ಹೆಣ್ಮಕ್ಕಳು ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಹುದು.. ಯಾವುದೂ ಕಠಿಣವಲ್ಲ… ಇವತ್ತು ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆ ಯಶಸ್ಸು ಕಂಡಿದ್ದಾಳೆ… ಇದೊಂದು ಕಥೆಯಂತಿರುವ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಅವರು ಬರೆದಿರುವ ಲೇಖನ ಹೆಣ್ಮಕ್ಕಳಿಗೆ ಛಲದಿಂದ ಮುನ್ನುಗ್ಗಲು ಟಾನಿಕ್ ಆಗುವುದರಲ್ಲಿ ಎರಡು ಮಾತಿಲ್ಲ…
ಕೋಳಿ ಕೂಗುವ ಮುನ್ನವೇ ಮಲೆನಾಡಿನ ಸೆರಗಿನ ಪುಟ್ಟ ಹಳ್ಳಿ ಹೂವಳ್ಳಿ ಎಚ್ಚರಗೊಳ್ಳುತ್ತಿತ್ತು. ಇಬ್ಬನಿಗೆ ಮಿಂದೆದ್ದ ರಾಗಿ ಹೊಲಗಳು ಹಸಿರು ಸೀರೆಯುಟ್ಟ ಕನ್ಯೆಯಂತೆ ಕಂಗೊಳಿಸುತ್ತಿದ್ದವು. ತಂಗಾಳಿಗೆ ತಲೆಯಾಡಿಸುವ ತೆಂಗಿನ ಗರಿಗಳು ಮುಂಜಾವಿನ ರಾಗಕ್ಕೆ ತಕ್ಕಂತೆ ನರ್ತಿಸುವ ನರ್ತಕಿಯರಂತಿದ್ದವು. ಕಲ್ಪವೃಕ್ಷಗಳ ನಡುವೆ ಹರಡುವ ಒದ್ದೆ ಮಣ್ಣಿನ ಆ ಸುಗಂಧ—ನೋಡುಗರ ಕಣ್ಣಿಗೆ ಒಂದು ಜೀವಂತ ಕಾವ್ಯದಂತಿತ್ತು. ಆದರೆ, ಇಡೀ ಊರಿಗೆ ಪ್ರಕೃತಿ ಸೌಂದರ್ಯದ ಮುನ್ನುಡಿಯಾಗಿದ್ದ ಆ ಹಳ್ಳಿಯ ಕೊನೆಯಲ್ಲಿದ್ದ ಒಂದು ಸಣ್ಣ ಗುಡಿಸಲು ಮಾತ್ರ ಹಣೆಬರಹದ ಕ್ರೂರತೆಗೆ ಸಾಕ್ಷಿಯಾಗಿ ನಿಂತಿತ್ತು.

ಅಲ್ಲಿ ಬದುಕುತ್ತಿದ್ದವಳು ಲಕ್ಷ್ಮಿ. ಅವಳ ಬಾಲ್ಯ ಬಣ್ಣದ ಕಾಗದದ ಮೇಲಲ್ಲ, ಬದಲಿಗೆ ಅವಳ ತಾಯಿ ಗಂಗಮ್ಮನ ಕೈಗಳ ಮೇಲಿದ್ದ ಕಲೆಗಳು ಮತ್ತು ಸೀಳಿದ ಕಾಲುಗಳ ನಡುವೆ ಕರಗಿ ಹೋಗುತ್ತಿತ್ತು. ಜಮೀನ್ದಾರರ ಕಬ್ಬಿನ ಗದ್ದೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಬೆನ್ನು ಬಾಗಿಸಿ, ಮೈಯೆಲ್ಲಾ ಬೆವರು ಸುರಿಸಿ ತರುತ್ತಿದ್ದ ಆ ಕೆಲವು ರೂಪಾಯಿಗಳೇ ಆ ಮನೆಯ ಒಲೆ ಉರಿಯುವಂತೆ ಮಾಡುತ್ತಿದ್ದವು.
