ಕೆ.ಆರ್.ನಗರ(ಜಿಟೆಕ್ ಶಂಕರ್): ಎಂಟು ವರ್ಷ ಮುಖ್ಯಮಂತ್ರಿಗಳಾಗಿ, ಐದು ವರ್ಷ ವಿರೋಧ ಪಕ್ಷ ನಾಯಕರಾಗಿ ಕೆಲಸ ಮಾಡಿದ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸುವಾಗ ಕಾಂಗ್ರೆಸ್ ಪಕ್ಷದವರು ಕನಿಷ್ಠ ಸೌಜನ್ಯವನ್ನು ತೋರಿಸಲಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನೂತನ ಒಕ್ಕಲಿಗ ಸಮುದಾಯ ಭವನವನ್ನು ಉದ್ಘಾಟಿಸಿ ಆನಂತರ ಮಾತನಾಡಿದ ಕೇಂದ್ರ ಸಚಿವರು ಕಾಂಗ್ರೆಸ್ ಪಕ್ಷದ ಇಂತಹ ವರ್ತನೆಯನ್ನು ಕುರುಬ ಸಮಾಜದ ಬಂಧುಗಳು ಸೇರಿದಂತೆ ಇತರ ಸಮಾಜದ ಎಲ್ಲರೂ ಸೂಕ್ಷ್ಮ ವಾಗಿ ಅವಲೋಕಿಸಿ ಅಥೈಸಿಕೊಳ್ಳಬೇಕು ಎಂದರು.
ಚುನಾವಣಾ ರಾಜಕಾರಣ ಮಾಡುವಾಗ ಯಾವ ಪಕ್ಷದವರೇ ಆದರೂ ಜಾತಿ ರಾಜಕೀಯ ಮಾಡದೆ ಅಭಿವೃದ್ಧಿ ಮತ್ತು ಜನಸೇವೆಯನ್ನು ಮಾನದಂಡವನ್ನಾಗಿಟ್ಟು ಕೊಂಡು ಕ್ಷೇತ್ರದ ಹಿತಕ್ಕೆ ದುಡಿಯುವವರಿಗೆ ಮತನೀಡಬೇಕೆಂದು ತಿಳಿಸಿದರು.
ಸಹಾಯ ಮತ್ತು ಸಹಕಾರ ಬಯಸಿ ನಮ್ಮ ಮನೆ ಬಾಗಿಲಿಗೆ ಈವರೆಗೆ ಬಂದಿರುವ ಯಾರನ್ನು ನಾನು ಜಾತಿ ಹಿನ್ನಲೆಯಿಂದ ನೋಡದೆ ನಿರಂತರ ವಾಗಿ ಸಹಾಯ ಮಾಡಿಕೊಂಡು ಬರುತ್ತಿದ್ದು ನನ್ನ ಕಾಯಕವನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಅನುಸರಿಸಿಕೊಂಡು ಹೋಗುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಳೆದ 20ವರ್ಷಗಳ ನನ್ನ ರಾಜಕೀಯ ಅನುಭವದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಅನುದಾನ ಜತೆಗೆ ಸ್ವಂತ ಹಣವನ್ನು ಖರ್ಚು ಮಾಡುವುದರ ಜತೆಗೆ ಅಧಿಕಾರಿಗಳಿಂದ ನಯಾಪೈಸೆ ಪಡೆಯದ ಜನನಾಯಕನನ್ನು ನೋಡಿದರೆ ಸಾ.ರಾ.ಮಹೇಶ್ ಮಾತ್ರ ಎಂದು ಕೊಂಡಾಡಿದ ಹೆಚ್.ಡಿ.ಕುಮಾರಸ್ವಾಮಿ ದೇಶದ ರಾಜಕೀಯ ಇತಿಹಾಸದಲ್ಲಿ ಜನಸೇವೆ ಮತ್ತು ವಿಶ್ವಾಸದ ರಾಜಕಾರಣದಲ್ಲಿ ಸಾ.ರಾ. ಮೊದಲಿಗರಾಗಿರುತ್ತಾರೆಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಳೆದ 15 ವರ್ಷಗಳಲ್ಲಿ ಸಾ.ರಾ.ಮಹೇಶ್ ಶಾಸಕ ಮತ್ತು ಸಚಿವರಾಗಿದ್ದಾಗ ತಿಪ್ಪೂರು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಮಾಡಿರುವ ಕೆಲಸಗಳ ಪಟ್ಟಿಯನ್ನು ಪಾರದರ್ಶಕ ವಾಗಿ ಜನರ ಮುಂದಿಟ್ಟಿದ್ದು ಇದಕ್ಕೆ ಪ್ರತಿಯಾಗಿ ನಿಮ್ಮ ಕೊಡುಗೆ ಏನೆಂಬುದನ್ನು ಮತದಾರರಿಗೆ ಹೇಳಬೇಕು ಎಂದು ಶಾಸಕ ಡಿ.ರವಿಶಂಕರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಬೆಂಗಳೂರು ನಗರ ಹೊರತು ಪಡಿಸಿದರೆ ತಿಪ್ಪೂರು ಗ್ರಾಮದಲ್ಲಿ ಅತಿಹೆಚ್ಚು ಜಾತಿ ಜನಾಂಗಗಳ ಜನರಿದ್ದು ನೀವೆಲ್ಲಾ ಸಾಮರಸ್ಯದಿಂದ ಬದುಕು ನಡೆಸುತ್ತಿರುವುದು ಎಲ್ಲರಿಗೂ ಮಾದರಿ ಎಂದು ಕೊಂಡಾಡಿದ ಅವರು ಒಕ್ಕಗಲಿಗ ಸಮುದಾಯ ಭವನವನ್ನು ಎಲ್ಲಾ ಸಮಾಜದವರು ಬಳಕೆ ಮಾಡಿಕೊಳ್ಳಲು ಕಡಿಮೆ ಬಾಡಿಗೆಯಲ್ಲಿ ನೀಡಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಕೆ.ಮಹದೇವ್, ಅಶ್ವಿನ್ ಕುಮಾರ್, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಬಿಜೆಪಿ ಮುಖಂಡ ಹೊಸಹಳ್ಳಿವೆಂಕಟೇಶ್, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಮೈಸೂರು ನಗರ ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು, ವಕೀಲ ತಿಮ್ಮೇಗೌಡ, ಗ್ರಾ.ಪಂ.ಮಾಜಿ ಸದಸ್ಯ ಮಂಜುನಾಥ್, ಮುಖಂಡರಾದ ಪಾರ್ಥ, ವೆಂಕಟೇಶ್, ಸತ್ಯ, ಸಿದ್ದರಾಮನಾಯಕ, ಮಹದೇವ, ರಾಜಶೇಖರ, ದಿವಾಕರ್, ಮಹದೇವ, ಮಹೇಶ್, ಕೆ.ಜೆ.ಕುಚೇಲ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸರ್ವಾಧಿಕಾರ ತೋರಿದರೆ ತಿರುಗಿ ಬೀಳುವುದು ನಮಗೂ ಗೊತ್ತಿದೆ:ಸಾ ರಾ ಮಹೇಶ್
ಮತದಾರರ ಕೈ ಕಾಲು ಹಿಡಿದು ಅನುಕಂಪ ಗಿಟ್ಟಿಸಿಕೊಂಡು ಲಾಟರಿ ಶಾಸಕರಾಗಿರುವವರು ಅಧಿಕಾರವನ್ನು ಜನ ಸೇವೆಗೆ ಸದ್ಬಳಕೆ ಮಾಡಿಕೊಳ್ಳಬೇಕು ಅದನ್ನ ಬಿಟ್ಟು ಸರ್ವಾಧಿಕಾರ ತೋರಿದರೆ ತಿರುಗಿ ಬೀಳುವುದು ನಮಗೂ ಗೊತ್ತಿದೆ ಎಂದು ಶಾಸಕ ಡಿ.ರವಿಶಂಕರ್ ವಿರುದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನೂತನ ಒಕ್ಕಲಿಗ ಸಮುದಾಯ ಭವನವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರಿ ಕಾರ್ಯಕ್ರಮ ಮತ್ತು ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳು ಮುಗಿದ ನಂತರ ತಿಂಗಳುಗಟ್ಟಲೇ ಶಾಸಕರ ಪ್ಲೇಕ್ಸ್ ಗಳನ್ನು ತೆಗೆಯದೆ ಬಿಡುತ್ತಿರುವುದನ್ನು ಮೊದಲಿಸಿದ ಮಾಜಿ ಸಚಿವರು ನೀವೇನು ಫ್ಲೆಕ್ಸ್ ರಾಜನೇ ಎಂದು ಜರಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ಮಾಡಿಸಿದ್ದ ಕಗ್ಗೆರೆ, ತಿಪ್ಪೂರು, ಕನುಗನಹಳ್ಳಿ ಗ್ರಾಮದ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ರೈತರಿಗೆ ಅನುಕೂಲವಾಗಲೆಂದು ರಾಮ ಸಮುದ್ರದ ಹಳೆಯ ನಾಲಾ ಬ್ರಾಂಚ್ ಗಳ ಲೈನಿಂಗ್ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ಕೊಡಿಸಿದ್ದೇ ಈಗಿನ ಶಾಸಕರು ಗುದ್ದಲಿ ಪೂಜೆ ಚಾಲನೆ ನೀಡಿದ್ದಾರಷ್ಟೆ ಎಂದರು.
