ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ಅವಘಡ ಸಂಭವಿಸಿದ ಪರಿಣಾಮ ಸವಾರನ ಕಾಲು ಮುರಿದಿರುವ ಘಟನೆ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಣಸೂರು ತಾಲೂಕಿನ ಕೊಳಗಟ್ಟ ಗ್ರಾಮದ ರವಿ ಎಂಬಾತನೇ ಅಪಘಾತದಲ್ಲಿ ಕಾಲು ಮುರಿತಕ್ಕೊಳಗಾದ ಸವಾರ. ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದ ಬಳಿ ಗುರುವಾರ ಸಂಜೆ 6 ಗಂಟೆ ಸಮಯದಲ್ಲಿ ಈ ಅಪಘಾತ ನಡೆದಿದೆ. ರವಿ ಹಿರೀಕ್ಯಾತನಹಳ್ಳಿ ಗ್ರಾಮದ ಸಂಬಂಧಿಕರ ಮದುವೆಗೆ ಬಂದು ಕಲ್ಯಾಣ ಮಂಟಪದಲ್ಲಿ ಮದುವೆ ಮುಗಿಸಿಕೊಂಡು ಸಂಬಂಧಿಕರ ಮನೆಗೆ ತನ್ನ ಬೈಕ್ (KA45 EC 0553)ನಲ್ಲಿ ಹೋಗುವಾಗ ಹಿರೀಕ್ಯಾತನಹಳ್ಳಿ ಗ್ರಾಮದ ಕೆರೆಯ ಏರಿ ಮೇಲೆ ಕಿರಿದಾದ ರಸ್ತೆಯಲ್ಲಿ ಸಾರಿಗೆ ಬಸ್ (KA 10 F 0307) ಬಂದ ಪರಿಣಾಮ ಅಪಘಾತ ಸಂಭವಿಸಿದೆ.

ಅಪಘಾತದ ಬಳಿಕ ಗಾಯಾಳು ರವಿಯನ್ನು ತಕ್ಷಣ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬಸ್ ಚಾಲಕ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.








