ಹೊರಗಿನಿಂದ ನೋಡಿದಾಗ ಕೊಡಗು ಶ್ರೀಮಂತ ಜಿಲ್ಲೆಯಾಗಿ ಕಾಣಿಸುತ್ತದೆ. ಆದರೆ ಇಲ್ಲಿನ ಬಡತನದ ಮತ್ತೊಂದು ಮುಖ ಮಸುಕಾಗುತ್ತದೆ… ಇಲ್ಲಿನ ಯುವಕರ ಕನಸುಗಳು ಕಮರುತ್ತಿರುವುದೇಕೆ? ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ಪ್ರಸ್ತಾಪಿಸಿದ್ದಾರೆ.
ಹೊರ ಜಗತ್ತಿಗೆ ಕೊಡಗು ಎಂದರೆ ಒಂದು ಶ್ರೀಮಂತ ಜಿಲ್ಲೆ. ಕಣ್ಣು ಹಾಯಿಸಿದಷ್ಟು ಹಚ್ಚ ಹಸಿರಿನ ಕಾಫಿ ತೋಟ, ದೊಡ್ಡ ದೊಡ್ಡ ಬಂಗಲೆಗಳು, ಐಷಾರಾಮಿ ರೆಸಾರ್ಟ್‌ಗಳು. ಬೆಂಗಳೂರು, ಮೈಸೂರು, ದುಬೈನಂತಹ ಮಹಾನಗರಗಳಲ್ಲಿ ದೊಡ್ಡ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿ ಆಳುತ್ತಿರುವವರು ಮೂಲತಃ ಕೊಡಗಿನವರು. ಅದರಲ್ಲಿ ಮುಖ್ಯವಾಗಿ ಕೊಡವರು ಸೇರಿದಂತೆ ಈ ನೆಲದ ಮೂಲ ನಿವಾಸಿ ಎಲ್ಲಾ ಸಮುದಾಯಗಳ ಉದ್ಯಮಿಗಳು ಇದ್ದಾರೆ. ಸಾವಿರ ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಉದ್ಯಮಿಗಳು ಇಂದು ಕೊಡಗಿನಲ್ಲಿ ನೂರಾರು ಸಂಖ್ಯೆಯಲ್ಲಿದ್ದಾರೆ.

ಆದರೆ ಈ ಶ್ರೀಮಂತಿಕೆಯ ಬೆಳಕಿನ ಹಿಂದೆ ಇರುವ ಕತ್ತಲೆಯ ಚಿತ್ರಣವನ್ನು ಒಳಗಡೆ ಇಣುಕಿ ನೋಡಿದಾಗ ಮಾತ್ರ ಅರ್ಥವಾಗುತ್ತದೆ. ಇವತ್ತು ಸಹ ಅದೇ ಕೊಡಗಿನಲ್ಲಿ, ಕೊಡವ ಕುಟುಂಬಗಳಲ್ಲೂ ಮತ್ತು ಇತರ ಜನಾಂಗಗಳಲ್ಲೂ ಎಷ್ಟೋ ಕುಟುಂಬಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಇದು ಕೇವಲ ಒಂದು ಜನಾಂಗಕ್ಕೆ ಸೀಮಿತವಾದ ಸಮಸ್ಯೆಯಲ್ಲ, ಇದು ಇಡೀ ಕೊಡಗಿನ ಸಾಮಾಜಿಕ ವಾಸ್ತವ. ಮೇಲೆ ಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ, “ಹಾವೂ ಸಾಯಬಾರದು, ಕೋಲೂ ಮುರಿಯಬಾರದು” ಎಂಬ ಸ್ಥಿತಿಯಲ್ಲಿ ನರಳಾಡುವಂತಹ ಪರಿಸ್ಥಿತಿ ಎಲ್ಲಾ ಕಡೆ ಇದೆ.
