನ ಕಣ್ಣಲ್ಲೂ ನೀರಿಲ್ಲ, ಏಕೆಂದರೆ ಸೋತವರು ಎದುರಾಳಿಗಳಲ್ಲ, ನಮ್ಮವರೇ. ಹಾಕಿ ನಮಗೆ ‘ನಾನು’ ಅಳಿಸಿ ‘ನಾವು’ ಬರೆದುಕೊಟ್ಟಿತು. ಶಿಸ್ತು ಕಲಿಸಿತು, ಸಮಾನತೆ ತೋರಿಸಿತು, ಪರಂಪರೆಯ ಕೊಂಡಿ ಬೆಸೆಯಿತು.

ಕೌಟುಂಬಿಕ ಹಾಕಿ ಸಂಚಾಲಕರಾದ ಪಾಂಡಂಡ ಕುಟ್ಟಣಿ uncle ಅವರ ದೂರದೃಷ್ಟಿಯಿಂದಲೇ ಇಂದು ಕೌಟುಂಬಿಕ ಹಾಕಿ ಹಬ್ಬ ಇಡೀ ಕೊಡಗಿನಲ್ಲಿ ಅತ್ಯಂತ ವಿಜೃಂಭಣೆಯನ್ನು ಪಡೆದುಕೊಂಡಿದೆ._ ಒಂದು ಕನಸು ಕಂಡು, ಕುಟುಂಬಗಳನ್ನು ಮೈದಾನಕ್ಕೆ ಕರೆತಂದ ಆ ದೊಡ್ಡ ಮನಸ್ಸಿಗೆ ನಾವು ಸದಾ ಚಿರಋಣಿ. ಅವರ ದೂರದೃಷ್ಟಿಯೇ ಇಂದು ‘ಕೊಡವ ಫ್ಯಾಮಿಲಿ ಕಪ್’*ಗೆ ದಾರಿಯಾಯಿತು. ಹಾಕಿಯ ಜೊತೆಗೆ *ಕ್ರಿಕೆಟ್ನ ಬ್ಯಾಟು, ವಾಲಿಬಾಲ್ನ ಚೆಂಡು, ಫುಟ್ಬಾಲ್ನ ಒದೆತ,
ಕಬಡ್ಡಿಯ ಹುಸುಕಾಟ, ಹಗ್ಗಜಗ್ಗಾಟದ ಎಳೆತ, shooting competition ತೊಕ್ ನಮ್ಮೆ ಎಲ್ಲವೂ ಸೇರಿಕೊಂಡವು. ಒಂದೇ ಮೈದಾನದಲ್ಲಿ ಅಪ್ಪ-ಮಗ ಕ್ರೀಸ್ಗೆ ಇಳಿದರು, ಅಣ್ಣ-ತಮ್ಮ ನೆಟ್ ಮುಂದೆ ಜಿಗಿದರು, ಚಿಕ್ಕಪ್ಪ-ಮಗ ಎದುರಾಳಿಯನ್ನು ಮುಟ್ಟಿ ಬಂದರು, ದೊಡ್ಡಪ್ಪ-ಮಗ ಒಂದೇ ಹಗ್ಗಕ್ಕೆ ಬಲ ತುಂಬಿದರು. ಕ್ರೀಡೆ ಕೇವಲ ಪಂದ್ಯವಾಗದೆ, ಕುಟುಂಬ ಮತ್ತು ಸಮುದಾಯ ಬೆಸೆಯುವ ಹಬ್ಬವಾಯಿತು. ಆ ಒಗ್ಗಟ್ಟಿನ ಕಿಚ್ಚನ್ನೇ ಈಗ ನಮ್ಮ ನಶಿಸುತ್ತಿರುವ ಎಲ್ಲಾ ಗ್ರಾಮೀಣ ಆಟಗಳಿಗೂ ಹಚ್ಚಬೇಕು.

