Latest

ಕಾವೇರಿ ತವರು ಕೊಡಗಿನ ರೈತರಿಗೆ ಮೊದಲು ನ್ಯಾಯ ಕೊಡಿ…ಇಲ್ಲಿನ ಸಮಸ್ಯೆ ಆಲಿಸಿ..!

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-27

ಕಾವೇರಿ ನೀರಿನ ವಿಚಾರ ಇದೀಗ ಸಂಘರ್ಷಕ್ಕೆ ಕಾರಣವಾಗಿದೆ. ಆದರೆ ಬರ ಕಾಡಲು, ಮಳೆ ಬಾರದಿರಲು ಕಾರಣವೇನು? ಎಂಬುದರ ಬಗ್ಗೆ ಚಿಂತೆ ಮಾಡುವಲ್ಲಿ ನಮ್ಮ ಸರ್ಕಾರಗಳು ವಿಫಲವಾಗುತ್ತಿವೆ. ಕಾವೇರಿ ತವರು ಕೊಡಗಿನಲ್ಲಿ  ಪ್ರಕೃತಿ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ತಡೆಯದ ಹೊರತು ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟವೇ… ಕೊಡಗಿನಲ್ಲಿ ಆಗುತ್ತಿರುವ ಬೆಳವಣಿಗೆ ಜನ ಅನುಭವಿಸುತ್ತಿರುವ ಸಂಕಷ್ಟಗಳ ಕುರಿತಂತೆ ಲೇಖಕ ಕಾಯಪಂಡ ವಿಷ್ಣುನಾಚಪ್ಪ ಇಲ್ಲಿ ಬರೆದಿದ್ದಾರೆ.

ಕಾವೇರಿ ನೀರಿಗಾಗಿ ತಮಿಳುನಾಡಿನ ಜೊತೆ ಜಗಳ ನಡೆಯುತ್ತಿದೆ. ರಸ್ತೆಗೆ ಇಳಿದು ಪ್ರತಿಭಟನೆ ಮಾಡಲಾಗುತ್ತಿದೆ. ಕೋರ್ಟ್ ಮೆಟ್ಟಿಲೇರಲಾಗುತ್ತಿದೆ. ನಮಗೆ ನೀರು ಬೇಕು. ಅದು ಸರಿ. ಆದರೆ ಒಂದು ಸತ್ಯವನ್ನು ಎಲ್ಲರೂ ಮರೆತಿದ್ದಾರೆ.  ಕಾವೇರಿಗೆ ನೀರು ಕೊಡುವ ಕೊಡಗನ್ನೇ ಹಗಲು ದರೋಡೆ ಮಾಡಲಾಗುತ್ತಿದೆ. ಯಾವಾಗ ತಮಿಳುನಾಡಿನವರು ನೀರಿಗಾಗಿ ತಗಾದೆ ತೆಗೆಯುತ್ತಾರೋ ಆವಾಗ ಮಾತ್ರ ನಮ್ಮ ಸರ್ಕಾರಗಳಿಗೆ ಕೊಡಗು ಅನ್ನುವ ಜಿಲ್ಲೆ ಇದೆ ಎನ್ನುವ ನೆನಪಾಗುವುದು. ಉಳಿದ 364 ದಿನ ಕೊಡಗಿನ ಸಮಸ್ಯೆ ಯಾರಿಗೂ ಕಾಣುವುದಿಲ್ಲ.

ಇವತ್ತು ಕೊಡಗಿನಲ್ಲಿ ನಡೆಯುತ್ತಿರುವುದು ಅಭಿವೃದ್ಧಿಯಲ್ಲ. ಇದು ಪರಿಸರದ ಮೇಲೆ ನಡೆಯುತ್ತಿರುವ ಸಂಘಟಿತ ದಾಳಿ. ಕೊಡಗಿನ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ರೆಸಾರ್ಟ್ ಮತ್ತು ಲೇಔಟ್ ಸೈಟ್ ಹೆಸರಿನಲ್ಲಿ ನಾಶ ಮಾಡಲಾಗುತ್ತಿದೆ. ಬೆಟ್ಟಗಳನ್ನು ಮಟ್ಟ ಮಾಡಲಾಗುತ್ತಿದೆ. ಶತಮಾನದ ಕಾಡನ್ನು ಕಡಿದು ಕಾಂಕ್ರೀಟ್ ಕಾಡು ಕಟ್ಟಲಾಗುತ್ತಿದೆ. ಜಲಮೂಲಗಳ ಬದಿಯಲ್ಲಿ ಬೃಹತ್ ಹೋಂಸ್ಟೇ ಮತ್ತು ರೆಸಾರ್ಟ್‌ಗಳು ತಲೆಯೆತ್ತುತ್ತಿವೆ.