ಒಂದು ಕುಟುಂಬ ವ್ಯವಸ್ಥೆಯನ್ನೇ ಗಮನಿಸಿದರೆ ಈ ಅಸಮಾನತೆ ಸ್ಪಷ್ಟವಾಗಿ ಕಾಣುತ್ತದೆ. ಒಂದೇ ಕುಟುಂಬದಲ್ಲಿ ಹತ್ತು ಜನರಿದ್ದರೆ, ಮೂರು-ನಾಲ್ಕು ಜನ ಅತ್ಯಂತ ಶ್ರೀಮಂತರು, ಕೆಲವರು ಮಧ್ಯಮ ವರ್ಗದವರು, ಆದರೆ ಇಬ್ಬರು-ಮೂರು ಜನ ಮಾತ್ರ ಸಂಪೂರ್ಣ ಬಡತನದಲ್ಲಿ, ಸೂರು ಇಲ್ಲದೆ ಹೋರಾಟ ನಡೆಸುತ್ತಿದ್ದಾರೆ. ಒಂದೇ ರಕ್ತ, ಒಂದೇ ಮನೆತನದಲ್ಲಿ ಹುಟ್ಟಿದರೂ ಒಬ್ಬ ಅಗರ್ಭ ಶ್ರೀಮಂತ, ಮತ್ತೊಬ್ಬ ದಿನಗೂಲಿ ಕಾರ್ಮಿಕ. ಇದು ಕೊಡವ ಜನಾಂಗದಲ್ಲಿ ಮಾತ್ರವಲ್ಲ, ಇತರ ಜನಾಂಗಗಳಲ್ಲೂ ಕಾಣುವ ಸಾಮಾನ್ಯ ಚಿತ್ರಣ. ಇದು ಕೇವಲ ಆರ್ಥಿಕ ಅಸಮಾನತೆಯಲ್ಲ, ಇದು ಸಾಮಾಜಿಕ ಸಮತೋಲನ ತಪ್ಪಿದರ ಸಂಕೇತ.

ಈ ಅಸಮಾನತೆಯ ಜೊತೆಗೆ ಇನ್ನೊಂದು ಆತಂಕಕಾರಿ ಬೆಳವಣಿಗೆ ಎಂದರೆ ಭೂಮಿ ಮಾರಾಟ. ನಮ್ಮ ಪೂರ್ವಜರು ತಲೆತಲಾಂತರದಿಂದ ಕಾದುಕೊಂಡು ಬಂದ ಭೂಮಿ ಇಂದು ಮಾರಾಟವಾಗುತ್ತಿದೆ. ಈ ಭೂಮಿಯನ್ನು ಖರೀದಿಸುತ್ತಿರುವವರು ಬಹುತೇಕ ಹೊರ ಜಿಲ್ಲೆ ಮತ್ತು ಹೊರ ರಾಜ್ಯದವರು. ಸಾವಿರ ಕೋಟಿ ಆಸ್ತಿ ಹೊಂದಿರುವ ನಮ್ಮೂರಿನ ಉದ್ಯಮಿಗಳು ಇರುವಾಗಲೂ, ನಮ್ಮ ಕೊಡಗಿನ ಭೂಮಿ ನಮ್ಮವರಲ್ಲೇ ಉಳಿಯದಿರುವುದು ಒಂದು ಸಾಮಾಜಿಕ ವೈಪರೀತ್ಯ.
