ಕೆ.ಆರ್.ನಗರ(ಜಿಟೆಕ್ ಶಂಕರ್): ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಸಾಬೀತು ಮಾಡಿರುವ ಪಟ್ಟಣದ ಪುಟ್ಟ ಪೋರನೊಬ್ಬ ಸ್ಕೇಟಿಂಗ್ ನಲ್ಲಿ ಏಷಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿ ತಾಲೂಕಿನ ಹೆಮ್ಮೆಯನ್ನು ಮುಗಿಲೆತ್ತರಕ್ಕೇರಿಸಿದ್ದಾನೆ.
ಪಟ್ಟಣದ ಚೀರ್‍ನಹಳ್ಳಿ ರಸ್ತೆಯ ನಿವಾಸಿಗಳಾದ ಸಿ.ಜೆ.ಸಂಜಯ್ ಕೀರ್ತಿ ಮತ್ತು ಲಿಖಿತಾಸಂಜಯ್ ಅವರ ಪುತ್ರನಾಗಿರುವ 7ವರ್ಷ ಬಾಲಕ ಸರ್ವಕೀರ್ತಿ ಸ್ಕೇಟಿಂಗ್ ನಲ್ಲಿ ಈ ಸಾಧನೆ ಮಾಡಿದ್ದು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಇಲ್ಲಿನ ಸಿಲ್ವರ್ ಜುಬಿಲಿ ರಸ್ತೆಯಲ್ಲಿರುವ ಕಿಂಗ್ಸ್ ಸ್ಕೇಟಿಂಗ್ ಅಕಾಡೆಮಿಯ ಸ್ಥಾಪಕ ಮುಜಾವೀರ್ ಪಾಷ ಅವರಿಂದ ಒಂದು ವರ್ಷದಿಂದ ತರಬೇತಿ ಪಡೆಯುತ್ತಿರುವ ಸರ್ವಕೀರ್ತಿ ಇಂತಹ ಮಹತ್ಸಾಧನೆ ಮಾಡಿದ್ದು ಎಲ್ಲರು ನಿಬ್ಬೆರಗಾಗುವಂತೆ ದಾಪುಗಾಲು ಹಾಕಿದ್ದಾನೆ.
ಕಠಿಣ ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಏಷಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿರುವ ಈತ ಮೈಸೂರಿನ ಇಲವಾಲದ ಸಂತ ಜೋಸೇಫರ ಸೆಂಟ್ರಲ್ ಸ್ಕೂಲ್‌ನಲ್ಲಿ ೩ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಸ್ಕೇಟಿಂಗ್ ಜತೆಗೆ ಶಿಕ್ಷಣದಲ್ಲಿಯೂ ಮುಂದಿದ್ದಾನೆ.
ಈ ಸಾಧನೆಯ ಜತೆಗೆ ಮಧುಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದು ಅದರೊಂದಿಗೆ ಹಾಸನದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೇಯಲ್ಲಿ ಬಹುಮಾನ ಪಡೆದು 1ಗಂಟೆ 26ನಿಮಿಷದಲ್ಲಿ ಕೆ.ಆರ್.ನಗರದಿಂದ ಡೋರ್‍ನಹಳ್ಳಿ ಸಂತ ಬಸಿಲಿಕಾ ಚರ್ಚ್‌ವರೆಗೆ ಸ್ಕೇಟಿಂಗ್ ಮೂಲಕ ಸಾರಿ ದಾಖಲೆ ಬರೆದಿದ್ದಾರೆ.

