CrimeLatest

ಚೆಕ್‌ ಪೋಸ್ಟ್‌ನಲ್ಲಿ ಸಿಕ್ತು ಗಾಂಜಾ…ಯುವತಿಯರನ್ನು ದಂಧೆಗೆ ದೂಡಿದ್ದ ಮಹಿಳೆ ಅರೆಸ್ಟ್

ಮೈಸೂರು: ಗಾಂಜಾದ ವಿರುದ್ಧ ಸಮರ ಸಾರಿರುವ ಮೈಸೂರು ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡುವುದರೊಂದಿಗೆ  ವ್ಯಸನಿಗಳನ್ನು ತಲುಪಲಿದ್ದ ಗಾಂಜಾವನ್ನು ತಡೆಹಿಡಿದಿದ್ದಾರೆ. ಈ ಕಾರ್ಯ ಜನ ಮೆಚ್ಚುಗೆಗೆ ಕಾರಣವಾಗಿದೆ.

ಈಗಾಗಲೇ ಮೈಸೂರಿಗೆ ಡ್ರಗ್ಸ್ ಕಾಲಿಟ್ಟು ಹತ್ತು ಹಲವು ಆವಾಂತರಗಳನ್ನು ಸೃಷ್ಟಿ ಮಾಡಿದೆ. ಇಲ್ಲಿದ್ದ ಡ್ರಗ್ಸ್ ಫ್ಯಾಕ್ಟರಿಗಳ ಬಗ್ಗೆಯೂ ಸುದ್ದಿಯಾಗಿತ್ತು. ಹೀಗಾಗಿ ಮಾದಕ ವಸ್ತುಗಳ ಮೇಲೆ ಕಣ್ಣಿಟ್ಟಿರುವ ಪೊಲೀಸರು ಆಗಾಗ್ಗೆ ಗಾಂಜಾ, ಡ್ರಗ್ಸ್ ಪ್ರಕರಣಗಳನ್ನು ಪತ್ತೆ ಹಚ್ಚುತ್ತಲೇ ಇದ್ದಾರೆ. ಆದರೂ ರಂಗೋಲಿ ಕೆಳಗೆ ತೂರುವ ಖದೀಮರು ಇಲ್ಲದಿಲ್ಲ. ಇದೀಗ ಅಂತಹ ನಾಲ್ವರು ಗಾಂಜಾ ಮಾರಾಟಗಾರರನ್ನು ಹೆಡೆಮುರಿಗೆ ಕಟ್ಟಿದ್ದಲ್ಲದೆ 1.60 ಕೋಟಿ ರೂ ಮೌಲ್ಯದ 280 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರದ ಬನ್ನೂರು ಚೆಕ್‌ಪೋಸ್ಟ್ ಬಳಿ ಮೈಸೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆ ಇದಾಗಿದೆ  ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಅಕ್ರಮವಾಗಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಗಾಂಜಾವನ್ನು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ.

ಕಾರ್ಯಾಚರಣೆ ವೇಳೆ ಗಾಂಜಾ ಸಾಗಣೆಗೆ ಬಳಸುತ್ತಿದ್ದ ಒಂದು ಕಾರು ಮತ್ತು ಒಂದು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅಂತಾರಾಜ್ಯ ಜಾಲದ ಶಂಕೆ ವ್ಯಕ್ತವಾಗಿದೆ. ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಒಂದು ವೇಳೆ ಈ ಮಾಲು ಚೆಕ್ ಪೋಸ್ಟ್ ದಾಟಿದ್ದರೆ ತಲುಪಬೇಕಾದ ಜಾಗಕ್ಕೆ ಸುಲಭವಾಗಿ ತಲುಪುತ್ತಿತ್ತೇನೋ? ಸದ್ಯ ಪೊಲೀಸರ ಕಾರ್ಯಾಚರಣೆಯಿಂದ ಅದಕ್ಕೆ ಬ್ರೇಕ್ ಹಾಕಿದೆ. ಈ ಗಾಂಜಾ ಎಲ್ಲಿಂದ ಬಂತು? ಇದರ ಹಿಂದೆ ಯಾರಿದ್ದಾರೆ? ಎಂಬಿತ್ಯಾದಿ ವಿವರಗಳನ್ನು ಪೊಲೀಸರು ಕಲೆಹಾಕಿ ಬೇರು ಸಹಿತ ಜಾಲವನ್ನು ಕಿತ್ತು ಹಾಕಬೇಕಾಗಿದೆ.

ವೇಶ್ಯಾವಾಟಿಕೆ… ಮಹಿಳೆಯ ಬಂಧನ;  ಮೂವರು ಯುವತಿಯರ ರಕ್ಷಣೆ

ಮೈಸೂರು: ಒಂದೆಡೆ ಗಾಂಜಾ ಪ್ರಕರಣವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದರೆ ಮತ್ತೊಂದು ಕಡೆ ಮೈಸೂರಿನ ಪ್ರತಿಷ್ಠಿತ ಬಡವಾಣೆ ಎಂದೇ ಕರೆಯಿಸಿಕೊಳ್ಳುವ ವಿಜಯನಗರದ 4ನೇ ಹಂತದಲ್ಲಿ ಯುವತಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿ ದಂಧೆಯ ಕಿಂಗ್ ಪಿನ್ ಮಹಿಳೆಯನ್ನು ಬಂಧಿಸಿ ಅಲ್ಲಿದ್ದ ಮೂವರು ಯುವತಿಯರನ್ನು  ಪೊಲೀಸರು ರಕ್ಷಿಸಿದ್ದಾರೆ.

ವಿಜಯನಗರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುವುದು ಹೊಸದೇನಲ್ಲ. ಇಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಬಳಿಕ ಅಲ್ಲಿ ವೇಶ್ಯಾವಾಟಿಕೆ ನಡೆಸುವುದು ಮೊದಲಿನಿಂದಲೂ ನಡೆಯುತ್ತಿದ್ದು, ಮಟ್ಟ ಹಾಕುವುದು ಪೊಲೀಸರಿಗೂ ಸವಾಲ್ ಆಗಿ ಪರಿಣಮಿಸಿದೆ.

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕೊಡಗಿನ ಹೋಂಸ್ಟೇನಲ್ಲಿ ಗ್ಯಾಸ್ ಗೀಸರ್ ಸೋರಿಕೆಗೆ ಮೈಸೂರು ಯುವತಿ ಬಲಿ… ಆಗಿದ್ದೇನು?

admin
the authoradmin

Leave a Reply