ರವಿ ಮತ್ತು ಕಿರಣ್ ಎಂಬ ಇಬ್ಬರು ಅಣ್ಣತಮ್ಮಂದಿರು ಒಂದು ಸಣ್ಣ ಪಟ್ಟಣದ ಸರಳ ಕುಟುಂಬದಲ್ಲಿ ವಾಸಿಸುತ್ತಿದ್ದರು. ಅವರ ತಂದೆ ದಿನಗೂಲಿ ಕೆಲಸ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದರು. ತಾಯಿ ಮನೆ ಕೆಲಸಗಳ ಜೊತೆಗೆ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಕುಟುಂಬದ ಆದಾಯ ಕಡಿಮೆಯಾದರು ಪ್ರೀತಿ ಮತ್ತು ಒಗ್ಗಟ್ಟು ತುಂಬಿತ್ತು.
ತಂದೆ ತಾಯಿಯ ಏಕೈಕ ಕನಸು ಇಬ್ಬರು ಮಕ್ಕಳು ಓದಿ ಒಳ್ಳೆಯ ಜೀವನ ಕಟ್ಟಿಕೊಳ್ಳಬೇಕು ಎಂಬುದಾಗಿತ್ತು. ರವಿ ಅಣ್ಣನಾಗಿದ್ದನು ಅವನು ಚುರುಕಾದ ಮತ್ತು ಮಾತುಗಾರ ಹುಡುಗ.ಆದರೆ ಅವನಿಗೆ ಮೊಬೈಲ್ ಮೇಲಿನ ಆಸಕ್ತಿ ದಿನೇ ದಿನೇ ಹೆಚ್ಚುತ್ತಿತ್ತು ಹೊಸ ಆಟಗಳು ವಿಡಿಯೋಗಳು ಮತ್ತು ಸಾಮಾಜಿಕ ಜಾಲತಾಣಗಳು ಅವನ ಮನಸ್ಸನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದವು.ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುತ್ತಿದ್ದನು ತಡರಾತ್ರಿವರೆಗೂ ಮೊಬೈಲ್ ಬಳಸುತ್ತಿದ್ದನು. ಆದ್ದರಿಂದ ಅವನ ಆರೋಗ್ಯಕ್ಕೂ ಹಾನಿ ಆಗುತ್ತಿತ್ತು.
ಕಿರಣ್ ತಮ್ಮನಾಗಿದ್ದನು ಅವನು ಶಾಂತ ಸ್ವಭಾವದ ಮತ್ತು ಯೋಚಿಸುವ ಗುಣದ ಹುಡುಗ. ಪುಸ್ತಕ ಓದುವುದು ಅವನಿಗೆ ತುಂಬಾ ಇಷ್ಟ. ಶಾಲೆಯಿಂದ ಬಂದ ಮೇಲೆ ಅವನು ಮೊದಲು ಪಾಠ ಓದುತ್ತಿದ್ದ. ನಂತರ ಕಥಾ ಪುಸ್ತಕಗಳು ಮತ್ತು ಜೀವನ ಚರಿತ್ರೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದ. ಪುಸ್ತಕಗಳು ಅವನಿಗೆ ಕನಸುಗಳನ್ನು ಹುಟ್ಟಿಸುತ್ತಿದ್ದವು.
ಶಾಲೆಯಲ್ಲಿ ಇಬ್ಬರ ನಡುವಿನ ವ್ಯತ್ಯಾಸ ದಿನೇ ದಿನೇ ಸ್ಪಷ್ಟವಾಗತೊಡಗಿತ್ತು. ರವಿ ತರಗತಿಯಲ್ಲಿ ಗಮನ ಕೊಡುತ್ತಿರಲಿಲ್ಲ. ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಅವನಿಗೆ ಆಗುತ್ತಿರಲಿಲ್ಲ. ಪರೀಕ್ಷೆಗೆ ಓದುವುದನ್ನು ಅವನು ನಿರ್ಲಕ್ಷಿಸುತ್ತಿದ್ದನು. ಅವನ ಅಂಕಗಳು ನಿಧಾನವಾಗಿ ಕುಸಿಯುತ್ತಿದ್ದವು. ಶಿಕ್ಷಕರು ಎಚ್ಚರಿಕೆ ನೀಡಿದರು. ತಂದೆ-ತಾಯಿ ಬುದ್ಧಿ ಹೇಳಿದರು. ಆದರೆ ರವಿ ನಂತರ ನೋಡೋಣ ಎಂದು ವಿಷಯವನ್ನು ತಳ್ಳಿ ಹಾಕುತ್ತಿದ್ದನು.
