LatestMysore

ಬಿಳಿಗೆರೆಯ ದಲಿತರ ಹೊಸ ಆಶ್ರಯ ಬಡಾವಣೆಗೆ ಸೌಲಭ್ಯ ಕಲ್ಪಿಸುವಂತೆ ಇಓಗೆ ದಸಂಸ ಮನವಿ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ  ಗಾವಡಗೆರೆ ಹೋಬಳಿ ಬಿಳಿಗೆರೆ ಗ್ರಾಮದ ಪರಿಶಿಷ್ಟ ಮಾದಿಗ ಸಮುದಾಯದ ಹೊಸ ಆಶ್ರಯ ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ  ಮಂಗಳವಾರ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ದಸಂಸದ ವತಿಯಿಂದ ಮನವಿ ಸಲ್ಲಿಸಲಾಯಿತು.

ತಾಲ್ಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ  ತಾಲ್ಲೂಕಿನ ಶಾಸಕರಾದ ಜಿ.ಡಿ ಹರೀಶ್ ಗೌಡ ರವರ ಸೂಚನೆ ಮೇರೆಗೆ ಬಿಳಿಗೆರೆ ಗ್ರಾಮದ ದಲಿತರ ಹೊಸ ಬಡಾವಣೆಯ ಸಮಸ್ಯೆಗಳನ್ನು ಆಲಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಬಿಳಿಗೆರೆ ಗ್ರಾಮ ಪಂಚಾಯ್ತಿಗೆ ಆಗಮಿಸಿ ಸಭೆ ನಡೆಸಿ ದಲಿತರ ಕುಂದು ಕೊರತೆಗಳನ್ನು ಆಲಿಸಿ ಗ್ರಾಮಸ್ಥರಿಂದ ಹಾಗೂ ದಸಂಸ ದಿಂದ ಮನವಿ ಸ್ವೀಕರಿಸಿ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೂಡಲೇ ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಪಿಡಿಒ ಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ದಸಂಸ ದ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ  ಮಾತನಾಡಿ ಬಿಳಿಗೆರೆ ಗ್ರಾಮದ 65 ದಲಿತ ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನಗಳ ಹಕ್ಕುಪತ್ರಗಳನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಈ ನಿವೇಶನದ ಫಲಾನುಭವಿಗಳಿಗೆ ಪಂಚಾಯ್ತಿ ವತಿಯಿಂದ ಇ-ಸ್ವತ್ತು ಸಹ ಮಾಡಲಾಗಿದೆ.

ಹೊಸ ಆಶ್ರಯ ಬಡಾವಣೆಯಲ್ಲಿ ಗಿಡಗಂಟಿಗಳು ಬೆಳೆದು ನಿಂತು ನಿವೇಶನಗಳೇ ಕಾಣುವ ಸ್ಥಿತಿಯಲ್ಲಿಲ್ಲ. ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಬೀದಿ ದೀಪ, ಮುಂತಾದ ಸೌಲಭ್ಯಗಳಿಲ್ಲದೆ ದಲಿತ ಕುಟುಂಬಗಳು ವಾಸ ಮಾಡಲು ಆಗುತ್ತಿಲ್ಲ. ದಸಂಸ  ಮತ್ತು ತಾಲ್ಲೂಕು ಆದಿಜಾಂಬವ ಸಂಘವು ಕಳೆದ 10 ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡಿದ ಫಲವಾಗಿ ಬಿಳಿಗೆರೆ ಗ್ರಾಮದ ದಲಿತ ಕುಟುಂಬಗಳಿಗೆ ನಿವೇಶನಗಳು ಕಲ್ಪಿಸಿಕೊಡಲಾಗಿದೆ. ಒಂದೊಂದು ಮನೆಯಲ್ಲಿ 4-5 ಮನೆಗಳು ಇಕ್ಕಟ್ಟಿನಲ್ಲಿ ವಾಸ ಮಾಡುತ್ತಿದ್ದ ದಲಿತರು ಹೊಸದಾಗಿ ಹಕ್ಕುಪತ್ರ ಕೊಟ್ಟಿದ್ದರೂ ಅದೇ ಸ್ಥಿತಿಯಲ್ಲಿ ವಾಸ ಮಾಡುತ್ತಿದ್ದಾರೆ.

ಕೂಡಲೇ ಅಧಿಕಾರಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿರುವ ಬಿಳಿಗೆರೆ ಗ್ರಾಮದ ಹೊಸ ಬಡಾವಣೆಗೆ ಕೂಡಲೇ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ದಲಿತರು ಘನತೆ ಮತ್ತು ಗೌರವದಿಂದ ಬದುಕುವಂತೆ ಅನುಕೂಲ ಮಾಡಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಇಂಜಿನಿಯರ್ ರಾಜೇಂದ್ರ, ಹೌಸಿಂಗ್ ಅಧಿಕಾರಿ ಲೋಕೇಶ್, ಬಿಳಿಗೆರೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶೀಲಾ, ಕಾರ್ಯದರ್ಶಿ ಆನಂದ್, ಬಿಳಿಗೆರೆ ಗ್ರಾಮದ ದಲಿತ ಮುಖಂಡರುಗಳಾದ ಮೋಹನ, ಯ. ಸಣ್ಣಯ್ಯ, ತಮ್ಮಣ್ಣಯ್ಯ, ಪುಟ್ಟಯ್ಯ, ರಾಜಯ್ಯ, ಸಣ್ಣತಮ್ಮಯ್ಯ, ಪುಟ್ಟಯ್ಯ, ದೊಡ್ಡತಮ್ಮಯ್ಯ, ಚಂದ್ರ, ಸಣ್ಣಯ್ಯ, ಚೆಲುವರಾಜು, ರಾಮಯ್ಯ, ಹರೀಶ, ದೇವರಾಜು, ಸಂದೇಶ, ವೀರಭದ್ರಯ್ಯ, ಮಹೇಶ ಮುಂತಾದವರು ಹಾಜರಿದ್ದರು.

admin
the authoradmin

Leave a Reply

Translate to any language you want