LatestNews

ವಚನಗಳು ಕುಟುಂಬದ ಸೌಖ್ಯ  ಕಾಪಾಡುವ ಜೀವನ ಮಾರ್ಗದರ್ಶಿ: ರೂಪ ಕುಮಾರಸ್ವಾಮಿ

ಮಳವಳ್ಳಿ: ಶರಣರ ವಚನಗಳು ಕುಟುಂಬದ ಸೌಖ್ಯವನ್ನು ಕಾಪಾಡುವ ಜೀವನ ಮಾರ್ಗದರ್ಶಿ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಹೇಳಿದರು.

ಮಳವಳ್ಳಿ ಬೆಳದಿಂಗಳ ಶರಣರ ಚಿಂತನಾ ಮಂಥನ ಸಮಿತಿ ವತಿಯಿಂದ ಪಟ್ಟಣದ ಪುಟ್ಟ ಬಸಪ್ಪನವರ ಮನೆಯಲ್ಲಿ ಆಯೋಜಿಸಲಾಗಿದ್ದ 141ನೇ ಶರಣರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಕುಟುಂಬದಲ್ಲಿ ಶರಣರ ಮೌಲ್ಯಗಳು ಸುಖಿ ಜೀವನದ ಸೂತ್ರಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಶರಣರ ವಚನಗಳು ಕೇವಲ ಆಧ್ಯಾತ್ಮಿಕ ಸಂದೇಶಗಳಲ್ಲ. ಅವು ಸುಖಿ, ಸಂಸ್ಕಾರಯುತ ಹಾಗೂ ಸೌಹಾರ್ದಯುತ ಕುಟುಂಬ ಜೀವನವನ್ನು ಕಟ್ಟಿಕೊಡುವ ಜೀವನ ಮಾರ್ಗದರ್ಶಿಗಳಾಗಿವೆ. ಪ್ರೀತಿ ನೆಲೆಸಿರುವ ಮನೆಯಲ್ಲಿ ಸಂತೋಷ ಶಾಶ್ವತವಾಗಿರುತ್ತದೆ. ಗೌರವ ಇರುವ ಮನೆಯಲ್ಲಿ ಶಾಂತಿ ನೆಲೆಗೊಳ್ಳುತ್ತದೆ. ವಿಶ್ವಾಸ ತುಂಬಿರುವ ಮನೆಯಲ್ಲಿ ಧೈರ್ಯ ವೃದ್ಧಿಯಾಗುತ್ತದೆ. ಒಗ್ಗಟ್ಟು ಇರುವ ಕುಟುಂಬದಲ್ಲಿ ಯಾವುದೇ ಸಂಕಷ್ಟವೂ ಹೆಚ್ಚು ಕಾಲ ಉಳಿಯುವುದಿಲ್ಲ. ಇಂತಹ ಅಮೂಲ್ಯ ಜೀವನ ಮೌಲ್ಯಗಳೆಲ್ಲವೂ ಶರಣರ ವಚನಗಳಲ್ಲಿ ಅಡಕವಾಗಿವೆ.

ಶರಣರ ವಚನಗಳು ಮನಸ್ಸಿನಲ್ಲಿರುವ ದ್ವೇಷ, ಅಹಂಕಾರ, ಅಸೂಯೆ ಮತ್ತು ಮಲಿನ ಭಾವನೆಗಳನ್ನು ದೂರಮಾಡಿ, ಕುಟುಂಬದ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ, ಪರಸ್ಪರ ಗೌರವ ಮತ್ತು ಆತ್ಮೀಯತೆಯನ್ನು ಬೆಳೆಸುತ್ತವೆ. ವಚನಗಳನ್ನು ಓದಿ, ಅರ್ಥಮಾಡಿಕೊಂಡು, ಅವುಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಕುಟುಂಬದಲ್ಲಿ ನೆಮ್ಮದಿ, ಸೌಹಾರ್ದತೆ ಹಾಗೂ ಸಂತೋಷ ನೆಲೆಸುತ್ತದೆ.

ಇಂತಹ ಮೌಲ್ಯಯುತ ಬದುಕಿನ ಮೂಲಕ ಕುಟುಂಬದ ಸೌಖ್ಯವನ್ನು ಶಾಶ್ವತವಾಗಿ ಕಾಪಾಡಿಕೊಳ್ಳಲು ಸಾಧ್ಯ. ಶರಣರು ಸಾರಿದ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ಪ್ರತಿಯೊಂದು ಮನೆಯೂ ವಚನಗಳ ಬೆಳಕಿನಲ್ಲಿ ಸಾಗಿದಾಗ ಆದರ್ಶ ಕುಟುಂಬ ಹಾಗೂ ಆದರ್ಶ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ  ಅನಾದಿ ಕಾಲದಿಂದಲೂ ದಾರ್ಶನಿಕರು, ಶರಣರು ಹಾಗೂ ಸಂತರು ಮೂರು ಪ್ರಮುಖ ವಿಷಯಗಳಾದ ದೇವ, ಜೀವ ಮತ್ತು ಜಗತ್ತು ಕುರಿತು ಚಿಂತನೆ ನಡೆಸುತ್ತಾ ಬಂದಿದ್ದಾರೆ. ಹನ್ನೆರಡನೆಯ ಶತಮಾನದವರೆಗೂ ಬಹುತೇಕ ಚಿಂತಕರು ದೇವರ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರೆ, ಹನ್ನೆರಡನೆಯ ಶತಮಾನದಲ್ಲಿ ಉದಯಿಸಿದ ಶರಣರು ಮಾನವ ಮಹಾದೇವನಾಗಬೇಕು ಎಂಬ ಮಹತ್ತರ ಸಂದೇಶವನ್ನು ಸಮಾಜಕ್ಕೆ ನೀಡಿದರು.

