CrimeLatestMysore

ಮೈಸೂರಿನಿಂದ ಹಳ್ಳಿ ಹಳ್ಳಿಗೂ ಗಾಂಜಾ ಸಪ್ಲೈ… ಮನುಗನಹಳ್ಳಿ ಬಳಿ ಆರೋಪಿ ಅರೆಸ್ಟ್

ಹುಣಸೂರು(ಮನುಕುಮಾರ್):  ಮೈಸೂರಿನಿಂದ ನೇರವಾಗಿ ಗ್ರಾಮೀಣ ಭಾಗಕ್ಕೆ ಗಾಂಜಾವನ್ನು ತಂದು ಮಾರಾಟ ಮಾಡುವ ಮೂಲಕ ಹಳ್ಳಿ ಜನರ ಬದುಕನ್ನೇ ಮೂರಾಬಟ್ಟೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಈತನ ಬಂಧನದಿಂದ ಗಾಂಜಾ ಜಾಲ ಹಳ್ಳಿ, ಹಳ್ಳಿಗೂ ವಿಸ್ತರಿಸಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಈಗಾಗಲೇ ತಾಲೂಕಿನಾದ್ಯಂತ ಯುವ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕ ವಸ್ತುಗಳ ಜಾಲದ ವಿರುದ್ಧ ಹುಣಸೂರು ಪೊಲೀಸ್ ಉಪ-ವಿಭಾಗದ ಪೊಲೀಸರು ಸಮರ ಸಾರಿದ್ದು, ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಮೇತ ಗ್ರಾಮೀಣ ಪ್ರದೇಶಕ್ಕೆ ಗಾಂಜಾ ಘಾಟು ಹರಡುತ್ತಿದ್ದ ಇಮ್ರಾನ್ ಬಾಷಾ ಎಂಬಾತನನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಬಿಳಿಕೆರೆ ಪೊಲೀಸ್ ಠಾಣೆಯ ಪಿಎಸ್ಐ ಪುನೀತ್ ಟಿ.ಎಂ. ನೇತೃತ್ವದ ತಂಡವು ಸೆಪ್ಟೆಂಬರ್ 21 ರಂದು ಮನುಗನಹಳ್ಳಿ ಗ್ರಾಮದಿಂದ ಗೊಮ್ಮಟಗಿರಿ ಕಡೆಗೆ ಹೋಗುವ ರಸ್ತೆಯಲ್ಲಿ ದಾಳಿ ನಡೆಸಿದೆ. ಈ ವೇಳೆ ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ ಮಾಡಿ ಸಾರ್ವಜನಿಕರಿಗೆ ಮತ್ತು ಯುವಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿ ಇಮ್ರಾನ್ ಬಾಷಾ ಬಿನ್ ಫಯಾಜ್ ಬಾಷಾ(38)   ಮೈಸೂರಿನ ಅಜೀಜ್ ಸೇಟ್ ನಗರದ ಬೀಡಿ ಕಾಲೋನಿಯ 4ನೇ ಕ್ರಾಸ್ ನ ನಿವಾಸಿಯಾಗಿದ್ದಾನೆ. ಈತ ಮೈಸೂರಿನಿಂದ ಗಾಂಜಾವನ್ನು ತಂದು ಹುಣಸೂರು ತಾಲೂಕಿನ ಹಳ್ಳಿಗಳಲ್ಲಿ ರಹಸ್ಯವಾಗಿ ಮಾರಾಟ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪೊಲೀಸರು ಆರೋಪಿಯಿಂದ ಒಟ್ಟು 2 ಕೆಜಿ 250 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು ರೂ. 1,25,000 ಎಂದು ಅಂದಾಜಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ KA-09 AA-3180 ನೋಂದಣಿ ಸಂಖ್ಯೆಯ ಪ್ಯಾಸೆಂಜರ್ ಆಟೋ ರಿಕ್ಷಾವನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ರೂ. 2 ಲಕ್ಷ ಎಂದು ಅಂದಾಜಿಸಲಾಗಿದೆ. ಒಟ್ಟು 3.25 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 308/2026 ಕಲಂ 20(b) NDPS ಕಾಯ್ದೆ 1985 (ಮಾದಕ ದ್ರವ್ಯ ಮತ್ತು ಅಮಲು ಪದಾರ್ಥ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗಾಂಜಾ ಮಾರಾಟ ಮತ್ತು ಸಾಗಾಟ ಗಂಭೀರ ಅಪರಾಧವಾಗಿದ್ದು, NDPS ಕಾಯ್ದೆಯಡಿ 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ. ಹುಣಸೂರು ತಾಲೂಕಿನಲ್ಲಿ ಇತ್ತೀಚೆಗೆ ಯುವಕರಲ್ಲಿ ಗಾಂಜಾ ಸೇವನೆ ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು.

ಪೊಲೀಸ್ ಅಧಿಕಾರಿಗಳ ಶ್ಲಾಘನೆ..

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ, ಹುಣಸೂರು ಉಪ-ವಿಭಾಗದ ಡಿವೈಎಸ್ಪಿ ರವರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಪುನೀತ್ ಟಿ.ಎಂ. ಜೊತೆಗೆ ಸಿಪಿಸಿ-204, ಸಿಪಿಸಿ-297, ಸಿಪಿಸಿ-103 ಮತ್ತು ಎಎಸ್ಐ-83 ರವರು ಭಾಗವಹಿಸಿದ್ದರು. ಆರೋಪಿಯ ಹಿನ್ನೆಲೆ ಮತ್ತು ಈತನಿಗೆ ಇನ್ನೂ ಎಷ್ಟು ಜನರ ಜಾಲವಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸಾರ್ವಜನಿಕರು ಎಲ್ಲಾದರೂ ಗಾಂಜಾ, ಮಾದಕ ವಸ್ತು ಮಾರಾಟ ಕಂಡುಬಂದಲ್ಲಿ ತಕ್ಷಣ ಬಿಳಿಕೆರೆ ಪೊಲೀಸ್ ಠಾಣೆಗೆ ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