ಮೊಬೈಲ್ ಪರದೆಯಲ್ಲಿ ಕಣ್ಣಿಟ್ಟು ಬೆರಳು ಆಡಿಸುವ ಮಕ್ಕಳನ್ನು ನೋಡಿದಾಗ ಒಮ್ಮೆ ನಮ್ಮ ಬಾಲ್ಯ ನೆನಪಾಗುತ್ತದೆ. ಧೂಳು ಎಬ್ಬಿಸಿ, ಬೆವರು ಸುರಿಸಿ, ಬಿದ್ದು ಎದ್ದು ಆಡುತ್ತಿದ್ದ ಆಟಗಳು. ಅಲ್ಲಿ ಗೆಳೆಯನ ಹೆಗಲು ಇತ್ತು, ಗೆಳತಿಯ ನಗು ಇತ್ತು. ಅವು ಕೇವಲ ಆಟವಾಗಿರಲಿಲ್ಲ. ಅವು ನಮ್ಮನ್ನು ಮನುಷ್ಯರನ್ನಾಗಿ ಮಾಡಿದ ಪಾಠಶಾಲೆಗಳು.
ಕುಂಟಬಿಲ್ಲೆ ಆಡುವಾಗ ಒಂಟಿ ಕಾಲಲ್ಲಿ ನಿಂತು ಸಮತೋಲನ ಕಲಿತೆವು. ಬಿಲ್ಲೆ ಸರಿಯಾದ ಮನೆಯಲ್ಲಿ ಬಿದ್ದಾಗ ಸಿಗುವ ಸಂಭ್ರಮಕ್ಕೆ ಗೆಳೆಯರ ಚಪ್ಪಾಳೆ, ಗೆಳತಿಯರ ಕುಣಿತ ಸಾಥ್ ಕೊಡುತ್ತಿತ್ತು. ಸೋತವನನ್ನು ಎತ್ತಿ “ಏನಿಲ್ಲ ಬಿಡು, ಮತ್ತೆ ಆಡು” ಅನ್ನುವ ಧೈರ್ಯವನ್ನು ಗೆಳತಿ ಕಣ್ಣಲ್ಲೇ ಹೇಳುತ್ತಿದ್ದಳು. ಕೆಲವೊಮ್ಮೆ ಕುಂಟಬಿಲ್ಲೆ ಆಡಿ ಆಡಿ ಒಂದು ಕಾಲೇ ಉದ್ದ ಆಗುತ್ತಿತ್ತು ಅನಿಸೋದು ಬೇರೆ ವಿಷಯ.
ಚಿನ್ನಿ ದಾಂಡು ಕೈಗೆತ್ತಿಕೊಂಡರೆ ಹುಡುಗರದ್ದೇ ಆಟ ಅಂದುಕೊಂಡವರಿಗೆ ಗೊತ್ತಿಲ್ಲ, ಕೆಲವು ಊರಿನ ಹುಡುಗಿಯರೂ ಚಿನ್ನಿಯನ್ನು ಮೋಡ ಮುಟ್ಟುವಂತೆ ಹೊಡೆಯುತ್ತಿದ್ದರು. ಕಣ್ಣಿಗೆ ಅಳತೆ, ಕೈಗೆ ಬಲ ತಾನೇ ಬರುತ್ತಿತ್ತು. ಚಿನ್ನಿ ಆಕಾಶದಲ್ಲಿ ಹಾರಿ ಪಕ್ಕದ್ಮನೆ ತೋಟಕ್ಕೆ ಹೋಗಿ ಬಿದ್ದಾಗ “ಏಯ್ ನನ್ನ ಚಿನ್ನಿ” ಅಂತ ಕೂಗಿಕೊಂಡು ಹೋಗಿ ತರೋದೇ ಒಂದು ಸಾಹಸ. ಎದುರು ತಂಡದ ಗೆಳತಿಗೇ “ಚೆನ್ನಾಗಿ ಹೊಡೆದೆ ಕಣೇ” ಎಂದು ಬೆನ್ನು ತಟ್ಟುವ ದೊಡ್ಡತನವನ್ನು ಆ ಸಣ್ಣ ಕಡ್ಡಿ ಕಲಿಸಿತು.

