ಕೆ.ಆರ್.ಪೇಟೆ(ಜಿ.ಕೆ.ಮಹೇಶ್): ಸಾಲದ ಹಣದ ವಿಚಾರವಾಗಿ ಕಿರುಕುಳ ಹಾಗೂ ಸುಳ್ಳು ದೂರು ನೀಡಿದ ಆರೋಪದ ಹಿನ್ನೆಲೆಯಲ್ಲಿ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಎಳನೀರು ವ್ಯಾಪಾರಿ ಹರೀಶ್ ಜಿ.ಎಲ್ (24) ಬೆದರಿಕೆಗೆ ಹೆದರಿ ಪ್ರಾಣಕಳೆದುಕೊಂಡ ದುರ್ದೈವಿ. ಎಳನೀರು ವ್ಯಾಪಾರ ಮಾಡುತ್ತಿದ್ದ ಹರೀಶ್, ಗ್ರಾಮದ ದೀಪಿಕಾ ಹಾಗೂ ಅವರ ಪತಿ ಮಲ್ಲೇಶ್ ಅವರಿಗೆ ಸುಮಾರು ₹5 ಲಕ್ಷ ಸಾಲ ನೀಡಿದ್ದು, ಹಣವನ್ನು ವಾಪಸ್ ಕೇಳಿದಾಗ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಮೃತನ ತಂದೆ ಲೋಕೇಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಆರೋಪಿಗಳು ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದು, ಆಗಸ್ಟ್ 4ರಂದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಗ್ರಾಮದ ಸಾರ್ವಜನಿಕರ ಎದುರು ಹರೀಶ್‌ನನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಹರೀಶ್ ಅದೇ ರಾತ್ರಿ ಮನೆಯಿಂದ ಹೊರಹೋಗಿದ್ದು, ಮರುದಿನ ಬೆಳಗ್ಗೆ ತಮ್ಮ ತೋಟದ ಮೋಟಾರ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮಗನ ಸಾವಿಗೆ ದೀಪಿಕಾ ಹಾಗೂ ಮಲ್ಲೇಶ್ ಅವರ ಕಿರುಕುಳವೇ ಕಾರಣ ಎಂದು ಲೋಕೇಶ್ ದೂರಿನಲ್ಲಿ ಆರೋಪಿಸಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ಈ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








