ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಊರಲ್ಲಿ ಬಾರ್ ತೆರೆದರೆ ದುಡಿಯುವ ಗಂಡಸರು ಬಾರ್ ಹೋಗಿ ಕುಡಿದು ಮನೆಗೆ ಬರುವುದರಿಂದ ಊರು ಹಾಳಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯರು ಬಾರ್ ನೀಡದಂತೆ ಪ್ರತಿಭಟನೆ ನಡೆಸಿದ್ದಾರೆ… ಇದೊಂದು ಒಳ್ಳೆಯ ಬೆಳವಣಿಗೆಯಾಗಿದ್ದು, ಎಲ್ಲ ಊರುಗಳಲ್ಲಿ ಇದೇ ರೀತಿ ಆದರೆ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವ ಬಾರ್ ಗಳಿಗೆ ಕಡಿವಾಣ ಬೀಳಲಿದೆ..
ಇದೀಗ ತಾಲೂಕಿನ ಬಿಳಿಕೆರೆ ಹೋಬಳಿಯ ಹುಸೇನಪುರ ಗ್ರಾಮದ ಪರಿಮಿತಿಯಲ್ಲಿ ಮದ್ಯದಂಗಡಿ ತೆರೆಯದಂತೆ (ಬಾರ್) ಸ್ಥಳೀಯ ಮಹಿಳಾ ಸಂಘದ ಸದಸ್ಯರು ಹುಣಸೂರು ತಾಲೂಕು ಕಚೇರಿ ಮುಂಬಾಗ ಪ್ರತಿಭಟನೆ ನಡೆಸಿ ಬಾರ್ ಆರಂಭಿಸದಂತೆ ಆಗ್ರಹಿಸುವ ಮೂಲಕ ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಿದ್ದಾರೆ.
ಈ ವೇಳೆ ಮಹಿಳಾ ಸಂಘದ ಉಮಾ, ರೇಖಾ ಮತ್ತಿತತರು ಮಾತನಾಡಿ ನಮ್ಮೂರಿನಲ್ಲಿ ಕೃಷಿ, ಕೂಲಿ, ಮೈಸೂರಿನ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ನೆಮ್ಮದಿಯಿಂದ ಕೌಟುಂಬಿಕ ಜೀವನ ನಡೆಸುತ್ತಿದ್ದು, ಮದ್ಯದಂಗಡಿ ತೆರೆದು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕದಡದಿರಿ. ದುಡಿದ ಹಣವನ್ನು ಮದ್ಯಕ್ಕೆ ಖರ್ಚು ಮಾಡಿದರೆ ಕುಟುಂಬ ನಿರ್ವಹಣೆ ಕಷ್ಟವಾಗಲಿದೆ. ಸಾಲ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಲಿದೆ. ಕುಟುಂಬಗಳು ಅನಾಥವಾಗಲಿವೆ. ನಮ್ಮ ಬೇಡಿಕೆ ಈಡೇರದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆಂದು ಎಚ್ಚರಿಸಿದರು.

ಹುಸೇನಪುರ ಗ್ರಾಮದ ನಿವಾಸಿಗಳಾದ ಪ್ರಸನ್ನ, ಸಿದ್ದೇಗೌಡ ಗೌತಮ್ ಮತ್ತಿತರರು ಮಾತನಾಡಿ ಬಿಳಿಕೆರೆ ಹೋಬಳಿ ಹುಸೇನಪುರ ಗ್ರಾಮದ ಪರಿಮಿತಿಯ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಮದ್ಯದಂಗಡಿ ಆರಂಭಕ್ಕೆ ಸಕಲ ಸಿದ್ದತೆಗಳು ನಡೆದಿವೆ. ಗ್ರಾಮಸ್ಥರಿಗೆ ವಿಷಯ ತಿಳಿಯುತ್ತಿದ್ದಂತೆ ಬಿಳಿಕೆರೆ ನಾಡಕಚೇರಿ ಮತ್ತು ಗ್ರಾಮ ಪಂಚಾಯ್ತಿ ಪಿಡಿಒ ಗಮನಕ್ಕೆ ತಂದು ಮದ್ಯದಂಗಡಿ ತೆರೆಯದಂತೆ ಕ್ರಮವಹಿಸಲು ಮನವಿ ಮಾಡಿದ್ದರೂ ಪರಿಗಣಿಸಿಲ್ಲ. ಹೀಗಾಗಿ ತಹಶೀಲ್ದಾರ್ ಮತ್ತು ಅಬಕಾರಿ ಇಲಾಖೆಗೆ ಬಂದು ಸಮಸ್ಯೆ ಹೇಳಿಕೊಳ್ಳುವ ಪರಿಸ್ಥಿತಿ ನಮ್ಮದಾಗಿದ್ದು, ಬಾರ್ ಆರಂಭಿಸಲು ಮುಂದಾದಲ್ಲಿ ಆಹೋರಾತ್ರಿ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನಾಕಾರರು ನೀಡಿದ ಮನವಿ ಸ್ವೀಕರಿಸಿದ ಶಿರಸ್ತೆದಾರ್ ಶ್ರೀಪಾದ್ ನಾಲತವಾಡಕರ್ ಮಾತನಾಡಿ ಗ್ರಾಮಸ್ಥರ ಮನವಿಯನ್ನು ಹಿರಿಯ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆಗೆ ಮುಂದಿನ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಪ್ರತಿಭಟನಾಕಾರರಿಗೆ ತಿಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾರೋಹಳ್ಳಿ ರಾಘವೇಂದ್ರ, ದಲಿತ ಮುಖಂಡ ದೇವರಾಜ್, ವಿಜಯ್ ಸೇರಿದಂತೆ ಐವತ್ತಕ್ಕೂ ಹೆಚ್ಚು ವಿವಿಧ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿದ್ದರು.