ಲಗೋರಿ ಆಡುವಾಗ ಏಳು ಕಲ್ಲು ಜೋಡಿಸುವುದು ಸುಲಭವಲ್ಲ. ಅದಕ್ಕೆ ಚುರುಕುತನ ಬೇಕು, ವೇಗ ಬೇಕು, ತಂಡದ ಒಗ್ಗಟ್ಟು ಬೇಕು. ಗೆಳೆಯ ಕಲ್ಲು ಜೋಡಿಸುವಾಗ ಗೆಳತಿ ಚೆಂಡಿನಿಂದ ಕಾಯುತ್ತಿದ್ದಳು, ಗೆಳತಿ ಜೋಡಿಸುವಾಗ ಗೆಳೆಯ ಕಾಯುತ್ತಿದ್ದ. “ಲಗೋರಿ” ಎಂದು ಕೂಗುವಾಗ ಸಿಗುವ ಗೆಲುವಿನ ರೋಮಾಂಚನಕ್ಕೆ ಬೆಲೆ ಕಟ್ಟಲಾಗದು. ಕಲ್ಲು ಬಿದ್ದು ಕಾಲು ಬೆರಳಿಗೆ ತಗುಲಿದ್ರೆ ಮಾತ್ರ “ಅಯ್ಯೋ ಅಮ್ಮಾ” ಅಂತ ಕೂಗೋದು ಫ್ರೀ.
ಕಾಳು ಎಕ್ಕುವುದು ನಮ್ಮೂರಿನ ಮಕ್ಕಳಿಗೆ ಕೊಡುತ್ತಿದ್ದ ಚುರುಕುತನದ ಸ್ಪರ್ಧೆ. ನೆಲದ ಮೇಲೆ ಹುಣಸೆ ಬೀಜವನ್ನೋ ಕಲ್ಲಿನ ಚೂರನ್ನೋ ಎರಡು ಗುಡ್ಡೆ ಹಾಕುತ್ತಿದ್ದರು. ಆಮೇಲೆ “ರೆಡಿ, ಸ್ಟಾರ್ಟ್” ಅಂದ ತಕ್ಷಣ ಮಕ್ಕಳು ಒಂದೊಂದೇ ಕಾಳು ಎಕ್ಕಲು ಶುರು ಮಾಡುತ್ತಿದ್ದರು. ಯಾರು ಬೇಗ ಜಾಸ್ತಿ ಕಾಳು ಎಕ್ಕುತ್ತಾರೆ ಅವರು ವಿನ್ನರ್. ಕೈಬೆರಳುಗಳಿಗೆ ವೇಗ, ಕಣ್ಣಿಗೆ ಚುರುಕು, ಮನಸ್ಸಿಗೆ ಏಕಾಗ್ರತೆ ಎಲ್ಲವೂ ಬೇಕು. ಗೆದ್ದವನಿಗೆ ಜೇಬು ತುಂಬಾ ಕಾಳು, ಸೋತವನಿಗೆ ಮತ್ತೆ ಪ್ರಯತ್ನಿಸುವ ಹುಮ್ಮಸ್ಸು. ಸೋಲು-ಗೆಲುವು ಮುಖ್ಯವಲ್ಲ, ಎಲ್ಲರೂ ಒಟ್ಟಿಗೆ ನೆಲದ ಮೇಲೆ ಕೂತು ನಗುತ್ತಾ ಆಡುತ್ತಿದ್ದ ಆ ಕ್ಷಣವೇ ಮುಖ್ಯ. ಕೆಲವೊಮ್ಮೆ ಜಾಸ್ತಿ ಎಕ್ಕಿದ ಖುಷಿಗೆ ಕಾಳನ್ನೇ ಜೇಬಲ್ಲಿ ಇಟ್ಕೊಂಡು ಮನೆಗೆ ಹೋಗಿ ಅಮ್ಮನ ಬೈಸ್ಕೊಳ್ಳೋದು ಬೋನಸ್.

