ಕೃಷಿ, ಗುಡಿ ಕೈಗಾರಿಕೆ ಕ್ಷೇತ್ರದಲ್ಲಿ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು: ಸುಮಂಗಲ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಕೃಷಿ ಮತ್ತು ಗುಡಿ ಕೈಗಾರಿಕೆ ಕ್ಷೇತ್ರದಲ್ಲಿ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಸಮನ್ವಯ ಟ್ರಸ್ಟ್ ಕಾರ್ಯದರ್ಶಿ ಸುಮಂಗಲ ಮಹಿಳೆಯರಿಗೆ ಕರೆ ನೀಡಿದರು.
ಸೋಮನಹಳ್ಳಿ ಗ್ರಾಮದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ತೆರೆಯಲಾದ ಮಹಿಳಾ ಸಬಲೀಕರಣ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ನಿಯೋಸ್ಟ್ರಿಂಗ್ ಆಂಗ್ರೋ ವೇಟ್ ರೈತ ಉತ್ಪಾದಕ ಕಂಪನಿ ಸಹಯೋಗದೊಂದಿಗೆ ಸಮನ್ವಯ ಟ್ರಸ್ಟ್ ವತಿಯಿಂದ ಜನನಿ ಎಂಬ ಕಾರ್ಯಕ್ರಮದಡಿ ಮಹಿಳಾ ರೈತರಿಗೆ ಸ್ವ ಉದ್ಯೋಗ ತರಬೇತಿ ಮತ್ತು ಮಹಿಳಾ ರೈತ ಸಬಲೀಕರಣ ಹಾಗೂ ಗುಡಿ ಕೈಗಾರಿಕೆ ಮಾಡುವ ತರಬೇತಿಯನ್ನು ನೀಡಿ ನಿಮಗೆ ಮನೆಯಲ್ಲಿ ಕುಳಿತು ಹಣ ಸಂಪಾದನೆ ಮಾಡುವಂತಹ ಸಾಕಷ್ಟು ಗುಡಿ ಕೈಗಾರಿಕೆ ತರಬೇತಿಗಳನ್ನು ಮುಂದಿನ ದಿನಗಳಲ್ಲಿ ನೀಡುವ ಉದ್ದೇಶದಿಂದ ತರಬೇತಿ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದರು.
ಮಹಿಳೆಯರನ್ನು ಗ್ರೂಪ್ ಮಾಡುವ ಮೂಲಕ ದಿನಕ್ಕೆ ಕನಿಷ್ಠ ಒಂದು ಸಾವಿರ ಹಣ ಸಂಪಾದನೆ ಮಾಡುವಂತಹ ತರಬೇತಿಗಳನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಉದಾಹರಣೆಗೆ ತೆಂಗಿನ ನಾರಿನಿಂದ ಬರುವಂತಹ ನಾರಿನಿಂದ ಮ್ಯಾಟ್ ಮತ್ತು ಗೃಹ ಗೃಹಬಳಕೆ ಅಲಂಕೃತಗೊಂಡ ಡಿಸೈನಿಂಗ್ ಮ್ಯಾಟ್ ಗಳು ಮತ್ತು ಪೆನಾಯಿಲ್ ತಯಾರಿಕೆ ಸೇರಿದಂತೆ ಅನೇಕ ರೀತಿಯ ದಿನಬಳಕೆಯ ವಸ್ತುಗಳನ್ನು ತಾವುಗಳೇ ತಯಾರು ಮಾಡಿ ಮಾರುಕಟ್ಟೆಗೆ ಒದಗಿಸಿ ನೇರ ಮಾರಾಟ ಮಾಡಿ.ಮಧ್ಯವರ್ತಿಗಳಿಲ್ಲದೇ ಹಣ ಸಂಪಾದನೆ ಮಾಡುವಂತಹ ಉದ್ಯಮಶೀಲತೆ ವ್ಯವಹಾರಗಳನ್ನು ಈ ತರಬೇತಿಯಲ್ಲಿ ತಿಳಿದುಕೊಳ್ಳಬಹುದಾಗಿದೆ ಎಂದರು.
