LatestMysore

ವಿಕಲಚೇತನ ಮಕ್ಕಳ ಪ್ರತಿಭೆಗೆ ವೇದಿಕೆಯಾದ “ಜನಪದೋತ್ಸವ”… ಗಮನಸೆಳೆದ ಜನಪದ ನೃತ್ಯ ಪ್ರದರ್ಶನ

ಮೈಸೂರು: ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟ – ಮೈಸೂರು ಘಟಕವು ಒರೆಕಲ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ “ಬುದ್ಧಿವಿಕಲಚೇತನ ಮಕ್ಕಳಿಗಾಗಿ ಮೈಸೂರು ವಿಭಾಗ ಮಟ್ಟದ ಜನಪದ ನೃತ್ಯ ಸ್ಪರ್ಧೆ – ಜನಪದೋತ್ಸವ–2026” ಕಾರ್ಯಕ್ರಮವು ಗುರುವಾರ ನಗರದ ಕಿರು ರಂಗಮಂದಿರ, ಕಲಾಮಂದಿರ ಆವರಣದಲ್ಲಿ ಅತ್ಯಂತ ಸಂಭ್ರಮ, ಸಡಗರ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಗಣ್ಯರು ಸಂಪ್ರದಾಯಬದ್ಧವಾಗಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮೈಸೂರು ವಿಭಾಗದ 12ಕ್ಕೂ ಹೆಚ್ಚು ವಿಶೇಷ ಶಾಲೆಗಳ ಬುದ್ಧಿವಿಕಲಚೇತನ ಮಕ್ಕಳು ತಮ್ಮ ವಿಶಿಷ್ಟ ಜನಪದ ನೃತ್ಯಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀ ಕೆ.ಎಸ್. ರಾಘವೇಂದ್ರ, ಜನಪದೋತ್ಸವದ ಎರಡನೇ ಆವೃತ್ತಿಯು ವಿಶೇಷ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಂದೆ ಅನಾವರಣಗೊಳಿಸುವ ಮಹತ್ವದ ವೇದಿಕೆಯಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ದೊರೆತಿರುವ ಅಮೂಲ್ಯ ಅವಕಾಶವಾಗಿದೆ ಎಂದು ಹೇಳಿದರು.

ಬುದ್ಧಿವಿಕಲಚೇತನ ಮಕ್ಕಳು ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಅವರಿಗೆ ಆತ್ಮವಿಶ್ವಾಸ, ಉತ್ಸಾಹ ಮತ್ತು ಸಮಾಜದೊಂದಿಗೆ ಬೆರೆಯುವ ಅವಕಾಶವನ್ನು ನೀಡುತ್ತವೆ. ನಾನು ಗ್ರಾಮೀಣ ಹಿನ್ನೆಲೆಯಿಂದ ಬಂದವನಾಗಿದ್ದು, ವಿಶೇಷಚೇತನರ ಸಮಸ್ಯೆಗಳ ಕುರಿತು ಆಳವಾದ ಅರಿವು ನಂತರದ ದಿನಗಳಲ್ಲಿ ದೊರೆಯಿತು. ಅವರ ಅಗತ್ಯಗಳನ್ನು ಅರ್ಥಮಾಡಿಕೊಂಡಾಗ ಅವರಿಗೆ ನಿರಂತರ ಪ್ರೋತ್ಸಾಹ ಮತ್ತು ಅವಕಾಶಗಳ ಅಗತ್ಯವಿರುವುದು ತಿಳಿಯುತ್ತದೆ ಎಂದು ಹೇಳಿದರು.

ಸರ್ಕಾರ ವಿಶೇಷಚೇತನರ ಹಾಗೂ ಅವರ ಆರೈಕೆದಾರರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಶ್ರೀ ಗುರುರಾಘವೇಂದ್ರ ಮಾತನಾಡಿ, ಸಮರ್ಥನಂ ಸಂಸ್ಥೆಯು ದೇಶಾದ್ಯಂತ ಸುಮಾರು 1,500ಕ್ಕೂ ಹೆಚ್ಚು ಶಾಲೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ವಿಶೇಷ ಮಕ್ಕಳ ಶಿಕ್ಷಣ ಮತ್ತು ಪುನರ್ವಸತಿಗೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.

ಬುದ್ಧಿವಿಕಲಚೇತನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಸಾಂಸ್ಕೃತಿಕ ಉತ್ಸವಗಳು ಹೆಚ್ಚು ಹೆಚ್ಚು ನಡೆಯಬೇಕು. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ರಾಜ್ಯಮಟ್ಟದಲ್ಲಿ ಆಯೋಜಿಸುವ ಆಶಯವೂ ನಮ್ಮದಾಗಿದೆ ಎಂದು ಹೇಳಿದರು.