ಇನ್ನೊಂದು ಮುಖವೆಂದರೆ ಯುವ ಜನಾಂಗದ ಕನಸುಗಳು. ಇಂದು ಪ್ರತಿಯೊಬ್ಬ ಕೊಡವ ಯುವಜನರಲ್ಲೂ, ಮತ್ತು ಇತರ ಜನಾಂಗಗಳ ಯುವಜನರಲ್ಲೂ ಒಂದು ಉದ್ಯಮದ ಕನಸಿದೆ. ಉದಾರಣೆಗೆ ವಿರಾಜಪೇಟೆಯಲ್ಲಿ ಒಂದು ಮೊಬೈಲ್ ಶಾಪ್, ಮಡಿಕೇರಿಯಲ್ಲಿ ಒಂದು ಬಟ್ಟೆ ಅಂಗಡಿ, ಒಂದು ಒಳ್ಳೆಯ ಕಾಫಿ-ಟೀ ಶಾಪ್, ಕುಶಾಲನಗರದಲ್ಲಿ ಒಂದು ಹೋಟೆಲ್, ತನ್ನ ಹಳ್ಳಿಯಲ್ಲಿ ಒಂದು ಕಾಫಿ ಪೌಡರ್ ಯೂನಿಟ್. ಹೀಗೆ ಹಲವಾರು ಕನಸುಗಳು.. ಈ ಕನಸಿಗೆ, ಶ್ರಮಕ್ಕೆ, ಪ್ರಾಮಾಣಿಕತೆಗೆ ಯಾವುದೇ ಕೊರತೆಯಿಲ್ಲ. ತೊಡಕಾಗುವುದು ಒಂದೇ ಒಂದು ಕಡೆ – ಬಂಡವಾಳ.

ಇಂದು ಒಂದು ಸಣ್ಣ ಅಂಗಡಿ ಆರಂಭಿಸಲು ಕನಿಷ್ಠ 5 ರಿಂದ 10 ಲಕ್ಷ ರೂಪಾಯಿ ಬೇಕು. ಈ ಸಣ್ಣ ಬಂಡವಾಳದ ಕೊರತೆಯಿಂದಾಗಿ ನೂರಾರು ಕೊಡವ ಯುವಕರ ಮತ್ತು ಇತರ ಜನಾಂಗಗಳ ಯುವಕರ ಕನಸುಗಳು ಕಣ್ಣೀರಲ್ಲೇ ಕರಗಿ ಹೋಗುತ್ತಿವೆ. ಬ್ಯಾಂಕ್‌ಗಳು ಆಸ್ತಿ ಮತ್ತು ಸ್ಯೂರಿಟಿ ಕೇಳುತ್ತವೆ, ಆದರೆ ಬಡತನದಲ್ಲಿರುವ ಯುವಕನ ಬಳಿ ಆಸ್ತಿ ಎಲ್ಲಿಂದ ಬರಬೇಕು? ಪರಿಣಾಮವಾಗಿ ಆತ ಬೆಂಗಳೂರು, ಮೈಸೂರು, ಕೊಡಗು ಭಾಗದಲ್ಲಿ ಬೇರೆ ಒಬ್ಬರ ಕೈ ಕೆಳಗಡೆ 15 ಸಾವಿರ ಸಂಬಳದ ಕೆಲಸಗಾರನಾಗುತ್ತಾನೆ. ಒಬ್ಬ ಉದ್ಯಮಿಯಾಗಬೇಕಿದ್ದವನು ಕೆಲಸಗಾರನಾಗುತ್ತಾನೆ.
