ಅಮ್ಮನ ಅಷ್ಟೋತ್ತರ
ನವಜಾತ ಶಿಶುವಿಗೆ ಜನ್ಮ
ನೀಡುವ ಸಲುವಾಗಿ ನೀ
ಪಡೆಯುವೆ ಪುನರ್ಜನ್ಮ
ಪರಮ ಪೂಜ್ಯ ಜನನಿ
ಅಷ್ಟ ಕಷ್ಟಗಳೆಲ್ಲವನೂ
ಒಬ್ಬಳೇ ನುಂಗಿ ನಲುಗಿ ನೀ
ಇಷ್ಟ ಸ್ವಾದಿಷ್ಟದ್ದೆಲ್ಲವನೂ
ಕಂದಗೆ ನೀಡುವ ಮಾನಿನಿ
ಕಿಂಚಿತ್ತೂ ಅಹಂಭಾವ ಇರದ
ನಿಸ್ವಾರ್ಥಮೂರ್ತಿ ತ್ಯಾಗತರಂಗಿಣಿ
ಭುವಿಭವ ತನುಮನ ಸರ್ವರೋಗಕೂ
ಸಕಾಲಿಕ ಸಾರ್ವಕಾಲಿಕ ಸಂಜೀವಿನಿ ನೀ
ಹಸುಗೂಸಿಗೆ ಎದೆಹಾಲೂಡಿ
ಹಸುವಿನ ಹಾಲ್ಮೊಸರು ಬೆಣ್ಣೆತುಪ್ಪನೀಡಿ
ತಪ್ಪುನಡೆ ತೊದ್ಲುನುಡಿ ತಿದ್ದಿತೀಡಿ
ವಿದ್ಯೆಬುದ್ಧಿ ಸಂಸ್ಕೃತಿಸಂಸ್ಕಾರ ನೀಡಿ
ತಂದೆ ತಾಯಿ ಬಂಧು ಬಳಗ
ಮಿತ್ರ ಶತ್ರು ಗುರು ಹಿರಿಯರ
ಪರಿಚಯ ಮಾಡಿ
ಧರ್ಮಾಧರ್ಮ ಇಷ್ಟಾನಿಷ್ಟ
ನೋವು ನಲಿವು ಕಷ್ಟ ನಷ್ಟ
ಸತ್ಯಾಸತ್ಯದ ಮನವರಿಕೆ ಮಾಡಿ
ಇಹ ಪರ ಪಾಪ ಪುಣ್ಯ
ಲೋಕಾಲೋಕ ಗಣ್ಯ ನಗಣ್ಯ
ಎಲ್ಲದರ ಮಾಹಿತಿ ನೀಡಿ
ಋತು ಕಾಲ ಪ್ರಕೃತಿ ಪರಿಸ್ಥಿತಿ
ಸಕಲ ಕಲೆ ಬೆಲೆ ಸ್ಥಿತಿ ಗತಿ
ಅಜ್ಞಾನ ವಿಜ್ಞಾನಗಳ ಬಗ್ಗೆ
ಅರಿವು ನೀಡುವ ಸುಜ್ಞಾನ ನೀ
ಅಂಬಲಿಯಿರಲಿ ಮೃಷ್ಟಾನ್ನವಿರಲಿ
ಮೊದಲು ಮಕ್ಕಳಿಗುಣಿಸುವ
ಮಮತೆಯ ಮಡಿಲು ನೀ
ಗೃಹಸ್ಥ ಗೃಹಿಣಿ ಸಂತ ವಸಂತ
ಮಾತು ಕತೆ ಸಾಹಿತ್ಯ ಸಂಗೀತ
ಕಲಿಸಿಕೊಟ್ಟ ಮಹಾತಾಯಿ ನೀ
ತಾನು ಹಡೆದ ಕೂಸು
ವೈದ್ಯ ವಕೀಲ ಶಿಲ್ಪಿ ಕಲೆಗಾರ
ಮಂತ್ರಿ ಶಾಸಕ ತಂತ್ರಿ ಕೂಲಿಕಾರ
ಭಂಡ ಷಂಡ ಚಂಡ ಪುಂಡ ಕ್ರೂರ ವಿಕಾರ
ಜ್ಞಾನಿ ಅಜ್ಞಾನಿ ವಿಜ್ಞಾನಿ ಬುದ್ಧಿಮಾಂದ್ಯ
ನಟ ಸಾಹಿತಿ ವಿದ್ವಾನ್ ಲೋಕವಂದ್ಯ
ಕುಖ್ಯಾತ ಪ್ರಖ್ಯಾತ ಏನೇ ಆಗಿರಲಿ
ಸಮಪಾಲು ಸರಿಬಾಳು ನೀಡುತಲಿ
ಸದಾ ಸಲಹುವ ನಮ್ಮಮ್ಮ ನೀ
ಸ್ವಯಂ ವಿಷವನ್ನ ಸೇವಿಸಿ ಕರುಳಕುಡಿಗೆ
ಅಮೃತವನ್ನೇ ಧಾರೆಯೆರೆದು, ಅನವರತ
ಕಾಪಾಡುವ ಅನರ್ಘ್ಯರತ್ನ ನೀ
ಅಪವಿತ್ರ ಪುತ್ರಿ, ಅಷ್ಟಾವಕ್ರ ಪುತ್ರ
ಅನಿಷ್ಟಾಪತಿ ದೊರಕಿದ್ದರೂ ಸಹನೆಯಿಂದ
ಹಗಲಿರುಳು ಹರಸುವಾ ಧರಣಿ ನೀ
ತನ್ನ ಕೂಸು ಮಾತ್ರ ಉತ್ತಮ ಎನುತೆ
