ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ… ಎಸ್. ಬಸವರಾಜು ಅಭಿಮತ
ಶ್ರೀ ಮುರುಘರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆಯ 15ನೇ ಶಾಲಾ ವಾರ್ಷಿಕೋತ್ಸವ

ಚಾಮರಾಜನಗರ(ಹೆಚ್ ಪಿ. ನವೀನ್ ಕುಮಾರ್): ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಮೈಸೂರಿನ ಬಸವ ಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್.ಬಸವರಾಜು ಅಭಿಪ್ರಾಯಪಟ್ಟರು.
ಚಾಮರಾಜನಗರದ ಮರಿಯಾಲ ಗ್ರಾಮದಲ್ಲಿ ಇರುವ ಮರಿಯಾಲ ಮಠದ ಶ್ರೀ ಮುರುಘರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆಯ 15 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವು ಜ್ಞಾನ, ಕೌಶಲ್ಯ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಒದಗಿಸುವ ಮೂಲಕ ವ್ಯಕ್ತಿಯ ಜೀವನವನ್ನು ರೂಪಿಸುವ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಇದು ಆತ್ಮವಿಶ್ವಾಸ, ತಾರ್ಕಿಕ ಚಿಂತನೆ ಮತ್ತು ಉತ್ತಮ ನೈತಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಆರ್ಥಿಕ ಭದ್ರತೆ ಮತ್ತು ವೈಯಕ್ತಿಕ ಯಶಸ್ಸನ್ನು ಖಚಿತಪಡಿಸುತ್ತದೆ. ದೇಶದ ಭವಿಷ್ಯ ಶಿಕ್ಷಣದ ಮೇಲೆ ನಿಂತಿದೆ. ಈ ಕಾರಣದಿಂದ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಬಾಲ್ಯದಿಂದಲೇ ಅವರಿಗೆ ಉತ್ತಮ ಮಾರ್ಗದರ್ಶನ ಮಾಡಬೇಕು. ಆ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ದೇಶಕ್ಕೆ ಕೊಡುಗೆಯನ್ನಾಗಿ ನೀಡಬೇಕು ಎಂದು ಸಲಹೆ ನೀಡಿದರು.
ಮರಿಯಾಲ ಮಠ ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಬಸವ ತತ್ವಗಳನ್ನು ಚಾಮರಾಜನಗರ ಭಾಗದಲ್ಲಿ ಬಿತ್ತಿ ಸಮಾಜವನ್ನು ಮುನ್ನೆಡೆಸುತ್ತಿದೆ. ವಿದ್ವಾನ್ ಶ್ರೀ ಮಹಾಂತ ಸ್ವಾಮೀಜಿ ಅವರ ಶ್ರಮದ ಫಲವಾಗಿ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ತಲೆ ಎತ್ತಿ ನಿಂತಿದೆ. ಅವರ ದೂರ ದೃಷ್ಟಿಯ ಫಲವಾಗಿ ಶಿಕ್ಷಣ ಕ್ರಾಂತಿ ಮಾಡಲಾಗಿದೆ. ಮಠದ ಈಗಿನ ಸ್ವಾಮೀಜಿಗಳಾದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿಗಳು ಶ್ರೀ ಮಠದ ಪರಂಪರೆಯ ಅನುಸಾರವಾಗಿ, ಹಿಂದಿನ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮರಿಯಾಲದ ಶ್ರೀ ಮುರುಘ ರಾಜೇಂದ್ರ ಸ್ವಾಮಿ ಮಹಾ ಸಂಸ್ಥಾನ ಶ್ರೀಮಠದ ಅಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಪ್ರತಿಭೆ ಮುಚ್ಚಿಟ್ಟರೆ ಕೊಳೆಯುತ್ತದೆ. ಬಿಚ್ಚಿಟ್ಟರೆ ಹೊಳೆಯುತ್ತದೆ. ಗ್ರಾಮೀಣ ಭಾಗದ ಮಕ್ಕಳಿಗೆ ಸಂಸ್ಕಾರ, ಮೌಲ್ಯಯುತ ಶಿಕ್ಷಣ ನೀಡಬೇಕು ಎನ್ನುವುದು ಶ್ರೀಮಠದ ಗುರಿಯಾಗಿದೆ. ನಮ್ಮ ಶಾಲೆಯ ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗಿದೆ, ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡಿದ್ದಾರೆ. ಅದಕ್ಕೆ ಬೋಧಕ ವರ್ಗದ ಶ್ರಮ ಅನನ್ಯವಾಗಿದೆ ಎಂದರು.
ಶಿಕ್ಷ ಪದವಿ ಪೂರ್ವ ಕಾಲೇಜಿನ ದೇವರಾಜ ಪಿ.ಚಿಕ್ಕಹಳ್ಳಿ ಮಾತನಾಡಿ, ಬಸವಾದಿ ಶರಣರು ಈ ನಾಡಿನಲ್ಲಿ ಜನ್ಮ ಪಡೆಯದಿದ್ದರೆ ಶಿಕ್ಷಣದ ಕಾಂತ್ರಿಯಾಗುತ್ತಿರಲಿಲ್ಲ. ಚಾತುರ್ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿ, ಲಿಂಗ, ಜಾತಿ, ಮತ್ತು ವರ್ಗ ತಾರತಮ್ಯವಿಲ್ಲದ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅವರ ಹಾದಿಯಲ್ಲಿ ಶ್ರೀ ಮಠ ನಡೆಯುತ್ತಿದೆ ಎಂದು ಮೆಚ್ಚುಗೆ ನುಡಿಗಳನ್ನಾಡಿದರು.

ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತೋಟೆಶ್ ಮಾತನಾಡಿ, ಮಕ್ಕಳು ಶಿಕ್ಷಣಕ್ಕೆ ಸೀಮಿತವಾಗಬಾರದು. ಪಠ್ಯದೊಂದಿಗೆ, ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ನಿವೃತ ಸೈನಿಕರಾದ ಎಸ್. ಗಂಗಾಧರ್ ಮಾತನಾಡಿ, ಮಕ್ಕಳು ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಮಹನೀಯರ ತತ್ವಗಳನ್ನು ಪಾಲಿಸಬೇಕು. ದೇಶದ ರಕ್ಷಣೆ ವಿಚಾರಣೆಗೆ ಬಂದರೆ ಕೇಂದ್ರ ಸರ್ಕಾದರಿಂದ ಹಲವಾರು ಕೊಡುಗೆ ನೀಡುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಿಆರ್ ಪಿ ರೇಚಣ್ಣ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೂ ಶಿಕ್ಷಣ ಸಿಗಬೇಕು ಎಂದು ಮನಗಂಡು ಶ್ರೀಮಠ ಅಕ್ಷರ ದಾಸೋಹವನ್ನು ಮಠ ಮಾಡುತ್ತಿದೆ. ಮಕ್ಕಳಿಗೆ ಸಂಸ್ಕೃತಿಯ ಜೊತೆಗೆ ಬೌದ್ದಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಮಠ ಅನನ್ಯವಾದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಬಿ.ಕೆ.ನಾಗರಾಜು ಬ್ಯಾತಹಳ್ಳಿ, ಪ್ರಥಮ ದರ್ಜೆ ಗುತ್ತಿಗೆದಾರ ನಟರಾಜು, ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಶಾಲೆಯ ಮುಖ್ಯ ಶಿಕ್ಷಕ ಮಂಜು ಇತರರು ಇದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು, ಇದೇ ವೇಳೆ ವಾರ್ಷಿಕ ವರದಿ ವಾಚಿಸಲಾಯಿತು. ಉತ್ತಮ ಅಂಕಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.