ಆದರೆ, ಹಗಲಿಡೀ ಕಷ್ಟಪಟ್ಟು ತಂದ ಆ ನೆಮ್ಮದಿಯನ್ನು ರಾತ್ರಿಯಾಗುತ್ತಲೇ ಲಕ್ಷ್ಮಿಯ ತಂದೆ ದೇವಪ್ಪ ಸಂಪೂರ್ಣವಾಗಿ ಧೂಳೀಪಟ ಮಾಡುತ್ತಿದ್ದ. ಕುಡಿತದ ದಾಸನಾಗಿದ್ದ ಆತ ದಿನವೂ ರಾತ್ರಿ ಅಮಲೇರಿ ಮನೆಗೆ ಬಂದು, ಹಸಿದ ಹೆಂಡತಿಯ ಕೂದಲನ್ನು ಹಿಡಿದು ಎಳೆದಾಡುತ್ತಾ, ದುಡಿದ ಹಣಕ್ಕಾಗಿ ರಾಕ್ಷಸನಂತೆ ರಂಪಾಟ ಮಾಡುತ್ತಿದ್ದ. ಆ ಮನೆಯ ಗೋಡೆಗಳು ಕೇವಲ ಮಣ್ಣಿನದ್ದಾಗಿರಲಿಲ್ಲ, ಅವು ದಿನವೂ ಕಣ್ಣೀರಿನ ಸಾಗರವನ್ನು ನುಂಗುತ್ತಿದ್ದವು.

ಹಳ್ಳಿಯ ಜನ ಮತ್ತು ನೆಂಟರಿಷ್ಟರಿಗೆ ಲಕ್ಷ್ಮಿಯ ಕುಟುಂಬ ಎಂದರೆ ಕೀಳರಿಮೆ. ಅವಳು ಒಡೆದ ಬೀದಿ ದೀಪದ ಕಡುಗತ್ತಲೆಯಲ್ಲಿ ಕುಳಿತು, ಹರಿದುಹೋಗಿದ್ದ ಹಳೆಯ ಪುಸ್ತಕವನ್ನು ಹಿಡಿದು ಓದುವಾಗ ಹಳ್ಳಿಯ ದೊಡ್ಡ ಮನುಷ್ಯರು ಕುಹಕ ವಾಡುತ್ತಿದ್ದರು.
“ಕಾಗೆ ಎಂದಾದರೂ ಹಂಸ ವಾಗಲು ಸಾಧ್ಯವೇ? ಅಪ್ಪ ಚರಂಡಿ ಕುಡುಕ, ಅಮ್ಮ ಕೂಲಿ ಮಾಡ್ತಾಳೆ, ಈಕೆಗೆ ಐಎಎಸ್ ಆಫೀಸರ್ ಆಗಬೇಕಂತೆ! ಮೊದಲು ಕಸ ಗುಡಿಸೋದನ್ನು ಕಲಿ” ಎಂದು ನೆಂಟರು ಆಡಿಕೊಂಡಾಗ ಆ ಮಾತುಗಳು ಗಾಜಿನ ಚೂರಿನಂತೆ ಅವಳ ಹೃದಯವನ್ನು ಚುಚ್ಚುತ್ತಿದ್ದವು. ಆದರೆ ಲಕ್ಷ್ಮಿ ಕಣ್ಣೀರನ್ನು ಹೊರಹಾಕದೆ ಆ ನೋವನ್ನೇ ತನ್ನೊಳಗಿನ ಜ್ವಾಲೆಯನ್ನಾಗಿ ಮಾಡಿಕೊಂಡಳು.