ಇತ್ತ ಕಿರಣ್ ಓದಿನಲ್ಲಿ ಮುನ್ನಡೆಯುತ್ತಿದ್ದನು. ಅವನ ಉತ್ತರಗಳು ಶಿಕ್ಷಕರಿಗೆ ಇಷ್ಟವಾಗುತ್ತಿದ್ದವು. ಅವನಿಗೆ ಬಹುಮಾನಗಳು ಮತ್ತು ಪ್ರಸಂಶೆಗಳು ಸಿಗತೊಡಗಿದವು. ತಾಯಿ ಕಿರಣ್ ಸಾಧನೆ ನೋಡಿ ಸಂತೋಷಪಡುತ್ತಿದ್ದಳು. ಆದರೆ ರವಿ ಹಿಂದೆ ಬೀಳುತ್ತಿರುವುದನ್ನು ನೋಡಿ ಚಿಂತಿಸುತ್ತಿದ್ದಳು. ಒಂದು ದಿನ ತಂದೆಗೆ ಕೆಲಸದ ಸ್ಥಳದಲ್ಲಿ ಅಪಘಾತವಾಯಿತು. ಅವರು ಕೆಲ ತಿಂಗಳು ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆ ದಿನದಿಂದ ಕುಟುಂಬದ ಮೇಲೆ ದುಃಖದ ನೆರಳು ಬಿದ್ದಿತ್ತು. ಹಣದ ಕೊರತೆ ಉಂಟಾಯಿತು ಮನೆ ಖರ್ಚು ನಡೆಸುವುದು ಕಷ್ಟವಾಯಿತು. ತಾಯಿ ರಾತ್ರಿಯಲ್ಲಿ ನೆನೆದು ಕಣ್ಣೀರಿಡುತ್ತಿದ್ದಳು. ಆ ಸಮಯದಲ್ಲಿ ರವಿ ಮೊಬೈಲ್ ನಲ್ಲಿ ಮುಳುಗಿರುತ್ತಿದ್ದನು. ಮನೆಯ ಸಮಸ್ಯೆಗಳತ್ತ ಅವನು ಹೆಚ್ಚು ಗಮನ ನೀಡಲಿಲ್ಲ.
ಅವನಿಗೆ ತಾತ್ಕಾಲಿಕ ಸಂತೋಷವೇ ಮುಖ್ಯವಾಗಿತ್ತು. ಆದರೆ ಕಿರಣ್ ತಂದೆಯ ನೋವನ್ನು ನೋಡಿ ತುಂಬಾ ದುಃಖ ಪಟ್ಟ. ನಾನು ಓದಿ ಒಳ್ಳೆಯವನಾಗಿ ಮನೆಗೆ ಆಧಾರವಾಗಬೇಕು ಎಂದು ನಿರ್ಧರಿಸಿದ. ಅವನು ಇನ್ನೂ ಹೆಚ್ಚು ಶ್ರಮದಿಂದ ಓದಲು ಆರಂಭಿಸಿದ. ಪರೀಕ್ಷೆಯ ಸಮಯ ಬಂದಿತ್ತು ರವಿ ಸರಿಯಾಗಿ ಓದಿರಲಿಲ್ಲ ಪರೀಕ್ಷೆಯಲ್ಲಿ ಅವನು ವಿಫಲನಾದ. ಸ್ನೇಹಿತರು ಮುಂದಿನ ತರಗತಿಗೆ ಹೋದಾಗ ಅವನು ಹಿಂದೆ ಉಳಿದ. ಅವನಿಗೆ ತುಂಬಾ ಬೇಸರವಾಯಿತು. ಮೊಬೈಲ್ ಕೂಡ ಅವನಿಗೆ ಈಗ ಸಂತೋಷ ಕೊಡಲಿಲ್ಲ. ಅವನು ತನ್ನ ತಪ್ಪುಗಳನ್ನು ಮೊದಲ ಬಾರಿ ಗಂಭೀರವಾಗಿ ಯೋಚಿಸಿದ.
