ಮೈಸೂರು: ಸಾಹಿತ್ಯ, ಕಲೆ, ಪರಂಪರೆ, ಸಂಸ್ಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯುವ ಪೀಳಿಗೆ ಸಾಹಿತ್ಯ ಕೂಟಗಳನ್ನು ಪ್ರತಿ ತಿಂಗಳು ಆಯೋಜಿಸುವುದರ ಮೂಲಕ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಶ್ರೀಗಂಧ ವಲಯದ ಪ್ರಮುಖರು, ಖ್ಯಾತ ಅಂಕಣಕಾರರು ಆದ ಡಾ. ವಿ. ರಂಗನಾಥ್ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ವಿಜಯಶ್ರೀಕೃಷ್ಣ ಸಾಹಿತ್ಯ ಕೂಟದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಕೂಟದ ವತಿಯಿಂದ ಡಾ. ಪಳನಿಸ್ವಾಮಿ, ಮೂಡುಗೂರು ಇವರ ಹಳ್ಳಿಹೈದನ ಮನದಾಳದ ಸಾಲುಗಳು ಎಂಬ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಭಾವಜೀವಿಯಾದ ಇವರ ಕವನ ಸಂಕಲನದಲ್ಲಿ ಕನ್ನಡನುಡಿ, ಅನ್ನದಾತ, ಪ್ರೀತಿ, ಪ್ರೇಮ, ಪರಿಸರ ಸಂರಕ್ಷಣೆ ಸೇರಿದಂತೆ ಪ್ರಸ್ತುತದ ಸಾಮಾಜಿಕ ತಲ್ಲಣಗಳು, ಭಾವನಾತ್ಮಕತೆ ಸೇರಿದಂತೆ ವಿವಿಧ ಬಗೆಯ ಕವಿತೆಗಳು ಅನಾವರಣಗೊಂಡು ಉತ್ತಮ ಕೃತಿಯಾಗಿದೆ ಎಂದು ಹೇಳಿದರು.
ಕಾವ್ಯ ರೂಪುಗೊಳ್ಳುವುದು ಅಷ್ಟು ಸುಲಭಕ್ಕೆ ಸಾಧ್ಯವಾಗುವುದಿಲ್ಲ, ಅದಕ್ಕೆ ತನ್ನದೇ ಗೇಯತೆ, ತನ್ಮಯತೆ ಮುಂತಾದವುಗಳ ಅವಶ್ಯಕತೆಯಿದೆ ಈ ಎಲ್ಲವನ್ನು ಪಡೆದು ಡಾ. ಪಳನಿಸ್ವಾಮಿರವರು ಕವಿತೆ ರಚಿಸಿದ್ದು ಪ್ರಶಂಸನೀಯವಾದದ್ದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮುಲಕನಾಡು ಸಭಾ ಭವನದ ಕಾರ್ಯದರ್ಶಿ ಎಂ. ಡಿ. ಶ್ರೀದತ್ತರವರು ಸಾಹಿತ್ಯ ಕೂಟದಲ್ಲಿ ನಡೆಸಿಕೊಂಡು ಬರುತ್ತಿರುವ ಎಲ್ಲ ಕಾರ್ಯಕ್ರಮಗಳು ಉತ್ತಮವಾಗಿದ್ದು ಪ್ರಸ್ತುತ ಸಂದರ್ಭದಲ್ಲಿ ಬಹು ಮುಖ್ಯವಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮೈಸೂರು ಜಿಲ್ಲಾ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ರವರು ಮಾತನಾಡಿ ಇಲ್ಲಿ ವಿವಿಧ ಪ್ರಕಾರಗಳಿದ್ದು ಅವುಗಳು ಪ್ರತಿ ತಿಂಗಳು ಒಂದೊಂದು ವಿಶೇಷ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತಮ್ಮದೇ ಆದ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿವೆ. ಇಂತಹ ಕೂಟಗಳಲ್ಲಿ ವಿಜಯಶ್ರೀಕೃಷ್ಣ ಸಾಹಿತ್ಯ ಕೂಟವು ಹಲವು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ವಾರ್ಷಿಕೋತ್ಸವ ಆಚರಣೆ ಮಾಡುತ್ತಿರುವುದು ಪ್ರಶಂಶಸನೀಯ ಎಂದು ತಿಳಿಸಿದರು.
ಕುಮಾರಿಯರಾದ ನೇಹಾ ಜಿ ಎಸ್, ದೀಪ್ತಾ ಜಿ ಎಸ್ ಪ್ರಾರ್ಥಿಸಿದರೆ, ಡಾ, ಪಳನಿಸ್ವಾಮಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ವಾರ್ಷಿಕ ವರದಿಯನ್ನು ಶ್ರೀಮತಿ ಮಾಧುರಿ ರವರು ಮಂಡಿಸಿದರೆ, ಶ್ರೀಮತಿ ತೇಜಸ್ವಿನಿ ದತ್ತಾತ್ರೇಯ ಮತ್ತು ಶ್ರೀಮತಿ ಲಕ್ಷ್ಮಿ ನಿರೂಪಿಸಿ, ರಮ್ಯಾಭಟ್ ರವರು ವಂದಿಸಿದರು.
ಇದೇ ವೇಳೆ ಕೂಟದ ಸದಸ್ಯರಾದ ಜಯಮಾಲ, ಕಾತ್ಯಾಯಿನಿ, ಮಾಧುರಿ ರವರು ಅಭಿನಯಿಸಿದ ಅಡುಗೆಭಟ್ಟ ಎಂಬ ನಾಟಕ ಪ್ರದರ್ಶನಗೊಂಡಿತು. ಮಕ್ಕಳಾದ ಕು. ಲಕ್ಷ್ಮಿ ಪ್ರಸಾದ್ ರವರಿಂದ ಭರತನಾಟ್ಯ, ಕು.ಅನರ್ಘ್ಯ ದೀಪಕ್, ಕು. ಅಲೇಖ್ಯ ದೀಪಕ್ ಅವರಿಂದ ಮಕ್ಕಳ ರೂಪಕ, ಕುಮಾರಿಯರಾದ ನೇಹಾ ಜಿ ಎಸ್, ದೀಪ್ತಾ ಜಿ ಎಸ್, ರವರು ಭಾವಗೀತೆ ಹಾಡಿದರು. ಶ್ರೀಮತಿ ಜಯಮಾಲ ರವರು ಭಾಗವಹಿಸಿದ್ದ ಪ್ರೇಕ್ಷಕರು ಲವಲವಿಕೆಯಿಂದ ಇರಲು ರಸಪ್ರಶ್ನೆಗಳನ್ನು ಕೇಳುವುದರ ಮೂಲಕ ಸಾಮಾಜಿಕ ಜ್ಞಾನವನ್ನು ಹೊರಗೆಡೆವಿದರು.