ಗ್ರಾಮೀಣ ಭಾಗದ ಮಹಿಳೆಯರು ಬಹುತೇಕವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿಯ ಇನ್ನೆರಡು ಮೂರು ಸ್ವ ಉದ್ಯೋಗ ಕಲ್ಪಿಸಿಕೊಳ್ಳುವಂತ ತರಬೇತಿ ಮತ್ತು ವ್ಯವಹಾರ ಹಾಗೂ ಖರ್ಚು ಆದಾಯಗಳ ಬಗ್ಗೆ ತರಬೇತಿಯಲ್ಲಿ ತಿಳಿದುಕೊಂಡರೆ ಮತ್ತಷ್ಟು ಅಭಿವೃದ್ಧಿ ಹೊಂದಲು ನಿಮಗೆ ಸಹಾಯವಾಗುತ್ತದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಗಳಲ್ಲೂ ಕಲರ್ ಪೇಂಟಿಂಗ್ ಬಿಟ್ಟು ಕಲರ್ ಮ್ಯಾಟ್ ಮತ್ತು ಕಲರ್ ಡಿಸೈನಿಂಗ್ ಮ್ಯಾಟ್ ಗಳನ್ನು ಮನೆಗಳಿಗೆ ಸುಂದರವಾಗಿ ಕಾಣಲಿ ಎಂದು ಜನರು ಬಯಸುತ್ತಿದ್ದು ಅದಕ್ಕೆ ಬೇಡಿಕೆ ಹೆಚ್ಚಾಗಿದೆ ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ಸಿಗುತ್ತಿದೆ ಜೊತೆಗೆ ಪೆನಾಯಿಲ್ ಪ್ರತಿ ಮನೆಯಲ್ಲೂ ನಿತ್ಯ ಬಳಸುವಂತಹ ಗೃಹಬಳಕೆ ವಸ್ತು ಆಗಿದ್ದು ಅದಕ್ಕೂ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ ಇವೆಲ್ಲವನ್ನು ಕಲಿತು ಸ್ವ ಉದ್ಯೋಗ ಕಲ್ಪಿಸಿಕೊಳ್ಳಲು ನಿಮಗೆ ಎಲ್ಲಾ ರೀತಿಯ ಸೌಲಭ್ಯವನ್ನು ಸಮನ್ವಯ ಟ್ರಸ್ಟ್ ಒದಗಿಸಿಕೊಡುತ್ತದೆ ಎಂದರು.
ಕೃಷಿ ಸಂರಕ್ಷಣೆ ಮತ್ತು ಬಲವರ್ಧನೆ ತರಬೇತಿ, ಮಹಿಳಾ ಸ್ವಉದ್ಯೋಗ ಮತ್ತು ಉದ್ಯಮಶೀಲತೆ ತರಬೇತಿ, ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಜೀವನೋಪಾಯ ಮಾರ್ಗದರ್ಶನಗಳು. ಕೃಷಿ ಬೀಜ ಬಂಡವಾಳ ಬ್ಯಾಂಕ್ ಸಾಲ ಸೌಲಭ್ಯಗಳು, ಡಿಜಿಟಲ್ ಸಾಕ್ಷರತೆ, ಪರಿಸರ ಸಂರಕ್ಷಣೆ, ಸ್ವಉದ್ಯೋಗ ಕಲ್ಪಿಸಿಕೊಳ್ಳುವ ಮಾರ್ಗಗಳು, ಕುಟುಂಬ ನಿರ್ವಹಣೆ ಮತ್ತು ಆದಾಯದ ಮೂಲ ಮಾರ್ಗಗಳು ಸೇರಿದಂತೆ ಅನೇಕ ಮಾರ್ಗಗಳನ್ನು ತರಬೇತಿಯಲ್ಲಿ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಂಪಾಪುರ ಬ್ಯಾಂಕ್ ಸಿದ್ದಯ್ಯ, ನಟರಾಜ್, ಉಮೇಶ್, ಕಮಲಮ್ಮ, ಕೃಷ್ಣಮೂರ್ತಿ, ಲೋಕೇಶ್, ಲಕ್ಷ್ಮಣ, ಆರತಿ, ಕಾಳಯ್ಯ ಸೇರಿದಂತೆ ಇತರರು ಇದ್ದರು.







