ಹುಣಸೂರು(ಮನುಕುಮಾರ್): ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ತಾಲೂಕು ಆಡಳಿತ, ನಗರಸಭೆ, ಸರ್ಕಾರಿ ಮಹಿಳಾ ಕಾಲೇಜು ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಅರಿವು ಜಾಥಾಕ್ಕೆ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಹಸಿರು ನಿಶಾನೆ ತೋರಿದರು.
ನಗರದ ನಗರಸಭೆ ಕಚೇರಿ ಆವರಣದಲ್ಲಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿ ಷ್ಕರಣೆಯ ಅವಧಿಯನ್ನು ಜು.29ರಿಂದ ಆ.8ರವರೆಗೆ ವಿಸ್ತರಿಸಿದೆ. ತಾಲೂಕಿನಲ್ಲಿ ಒಟ್ಟು 2,53,248 ಮತದಾರ ರಿದ್ದು, ಮ್ಯಾಪಿಂಗ್ ಪ್ರಕ್ರಿಯೆ ಶೇ.96.87ರಷ್ಟು ಆಗಿದೆ. ತಾಲೂಕಿನಲ್ಲಿ ಶೇ.100ರ ಪ್ರಮಾಣದಲ್ಲಿ ಮತದಾರರ ಗಣತಿ ನಮೂನೆ (ಎನ್ಯುಮರೇಷನ್ ಫಾರ್ಮ)ಯನ್ನು ವಿತರಿಸಲಾಗಿದ್ದು, ಈ ಪೈಕಿ ಶೇ.55.35ರಷ್ಟು ಭರ್ತಿ ಮಾಡಿದ ನಮೂನೆಗಳನ್ನು ಮತದಾರರಿಂದ ಪಡೆದು ಅವುಗಳನ್ನು ಡಿಜಿಟಲ್ಟೆಲ್ಯಜೇಷನ್ ಮಾಡಲಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಎಂ.ಮಾನಸಾ ಮಾತನಾಡಿ, ಪ್ರಜ್ಞಾವಂತ ನಾಗರಿಕರು ನಿಮ್ಮ ಮನೆ ಬಾಗಿಲಿಗೆ ಬರುವ ಬಿ.ಎಲ್.ಒ ನೀಡುವ ಎರಡು ಫಾರ್ಮಗಳನ್ನು ಪಡೆದು ಭರ್ತಿ ಮಾಡುವುದು ಕಡ್ಡಾಯವಾಗಿದ್ದು, ಈ ವಿಷಯದಲ್ಲಿ ನಾಗರಿಕರ ಸಮಗ್ರ ಚಟುವಟಿಕೆ ಮತ್ತು ಭಾಗವಹಿಸುವಿಕೆ ಅತಿ ಮುಖ್ಯವಾಗಿದೆ ಎಂದರು.

ಕಾಲೇಜು ವಿದ್ಯಾರ್ಥಿಗಳು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಜಾಥಾ ನಗರಸಭೆ ಮೈದಾನದಿಂದ ಹೊರಟು ಸಂವಿಧಾನ ವೃತ್ತ, ಹೊಸ ಬಸ್ ನಿಲ್ದಾಣದ ಮೂಲಕ ಮರಳಿ ನಗರಸಭೆ ಮೈದಾನದಲಿ ಅಂತ್ಯಗೊಂಡಿತು. ಬಸ್ ನಿಲ್ದಾಣದ ಆವರಣದಲ್ಲಿ ವಿದ್ಯಾರ್ಥಿನಿಯರು ಮತ್ತು ಅಧಿಕಾರಿಗಳು ನಾಗರಿಕ ರೊಂದಿಗೆ ಮಾನವ ಸರಪಳಿ ರಚಿಸಿದರು. ತಾ.ಪಂ.ಇಒ ಕೆ.ಹೊಂಗಯ್ಯ ಬಸ್ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎಸ್ ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೋರಿ ಕರಪತ್ರಗಳನ್ನು ವಿತರಿಸಿ ಮನವಿ ಮಾಡಿದರು.
ಜಾಥಾದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೋರೇಗೌಡ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಗಿರಿದಾಸ್, ತಾಪಂ ಯೋಜನಾಧಿಕಾರಿ ಎಂ.ಎಸ್. ರಾಜೇಶ್, ವ್ಯವಸ್ಥಾಪಕ ಮಹೇಶ್ ನಾಯಕ್, ತೋಟ ಗಾರಿಕೆ ಸಹಾಯಕ ನಿರ್ದೇಶಕ ನಾಗರಾಜು, ನಗರಸಭೆ ಪರಿಸರ ಇಂಜಿನಿಯರ್ ಸೌಮ್ಯಾ, ವಿಶೇಷಚೇತನರ ಸಬಲೀಕರಣ ಸಂಯೋಜಕ ದೇವರಾಜ್, ಸಂಜೀವಿನಿ ಒಕ್ಕೂಟದ ವ್ಯವಸ್ಥಾಪಕಿ ಮಂಜುಳಾ ನರಗುಂದ, ಆರ್ ಎಫ್ಒ ಸಂತೋಷ್ ಹೂಗಾರ್, ಮಹಿಳಾ ಕಾಲೇಜು ಪ್ರಾಂಶುಪಾಲ ರಾಜು, ಸಹಾಯಕ ಪ್ರಾಧ್ಯಾಪಕ ಕೆ.ಪಿ.ಪ್ರಸನ್ನ ಸೇರಿದಂತೆ ನಗರ ಸಭೆ, ತಾಲೂಕು ಪಂಚಾಯಿತಿ ಸಿಬ್ಬಂದಿ. ಒಕ್ಕೂಟದ ಮಹಿಳಾ ಸದಸ್ಯರು, ಪೌರ ಕಾರ್ಮಿಕರು ಮತ್ತು ನಾಗರಿಕರು ಭಾಗವಹಿಸಿದ್ದರು.








