ಹುಣಸೂರು ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ: ಖಾಸಗಿ ಉದ್ಯೋಗಿಯಾಗಿದ್ದ ಸವಾರ ಸ್ಥಳದಲ್ಲಿಯೇ ಸಾವು

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹನಗೋಡು-ಹುಣಸೂರು ಮುಖ್ಯ ರಸ್ತೆಯ ರಾಮೇನಹಳ್ಳಿ ಬಳಿ ನಡೆದಿದೆ.
ಹನಗೋಡು ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ಖಾಸಗಿ ಹಣಕಾಸು ಸಂಸ್ಥೆಯ ಸಿಬ್ಬಂದಿ ನಾರಾಯಣ್ (36)ಮೃತಪಟ್ಟ ದುರ್ದೈವಿ. ಇವರಿಗೆ ಪತ್ನಿ ಹಾಗೂ ಇಬ್ಬರು ಪುಟ್ಟಮಕ್ಕಳು ಇದ್ದಾರೆ. ಹನಗೋಡು ಮುಖ್ಯ ರಸ್ತೆಯಲ್ಲಿ ಚಾಲಕ ಯಾವುದೇ ಮುನ್ಸೂಚನೆ ನೀಡದೆ ದುರಸ್ತಿಯ ಸಲುವಾಗಿ ಟ್ರ್ಯಾಕ್ಟರ್ ನ್ನು ರಸ್ತೆಯಲ್ಲಿ ನಿಲ್ಲಿಸಿದ್ದನು. ರಾತ್ರಿವೇಳೆ ಆಗಿದ್ದರಿಂದ ಟ್ರ್ಯಾಕ್ಟರ್ ಕಾಣದೆ ಸವಾರ ನೇರವಾಗಿ ಡಿಕ್ಕಿ ಹೊಡೆದಿದ್ದು ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಶವವನ್ನು ಹುಣಸೂರಿನ ಶವಾಗಾರದಲ್ಲಿರಿಸಿ ಶವಪರೀಕ್ಷೆ ನಂತರ ವಾರಸುದಾರರಿಗೆ ನೀಡಲಾಯಿತು. ಈ ವೇಳೆ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ತಾಲೂಕಿನ ಮೈಲಾಂಬೂರಿನ ವ್ಯಕ್ತಿಯೊಬ್ಬರಿಗೆ ಸೇರಿದ ಟ್ರ್ಯಾಕ್ಟರ್ ಇದಾಗಿದ್ದು, ಚಾಲಕ- ಮಾಲೀಕನ ನಿರ್ಲಕ್ಷಕ್ಕೆ ದುಡಿಯುತ್ತಿದ್ದ ವ್ಯಕ್ತಿ ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಏಕೈಕ ಪುತ್ರನನ್ನು ಕಳೆದುಕೊಂಡ ಕುಟುಂಬ ಅನಾಥವಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಟ್ರ್ಯಾಕ್ಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದೀಚೆಗೆ ಟ್ರ್ಯಾಕ್ಟರ್ ಮಾಲೀಕರು ಹಾಗೂ ಚಾಲಕರ ನಿರ್ಲಕ್ಷ್ಯದಿಂದಾಗಿ ಹತ್ತಾರು ಅಪಘಾತಗಳು ಸಂಭವಿಸಿದ್ದು, ಅನೇಕರು ಪ್ರಾಣ ಕಳೆದುಕೊಂಡು ಕುಟುಂಬ ಅನಾಥವಾಗಿದೆ. ಯಾವುದೇ ನೋಂದಣಿ, ವಿಮೆ, ಚಾಲನಾ ಪರವಾನಗಿಯೂ ಇಲ್ಲದೆ, ಲೌಡ್ ಸ್ಪೀಕರ್ ಅಳವಡಿಸಿಕೊಂಡು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತಲೇ ಇದ್ದರೂ ಪೊಲೀಸರಾಗಲಿ, ಆರ್‌ಟಿಓ ಇಲಾಖೆಯಾಗಲಿ ಯಾವುದೇ ಕ್ರಮವಹಿಸುತ್ತಿಲ್ಲ ಇನ್ನಾದರೂ ಟ್ರ್ಯಾಕ್ಟರ್‌ಗಳನ್ನು ತಪಾಸಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.







