LatestMysore

ಟಾಟಾ ಪವರ್ ಕಂಪನಿ ಲಿಮಿಟೆಡ್ ಸಲ್ಲಿಸಿರುವ ಅರ್ಜಿ ತಿರಸ್ಕರಿಸುವಂತೆ ಹುಣಸೂರು ರೈತ ಸಂಘ ಮನವಿ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಕರ್ನಾಟಕದ ವಿವಿಧ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಯ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಿಗೆ ಕೋರಿ ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿ ಗುರುವಾರ ಹುಣಸೂರು ತಾಲೂಕು ಕಚೇರಿಯ ಉಪತಹಸಿಲ್ದಾರ್ ಶ್ರೀಪಾದ ರವರ ಮುಖಾಂತರ ಕಾರ್ಯದರ್ಶಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಬೆಂಗಳೂರು ರವರಿಗೆ   ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ  ಮನವಿ ಪತ್ರ ಸಲ್ಲಿಸಲಾಯಿತು.

ದಿ  ಟಾಟಾ ಪವರ್ ಕಂಪನಿಯ ವಿದ್ಯುತ್ ವಿತರಣಾ ಲೈಸೆನ್ಸ್ ಕೋರಿ ವಿದ್ಯುತ್ ಕಾಯ್ದೆ 2003ರ ಕಲಂ 14 ಸೆಕ್ಷನ್ 6ರ ಪ್ರಕಾರ ಕೆ ಆರ್ ಇ ಸಿ ಗೆ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಆಹ್ವಾನಿಸಿ ಸಾರ್ವಜನಿಕ ಸೂಚನೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಕುರಿತಂತೆ  ಗುರುವಾರ ಸಾವಿರಾರು ಜನ ರೈತರು ಜಮಾವಣೆಗೊಂಡು  ಹುಣಸೂರು ನಗರದ ಸಂವಿಧಾನ ವೃತ್ತದಿಂದ  ಹೊರಟು ಜೆ ಎಲ್ ಬಿ ರಸ್ತೆ ಮುಖಾಂತರ   ಕಲ್ಪತರು ಮಾರ್ಗವಾಗಿ  ಪಾದಯಾತ್ರೆ ಕೈಗೊಂಡು  ಹುಣಸೂರು ತಾಲೂಕು ಕಚೇರಿ  ಮುಂಭಾಗದಲ್ಲಿ  ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘವು ಈ ಕೆಳಕಂಡಂತೆ ಆಕ್ಷೇಪಣೆ ಸಲ್ಲಿಸುತ್ತಿದ್ದು ಅಕ್ಷೇಪಣೆಗಳನ್ನು ಪರಿಗಣಿಸಿ ಟಾಟಾ ಪವರ್ ಕಂಪನಿಯು ವಿದ್ಯುತ್ ಕಾಯ್ದೆ 2003ರ ಕಲಂ 14ರ ಸೆಕ್ಷನ್ 6ರ ಅಡಿಯಲ್ಲಿ ಸಲ್ಲಿಸಿರುವ ಕರ್ನಾಟಕ ರಾಜ್ಯದ ಬೆಸ್ಕಾಂ ವ್ಯಾಪ್ತಿಯ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗಾ, ಬೆಂಗಳೂರು ಗ್ರಾಮಾಂತರ, ರಾಮನಗರ, ಚೆಸ್ಕಾಂ ವ್ಯಾಪ್ತಿಯ ಮೈಸೂರು ಹಾಸನ, ಚಾಮರಾಜನಗರ, ಮೆಸ್ಕಾಂ ವ್ಯಾಪ್ತಿಯ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಎಸ್ಕಾಂ ವ್ಯಾಪ್ತಿಯ ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಹಾಗೂ ಜೆಸ್ಕಾಂ ವ್ಯಾಪ್ತಿಯ ಬಳ್ಳಾರಿ, ರಾಯಚೂರು, ಕಲ್ಬುರ್ಗಿ, ಯಾದವಗಿರಿ, ಒಟ್ಟು 19 ಕಂದಾಯ ಜಿಲ್ಲೆಗಳಲ್ಲಿ ಈಗ  ಇರುವ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಮಾನಾಂತರವಾಗಿ ವಿದ್ಯುತ್ ವಿತರಣಾ ಲೈಸೆನ್ಸ್ ಕೋರಿರುವ ಅರ್ಜಿಗಳನ್ನು ತಿರಸ್ಕರಿಸಲು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದೆ.

