ArticlesLatestState

ಪ್ರಶಸ್ತಿ ಮೀರಿದ ಸೇವೆ.. ಆನೆ ಡಾಕ್ಟರ್ ಡಾ. ಬಿ.ಸಿ. ಚಿಟ್ಟಿಯಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ!

ಕೊಡಗಿನ ಮಣ್ಣಿನಲ್ಲಿ ಹುಟ್ಟಿ, ಕಾಡನ್ನೇ ಮನೆ ಮಾಡಿಕೊಂಡು ಮೂರು ದಶಕಗಳಿಗೂ ಹೆಚ್ಚು ಕಾಲ ವನ್ಯಜೀವಿಗಳ ಸೇವೆಯಲ್ಲೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾನ್ ಚೇತನ ಡಾ. ಬಿ.ಸಿ. ಚಿಟ್ಟಿಯಪ್ಪ. ಅವರ ಹೆಸರು ಕೇಳಿದರೆ ಇಂದಿಗೂ ಕಾಡಿನ ಆನೆಗಳಿಗೂ ಗೌರವ, ಕಾಡಂಚಿನ ಜನರಿಗೂ ಭರವಸೆ.

1985ರಿಂದ 2014ರವರೆಗೆ ಅರಣ್ಯ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ, ನಂತರ ಕೊಡಗು ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರೂ, ಅವರ ನಿವೃತ್ತಿ ಕೇವಲ ಸರ್ಕಾರಿ ದಾಖಲೆಯಲ್ಲಿ ಮಾತ್ರ. ಇಂದಿಗೂ ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಲ್ಲಿ ಒಂದು ಕರೆ ಬಂದರೆ ಸಾಕು, ವಯಸ್ಸನ್ನು ಲೆಕ್ಕಿಸದೆ ಧಾವಿಸಿ ಬಂದು ಆನೆಗಳಿಗೆ ಚಿಕಿತ್ಸೆ ನೀಡುವ ಅವರ ಸೇವಾ ಮನೋಭಾವ ನಿಜಕ್ಕೂ ಅನುಕರಣೀಯ.

ಅವರ ಸಾಧನೆಯ ಬಗ್ಗೆ ಹೇಳಬೇಕೆಂದರೆ ಅದು ಒಂದು ಇತಿಹಾಸವೇ. ರಾಜ್ಯ ಮಾತ್ರವಲ್ಲದೆ ಛತ್ತೀಸ್‌ಗಢ, ಒರಿಸ್ಸಾ, ತಮಿಳುನಾಡು, ಪಶ್ಚಿಮ ಬಂಗಾಳ, ಮಧ್ಯಪ್ರದೇಶಗಳಲ್ಲಿ ಮನುಷ್ಯರ ಪ್ರಾಣ ತೆಗೆದಿದ್ದ ಸುಮಾರು 300ಕ್ಕೂ ಹೆಚ್ಚು ನರಭಕ್ಷಕ ಕಾಡಾನೆಗಳನ್ನು ಸೆರೆ ಹಿಡಿದು ಪಳಗಿಸಿದ ಏಕೈಕ ಕನ್ನಡಿಗ ವೈದ್ಯ ಇವರು. ಒಟ್ಟಾರೆ ಸುಮಾರು 300ಕ್ಕೂ ಹೆಚ್ಚು ಆನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಗಳ ನೇತೃತ್ವವನ್ನು ಇವರು ಯಶಸ್ವಿಯಾಗಿ ವಹಿಸಿದ್ದಾರೆ.

ಒಂದು ಕಾಲದಲ್ಲಿ ಆನೆಗಳನ್ನು ಹಿಡಿಯಲು ಕ್ರೂರ ಖೆಡ್ಡಾ ಪದ್ಧತಿ ಇತ್ತು. ಅದನ್ನು ನಿಲ್ಲಿಸಿ, ಬಂದೂಕಿನ ಮೂಲಕ ಅರಿವಳಿಕೆ ಮದ್ದು ನೀಡಿ ವೈಜ್ಞಾನಿಕವಾಗಿ ಆನೆ ಹಿಡಿಯುವ ಆಧುನಿಕ ಪದ್ಧತಿಯನ್ನು ಕರ್ನಾಟಕಕ್ಕೆ ಪರಿಚಯಿಸಿದವರೇ ಡಾ. ಚಿಟ್ಟಿಯಪ್ಪ. ಆನೆ ಮೇಲೆ ಕುಳಿತು ಇಂಜೆಕ್ಷನ್ ನೀಡಿ ಕಾಡಾನೆ ಹಿಡಿಯುವ ಧೈರ್ಯದ ಪದ್ಧತಿಯೂ ಇವರ ಕಾಲದಲ್ಲೇ ಆರಂಭವಾಯಿತು.