ವಾದಿಸಿ ಪ್ರತಿಪಾದಿಸುವ ಶ್ರೇಷ್ಠವನಿತೆ ನೀ
ಏಳೇಳು ಜನ್ಮದ ಶಾಪ ತೊಡೆಯುವ
ಏಳು ಜನ್ಮದಾ ಪಾಪ ತೊಳೆಯುವ
ಪಾವನ ಪುನೀತೆ ಪರಮ ಪುಣ್ಯವಂತೆ ನೀ
ನಾಡೋಜನೋ ಕಾಡೋಜನೋ
ಜೇಷ್ಠ ಪ್ರಜೆಯೋ ಶ್ರೇಷ್ಠ ಕವಿಯೋ
ಕಾರ್ಮಿಕ ಯೋಧ ರೈತ ಅದ್ಯಾರೆ ಆಗಿರಲಿ
ಕನಿಷ್ಠ ಕಾಯಕದ ಶ್ರೀಸಾಮಾನ್ಯನೇ ಇರಲಿ
ಇವರೆಲ್ಲರಿಂದಲೂ ಯುಗಯುಗದಲ್ಲೂ
ಒಲವು ಗೆಲುವು ನಲಿವಿಂದಲೂ
ನೆಲಜಲ ಕುಲಬಲ ಛಲದಿಂದಲೂ
ಆಚಂದ್ರಾರ್ಕ ವಂದನಾರ್ಹ ಅಭಿನಂದನಾರ್ಹ
ನಿತ್ಯಸತ್ಯ ದೇವರೇ ನೀನು….ತಾಯಿದೇವರು!
(1992ರಲ್ಲಿ ಪ್ರಕಟಗೊಂಡ ಕವಿತೆ)

ಅವ್ವನಪಾದಕ್ಕೆ ಅರ್ಪಣೆ
ಅವ್ವ ನಾನು ಬರೆದೆ ಇಂದು
ಕವನವೊಂದು ನಿನ್ನ ಸ್ಮರಣೆಗೆಂದು
“ಅಮ್ಮನ ದಿನಾಚರಣೆ” ಯಂದು
ಮಾತ್ರವಲ್ಲ…..?!
ಅನು ದಿನ ಅನು ಕ್ಷಣ ಅನವರತವೂ
ನೀಕೊಟ್ಟ ಪ್ರಾಣಭಿಕ್ಷೆ ನಾನೂ ನನದೆಲ್ಲವೂ
ಅದನ್ನೆ ಗೌರವದಿಂದ ಸಮರ್ಪಿಸುವೆನು
ನಿನ್ನ ಪಾದ ಕಮಲಕ್ಕೆ ಇಂದು ನಾನು
ಬರೆಯ ಬಲ್ಲ ಕವಿಯು ಅಲ್ಲ
ತೆಪ್ಪಗಿರಲು ಮನಸ್ಸೂ ಒಲ್ಲ
ಏನು ತಾನೆ ಎಷ್ಟು ತಾನೆ
ಹೇಗೆ ತಾನೆ ಬರೆಯ ಬಲ್ಲೆ
ಸಮುದ್ರದಷ್ಟು ಶಾಯಿ
ಭಾನಿನಗಲ ಹಾಳೆ ಸಾಲದು
ನಿನ್ನ ಗುಣವ ಮನವ
ತನುವ ತನವ ಬಣ್ಣಿಸಲು
ಏಳು ಜ್ಞಾನ ಏಳೇಳು ಜನ್ಮ
ಎಪ್ಪತ್ತೇಳು ಕೋಟಿ ಚಿನ್ನ ಸಾಲದು
ನೀನಿತ್ತ ಪ್ರೀತಿ ಮಮತೆ
ತ್ಯಾಗ ಋಣ ತೀರಿಸಲು
ಆದರೂ.. ಬರೆದಿಹೆ
ಹರಕು ಮುರಕು ಬಿರುಕು
ಕವಿತೆಯೊಂದನು
ನನ್ನಮನದ ನೆಮ್ಮದಿಗೆ
ನಾನು ಹುಟ್ಟಿದಂದು ನೀನೆನಗೆ
ಚಿವುಟಿನೋಡಿ ಮುತ್ತನೀಡಿ
ಹಾಲನ್ನುಣಿಸಿ ತೊಟ್ಟಿಲನ್ನೂಡಿ
ತೂಗಿತೂಗಿ ಜೋಗುಳಹಾಡಿ
ಮಲಗಿಸಿದೆ ಮುದ್ದುಮಾಡಿ
ಹಾಲುಹೀರಲು ಕಚ್ಚಿದಾಗಲೂ
ತಲೆಯಲ್ಲಿ ಗುದ್ದಿದಾಗಲೂ
ಕೈಯಲ್ಲಿ ಪರಚಿದಾಗಲೂ
ಕಾಲಲ್ಲಿ ಒದ್ದಾಗಲೂ
ಅಸಹ್ಯ ಪಡಲಿಲ್ಲ
ಅಸಡ್ಡೆ ತೋರಲಿಲ್ಲ
ಬಾಣಂತಿಪಥ್ಯ ಬಿಡಲಿಲ್ಲ
ಒಡೆದುಬಡಿದು ಬಯ್ಯಲಿಲ್ಲ
ಬೇಸರವಂತು ಪಡಲೇಇಲ್ಲ
ದೂರದೂಡಿ ಎಸೆಯಲಿಲ್ಲ
ಇದೆಲ್ಲ ನೀ ಮಾಡಿದ್ದು
ಯಾರ ಮೆಚ್ಚುಗೆಗಲ್ಲ !