ಈ ಸಾಮಾಜಿಕ ಅಸಮಾನತೆಯನ್ನು ಸರಿದೂಗಿಸಲು ಇರುವ ಒಂದು ಪ್ರಾಯೋಗಿಕ ಮಾದರಿ ಎಂದರೆ – ಒಬ್ಬೊಬ್ಬ ಉದ್ಯಮಿಯು ಒಂದು ಕೋಟಿ ಪ್ಲಸ್ ಹೂಡಿಕೆಯ ಚಿಂತನೆ. 100 ಕೋಟಿ, 1000 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಒಬ್ಬ ಉದ್ಯಮಿ ತನ್ನ ವಾರ್ಷಿಕ ಲಾಭದಲ್ಲಿ ಒಂದು ಕೋಟಿ ಪ್ಲಸ್ ಹಣವನ್ನು ತನ್ನ ಸಮುದಾಯದ, ತನ್ನ ಊರಿನ ಅಭಿವೃದ್ಧಿಗೆ ಮೀಸಲಿಟ್ಟರೆ ಆಗುವ ಬದಲಾವಣೆ ದೊಡ್ಡದು. ಇದು ದಾನವಲ್ಲ, ಇದು ಸಾಮಾಜಿಕ ಮರುಹೂಡಿಕೆ. ಕೊಡವ ಉದ್ಯಮಿಗಳು ಕೊಡವ ಸಮುದಾಯಕ್ಕೆ, ಇತರ ಜನಾಂಗಗಳ ಉದ್ಯಮಿಗಳು ತಮ್ಮ ತಮ್ಮ ಸಮುದಾಯಕ್ಕೆ, ಹೀಗೆ ಪ್ರತಿಯೊಬ್ಬ ಉದ್ಯಮಿಯೂ ತನ್ನ ಜನರನ್ನು ಮೊದಲು ಮೇಲೆತ್ತಿದರೆ, ಇಡೀ ಕೊಡಗು ಮೇಲೆ ಬರುತ್ತದೆ.

ಒಂದು ಕೋಟಿ ಪ್ಲಸ್ ಹಣದಲ್ಲಿ ಏನು ಮಾಡಬಹುದು ಎಂಬುದಕ್ಕೆ ಸಾಮಾಜಿಕ ಲೆಕ್ಕಾಚಾರ ಹೀಗಿದೆ.. ಒಂದು ಕೋಟಿಯಲ್ಲಿ ನಾಲ್ಕು ಬಡ ಕುಟುಂಬಗಳಿಗೆ ಸೂರು ಕಟ್ಟಿಸಿಕೊಡಬಹುದು. ಒಂದು ಮನೆ ಸಿಕ್ಕರೆ ಆ ಕುಟುಂಬದ ಮೂರು ತಲೆಮಾರುಗಳು ಬಡತನದಿಂದ ಹೊರಬರುತ್ತವೆ. ಅದೇ ಒಂದು ಕೋಟಿಯಲ್ಲಿ 20 ಯುವಕರಿಗೆ ತಲಾ 5 ಲಕ್ಷದಂತೆ ಬಡ್ಡಿ ರಹಿತ ಬಂಡವಾಳ ನೀಡಬಹುದು. ಒಬ್ಬ ಯುವಕ ತನ್ನ ಅಂಗಡಿಯಿಂದ ತಿಂಗಳಿಗೆ 10 ಸಾವಿರ ಕಂತು ಮರುಪಾವತಿ ಮಾಡಿದರೆ, ಆ ಹಣದಿಂದ ಮತ್ತೆ ಇನ್ನೊಬ್ಬ ಯುವಕನಿಗೆ ನೆರವಾಗಬಹುದು.
ಹಣ ಎಂದಿಗೂ ಖಾಲಿ ಆಗುವುದಿಲ್ಲ, ಅದು ಒಂದು ನಿರಂತರ ನಿಧಿಯಾಗಿ ಬೆಳೆಯುತ್ತದೆ. ಜೊತೆಗೆ ಮಾರಾಟಕ್ಕೆ ಬರುವ ಎರಡು ಎಕರೆ ಕೊಡಗಿನ ಭೂಮಿಯನ್ನು ಖರೀದಿಸಿ ಅದೇ ಊರಿನ ಬಡ ರೈತನಿಗೆ ಗುತ್ತಿಗೆಗೆ ನೀಡಿದರೆ, ಭೂಮಿಯೂ ಉಳಿಯುತ್ತದೆ, ಬದುಕೂ ಉಳಿಯುತ್ತದೆ.