ಮೈಸೂರು ದಸರಾದ ವೈಭವದ ಅಂಬಾರಿ ಆನೆಗೆ ಗುಂಡೇಟು ಬಿದ್ದಾಗ ಅದಕ್ಕೆ ಚಿಕಿತ್ಸೆ ನೀಡಿ, ತರಬೇತಿ ಕೊಟ್ಟು ದೇಶದ ನಂ.1 ಅಂಬಾರಿ ಆನೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. 1973ರ ನಂತರ ನಡೆದ ಅತಿದೊಡ್ಡ ಆನೆ ಸೆರೆ ಕಾರ್ಯಾಚರಣೆ ಎಂದೇ ಖ್ಯಾತವಾದ ಹಾಸನದ ಆಲೂರು ಕಾರ್ಯಾಚರಣೆಯ ರೂವಾರಿಯೂ ಇವರೇ.

ಅವರ ಸೇವೆ ಆನೆಗಳಿಗೆ ಮಾತ್ರ ಸೀಮಿತವಾಗಿಲ್ಲ. 10 ಹುಲಿ-ಚಿರತೆಗಳು ಮತ್ತು 5 ಕರಡಿಗಳನ್ನು ಸೆರೆ ಹಿಡಿದು ಮಾನವ-ವನ್ಯಜೀವಿ ಸಂಘರ್ಷವನ್ನು ತಪ್ಪಿಸಿದ್ದಾರೆ. 200ಕ್ಕೂ ಹೆಚ್ಚು ಆನೆಗಳಿಗೆ ಫ್ರೋಗ್ಸ್ ಮಾರ್ಕಿಂಗ್ ಮಾಡಿ ಅವುಗಳ ಸಂರಕ್ಷಣೆಗೆ ಹೊಸ ದಾರಿ ತೋರಿಸಿದ್ದಾರೆ. ಅಂತಾರಾಜ್ಯ ಮಟ್ಟದಲ್ಲಿ ರೇಡಿಯೋ ಕಾಲರ್ ಅಳವಡಿಸಿದ ಮೊದಲಿಗರಲ್ಲಿ ಇವರೂ ಒಬ್ಬರು.

ಈ ಎಲ್ಲಾ ಅಪ್ರತಿಮ ಸೇವೆಗಾಗಿ ಇವರಿಗೆ ದಕ್ಷಿಣ ಭಾರತದ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿ ಲಭಿಸಿದೆ. ‘ಆನೆ ಡಾಕ್ಟರ್ ಆತ್ಮಕಥೆ’ ಎಂಬ ಅವರ ಜೀವನ ಚರಿತ್ರೆಯ ಪುಸ್ತಕವು ಇಂದಿನ ಯುವ ಪೀಳಿಗೆಗೆ ಕಾಡಿನ ಪಾಠವನ್ನು ಹೇಳುತ್ತಿದೆ. ಇತ್ತೀಚೆಗೆ 2023ರಲ್ಲಿ ದುಬಾರೆ ಶಿಬಿರದಲ್ಲಿ ಗಾಯಗೊಂಡಿದ್ದ ಗೋಪಿ ಆನೆಗೆ ಚಿಕಿತ್ಸೆ ನೀಡಿದ್ದು ಕೂಡ ಇವರೇ.

ಇಷ್ಟು ವರ್ಷ ಕಾಡಿನಲ್ಲಿ ಪ್ರಾಣವನ್ನು ಪಣಕ್ಕಿಟ್ಟು ದುಡಿದರೂ, ಇವರಿಗೆ ಕೊಡಗು ಜಿಲ್ಲಾಡಳಿತವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ. ಪ್ರಶಸ್ತಿಗಿಂತ ಅವರ ಸೇವೆಯೇ ದೊಡ್ಡದಾದರೂ, ಸರ್ಕಾರದಿಂದ ಸಿಗುವ ಒಂದು ಗೌರವವು ಮುಂದಿನ ತಲೆಮಾರಿಗೆ ಸ್ಫೂರ್ತಿಯಾಗುತ್ತದೆ.

ಆದ್ದರಿಂದ ಜನಮನ ಕನ್ನಡ ವೆಬ್ಸೈಟ್ ವಾಹಿನಿ ವತಿಯಿಂದ ನಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಒತ್ತಾಯಪೂರ್ವಕವಾಗಿ ಮನವಿ ಮಾಡುತ್ತೇವೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ಬಿ.ಸಿ. ಚಿಟ್ಟಿಯಪ್ಪ ಅವರನ್ನು ಪರಿಗಣಿಸಿ, ಕೊಡಗಿನ ಈ ಹೆಮ್ಮೆಯ ಪುತ್ರನಿಗೆ ಸೂಕ್ತ ಗೌರವ ನೀಡಬೇಕು. ಇದು ಒಬ್ಬ ವ್ಯಕ್ತಿಗೆ ನೀಡುವ ಪ್ರಶಸ್ತಿಯಲ್ಲ, ಕಾಡು ಉಳಿಸಿದ, ನಾಡು ಉಳಿಸಿದ, ಮನುಷ್ಯ ಮತ್ತು ವನ್ಯಜೀವಿಗಳ ನಡುವೆ ಬದುಕಿನ ಸೇತುವೆ ಕಟ್ಟಿದ ಒಬ್ಬ ನೈಜ ಹೀರೋಗೆ ಸಲ್ಲುವ ನಮನವಾಗಲಿದೆ.

admin
the authoradmin

ನಿಮ್ಮದೊಂದು ಉತ್ತರ