ಮಡಿಕೇರಿ: ಇಷ್ಟು ದಿನಗಳ ಕಾಲ ಚೆಲ್ಲಾಟವಾಡಿದ್ದ ಮುಂಗಾರು ಇದೀಗ ಬಿರುಸುಗೊಂಡಿದೆ. ಪುನರ್ವಸು ಮಳೆ ಜು.6ರಿಂದ ಆರಂಭವಾಗಿದ್ದು, ಆರಂಭದ ದಿನದಿಂದಲೇ ಕೊಡಗಿನಲ್ಲಿ ಅಬ್ಬರಿಸಿದ್ದು ಪರಿಣಾಮ ಹಳ್ಳ, ಕೊಳ್ಳ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಜಲಪಾತಗಳಲ್ಲಿಯೂ ಭೋರ್ಗರೆತ ಆರಂಭವಾಗಿದೆ.

ಒಮ್ಮೆಗೆ ಸುರಿದ ಗಾಳಿ ಮಳೆಗೆ ಜಿಲ್ಲೆಯಾದ್ಯಂತ ಅಲ್ಲಲ್ಲಿ ಹಾನಿಗಳಾಗಿದ್ದು, ಕೆಲವೆಡೆ ಮರಗಳು ಮುರಿದು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯ ವಾಗಿದ್ದು ಕೆಲವು ಗ್ರಾಮಗಳು ಕತ್ತಲೆಯಲ್ಲಿವೆ. ಇನ್ನು ಮಡಿಕೇರಿಯ ಹೃದಯ ಭಾಗದಲ್ಲಿ ಹಳೆ ಖಾಸಗಿ ಬಸ್ ನಿಲ್ದಾಣದಿಂದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ತೆರಳು ರಸ್ತೆಯಲ್ಲಿ ಕುಸಿತವಾಗಿದ್ದು, ಈ ಮಾರ್ಗದಲ್ಲಿ ಏಕಸಂಚಾರ ವ್ಯವಸ್ಥೆ ಮಾಡಲಾಗಿದೆ. ಈ ಮಾರ್ಗದಲ್ಲಿ ನಗರಸಭೆಯಿಂದ ರೂ.35ಲಕ್ಷ ರೂ ವೆಚ್ಚದಲ್ಲಿ ಪಾದಚಾರಿ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ಒಂದು ದಿನದ ಅವಧಿಯಲ್ಲಿ ಸುರಿದ ಭಾರಿ ಮಳೆಗೆ ಈ ರಸ್ತೆಯಲ್ಲಿ ಕುಸಿತವಾಗಿದ್ದು ಬ್ಯಾರಿಕೇಡ್ ಅಳವಡಿಸಿ ಎಚ್ಚರಿಕೆ ವಹಿಸಲಾಗಿದೆ.

ಇನ್ನೊಂದೆಡೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯ ಸ್ವಚ್ಛತಾ ಸಿಬ್ಬಂದಿ ಹಾಗೂ 2ನೇ ಬ್ಲಾಕ್ ನಿವಾಸಿ ಗೀತಾರವರ ಮನೆ ಮಧ್ಯರಾತ್ರಿ ಗಾಳಿ ಮಳೆಗೆ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಭಾರೀ ಮಳೆ ಸುರಿಯುತ್ತಿರುವುದರಿಂದ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಇನ್ಗು ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 57.20 ಮಿ.ಮೀ ಮಳೆ ಸುರಿದಿದ್ದು, ಇದುವರೆಗಿನ ಅಧಿಕ ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ 571.09 ಮಿ.ಮೀ, ಸುರಿದಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ 1598.66 ಮಿ.ಮೀ ಮಳೆಯಾಗಿತ್ತು. ಸುಮಾರು ಒಂದು ಸಾವಿರ ಮಿ,ಮೀ ಮಳೆ ಕೊರೆತೆಯಾಗಿದ್ದು, ಇದೇ ರೀತಿ ಮಳೆ ಸುರಿದರೆ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ.

ಕೊಡಗಿನಲ್ಲಿ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯದ ನೀರಿನ ಮಟ್ಟ ಚೇತರಿಕೆಯಾಗಿದ್ದು, 2,859 ಅಡಿಯ ಜಲಾಶಯದಲ್ಲಿ ಸದ್ಯ 2837.12 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2853.25 ಅಡಿಗಳಷ್ಟು ನೀರಿತ್ತು. ಜಲಾಶಯಕ್ಕೆ 1657 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ದಿನ 7369 ಕ್ಯುಸೆಕ್ ಒಳಹರಿವಿತ್ತು.