ಇದನ್ನು ಮಾಡುತ್ತಿರುವುದು ಕೊಡಗಿನ ಮೂಲ ನಿವಾಸಿಗಳಲ್ಲ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದು ಹಣದ ಬಲದಿಂದ ಭೂಮಿ ಖರೀದಿ ಮಾಡಿ, ಕಾನೂನನ್ನು ಬಗ್ಗಿಸಿ ಪ್ರಕೃತಿಯ ಕಗ್ಗೊಲೆ ಮಾಡುತ್ತಿರುವವರು.

ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಸ್ಥಳೀಯ ಜನರು ತಮ್ಮ ಬದುಕು ಕಟ್ಟಿಕೊಳ್ಳಲು, ಪ್ರಕೃತಿಯನ್ನು ಉಳಿಸಿಕೊಂಡು ಮಾಡುವ ಸಣ್ಣ ಪ್ರಕೃತಿ ಸ್ನೇಹಿ ಹೋಂಸ್ಟೇ ಇದು ಸಮಸ್ಯೆಯಲ್ಲ. ಸಮಸ್ಯೆ ಇರುವುದು ಕಾಡು ಕಡಿದು, ಬೆಟ್ಟ ಸಮತಟ್ಟು ಮಾಡಿ, ನೀರಿನ ಮೂಲವನ್ನೇ ನಾಶ ಮಾಡಿ ಲಾಭ ಮಾಡಿಕೊಳ್ಳುವವರಿಂದ. ಇವತ್ತು ಕೊಡಗಿನ ಭೂಮಿ ಕೊಡಗಿನವರ ಕೈಯಿಂದ ಜಾರಿ ಹೋಗುತ್ತಿದೆ. ಇದು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ಭೂದೋಚುವಿಕೆ.

ಅದೇ ಸಮಯದಲ್ಲಿ ಕೊಡಗಿನ ಕಾಫಿ ರೈತನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಕೊಡಗಿನ ರೈತನೇ ಇವತ್ತು ಕಾವೇರಿಯ ಕಾವಲುಗಾರ. ಅವನು ತೋಟದಲ್ಲಿ ಮರ ಬೆಳೆಸಿದ್ದರಿಂದಲೇ ಇವತ್ತೂ ಕಾವೇರಿ ಹರಿಯುತ್ತಿದೆ.

ಆದರೆ ಈ ವರ್ಷ ಕಾಫಿ ಹೂ ಬಿಡುವ ಸಮಯದಲ್ಲಿ ಮಳೆಯೇ ಬರಲಿಲ್ಲ. ಮುಂದಿನ ವರ್ಷದ ಇಳುವರಿ ಬಹುತೇಕ ಮುಗಿದಿದೆ. ಈಗ ಮಳೆಗಾಲದಲ್ಲಿಯೂ ಸರಿಯಾದ ಮಳೆಯಿಲ್ಲ. ಕಾಯಿಗಳು ಉದುರುತ್ತಿವೆ. ಒಟ್ಟಾರೆಯಾಗಿ 4 ವರ್ಷದಿಂದ ಕೊಡಗಿನ ರೈತರಿಗೆ ಬೆಳೆ ಪರಿಹಾರವೇ ಸಿಕ್ಕಿಲ್ಲ. ಕಳೆದ ಆಡಳಿತದಲ್ಲಿ ಪರಿಹಾರ ಸಿಗುತ್ತಿತ್ತು. ಆದರೆ ಇಂದಿನ ಸರ್ಕಾರಗಳು ಕೊಡಗಿನ ಕಡೆ ತಿರುಗಿಯೂ ನೋಡುತ್ತಿಲ್ಲ. ನೀರಿಗಾಗಿ ಹೋರಾಟ ಮಾಡುವವರು ಒಮ್ಮೆಯೂ ರೈತನ ಪರವಾಗಿ ಮಾತಾಡಿಲ್ಲ. ನೀರನ್ನು ಕೊಡುವ ಕೈಗೆ ಚಳ್ಳೆಹಣ್ಣು ತಿನ್ನಿಸಲಾಗುತ್ತಿದೆ.