ಬುಗುರಿ ಗಿರ್ ಎಂದು ತಿರುಗುತ್ತಾ ಅಂಗೈ ಸೇರಿದಾಗ ಮೈಮನವೆಲ್ಲಾ ಪುಳಕಗೊಳ್ಳುತ್ತಿತ್ತು. ಅದು ನಮ್ಮ ಕನಸು ಆಕಾಶಕ್ಕೆ ನೆಗೆದಂತೆ. ಹಗ್ಗ ಸುತ್ತಿ ಆಡಿಸುವ ಕಲೆಯಲ್ಲಿ ಏಕಾಗ್ರತೆ, ಸಮಯಪ್ರಜ್ಞೆ, ಕೈಚಳಕ ಎಲ್ಲವೂ ಇತ್ತು. ಗೆಳೆಯನ ಬುಗುರಿ ಗೆಳತಿಯ ಅಂಗೈ ಸೇರಿದಾಗ ಇಬ್ಬರ ಮುಖದಲ್ಲೂ ನಾಚಿಕೆಯ ನಗು ಮೂಡುತ್ತಿತ್ತು. ಬುಗುರಿ ತಿರುಗದೆ ಕೆಳಗೆ ಬಿದ್ದರೆ “ಈಗ ನಿನ್ ತಲೆ ತಿರುಗುತ್ತೆ ನೋಡು” ಅಂತ ಗೆಳೆಯರು ರೇಗಿಸೋದು ಮಾಮೂಲು.
ಗೋಲಿ ಆಟ ಅನುಭವದ ಮಾತಿನಲ್ಲಿ ಹೇಳಿದರೆ ಇದು ಕೇವಲ ಹೆಬ್ಬೆರಳಿನ ಆಟವಲ್ಲ. ಸಮಯಕ್ಕೆ ತಕ್ಕಂತೆ ಎಲ್ಲಾ ಬೆರಳುಗಳನ್ನು ಉಪಯೋಗಿಸಿ ಗೋಲಿಯನ್ನು ನೆಗೆದು ಗುಂಡಿಗೆ ಹಾಕುವ ಕಲೆ. ಹುಡುಗಿಯರೂ ಜೇಬಲ್ಲಿ ಗೋಲಿ ತುಂಬಿಕೊಂಡು ಹುಡುಗರನ್ನು ಸೋಲಿಸುತ್ತಿದ್ದರು. ನಿಖರತೆ, ತಾಳ್ಮೆ, ಎದುರಾಳಿಯ ನಡೆಯನ್ನು ಅಂದಾಜಿಸುವ ಶಕ್ತಿ ಇಲ್ಲೇ ಕಲಿತೆವು. ಒಂದೇ ಹೊಡೆತಕ್ಕೆ ಎರಡು ಗೋಲಿ ಗೆದ್ದಾಗ ಸಿಗುವ ಹೆಮ್ಮೆ, ಜೇಬು ತುಂಬಾ ಗೋಲಿ ತುಂಬಿಕೊಂಡು ಮನೆಗೆ ಹೋಗುವಾಗ ಇಡೀ ಪ್ರಪಂಚವೇ ಅಂಗೈಯಲ್ಲಿ ಇರುವಂತೆ ಭಾಸವಾಗುತ್ತಿತ್ತು. ಅಮ್ಮ “ಈ ಗೋಲಿ ಎಲ್ಲಿಂದ ತಂದೆ?” ಅಂತ ಕೇಳಿದಾಗ “ಗೆದ್ದಿದ್ದು” ಅಂತ ಹೆಮ್ಮೆಯಿಂದ ಹೇಳೋದೇ ಬೇರೆ ಲೆವೆಲ್.