ರಾಜಕೀಯ ನಿಂತ ನೀರಾಗದಿರುವುದರಿಂದ ನಿಮ್ಮ ಶಾಸಕ ಸ್ಥಾನ ಶಾಶ್ವತವಲ್ಲ ಎಂದು ಮಾತಿನಲ್ಲಿ ತಿವಿದ ಮಾಜಿ ಸಚಿವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಕಾರ್ಯಕರ್ತರಿಗೆ ಅನಗತ್ಯವಾಗಿ ತೊಂದರೆ ನೀಡಿದರೆ ಸುಮ್ಮನೆ ಕೂರುವ ಜಾಯಮಾನವೂ ನನ್ನದಲ್ಲ ಎಂದು ಎಚ್ಚರಿಕೆ ನೀಡಿದರು.
ಮೂರು ವರ್ಷಗಳ ಹಿಂದೆ ಇದೇ ತಿಪ್ಪೂರು ಗ್ರಾಮದಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಕರೆಯಿಸಿ ನನ್ನ ಅನುಪಸ್ಥಿತಿಯಲ್ಲಿ ಉಪ್ಪಾರರ ಸಮುದಾಯ ಭವನವನ್ನು ಉದ್ಘಾಟನೆ ಮಾಡಿಸಿದಾಗ ನಾನು ನಿಮಗೆ ಯಾವ ತೊಂದರೆ ನೀಡಿದ್ದೆ ಎಂದು ಪ್ರಶ್ನಿಸಿದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಾನು ಯಾವುದೇ ಟೀಕೆ ಮಾಡದೆ ಸುಮ್ಮನಿದೆ ಆದರೆ ಈಗ ಮಾತನಾಡುವ ಸಮಯ ಬಂದಿದೆ ಎಂದು ಕಿಡಿಕಾರಿದ ಸಾ.ರಾ.ಮಹೇಶ್ ಅಧಿಕಾರಿಗಳು ಸಹ ಶಾಸಕರ ಮಾತು ಕೇಳಿ ಅನಗತ್ಯವಾಗಿ ನಮ್ಮವರಿಗೆ ಕಿರುಕುಳ ನೀಡಲು ಮುಂದಾದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದರು.
ತಿಪ್ಪೂರು ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಕಾವೇರಿ ನದಿಯಿಂದ ಶುದ್ದ ಕುಡಿಯುವ ನೀರುಸರಬರಾಜು ಮಾಡುವ ಕಾಮಗಾರಿಗೆ 32 ಕೋಟಿ, ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆ, ಇತಿಹಾಸ ಪ್ರಸಿದ್ದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಜೀರ್ಣೋದ್ಧಾರ ಮತ್ತು ರಥಕ್ಕೆ 2,50 ಕೋಟಿ ಕೊಡಿಸಿದ್ದು ಮುಂದೆ ದೇವಾಲಯದ ಜೀರ್ಣೋದ್ಧಾರಕ್ಕೆ ತಗುಲು ಪೂರ್ಣ ಹಣವನ್ನು ನಾನು ಭರಿಸಲಿದ್ದು ಸರ್ವ ಧರ್ಮದವರು ಸಂತೋಷದಿಂದ ಹಬ್ಬವನ್ನು ಆಚರಿಸಿ ಇತರರಿಗೆ ಮಾದರಿ ಎಂದು ಕರೆ ನೀಡಿದರು.