ಕಾಡು ಹೋದರೆ ಮಳೆ ಹೋಗುತ್ತದೆ. ಮಣ್ಣು ಕಾಂಕ್ರೀಟ್ ಆದರೆ ಅಂತರ್ಜಲ ಬತ್ತುತ್ತದೆ. ಬುಗ್ಗೆ ಬತ್ತಿದರೆ ಕಾವೇರಿಗೆ ನೀರಿಲ್ಲ. ನಂತರ ನೀರಿಗಾಗಿ ಜಗಳ ಮಾಡಿ, ಬಸ್ ಒಡೆದು, ಪ್ರತಿಭಟನೆ ಮಾಡಿ ಏನು ಪ್ರಯೋಜನ? ಮೂಲದಲ್ಲೇ ನೀರನ್ನು ನಾಶ ಮಾಡಿ ಕೊನೆಯಲ್ಲಿ ನೀರು ಕೇಳಿದರೆ ಹೇಗೆ ಸಿಗುತ್ತದೆ? ಕರ್ನಾಟಕದ ಜನರೇ ಕಣ್ಣು ತೆರೆಯಿರಿ. ಇದು ರಾಜಕೀಯದ ವಿಷಯವಲ್ಲ. ಇದು ನಿಮ್ಮ ಮಕ್ಕಳ ಭವಿಷ್ಯದ ವಿಷಯ.

ಮಿಝೋರಾಂ, ನಾಗಾಲ್ಯಾಂಡ್‌ನಲ್ಲಿ ಇರುವಂತೆ ಕೊಡಗಿಗೂ ವಿಶೇಷ ಭೂಮಿ ರಕ್ಷಣಾ ಕಾಯ್ದೆ ತಕ್ಷಣ ಜಾರಿಯಾಗಬೇಕು. ರೆಸಾರ್ಟ್ ಮತ್ತು ಸೈಟ್ ಹೆಸರಿನಲ್ಲಿ ಕೊಡಗಿನ ಭೂಮಿಯನ್ನು ಬೇರೆ ಜಿಲ್ಲೆ, ಬೇರೆ ರಾಜ್ಯದವರಿಗೆ ಮಾರಾಟ ಮಾಡುವುದನ್ನು ಕೂಡಲೇ ನಿಷೇಧಿಸಬೇಕು. ನಮ್ಮ ಭೂಮಿ ನಮ್ಮಲ್ಲೇ ಉಳಿಯಬೇಕು.

ಕೊಡಗಿನ ರೈತರಿಗೆ ಬಾಕಿ ಇರುವ 4 ವರ್ಷದ ಬೆಳೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು. ಚುನಾವಣಾ ಭರವಸೆಗಾಗಿ ಅಲ್ಲ, ವರ್ಷದ 365 ದಿನ ಕೆಲಸ ಮಾಡುವ ಕಾವೇರಿ ಉಗಮ ಪ್ರದೇಶ ಸಂರಕ್ಷಣಾ ಪ್ರಾಧಿಕಾರವನ್ನು ರಚಿಸಬೇಕು. ಕೊಡಗಿನ ಭೂಮಿ ಉಳಿದರೆ ಕಾಡು ಉಳಿಯುತ್ತದೆ. ಕಾಡು ಉಳಿದರೆ ಕಾವೇರಿ ಉಳಿಯುತ್ತದೆ. ಕಾವೇರಿ ಉಳಿದರೆ ಮಾತ್ರ ಕರ್ನಾಟಕ ಮತ್ತು ತಮಿಳುನಾಡು ಎರಡಕ್ಕೂ ನೀರು ಸಿಗುತ್ತದೆ.

ಕಾವೇರಿ ನೀರು ಬೇಕಾದರೆ ಮೊದಲು ಕೊಡಗನ್ನು ಉಳಿಸಬೇಕು. ಕೊಡಗನ್ನು ಉಳಿಸಬೇಕಾದರೆ ಮೊದಲು ಕೊಡಗಿನ ರೈತನನ್ನು ಮತ್ತು ಅವನ ಭೂಮಿಯನ್ನು ಉಳಿಸಬೇಕು. ಇದೇ ಕಾವೇರಿ ನೀರಿಗಾಗಿ ನಡೆಯಬೇಕಾದ ಅಸಲಿ ಹೋರಾಟ. ಇದನ್ನು ಬಿಟ್ಟು ಬೇರೆಲ್ಲಾ ಹೋರಾಟವೂ ಕೇವಲ ರಾಜಕೀಯ ಅನ್ನುವ ರೀತಿ ಭಾಸವಾಗುತ್ತದೆ

ನೆಲಜಿಯಿಂದ ಕಲಿಯದ ಪಾಠ.. ಮಡಿಕೇರಿಯತ್ತ ಬಿತ್ತು ವಕ್ರ ದೃಷ್ಠಿ.. ನಾಶದ ಮುನ್ನುಡಿ!

admin
the authoradmin

Leave a Reply