ಕಲ್ಲಾಟ, ಕಣ್ಣಾಮುಚ್ಚಾಲೆ, ಹಗ್ಗದಾಟ ಹೆಣ್ಣುಮಕ್ಕಳ ಪ್ರಪಂಚ. ಐದು ಕಲ್ಲುಗಳನ್ನು ಆಕಾಶಕ್ಕೆ ಎಸೆದು ಹಿಡಿಯುವಾಗ ಅವರ ಕೈಚಳಕಕ್ಕೆ ಸೋಲಾಗುತ್ತಿತ್ತು. ಕಣ್ಣಾಮುಚ್ಚಾಲೆ ಆಡುವಾಗ ಮರದ ಮರೆಯಲ್ಲಿ ಅವಿತು ಗೆಳತಿ “ಕೂ” ಎನ್ನುವಾಗ ಎದೆಯಲ್ಲಿ ಡವಗುಡುತ್ತಿತ್ತು. ಹಗ್ಗದಾಟದಲ್ಲಿ ನೂರರ ಲೆಕ್ಕ ಮುಟ್ಟಿದ ಗೆಳತಿಯೇ ಊರಿನ ರಾಣಿ. ಆ ಆಟಗಳಲ್ಲಿ ನಗು ಇತ್ತು, ನಾಚಿಕೆ ಇತ್ತು, ಸ್ನೇಹ ಇತ್ತು, ಸ್ಪರ್ಧೆ ಇತ್ತು. ಹಗ್ಗದಾಟ ಆಡುವಾಗ ಹಗ್ಗ ಕಾಲಿಗೆ ಸಿಕ್ಕಿ ಬಿದ್ದು ಮೂಗು ಉಜ್ಜಿಕೊಂಡ್ರೂ ನಗು ನಿಲ್ಲುತ್ತಿರಲಿಲ್ಲ.
ತೊಕ್ ನಮ್ಮೆ ಕೊಡವ ಹಬ್ಬದ ಒಂದು ಪ್ರಮುಖ ಭಾಗ. ಗುರಿ ಇಟ್ಟು ಗುಂಡು ಹಾರಿಸುವ ಕಲೆ. ಹುಡುಗರಷ್ಟೇ ಅಲ್ಲ, ಕೊಡವ ಹೆಣ್ಣುಮಕ್ಕಳೂ ನೆಟ್ಟ ಗುರಿಗೆ ಹೊಡೆಯುವಲ್ಲಿ ನಿಪುಣರು. ಕಣ್ಣು ಮತ್ತು ಕೈಯ ಹೊಂದಾಣಿಕೆ, ಏಕಾಗ್ರತೆ, ಶಾಂತಚಿತ್ತತೆ, ಶಿಸ್ತು ಎಲ್ಲವನ್ನೂ ಕಲಿಸುತ್ತದೆ. ಇದು ಕೊಡವರ ಪರಂಪರೆಯ ವೀರತ್ವದ ಸಂಕೇತ. ನೆಟ್ಟ ಗುರಿಗೆ ಹೊಡೆದಾಗ ಸಿಗುವ ‘ಶಹಬ್ಬಾಸ್ ಕೂಗು, ಊರಿನ ಜನರ ಮೆಚ್ಚುಗೆ, ಪೂರ್ವಜರ ಕಲೆಯನ್ನು ಉಳಿಸಿಕೊಂಡ ಹೆಮ್ಮೆ ಮನಸ್ಸಿಗೆ ಹಬ್ಬ. ಗುಂಡು ಮಿಸ್ ಆದ್ರೆ “ತೊಕ್ ಕಣ್ಣಿಗೆ ಬೂದಿ ಎರಚಿತು” ಅಂತ ಸಮಜಾಯಿಷಿ ಕೊಡೋದು ಬೇರೆ ಕಥೆ.