ಬಾಂಬೆ  ಹೌಸ್, 24 ಹೋಮಿ ಮೋದಿ ಸ್ಟ್ರೀಟ್, ಮುಂಬಯಿ 400001 ರಲ್ಲಿ ನೊಂದಾಯಿತ ಕಛೇರಿ ವಿಳಾಸ ಹೊಂದಿರುವ ಅರ್ಜಿದಾರರಾದ ದಿ. ಟಾ ಟಾ ಪವರ್ ಕಂಪನಿ ಲಿಮಿಟೆಡ್ ವಿದ್ಯುತ್ ವಿತರಣೆ ಕೋರಿ ಸಲ್ಲಿಸಿರುವ ಅರ್ಜಿಯು ಅಪೂರ್ಣವಾಗಿದ್ದು, ವಿತರಣಾ ಕಾರ್ಯಾಚರಣೆ ವಿಧಾನ ಹಾಗೂ ಸ್ವರೂಪವನ್ನು ಮರೆ ಮಾಚಿದೆ.

ಸಮನಾಂತರವಾಗಿ ವಿದ್ಯುತ್ ಪೂರೈಸಲು ಅಗತ್ಯವಾದ ವಿದ್ಯುತ್ ಶಕ್ತಿಯ ಮೂಲ ಮತ್ತು ಪ್ರಮಾಣ, ಉತ್ಪಾದನೆ ಅಥವಾ ಖರೀದಿ,  ಖರೀದಿ ಅಥವಾ ಉತ್ಪಾದನಾ ವೆಚ್ಚದ ಬಗೆಗಿನ ಮಾಹಿತಿ, ವಿದ್ಯುತ್ ಸಾಗಾಣಿಕೆ ಜಾಲಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳ ಸ್ಥಾಪನೆ ಹಾಗೂ ಅದಕ್ಕಾಗಿ ಹೂಡಿಕೆ ಮಾಡಬೇಕಾಗಿರುವ ಬಂಡವಾಳ ವೆಚ್ಚ ಮತ್ತು ಅದರ ಮೂಲ, ವಿದ್ಯುತ್ ವಿತರಣಾ ಕೇಂದ್ರಗಳು, ವೋಲ್ಟೇಜ್ ನಿರ್ವಹಣಾ ಕೇಂದ್ರಗಳು ಟ್ರಾನ್ಸ್ ಫಾರ್ಮರ್ ಮುಂತಾದವುಗಳು ಅಲ್ಲದೇ ಸಮನಾಂತರವಾಗಿ ವಿದ್ಯುತ್ ಪೂರೈಕೆ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ತಾಂತ್ರಿಕ ಯೋಜನೆ, ಭೂಮಿ, ಕಛೇರಿ, ಅಗತ್ಯ ಇಂಜಿನಿಯರ್, ತಂತ್ರಜ್ಞ, ಕುಶಲ ನೌಕರರು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಈ ಎಲ್ಲಾ ಕ್ರಮಗಳಿಂದಾಗಿ  ವಿದ್ಯುತ್ ಖಾಸಗೀಕರಣ ಗೊಳಿಸಬಾರದೆಂದು 600ಕ್ಕೂ ಹೆಚ್ಚು ಮಂದಿ  ಸಹಿ ಸಂಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯ  ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಜಗದೀಶ್ ರವರಿಗೆ  ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಪತ್ರಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲೂಕು ಅಧ್ಯಕ್ಷರಾದ ಬೆಂಕಿಪುರ ಚಿಕ್ಕಣ್ಣ, ಅಗ್ರಹಾರ ರಾಮೇಗೌಡ, ಡಿಎಸ್ಎಸ್ ನ ರಾಮಕೃಷ್ಣ ಅತ್ತಿಕುಪ್ಪೆ ,ಚಿಕ್ಕ ಹುಣಸೂರು ರಾಜು,  ಚಂದ್ರೇಗೌಡ, ಪ್ರಭಾಕರ  ತಮಡಹಳ್ಳಿ, ಶ್ರೀನಿವಾಸ್, ಈಶ್ವರ್ ಕಿರಿಜಾಜಿ, ಧನಂಜಯ ಕಲ್ಲಹಳ್ಳಿ, ವಿಷಕಂಠಪ್ಪ, ಜಯಣ್ಣ, ಶಿವಮೂರ್ತಿ, ಹರೀಶ್ ಕಾವಲ್, ಸೇರಿದಂತೆ ಅನೇಕ ಮುಖಂಡರು  ಸಾವಿರಕ್ಕೂ ಹೆಚ್ಚು ರೈತ ಬಂಧುಗಳು  ಈ ಪ್ರತಿಭಟನೆಯಲ್ಲಿ ಹಾಜರಿದ್ದರು.

admin
the authoradmin

Leave a Reply

Translate to any language you want