ArticlesDasaraLatestMysore

ಮೈಸೂರು ದಸರಾ ಸಂಭ್ರಮದಲ್ಲಿ ಮಿಂದೇಳುವ ಬನ್ನಿ…. ಇಂದ್ರನ ಅಮರಾವತಿ ಧರೆಗಿಳಿದ ಅನುಭವ

ಮೈಸೂರು: ರಾಜತ್ವದಿಂದ ಪ್ರಜಾಪ್ರಭುತ್ವದವರೆಗೆ ಸುಮಾರು ನಾಲ್ಕು ಶತಮಾನಗಳಿಂದ ನಡೆದು ಬರುತ್ತಿರುವ ಮೈಸೂರು ದಸರಾ ಸಂಪ್ರದಾಯದ ಲೇಪನದೊಂದಿಗೆ ಇತಿಹಾಸದ ಸಾಕ್ಷಿಯಾಗಿ ಸಡಗರ ಸಂಭ್ರಮವನ್ನು ಹೊತ್ತು ತರುತ್ತಿದೆ.

ಮೈಸೂರು ದಸರಾದಲ್ಲಿ ಎಲ್ಲವೂ ಇದೆ.. ಇದರ ಜೊತೆಗೆ ಸಂಭ್ರಮ, ಸಡಗರ, ಮನೋರಂಜನೆಯ ಮೆರವಣಿಗೆಗೆ ಆದ್ಯತೆ ಜಾಸ್ತಿ ಎನ್ನಬೇಕು.. ಹೀಗಾಗಿಯೇ ಮಕ್ಕಳು ವೃದ್ಧರಾದಿಯಾಗಿ ಎಲ್ಲರೂ ದಸರಾವನ್ನು ಸಂಭ್ರಮಿಸುತ್ತಾರೆ.

ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾಗೆ ವಿಧ್ಯುಕ್ತ ಚಾಲನೆ ದೊರೆಯುತ್ತಿದ್ದಂತೆಯೇ ಹತ್ತು ದಿನಗಳ ಕಾಲ  ಮೈಸೂರು ನಗರದಲ್ಲಿ ಸಡಗರ, ಸಂಭ್ರಮ ಮನೆ ಮಾಡಿ ಬಿಡುತ್ತದೆ. ರಾತ್ರಿಯಾಗುತ್ತಿದ್ದಂತೆಯೇ ಇಂದ್ರನ ಅಮರಾವತಿಯೇ ಧರೆಗಿಳಿದ ಅನುಭವವಾಗುತ್ತದೆ.

ಈ ವೇಳೆ ವಿದ್ಯುತ್ ದೀಪದ ಬೆಳಕಿನಲ್ಲಿ ಮಿಂದೇಳುತ್ತಿರುವ ಮೈಸೂರು ನಗರಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಈ ಸಮಯದಲ್ಲಿ ಮೈಸೂರಿಗೆ ಮೈಸೂರೇ ಬದಲಾಗಿಬಿಡುತ್ತದೆ. ಜನಜಂಗುಳಿಯಲ್ಲಿ ಸಡಗರ, ಸಂಭ್ರಮ ಎದ್ದೆದ್ದು ಕುಣಿಯುತ್ತದೆ.

ಇಡೀ ನಗರದ ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೇಳುತ್ತಿದ್ದರೆ ಅದರ ನಡುವೆ ದಸರಾಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತವೆ. ದಸರಾ ಆರಂಭದ ದಿನದಿಂದಲೇ  ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭವಾದರೆ, ಅತ್ತ ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ, ಆಹಾರಮೇಳ, ವಸ್ತುಪ್ರದರ್ಶನ ಹೀಗೆ ಎಲ್ಲವೂ ಒಮ್ಮೆಲೆ ತೆರೆದುಕೊಳ್ಳುತ್ತದೆ.

ದಸರಾ ಶುರುವಾಗುತ್ತಿದ್ದಂತೆಯೇ ರೈತರು, ಮಹಿಳೆಯರು, ಯುವಕರು, ಯುವತಿಯರು ಹೀಗೆ ಎಲ್ಲರಿಗೂ ದಸರಾದಲ್ಲಿ ಪಾಲ್ಗೊಳ್ಳುವ, ಮಿಂಚುವ ಅವಕಾಶ ದೊರೆಯುತ್ತದೆ. ಒಂದು ಕಡೆ ಯುವ ಮನಸ್ಸುಗಳಿಗೆ ಲಗ್ಗೆಯಿಡುವ ಯುವ ದಸರಾ ಮನ ತಣಿಸಿದರೆ, ಮತ್ತೊಂದೆಡೆ ಬೋಜನ ಪ್ರಿಯರಿಗೆ ವಿವಿಧ ಖಾದ್ಯಗಳನ್ನು ಉಣಬಡಿಸುತ್ತಾ ಬಾಯಿ ಚಪ್ಪರಿಸುವಂತೆ ಆಹಾರ ಮೇಳ ಮಾಡುತ್ತದೆ. ಇನ್ನು ಸಂಜೆ ನಗರದಲ್ಲಿ ಅಡ್ಡಾಡಿದರೆ, ಇನ್ನು ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತದೆ.

ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದೆಡೆಯಾದರೆ ಮತ್ತೊಂದೆಡೆ ಇತಿಹಾಸ, ರಾಜಪರಂಪರೆಯನ್ನು ತೆರೆದಿಡುವ ಖಾಸಗಿ ದರ್ಬಾರ್  ಹಿಂದಿನ ರಾಜ ವೈಭವ ಮತ್ತೆ ಮರುಕಳಿಸುವಂತೆ ಮಾಡುತ್ತದೆ.

ಹೊರಗಿನಿಂದ ಬರುವ ಪ್ರವಾಸಿಗರು, ನಗರದಲ್ಲಿ ನೆಲೆಸಿರುವ ಜನರು ಹೀಗೆ ಎಲ್ಲರೂ ನಗರದ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಂಡು ಖುಷಿಪಡುತ್ತಾರೆ. ನಗರದಲ್ಲಿರುವ ವೃತ್ತಗಳು, ರಸ್ತೆಗಳು, ಮರಗಳು, ಕಟ್ಟಡಗಳು ಹೀಗೆ ಎಲ್ಲೆಡೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಅವು ಮಿನುಗುವಾಗ ಕಾಣುವ ದೃಶ್ಯ ಅದ್ಭುತ.

ಇನ್ನು ನಗರದಲ್ಲಿ ಅಡ್ಡಾಡುವವರಿಗೆ ಮೈಮನವೆಲ್ಲಾ ರೋಮಾಂಚನ ನೀಡುವ ದೃಶ್ಯಗಳು ಕಾಣಸಿಗುತ್ತವೆ. ಜತೆಗೆ  ಚೆಂದದ ಮೈಸೂರು, ಅಂದದ ಅರಮನೆ, ಸುಂದರ ಚಿನ್ನದ ಅಂಬಾರಿ, ಮನಸೆಳೆವ ರತ್ನ ಸಿಂಹಾಸನ, ಸಿಂಹಾಸನಾಧೀಶರಾಗಿ ಮೆರೆದ ಮಹಾರಾಜರ ವೈಭವ-ವೈಭೋಗಗಳೆಲ್ಲವೂ ನೆನಪುಗಳ ಮೆರವಣಿಗೆಯಾಗಿ ಕಣ್ಮುಂದೆ ತೇಲಿ ಕೊಂಡು  ಹೋಗುತ್ತವೆ.

ವಿಶ್ವವಿಖ್ಯಾತಿ ಪಡೆದಿರುವ ದಸರಾ ಆಚರಣೆಯನ್ನು ಹಿಂದಿನ ಕಾಲದಲ್ಲಿ ಮೈಸೂರು ಮಹಾರಾಜರು ಜಾರಿಗೆ ತಂದರು. ಆದರೆ ರಾಜತ್ವ ಕಳೆದು ಪ್ರಜಾಪ್ರಭುತ್ವ ಬಂದ ಬಳಿಕ  ಹಲವು ಬದಲಾವಣೆಗಳ ಜತೆಗೆ ಜನೋತ್ಸವವಾಗಿ ಈಗ ಮೆರೆಯುತ್ತಿದೆ.

ಅಂದು ಅಶ್ವಯುಜ ಶುದ್ಧ ಪ್ರಥಮೆಯಂದು ನವರಾತ್ರಿ ಉತ್ಸವ ಶುರುವಾಗಿ ಮಹಾನವಮಿಯ ಕಡೇ ದಿನದವರೆಗೂ ಪ್ರತಿನಿತ್ಯ ಪೂಜೆ-ಪುನಸ್ಕಾರ, ಪೂರ್ವಾಹ್ನ ಮತ್ತು ಮಧ್ಯಾಹ್ನ ಸಿಂಹಾಸನಾರೋಹಣ, ಒಡ್ಡೋಲಗ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಾರಾಜರು ಆಚರಿಸುತ್ತಿದ್ದರು.

ಇವತ್ತು ಹತ್ತು ಹಲವು ಬದಲಾವಣೆಗಳಾಗಿವೆ. ಅವತ್ತಿನ ಸಂಪ್ರದಾಯದ ಜತೆಗೆ ಒಂದಷ್ಟು ಹೊಸತನ ಸೇರಿಸಿಕೊಂಡು ದಸರಾ ಮುನ್ನಡೆಯುತ್ತಿದೆ.. ಅದು ಏನೇ ಇರಲಿ ಬನ್ನಿ ನಾವು, ನೀವು ಎಲ್ಲರೂ ದಸರಾದಲ್ಲಿ ಸಂಭ್ರಮಿಸೋಣ…

admin
the authoradmin

ನಿಮ್ಮದೊಂದು ಉತ್ತರ