ಮಳೆಗಾಲ ಬಂತೆಂದರೆ ನಮ್ಮ ಸಂಭ್ರಮ ಇಮ್ಮಡಿ. ಕೆಸರು ಗದ್ದೆಯೇ ನಮ್ಮ ಕ್ರೀಡಾಂಗಣವಾಗುತ್ತಿತ್ತು. ಅಲ್ಲಿ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಓಟದ ಸ್ಪರ್ಧೆ ಎಲ್ಲವೂ ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ಕೆಸರುಗದ್ದೆಯ ಕಾರ್ಯಕ್ರಮಗಳು ಮತ್ತೆ ಎಲ್ಲ ಕಡೆ ಚಿಗುರೊಡೆಯುತ್ತಿವೆ. ಕೊಡಗಿನ ಮೂಲೆ ಮೂಲೆಗಳಲ್ಲಿ, ಕರಾವಳಿಯ ಊರುಗಳಲ್ಲಿ, ಮಲೆನಾಡಿನ ಹಳ್ಳಿಗಳಲ್ಲಿ ಯುವಕ-ಯುವತಿಯರು, ಮಹಿಳಾ ಮಂಡಲದವರು ಸೇರಿ ಕೆಸರುಗದ್ದೆ ಕ್ರೀಡಾಕೂಟ ಮಾಡ್ತಾ ಇದ್ದಾರೆ. ನಮ್ಮ ಪೂರ್ವಜರು ಆಡಿದ ಆಟಕ್ಕೆ ಮತ್ತೆ ಜೀವ ಬಂದಿದೆ. ಕೆಸರಲ್ಲಿ ಬಿದ್ದು ಎದ್ದು, ಮೈಯೆಲ್ಲಾ ಮಣ್ಣು ಮೆತ್ತಿಕೊಂಡು ಆಡುವಾಗ ಜಾತಿ, ಮನೆತನ ಎಲ್ಲವೂ ತೊಳೆದು ಹೋಗುತ್ತಿತ್ತು. ಗೆಳೆಯನನ್ನು ಕೆಸರಿಗೆ ತಳ್ಳಿ ನಗುವುದು,
ಗೆಳತಿ ಬೀಳುವಾಗ ಕೈ ಹಿಡಿದು ಎತ್ತುವುದು, ಸೋತ ತಂಡದವರು ಗೆದ್ದವರನ್ನು ಕೆಸರಿನಲ್ಲಿ ಹೊರಳಾಡಿಸುವುದು. ಆ ಕೆಸರಿನಲ್ಲಿ ನಮ್ಮ ಅಹಂಕಾರವೆಲ್ಲಾ ಕರಗಿ ಹೋಗುತ್ತಿತ್ತು. ಅಲ್ಲಿ ಗೆದ್ದವರು ಯಾರೂ ಇಲ್ಲ, ಸೋತವರೂ ಯಾರೂ ಇಲ್ಲ. ಇದ್ದದ್ದು ಒಂದೇ, ಕೆಸರು ಮೆತ್ತಿಕೊಂಡ ಮುಖದಲ್ಲಿನ ನಿಷ್ಕಲ್ಮಶ ನಗು. ಅದು ನಮ್ಮ ಊರಿನ ಒಗ್ಗಟ್ಟಿನ ನಿಜವಾದ ಸಂಕೇತ. ಆಟ ಮುಗಿಸಿ ಮನೆಗೆ ಹೋದಾಗ ಅಮ್ಮನ ಬೈಗುಳ ಗ್ಯಾರಂಟಿ, ಆದ್ರೂ ಮರುದಿನ ಮತ್ತೆ ಕೆಸರಿಗೆ ಇಳಿಯೋದೇ ಖುಷಿ.

ಈ ಸಂತೋಷ, ಈ ಒಗ್ಗಟ್ಟು ಮತ್ತೆ ಬರಬೇಕಾದರೆ ಏನು ಮಾಡಬೇಕು?
ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ‘ನಮ್ಮ ಆಟ ನಮ್ಮ ಹೆಮ್ಮೆ’ ಎಂಬ ಗ್ರಾಮೀಣ ಕ್ರೀಡಾ ಹಬ್ಬ ನಡೆಯಬೇಕು. ಯುಗಾದಿ, ದೀಪಾವಳಿ ರಜೆಯಲ್ಲಿ ಎರಡು ದಿನ ಇಡೀ ಊರು ಬಯಲಿಗೆ ಇಳಿಯಬೇಕು. ಮಳೆಗಾಲದಲ್ಲಿ ಒಂದು ದಿನ ಕೆಸರು ಗದ್ದೆಗೂ ಇಳಿಯಬೇಕು. ಇಲ್ಲಿ ಕುಂಟಬಿಲ್ಲೆ ಇರಲಿ, ಲಗೋರಿ ಇರಲಿ, ಚಿನ್ನಿ ದಾಂಡು ಇರಲಿ, ಕಾಳು ಎಕ್ಕುವುದು ಇರಲಿ, ಬುಗುರಿ ಇರಲಿ, ಗೋಲಿ ಇರಲಿ, ಕಲ್ಲಾಟ ಇರಲಿ, ಹಗ್ಗದಾಟ ಇರಲಿ, ಕಣ್ಣಾಮುಚ್ಚಾಲೆ ಇರಲಿ. ಜೊತೆಗೆ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಕಬಡ್ಡಿ, ಹಗ್ಗಜಗ್ಗಾಟವೂ ಇರಲಿ.