ಸಮರ್ಥನಂ ವಿಶೇಷ ಶಾಲೆಗಳ ವ್ಯವಸ್ಥಾಪಕಿ ಡಾ. ಗೀತಾ ಕೆ. ಮಾತನಾಡಿ, “ನಾನು ಹಲವು ವರ್ಷಗಳಿಂದ ವಿವಿಧ ರೀತಿಯ ವಿಶೇಷಚೇತನ ಮಕ್ಕಳೊಂದಿಗೆ ಕೆಲಸ ಮಾಡಿದ್ದೇನೆ. ಪ್ರತಿಯೊಬ್ಬ ಮಗುವಿನಲ್ಲೂ ವಿಶಿಷ್ಟ ಪ್ರತಿಭೆ ಅಡಗಿದೆ. ಅವರಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ದೊರೆತಾಗ ಅವರ ಸಾಮರ್ಥ್ಯ ಹೊರಹೊಮ್ಮುತ್ತದೆ. ಈ ಕಾರ್ಯಕ್ರಮಕ್ಕಾಗಿ ಮಕ್ಕಳಿಗೆ ಶ್ರಮಪಟ್ಟು ತರಬೇತಿ ನೀಡಿದ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳು. ಇಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಕ್ಕಳೂ ನಮ್ಮ ದೃಷ್ಟಿಯಲ್ಲಿ ವಿಜೇತರೇ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟ – ಮೈಸೂರು ಘಟಕದ ಅಧ್ಯಕ್ಷ ಏನ್. ಶ್ರೀಧರ್ ದೀಕ್ಷಿತ್ ಮಾತನಾಡಿ,  ಪ್ರತಿಯೊಬ್ಬ ಮಗುವಿನಲ್ಲೂ ಪ್ರತಿಭೆ ಇದೆ. ಆದರೆ ಅವರಿಗೆ ಅವಕಾಶಗಳು ಕಡಿಮೆ ದೊರೆಯುತ್ತವೆ. ಇಂತಹ ವೇದಿಕೆಗಳು ಅವರ ಪ್ರತಿಭೆಯನ್ನು ಹೊರತರಲು ನೆರವಾಗುತ್ತವೆ. ಇಲ್ಲಿ ಭಾಗವಹಿಸಿದ ಎಲ್ಲ ಮಕ್ಕಳು ವಿಜೇತರೇ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಲಿ” ಎಂದು ಹಾರೈಸಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿ, ಬುದ್ಧಿವಿಕಲಚೇತನ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಸಮಾಜದ ಮುಂದೆ ತರುವ ಉದ್ದೇಶದಿಂದ ಜನಪದೋತ್ಸವವನ್ನು ಆಯೋಜಿಸಲಾಗಿದ್ದು, ಸಮಾಜದಲ್ಲಿ ವಿಶೇಷಚೇತನರ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಮನಸೂರೆಗೊಂಡ ಜನಪದ ನೃತ್ಯಗಳು

ಮೈಸೂರು ವಿಭಾಗದ 12 ವಿಶೇಷ ಶಾಲೆಗಳ ವಿದ್ಯಾರ್ಥಿಗಳು ಮಲೆ ಮಹದೇಶ್ವರ, ಸಿದ್ದಪ್ಪಾಜಿ, ಎಲ್ಲಮ್ಮ ಸೇರಿದಂತೆ ವಿವಿಧ ಜನಪದ ದೇವತೆಗಳು ಮತ್ತು ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಡುಗಳಿಗೆ ಅತ್ಯಂತ ಮನಮೋಹಕವಾಗಿ ನೃತ್ಯ ಪ್ರದರ್ಶಿಸಿದರು. ಮಕ್ಕಳ ಬಣ್ಣಬಣ್ಣದ ವೇಷಭೂಷಣಗಳು, ಜನಪದ ಶೈಲಿಯ ಅಲಂಕಾರ, ಮುಗ್ಧ ಅಭಿನಯ ಹಾಗೂ ನೃತ್ಯ ಕೌಶಲ್ಯಗಳು ಸಭಿಕರ ಮನಸೆಳೆಯಿತು. ಪ್ರೇಕ್ಷಕರು ಕರತಾಡನದ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿ ಅಭಿನಂದಿಸಿದರು.

 

ವಿಜೇತ ತಂಡಗಳು… ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.

ಪ್ರಥಮ ಬಹುಮಾನ: ಪ್ರೇರಣಾ ವಿಶೇಷ ಶಾಲೆ, ಮಂಡ್ಯ – ₹15,000 ಹಾಗೂ ಆಕರ್ಷಕ ಟ್ರೋಫಿ,  ದ್ವಿತೀಯ ಬಹುಮಾನ: ಆಶಾ ಸದನ ವಿಶೇಷ ಶಾಲೆ, ಮಂಡ್ಯ – ₹8,000 ಹಾಗೂ ಆಕರ್ಷಕ ಟ್ರೋಫಿ, ತೃತೀಯ ಬಹುಮಾನ: ಆಶಿಯಾನ ವಿಶೇಷ ಶಾಲೆ, ಮೈಸೂರು – ₹5,000 ಹಾಗೂ ಆಕರ್ಷಕ ಟ್ರೋಫಿ,

ಕಾರ್ಯಕ್ರಮದಲ್ಲಿ ಡಾ. ಸೋಮಶೇಖರ್, ಶ್ರೀನಿವಾಸ ರೆಡ್ಡಿ, ಸಾಗರ ಗುಂಬಳ್ಳಿ, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ-ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಸೌಮ್ಯ ಸೇರಿದಂತೆ ಹಲವಾರು ಗಣ್ಯರು, ವಿವಿಧ ವಿಶೇಷ ಶಾಲೆಗಳ ಶಿಕ್ಷಕರು, ಪೋಷಕರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಜನಪದೋತ್ಸವ–2026 ವಿಶೇಷ ಮಕ್ಕಳ ಪ್ರತಿಭೆ, ಆತ್ಮವಿಶ್ವಾಸ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ಮಹತ್ವದ ವೇದಿಕೆಯಾಗಿದ್ದು, ಸಮಾಜದಲ್ಲಿ ವಿಶೇಷಚೇತನರ ಬಗ್ಗೆ ಇನ್ನಷ್ಟು ಜಾಗೃತಿ ಮತ್ತು ಗೌರವ ಮೂಡಿಸುವಲ್ಲಿ ಯಶಸ್ವಿಯಾಯಿತು.

 

 

admin
the authoradmin

Leave a Reply