LatestNews

ಬಿಳಿಗಿರಿರಂಗನಬೆಟ್ಟ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಗುಂಬಳ್ಳಿ ರಾಜಣ್ಣ

ಯಳಂದೂರು (ನಾಗರಾಜ, ವೈ.ಕೆ.ಮೊಳೆ): ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಗುಂಬಳ್ಳಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಜೆ.ಶ್ರೀನಿವಾಸ್ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ದೇವಾಲಯದ ಕಚೇರಿಯಲ್ಲಿ ಶುಕ್ರವಾರ ನಡೆದ ಸಮಿತಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಿತಿಯ ಎಲ್ಲಾ ಸದಸ್ಯರು ಸೇರಿ ಗುಂಬಳ್ಳಿ ರಾಜಣ್ಣ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ಈ ವೇಳೆ ನೂತನ ಅಧ್ಯಕ್ಷ ಗುಂಬಳ್ಳಿ ರಾಜಣ್ಣ ಮಾತನಾಡಿ, ಸಮಿತಿಯ ಹಿಂದಿನ ಅಧ್ಯಕ್ಷರಾದ ಜೆ.ಶ್ರೀನಿವಾಸ್ ರವರು ರಾಜೀನಾಮೆ ನೀಡಿದ್ದರು. ಶಾಸಕರಾದ ಎ.ಆರ್.ಕೃಷ್ಣಮೂರ್ತಿ ರವರ ಸೂಚನೆಯ ಮೇರೆಗೆ ಎಲ್ಲಾ ಸದಸ್ಯರು ನನ್ನನ್ನು ಆಯ್ಕೆ ಮಾಡಿದ್ದಾರೆ. ಶಾಸಕರಿಗೆ ಹಾಗೂ ಎಲ್ಲಾ ಸದಸ್ಯರಿಗೆ ನಾನು ಚಿರಋಣಿಯಾಗಿರುತ್ತೇನೆ. ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲರ ಸಲಹೆ ಪಡೆದು ಶ್ರಮಿಸುತ್ತೇನೆ ಎಂದು ತಿಳಿಸಿದರು.

ನಿರ್ಗಮಿತ ಅಧ್ಯಕ್ಷ ಜೆ.ಶ್ರೀನಿವಾಸ್ ಮಾತನಾಡಿ, ಮಾನ್ಯ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ರವರು ನಮ್ಮೆಲ್ಲರನ್ನು ಸಮಿತಿಯ ಸದಸ್ಯರುಗಳನ್ನಾಗಿ ಸರ್ಕಾರದಿಂದ ನೇಮಕ ಮಾಡಿಸಿ, ಮೊದಲ ಬಾರಿಗೆ ನನಗೆ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ವೈಯಕ್ತಿಕ ಕಾರಣಗಳಿಂದ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದು, ಇಷ್ಟು ದಿನ ನನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

ನಾವೆಲ್ಲರೂ ಸೇರಿ ಒಮ್ಮತದಿಂದ ಮುಂದಿನ ಅವಧಿಗೆ ರಾಜಣ್ಣ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಅವರ ಆಡಳಿತಾವಧಿಯಲ್ಲಿ ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಕರಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ಸದಸ್ಯರುಗಳಾದ ಅರ್ಚಕ ರವಿಕುಮಾರ್, ಕೇತಮ್ಮ, ನಾರಾಯಣಸ್ವಾಮಿ, ವೆಂಕಟರಾಮು, ಸುರೇಶ್, ಸ್ಪೂರ್ತಿ ನಾಗೇಶ್, ಸಿಬ್ಬಂದಿಗಳಾದ ಸೋಮಣ್ಣ, ಶೇಷಾದ್ರಿ, ಬಸವರಾಜು, ಶಶಿ, ರಮೇಶ್ ಬಾಬು ಸೇರಿದಂತೆ ಇತರರು ಹಾಜರಿದ್ದರು

admin
the authoradmin

Leave a Reply

Translate to any language you want