ಹುಣಸೂರು: ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನ ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಬೈಕ್ ಚಾಲಿಸುತ್ತಿದ್ದ ಪತಿ ಹಾಗೂ ಮಗು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಯಶೋಧರಪುರ ಗೇಟ್ ಬಳಿ ನಡೆದಿದೆ.
ಈ ದುರ್ಘಟನೆಯಲ್ಲಿ ತಾಲೂಕಿನ ನಾಗಮಂಗಲ ಗ್ರಾಮದ ನಿವಾಸಿ ಬೈಕ್ ಚಾಲಿಸುತ್ತಿದ್ದ ಜೀವನ್ ಮತ್ತು ಮಗು ಗಾಯಗೊಂಡವರಾಗಿದ್ದು, ಪತ್ನಿ ಅಶ್ವಿನಿ(36)ಸಾವನ್ನಪ್ಪಿದ ದುರ್ದೈವಿ. ಮೃತ ಅಶ್ವಿನಿಗೆ ಇಬ್ಬರು ಮಕ್ಕಳಿದ್ದು ಅವು ಅಮ್ಮನಿಲ್ಲದೆ ತಬ್ಬಲಿಯಾಗಿವೆ.
ಜೀವನ್ ತಮ್ಮ ಬೈಕಿನಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ಹುಣಸೂರು ಕಡೆಗೆ ಬರುತ್ತಿದ್ದ ವೇಳೆ ಪಿರಿಯಾಪಟ್ಟಣ ಕಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ ಯಶೋಧರಪುರ ಗೇಟ್ ಬಳಿಯಲ್ಲಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಪರಿಣಾಮ ಬೈಕ್ ನ ಹಿಂಭಾಗ ಕುಳಿತಿದ್ದ ಪತ್ನಿ ಅಶ್ವಿನಿ ನೆಲಕ್ಕೆ ಬಿದ್ದಿದ್ದು ಆಕೆಯ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಶ್ವಿನಿ ಮಡಿಲಲ್ಲಿದ್ದ ಮೂರು ವಾರದ ಮಗುವಿಗೆ ಮತ್ತು ಬೈಕ್ ಚಾಲಿಸುತ್ತಿದ್ದ ಪತಿ ಜೀವನ್ ಗೂ ಗಂಭೀರವಾಗಿದ್ದು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಹೆದ್ದಾರಿಯಲ್ಲಿ ಲಂಗುಲಗಾಮಿಲ್ಲದೆ ವಾಹನಗಳು ಸಂಚರಿಸುತ್ತಿದ್ದು, ವೇಗವನ್ನು ನಿಯಂತ್ರಿಸದೇ ಚಲಿಸುವುದರಿಂದ ಆಗಾಗ್ಗೆ ಅವಘಡಗಳು ನಡೆದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಗ್ರಾಮಗಳಾದ ಯಶೋಧರಪುರ, ಅತ್ತಿಕುಪ್ಪೆ, ಕಲ್ ಬೆಟ್ಟ ನಾಗಮಂಗಲ, ಕೆ.ಬಿ.ಕಾಲೋನಿ ಗ್ರಾಮಸ್ಥರು ಇದೇ ವೇಳೆ ದಿಢೀರ್ ಪ್ರತಿಭಟನೆ ನಡೆಸಿ ಇಲ್ಲಿ ಪದೇ ಪದೇ ಅಪಘಾತವಾಗುತ್ತಲೇ ಇದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅವೈಜ್ಞಾನಿಕವಾಗಿ ಹೆದ್ದಾರಿಗೆ ಹಂಪ್ಸ್ ಹಾಕುವುದು, ಪದೇ ಪದೇ ಕಿತ್ತು ಹಾಕುವುದು ನಡೆಯುತ್ತಿದೆ. ಮತ್ತೆ ವೈಜ್ಞಾನಿಕವಾಗಿ ಹಂಪ್ಸ್ ಹಾಕಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಿಂದಾಗಿ ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿದು ಹುಣಸೂರು ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ದೌಡಾಯಿಸಿ ಮನವೊಲಿಸಿದರಾದರೂ ಒಪ್ಪದ ಪ್ರತಿಭಟನಾಕಾರರು ಹೆದ್ದಾರಿ ಇಲಾಖೆಯವರನ್ನೇ ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು.
ಕೊನೆಗೆ ಡಿವೈಎಸ್ ಪಿ ರವಿ ಪ್ರತಿಭಟನಾಕಾರರ ಮನವೊಲಿಸಿ, ಈಗಾಗಲೇ ಹಂಪ್ಸ್ ಅಳವಡಿಸಲು ಹೆದ್ದಾರಿ ಯೋಜನೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಮಾಜಿ ಶಾಸಕ ಎಚ್.ಪಿ.ಮಂಜುನಾಥರು ಸಹ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ, ಇಲ್ಲಿ ರಸ್ತೆ ಡುಬ್ಬ ಅತ್ಯವಶ್ಯಕ ವಾಗಿದ್ದು, ತಕ್ಷಣವೇ ಹಾಕಬೇಕೆಂದು ಇಂಜಿನಿಯರ್‌ಗಳಿಗೆ ಸೂಚಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಮಾಡಿದ ಮನವಿಗೆ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದ ಬಳಿಕ ವಾಹನ ಸಂಚಾರ ಎಂದಿನಂತೆ ನಡೆಯಿತು.