ಕೊಡಗಿನಲ್ಲಿ ಇಂತಹ 100 ಜನ ದೊಡ್ಡ ಉದ್ಯಮಿಗಳಿದ್ದಾರೆ ಎಂದು ಅಂದಾಜಿಸಿದರೆ, ಒಬ್ಬೊಬ್ಬರು ಒಂದು ಕೋಟಿ ಪ್ಲಸ್ ಹಾಕಿದರೆ ಒಂದು ವರ್ಷಕ್ಕೆ 100 ಕೋಟಿ ಸಾಮಾಜಿಕ ನಿಧಿಯಾಗುತ್ತದೆ. ಈ 100 ಕೋಟಿಯಿಂದ 400 ಕುಟುಂಬಗಳಿಗೆ ಮನೆ, 2000 ಯುವಕರಿಗೆ ಅಂಗಡಿ, 200 ಎಕರೆ ಕೊಡಗಿನ ಭೂಮಿಯ ಸಂರಕ್ಷಣೆ ಸಾಧ್ಯವಾಗುತ್ತದೆ. ಐದು ವರ್ಷದಲ್ಲಿ ಈ ಮಾದರಿಯಿಂದ ಇಡೀ ಕೊಡಗನ್ನು ಬಡತನ ರೇಖೆಯಿಂದ ಮೇಲೆತ್ತುವ ಸಾಮಾಜಿಕ ಪರಿವರ್ತನೆ ಸಾಧ್ಯ.
ಈ ಚಿಂತನೆಯ ಹಿಂದಿರುವ ತತ್ವ ಸರಳವಾಗಿದೆ. ಎಷ್ಟೇ ಕೋಟಿ ಸಂಪಾದಿಸಿದರೂ ಕೊನೆಯಲ್ಲಿ ಶ್ರೀಮಂತನಾದರೂ, ಬಡವನಾದರೂ ಎಲ್ಲರೂ ಸೇರಿ ಕೇವಲ ಒಂದು ದೇಹ ಮಾತ್ರ. ಉಳಿಯುವುದು ಮಾಡಿದ ಕೆಲಸ ಮಾತ್ರ.

ಹೊರಗೆ ಶ್ರೀಮಂತವಾಗಿ ಕಾಣುವ ಕೊಡಗು ಒಳಗಿನಿಂದಲೂ ಶ್ರೀಮಂತವಾಗಬೇಕಾದರೆ, ಎಲ್ಲಾ ಜನಾಂಗಗಳೊಳಗಿನ ಆರ್ಥಿಕ ಅಸಮಾನತೆಯನ್ನು ಸಮತೋಲನಗೊಳಿಸಬೇಕಾಗಿದೆ. ಇದರಲ್ಲಿ ಕೊಡವ ಸಮುದಾಯದ ಪಾತ್ರ ಬಹಳ ದೊಡ್ಡದು, ಏಕೆಂದರೆ ಕೊಡಗಿನ ಮೂಲ ನಿವಾಸಿಗಳಾಗಿ, ಹೆಚ್ಚಿನ ಉದ್ಯಮಿಗಳು ಈ ಸಮುದಾಯದಲ್ಲಿದ್ದಾರೆ. ಕೊಡವರು ಮುಂದೆ ಬಂದರೆ ಇತರ ಜನಾಂಗಗಳಿಗೂ ಅದು ಮಾದರಿಯಾಗುತ್ತದೆ. ಭೂಮಿ ಉಳಿಯಬೇಕು, ಯುವಕರ ಕನಸು ಉಳಿಯಬೇಕು, ಎಲ್ಲಾ ಜನಾಂಗದ ಕುಟುಂಬಗಳು ಬಡತನದಿಂದ ಹೊರಬರಬೇಕು. ಒಬ್ಬೊಬ್ಬ ಉದ್ಯಮಿಯ ಒಂದು ಕೋಟಿ ಪ್ಲಸ್ ಚಿಂತನೆ ಈ ಎಲ್ಲಾ ಸಮಸ್ಯೆಗಳಿಗೆ ಒಂದು ಸಾಮಾಜಿಕ ಪರಿಹಾರವಾಗಬಲ್ಲದು.