6ರಿಂದ 8 ವರ್ಷದ ಒಳಗಿನ ಕ್ಯಾಟಗರಿಯಲ್ಲಿ ಸ್ಪರ್ಧೇ ಮಾಡಿ ಇಂತಹ ರಾಷ್ಟ್ರ ಮಟ್ಟದ ಸಾಧನೆ ಮಾಡಿರುವ ಸರ್ವಕೀರ್ತಿಯನ್ನು ತರಬೇತುದಾರ ಮುಜಾವೀರ್ ಪಾಷ ಮತ್ತು ಪಟ್ಟಣದ ನಾಗರೀಕರು ಪ್ರಶಂಸಿಸಿದ್ದು ಭವಿಷ್ಯದಲ್ಲಿ ಆತನ ತನ್ನ ಪ್ರತಿಭೆಯನ್ನು ದೇಶ ವಿದೇಶಗಳಲ್ಲಿಯೂ ಪ್ರದರ್ಶಿಸಲಿ ಎಂದು ಶುಭ ಹಾರೈಸಿದ್ದಾರೆ.
ಸರ್ವಕೀರ್ತಿ ತಂದೆ ಸಿ.ಜೆ.ಸಂಜಯ್ ಕೀರ್ತಿ ಮಾತನಾಡಿ, ಸ್ಕೇಟಿಂಗ್ ವಿಭಾಗದಲ್ಲಿ ನನ್ನ ಮಗ ಮಾಡಿರುವ ಈ ಸಾಧನೆ ನಮಗೆ ಹೆಮ್ಮೆ ತಂದಿದ್ದು ಇತರ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದ ಜತೆಗೆ ಇಂತಹ ಸ್ಪರ್ಧೆಗಳಿಗೂ ಅಣಿಗೊಳಿಸಿ ಅವರಿಗೆ ಪ್ರೋತ್ಸಾಹ ನೀಡಿದರೆ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಸರ್ವಕೀರ್ತಿ ತಾಯಿ ಲಿಖಿತ ಸಂಜಯ್ ಕೀರ್ತಿ ಮಾತನಾಡಿ, ಪ್ರತಿಯೊಬ್ಬ ಮಕ್ಕಳು ತಂದೆ ಮತ್ತು ತಾಯಿಯ ಹೆಸರನ್ನು ಅಜರಾಮರಗೊಳಿಸಲು ಇಂತಹ ಸಾಧನೆ ಮಾಡಬೇಕಿದ್ದು ನನ್ನ ಮಗನಿಗೆ ಮಾರ್ಗದರ್ಶಿ ಮತ್ತು ಸ್ಪೂರ್ತಿಯ ಚಿಲುಮೆಯಾಗಿರುವ ಕಿಂಗ್ಸ್ ಸ್ಕೇಟಿಂಗ್ ಅಕಾಡೆಮಿಯ ತರಬೇತುದಾರ ಮುಜಾವೀರ್ ಪಾಷ ಅವರಿಗೆ ನಮ್ಮ ಕುಟುಂಬ ಕೃತಜ್ಞವಾಗಿರುತ್ತದೆ.
ತರಬೇತುದಾರ ಮುಜಾವೀರ್ ಪಾಷ ಮಾತನಾಡಿ, ನಮ್ಮ ಆಕಾಡೆಮಿಯಲ್ಲಿ ಕಳೆದ 1 ವರ್ಷದಿಂದ ಸ್ಕೇಟಿಂಗ್ ತರಬೇತಿ ಪಡೆಯುತ್ತಿರುವ ಸಿ.ಎಸ್.ಸರ್ವಕೀರ್ತಿ ವಿಶೇಷ ಪ್ರತಿಭೆಯುಳ್ಳ ವಿದ್ಯಾರ್ಥಿಯಾಗಿದ್ದು ಆತನ ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆಯಲ್ಲದೆ ಇವರಿಗೆ ಭವಿಷ್ಯದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿಸಲು ಹತ್ತಾರು ವೇದಿಕೆಗಳು ದೊರೆಯಲಿದ್ದು ಚರಿತ್ರೆಯಲ್ಲಿ ದಾಖಲಾಗುವ ಹೊಸ ಭಾಷ್ಯ ಬರೆಯಲಿದ್ದಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.








