LatestNews

ಕೊಡಗಿನ ಗಾಜಿನ ಸೇತುವೆ ಪರಿಶೀಲಿಸಿದ ಡಿಸಿ ಎಸ್.ಜೆ.ಸೋಮಶೇಖರ್  ಕಟ್ಟುನಿಟ್ಟಿನ ಆದೇಶ

ಮಡಿಕೇರಿ: ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಕೊಡಗಿನ ಹೆಸರನ್ನು ರಾಜ್ಯದಾದ್ಯಂತ ಪಸರಿಸುವಂತೆ ಮಾಡಿದ್ದ ಮಡಿಕೇರಿ ತಾಲೂಕಿನ ಗಾಜಿನ ಸೇತುವೆ ಮತ್ತು ಮಾಂದಲ್‌ಪಟ್ಟಿಗೆ ತೆರಳಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಪರಿಶೀಲನೆ ನಡೆಸಿದ್ದಾರೆ.

ಮೊದಲಿಗೆ ಅಬ್ಬಿ ಜಲಪಾತ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಮಾರ್ಗದ ಜಂಕ್ಷನ್ ಬಳಿಯ ಗಾಜಿನ ಸೇತುವೆ ವೀಕ್ಷಿಸಿದ ಜಿಲ್ಲಾಧಿಕಾರಿ ಅವರು ಗಾಜಿನ ಸೇತುವೆ ನಿರ್ಮಾಣ ಮಾಡಿರುವ ಜಾಗ, ಗಾಜಿನ ಸೇತುವೆ ನಿರ್ಮಾಣ ಮಾಡಲು ಅನುಮತಿ ಪಡೆಯಲಾಗಿದೆಯೇ, ನಿರ್ಮಾಣ ಸಂದರ್ಭದಲ್ಲಿ ಎಂಜಿನಿಯರ್‌ಗಳ ದೃಢೀಕರಣ ಪತ್ರ, ಹಾಗೆಯೇ ಪ್ರವಾಸಿಗರ ಅನುಕೂಲಕ್ಕಾಗಿ ವಾಹನ ನಿಲುಗಡೆಗೆ ಸ್ಥಳಾವಕಾಶ, ಪ್ರವಾಸಿಗರ ವೀಕ್ಷಣೆಗೆ ಎಷ್ಟು ಕಾಲಾವಕಾಶ ಮತ್ತು ಪ್ರವಾಸಿಗರಿಗೆ ನಿಗದಿ ಮಾಡಿರುವ ಶುಲ್ಕ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಪ್ರವಾಸೋದ್ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.

ಇದಾದ ನಂತರ ಉಡೋತ್‌ಮೊಟ್ಟೆ ಬಳಿಯ ಗಾಜಿನ ಸೇತುವೆ ವೀಕ್ಷಿಸಿದ ಜಿಲ್ಲಾಧಿಕಾರಿ ಅವರು ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು. ವಾಹನ ನಿಲುಗಡೆಗೆ ಜಾಗ ಇಲ್ಲದಿರುವುದರಿಂದ ಸಾಮಾನ್ಯವಾಗಿ ಓಡಾಡುವ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಗಮನಹರಿಸಬೇಕು. ಪ್ರವಾಸೋದ್ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಮಳೆಗಾಲದಲ್ಲಿ ಮುನ್ನೆಚ್ಚರ ವಹಿಸುವ ಸಂಬಂಧ ಈ ಎರಡು ಗಾಜಿನ ಸೇತುವೆ ವೀಕ್ಷಣೆಗೆ ಈ ಹಿಂದೆ ನಿರ್ಬಂಧ ಹೇರಲಾಗಿತ್ತು, ಈ ಬಗ್ಗೆ ಮರುಪರಿಶೀಲಿಸಿ, ಪ್ರವಾಸಿಗರು ಮತ್ತು ಎಲ್ಲರ ಹಿತಾಸಕ್ತಿ ಕಾಪಾಡುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಲಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಅಬ್ಬಿಪಾಲ್ಸ್ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಜಂಕ್ಷನ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಾಂದಲ್ ಪಟ್ಟಿಗೆ ತೆರಳುವ ಜೀಪುಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಪ್ರವಾಸಿಗರಿಂದ ಬಾಡಿಗೆ ದರ ಎಷ್ಟು ಪಡೆಯಲಾಗುತ್ತಿದೆ. ವಾಹನ ಮತ್ತು ಚಾಲಕರಿಗೆ ಪರವಾನಗಿ ಇದೆಯೇ ಎಂದು ಮತ್ತಿತರ ಬಗ್ಗೆ ಚಾಲಕರಿಂದ ಮಾಹಿತಿ ಪಡೆದರು.

ಸುರಕ್ಷತೆಗೆ ಒತ್ತು ನೀಡಬೇಕು. ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡಬಾರದು. ದೂರುಗಳು ಬರದಂತೆ ಎಚ್ಚರವಹಿಸಬೇಕು ಎಂದು ನಿರ್ದೇಶನ ನೀಡಿದರಲ್ಲದೆ, ಬಳಿಕ ಕಡಗದಾಳು ಬಳಿ ರೆಸಾರ್ಟ್ ಒಂದಕ್ಕೆ ಅನುಮತಿ ನೀಡುವ ಸಂಬಂಧ ಹೋಂ ಸ್ಟೇಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಕೃಷಿಯೇತರ ಚಟುವಟಿಕೆಗೆ ಭೂಮಿ ಪರಿವರ್ತನೆಯಾಗಿದೆಯೇ, ಗ್ರಾಮ ಪಂಚಾಯಿತಿಯಿಂದ ಹೋಂ ಸ್ಟೇ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದೆಯೇ, ಪೊಲೀಸ್ ಇಲಾಖೆಯಿಂದ ಎನ್‌ಒಸಿ, ವಿದ್ಯುತ್ ಪೂರೈಕೆ, ಮತ್ತಿತರ ಬಗ್ಗೆ ಮಾಹಿತಿ ಪಡೆದರು.  ಹೋಂಸ್ಟೇ ಮತ್ತು ರೇಸಾರ್ಟ್‌ನಲ್ಲಿ ಸುರಕ್ಷತೆ ಸಂಬಂಧ ಸಿಸಿಟಿವಿ, ನೋಂದಣಿ ಪುಸ್ತಕ, ದೂರು ನಿರ್ವಹಣಾ ಪುಸ್ತಕ, ವಿದೇಶಿ ಪ್ರವಾಸಿಗರು ಆಗಮಿಸಿದಲ್ಲಿ ಅವರ ಪಾಸ್‌ಪೋರ್ಟ್, ವಿಮಾನ ಟಿಕೆಟ್, ಗುರುತಿನ ಚೀಟಿ, ಹಾಗೆಯೇ ವಿದೇಶಿ ಪ್ರವಾಸಿಗರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡುವುದು ಮತ್ತಿತರ ಬಗ್ಗೆ ಮಾಹಿತಿ ಪಡೆದರು.

admin
the authoradmin

Leave a Reply

Translate to any language you want