ಇತ್ತ ಕಿರಣ್ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾದ. ಅವನಿಗೆ ವಿದ್ಯಾರ್ಥಿವೇತನ ದೊರೆಯಿತು. ಅದರಿಂದ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ದೊರೆಯಿತು. ತಂದೆ ತಾಯಿ ಕಿರಣ್ ಮೇಲೆ ಹೆಮ್ಮೆ ಪಟ್ಟರು. ಮನೆಯೊಳಗೆ ಮತ್ತೆ ಸ್ವಲ್ಪ ಸಂತೋಷ ಕಾಣಿಸಿಕೊಂಡಿತು.
ಕಾಲಕ್ರಮೇಣ ಇಬ್ಬರು ದೊಡ್ಡವರಾದರು ರವಿ ಕೆಲಸ ಹುಡುಕಲು ಹೋದಾಗ ಅವನಿಗೆ ಬೇಕಾದ ಜ್ಞಾನ ಮತ್ತು ಶಿಸ್ತು ಕೊರತೆಯಾಗಿತ್ತು. ಅವನು ನಿರಾಶನಾದ. ಕಿರಣ್ ಓದಿನ ಮೂಲಕ ಉತ್ತಮ ಕಾಲೇಜಿಗೆ ಸೇರಿದ. ಅವನು ಒಳ್ಳೆಯ ಉದ್ಯೋಗ ಪಡೆದ. ಅವನ ಜೀವನದಲ್ಲಿ ಸ್ಥಿರತೆ ಮತ್ತು ಶಾಂತಿ ಇತ್ತು.
ಒಂದು ದಿನ ಕಿರಣ್ ರವಿಯೊಂದಿಗೆ ಕುಳಿತು ಮಾತನಾಡಿದ ಅವನು ರವಿಗೆ ತನ್ನ ಪುಸ್ತಕಗಳನ್ನು ಕೊಟ್ಟು ತಪ್ಪು ಮಾಡಿದರು ತಿದ್ದಿಕೊಳ್ಳಲು ಇನ್ನು ಸಮಯ ಇದೆ ಎಂದು ಹೇಳಿದ. ಸಹೋದರನ ಮಾತು ರವಿಯ ಮನಸ್ಸಿಗೆ ತಟ್ಟಿತು. ಅವನು ನಿಧಾನವಾಗಿ ಪುಸ್ತಕ ಓದಲು ಆರಂಭಿಸಿದ. ಅವನ ಜೀವನದಲ್ಲಿ ಚಿಕ್ಕದಾದರೂ ಒಳ್ಳೆಯ ಬದಲಾವಣೆ ಶುರುವಾಯಿತು. ವಿದ್ಯೆಯಲ್ಲಿ ಉತ್ತೀರ್ಣನಾದ ಒಳ್ಳೆಯ ಉದ್ಯೋಗ ಪಡೆದುಕೊಂಡ. ಇದರಿಂದ ತಂದೆ- ತಾಯಿಗೆ ಕಿರಣ್ ಮೇಲೆ ಖುಷಿಯಾಗಿ, ಜೀವನ ಸಾರ್ಥಕವೆನಿಸಿತು ಎಂದು ನಿಟ್ಟುಸಿರು ಬಿಟ್ಟರು. ಇಡೀ ಕುಟುಂಬ ಸಂತೋಷದಿಂದ ಅನ್ಯೋನ್ಯವಾಗಿತ್ತು.