ಮಾನವನು ಅಷ್ಟಾವರಣಗಳನ್ನು ಅಂಗವಾಗಿ, ಪಂಚಾಚಾರಗಳನ್ನು ಪ್ರಾಣವಾಗಿ ಹಾಗೂ ಷಟ್‌ಸ್ಥಲಗಳನ್ನು ಆತ್ಮವಾಗಿ ಅಳವಡಿಸಿಕೊಂಡಾಗ ಅವನು ಮಹಾದೇವನಾಗಿ ರೂಪುಗೊಳ್ಳುತ್ತಾನೆ. ಆಗ ಪ್ರತಿಯೊಂದು ಮನೆಯೂ ವಚನಾಲಯವಾಗಿ ಪರಿವರ್ತನೆಯಾಗಿ, ಪ್ರೀತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳಿಂದ ಕೂಡಿದ ಆದರ್ಶ ಕುಟುಂಬ ನಿರ್ಮಾಣವಾಗುತ್ತದೆ.

ಕತ್ತಲೆಯ ಮನೆಯಲ್ಲಿ  ಇಲಿ, ಹೆಗ್ಗಣ ಹಾಗೂ ಹಾವುಗಳು ಸೇರಿಕೊಂಡು ಮನೆಯನ್ನು ಹೇಗೆ ವಿಕಾರಗೊಳಿಸುತ್ತವೆಯೋ, ಅದೇ ರೀತಿ ಕತ್ತಲೆ ತುಂಬಿದ ಮನಸ್ಸಿನಲ್ಲಿ ಅರಿಷಡ್ವರ್ಗಗಳು, ಅಜ್ಞಾನ ಮತ್ತು ಅಂಧಕಾರ ನೆಲೆಸಿ ವ್ಯಕ್ತಿತ್ವವನ್ನು ವಿಕಾರಗೊಳಿಸುತ್ತವೆ. ಅಂತಹ ಮನಸ್ಸನ್ನು ಶುದ್ಧೀಕರಿಸಿ ಬೆಳಗಿಸುವ ದಿವ್ಯಜ್ಯೋತಿಯೇ ವಚನ ಸಾಹಿತ್ಯ. ವಚನಗಳ ಬೆಳಕಿನಲ್ಲಿ ಬದುಕನ್ನು ರೂಪಿಸಿಕೊಂಡಾಗ ವ್ಯಕ್ತಿ, ಕುಟುಂಬ ಮತ್ತು ಸಮಾಜ ಸಮೃದ್ಧವಾಗುತ್ತದೆ ಎಂದರು.

ಗುರುಪೂರ್ಣಿಮಾ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕರಾದ ಸೋಮಶೇಖರ್ ರಾವ್ ಅವರು, ವಚನ ಸಾಹಿತ್ಯವು ಜನರಲ್ಲಿರುವ ಅಜ್ಞಾನ ಮತ್ತು ಅಂಧಕಾರವನ್ನು ದೂರಮಾಡಿ ಜ್ಞಾನದ ಬೆಳಕನ್ನು ಹರಡುತ್ತದೆ. ಅಂತಹ ವಚನ ಸಾಹಿತ್ಯವನ್ನು ಬೆಳದಿಂಗಳಂತೆ ಜನಮನಗಳಿಗೆ ತಲುಪಿಸುತ್ತಿರುವ ಬೆಳದಿಂಗಳ ಶರಣರ ಚಿಂತನಾ ಮಂಥನ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಳದಿಂಗಳ ಶರಣರ ಚಿಂತನ ಮಂಥನ ಸಮಿಯ ಮಲ್ಲೇಶಣ್ಣ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ನುಡಿದರು. ಪರಶಿವಮೂರ್ತಿ ಪ್ರಾರ್ಥಿಸಿದರು. ಮಹದೇವಸ್ವಾಮಿ, ನಾಗರಾಜಪ್ಪ, ಉಮಾದೇವಿ, ಪುಟ್ಟಸುಬ್ಬಪ್ಪ, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ ಸೇರಿದಂತೆ ಅನೇಕ ವಚನಾಭಿಮಾನಿಗಳು ಉಪಸ್ಥಿತರಿದ್ದರು.

admin
the authoradmin

Leave a Reply