ಕೆಸರು ಗದ್ದೆಯಲ್ಲಿ ವಾಲಿಬಾಲ್, ಕಬಡ್ಡಿ, ಓಟ ಸ್ಪರ್ಧೆ ವಿಶೇಷವಾಗಿ ಇರಲಿ. ‘ಕೇರಿ ತಂಡ’, ‘ಗಲ್ಲೀ ತಂಡ’, ‘ಶಾಲಾ ತಂಡ’, ‘ಯುವಕ ಸಂಘ ತಂಡ’, ‘ಮಹಿಳಾ ಮಂಡಲ ತಂಡ’ ಮಾಡಿ. ಆಗ ಜಾತಿ, ಮನೆತನ, ವಯಸ್ಸಿನ ಭೇದವಿಲ್ಲದೆ, ಗೆಳೆಯ-ಗೆಳತಿಯರೆಲ್ಲಾ ಒಟ್ಟಾಗಿ ಆಡುವಾಗ ಊರಿನಲ್ಲಿ ಒಗ್ಗಟ್ಟು ಬೆಳೆಯುತ್ತದೆ. 8 ವರ್ಷದ ಮಗುವಿಂದ 80 ವರ್ಷದ ಅಜ್ಜಿ-ಅಜ್ಜನೂ ಆಡಲಿ. ನಮ್ಮ ಊರಿನ ಮರ್ಯಾದೆಗೆ ತಕ್ಕಂತೆ ತಂಡ ಕಟ್ಟೋಣ.

ಸರ್ಕಾರಿ ಹಾಗೂ ಖಾಸಗಿ ಎರಡೂ ಶಾಲೆಗಳಲ್ಲಿ ‘ಗ್ರಾಮೀಣ ಕ್ರೀಡಾ ದಿನ’ ವರ್ಷಪೂರ್ತಿ ನಡೆಯುವ ಅಭಿಯಾನವಾಗಬೇಕು. ವಾರಕ್ಕೆ ಎರಡು ಪಿರಿಯಡ್ ಈ ಆಟಗಳಿಗೆ ಮೀಸಲಿಡಿ. CCE ಅಂಕ ನೀಡಿ. ಲಗೋರಿಗೆ ಲೀಗ್ ಮಾಡಿ, ಕುಂಟಬಿಲ್ಲೆಗೆ ಟೈಮರ್ ಇಡಿ, ಹಗ್ಗದಾಟಕ್ಕೆ ಸ್ಪರ್ಧೆ ಏರ್ಪಡಿಸಿ, ಕೆಸರು ಗದ್ದೆ ಆಟಕ್ಕೆ ಒಂದು ದಿನ ಮೀಸಲಿಡಿ. ಹಳೆಯ ಆಟಗಳಿಗೆ ಹೊಸತನದ ಸ್ಪರ್ಶ ಕೊಟ್ಟರೆ ಮಕ್ಕಳು, ಅದರಲ್ಲೂ ಹೆಣ್ಣುಮಕ್ಕಳು ಇಂದಿನ ಕಾಲಕ್ಕೆ ತಕ್ಕಂತೆ ಅಪ್ಪಿಕೊಳ್ಳುತ್ತಾರೆ.