ಯಾವ ದಾಕ್ಷಿಣ್ಯಕ್ಕಲ್ಲ !
ಪ್ರತಿಫಲಾಪೇಕ್ಷೆಗಲ್ಲ !
ಆಸ್ತಿಅಂತಸ್ತು ಹಣಕ್ಕೂಅಲ್ಲ !
ನೀಎನ್ನ ಜನ್ಮರಹಸ್ಯತುಂಗೆ
ಪರಮ ಪಾವನ ಪವಿತ್ರಗಂಗೆ
ನನ್ನಜನ್ಮ ಪರ್ಯಂತ
ಋಣಿಯಾಗಿರುವೆ
ನಿನ್ನ ಸೇವೆ ನನ್ನಗುರಿ ಎನ್ನುವೆ
ನೀನೆನಗೆ ಮುಚ್ಚಿಟ್ಟ ತುತ್ತಿಟ್ಟು
ಬೊಟ್ಟಿಟ್ಟು ಮುತ್ತಿಟ್ಟು
ಬೆಳೆಸಿದ್ದರಿಂದಲೇ ಈ ದಿನ
ನಾನೊಬ್ಬ ಸಾಹೇಬ ಸಚಿವ!
ಅಧಿಕಾರಿ ವ್ಯಾಪಾರಿ ನ್ಯಾಯಾಧೀಶ!
ಇತ್ಯಾದಿ ಇತ್ಯಾದಿ
ಏನಾದರೇನು ಎಲ್ಲಿದ್ದರೇನು?
ಇನ್ನೂ ನಿನ್ನಕೂಸೇ ಅಲ್ಲವೇನು?
ನಿನ್ನ ಪಾದಧೂಳು ಹಸ್ತದೋಳು
ನಿನ್ನ ಬೆವರಬನಿ ರಕ್ತದಹನಿ ನಾನು!
ಎಂದೂ ಕೃತಘ್ನನಾಗಲಾರೆನು
ಕೇವಲ ಕೃತಜ್ಞನೇ ಆಗಿರುವೆನು!
ಬಾಲ್ಯ(ಕಷ್ಟ) ಕಡಲ ದಾಟಿ
ಯೌವನ(ಸುಖ)ದಡವ ಸೇರಿದರೂ
ಬದುಕಿನಂಬಿಗನ ಹಂಗನ್ನು
ಬಾಳದೋಣಿಯ ನೆರವನ್ನು
ನಾ ಮರೆಯಲಾರೆ
ನಿನ್ನ ಕರುಳಕುಡಿಯಾಗಿದ್ದು
ನಿನ್ನ ತನುಮನ ನೋಯಿಸಲಾರೆ
ನಿನ್ನ ಹಿಂಸಿಸಿ ಏನನ್ನೂ ಸಾಧಿಸಲಾರೆ
ತಾಯನ್ನ ನಿಂದಿಸುವ ಹಂದಿಯಾಗಲಾರೆ
ಸ್ವಾರ್ಥಪುರುಷಾರ್ಥಕ್ಕೆಂದೂ ಬದುಕಿರಲಾರೆ
ಸಾರ್ಥಕ ಜೀವಕ್ಕೆ ಸಮೃದ್ಧ ಜೀವನಕ್ಕೆ
ನೀನೇ ಎಲ್ಲ ನಿನ್ನಿಂದಲೇ ಎಲ್ಲ
ನನ್ನ ಕೊನೆಯುಸಿರತನಕ ಮರೆಯಲಾರೆ
ಮರೆತು ನಾಶವಾಗಲಾರೆ
ತಾಯಿ ವಂದನೆ…ಕೋಟಿ ವಂದನೆ!
ಇದು ಅನುದಿನದ ನನ್ನ
ನುಡಿಬರಹ ಸಮರ್ಪಣೆ
ಭಕ್ತಿಪೂರ್ವಕ ಕವಿತಾರ್ಪಣೆ
15.6.1993