ಪ್ರತಿ ಗ್ರಾಮ ಪಂಚಾಯಿತಿ ‘ಸಾಂಪ್ರದಾಯಿಕ ಕ್ರೀಡಾ ನಿಧಿ’ ಮೀಸಲಿಡಬೇಕು. ಚೆಂಡು, ಚಿನ್ನಿ, ದಾಂಡು, ಬುಗುರಿ, ಗೋಲಿ, ಹಾಕಿ ಸ್ಟಿಕ್, ಕ್ರಿಕೆಟ್ ಬ್ಯಾಟ್, ಹಗ್ಗ ಎಲ್ಲವನ್ನೂ ಕೊಡಿಸಬೇಕು. ಬಹುಮಾನವಾಗಿ ಮನೆಯ ವಸ್ತು, ಕೃಷಿ ಪರಿಕರ, ಸಸಿಗಳು ಇರಲಿ. ಯುವಕ ಸಂಘ, ಮಹಿಳಾ ಮಂಡಲ ಮುಂದೆ ನಿಂತು ಊರಿನ ಮಕ್ಕಳನ್ನು ಸೇರಿಸಿ ಆಟ ಆಡಿಸಬೇಕು. ಹಿರಿಯರನ್ನು, ಅಜ್ಜಿಯರನ್ನು ತೀರ್ಪುಗಾರರನ್ನಾಗಿ ಮಾಡಿ ಗೌರವಿಸಬೇಕು. ಏಕೆಂದರೆ ಅವರ ಕಾಲದ ಆಟದ ನಿಯಮ ಅವರಿಗೇ ಚೆನ್ನಾಗಿ ಗೊತ್ತು.

ಏಕೆಂದರೆ ಸ್ಟಿಕ್ ಹಿಡಿದ ಕೈಗಳು ಒಂದಾದರೆ ಗೋಲ್ ಆಗುತ್ತದೆ. ಹಗ್ಗ ಜಗ್ಗುವ ಕೈಗಳು ಒಂದಾದರೆ ಗೆಲುವು ಸಿಗುತ್ತದೆ. ಕೆಸರು ಮೆತ್ತಿಕೊಂಡ ಕೈಗಳು ಒಂದಾದರೆ ಅಹಂಕಾರ ತೊಳೆದು ಹೋಗುತ್ತದೆ. ಹಾಗೆಯೇ ಊರಿನ ಎಲ್ಲಾ ಕೈಗಳು, ಗೆಳೆಯನ ಕೈ, ಗೆಳತಿಯ ಕೈ ಒಂದಾದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ಒಂದು ಜನಾಂಗ ಉಳಿಯುವುದು ಅದರ ಭಾಷೆ, ಉಡುಗೆ, ಆಚಾರದಿಂದ ಮಾತ್ರವಲ್ಲ, ಅದರ ಆಟದಿಂದಲೂ ಹೌದು. ಆಟ ಉಳಿದರೆ ನಗು ಉಳಿಯುತ್ತದೆ. ನಗು ಉಳಿದರೆ ಬಾಂಧವ್ಯ ಉಳಿಯುತ್ತದೆ. ಬಾಂಧವ್ಯ ಉಳಿದರೆ ನಾವು ಉಳಿಯುತ್ತೇವೆ.
ನಮ್ಮ ಮರ್ಯಾದೆ, ನಮ್ಮ ಸಂಪ್ರದಾಯ ಉಳಿಸಿಕೊಂಡೇ, ಹೊಸತನದ ಹಾದಿಯಲ್ಲಿ ಆಡೋಣ. ಬಯಲಿಗೆ ಇಳಿಯೋಣ, ಕೆಸರಿಗೂ ಇಳಿಯೋಣ. ನಮ್ಮ ಬಾಲ್ಯವನ್ನು, ನಮ್ಮ ಗೆಳೆಯ-ಗೆಳತಿಯರ ನಗುವನ್ನು ಮತ್ತೆ ಚಿಗುರಿಸೋಣ.

ಕೊಡಗಿಗೆ ಸಾಂಸ್ಕೃತಿಕ ಅಕಾಡೆಮಿ ಬೇಕೇ ಬೇಕು… ಕಲೆ ನಶಿಸಿದರೆ, ಹೃದಯಬಡಿತ ನಿಂತಂತೆ..