ಲಕ್ಷ್ಮಿಯ ಬಾಳಿನ ಕಗ್ಗತ್ತಲೆಯಲ್ಲಿ ಅವಳ ಸರ್ಕಾರಿ ಶಾಲೆಯ ಶಿಕ್ಷಕರಾದ ಆನಂದ್ ಸರ್ ಹೊಸ ಭರವಸೆಯ ಬೆಳಕಾದರು. ಕುಡುಕ ತಂದೆ ಲಕ್ಷ್ಮಿಯ ಪುಸ್ತಕಗಳನ್ನು ಬೆಂಕಿಗೆ ಹಾಕಿ ಧ್ವಂಸಗೊಳಿಸಿದಾಗ, ಆನಂದ್ ಸರ್ ಹೊಸ ಪುಸ್ತಕಗಳನ್ನು ತಂದುಕೊಟ್ಟು, “ಚಿನ್ನವು ಆಭರಣವಾಗಬೇಕಾದರೆ ಬೆಂಕಿಯಲ್ಲಿ ಬೇಯಲೇಬೇಕು ಲಕ್ಷ್ಮಿ. ಇವರ ನಿಂದನೆಗಳನ್ನೇ ನಿನ್ನ ಗೆಲುವಿನ ಇಟ್ಟಿಗೆಗಳನ್ನಾಗಿ ಮಾಡಿಕೊ” ಎಂದು ಬೆನ್ನು ತಟ್ಟಿದರು. ಅವಳ ಪ್ರತಿಭೆ ಒಣಗಿದ ಭೂಮಿಗೆ ಬಿದ್ದ ಮೊದಲ ಮಳೆಯಂತೆ ಅರಳಿತು.
ಮುಂದೆ ಪಟ್ಟಣದ ಡಿಗ್ರಿ ಕಾಲೇಜಿಗೆ ಸೇರಿದಾಗ ಇಂಗ್ಲಿಷ್ ಭಾಷೆಯ ಭಯ ಅವಳನ್ನು ಕಾಡತೊಡಗಿತು. ಹೆಣ್ಣು ನವಿಲುಗಳ ಮಧ್ಯೆ ಸಿಕ್ಕಿಕೊಂಡ ಬಡ ಗುಬ್ಬಚ್ಚಿಯಂತೆ ಅವಳು ಕಗ್ಗತ್ತಲ ಕೋಣೆಯಲ್ಲಿ ದಾರಿಕಾಣದ ಹಕ್ಕಿಯಂತೆ ಕೊನೆಯ ಬೆಂಚ್ನಲ್ಲಿ ಮುದುರಿ ಕುಳಿತಿರುತ್ತಿದ್ದಳು. ಆ ಸಂಕೋಚದ ಕೋಟೆಯನ್ನು ಒಡೆದವರು ಇಂಗ್ಲಿಷ್ ಲೆಕ್ಚರರ್ ರವಿ ಸರ್. ಲಕ್ಷ್ಮಿ ಬರೆದ ‘ತಾಯಿಯ ಕಣ್ಣೀರಿನ ಅರ್ಥಶಾಸ್ತ್ರ’ ಎಂಬ ಪ್ರಬಂಧವನ್ನು ನೋಡಿ ಅವರು ಇಡೀ ಕ್ಲಾಸ್ ಮುಂದೆ ನಿಂತು ಹೇಳಿದರು, “ಈಕೆ ಇಂಗ್ಲಿಷ್ ಅನ್ನು ನಾಲಿಗೆಯಿಂದಲ್ಲ, ಹೃದಯದಿಂದ ಬರೆದಿದ್ದಾಳೆ.

ಐಎಎಸ್ ಮಾಡಲು ಪಾಲಿಶ್ಡ್ ಇಂಗ್ಲಿಷ್ ಬೇಡ, ಹಸಿವಿನ ಬೆಲೆ ತಿಳಿದಿರುವ ಹೃದಯ ಬೇಕು.” ರವಿ ಸರ್ ಅವಳಿಗೆ ಜ್ಞಾನದ ದಾರಿದೀಪವಾದರು, ದಪ್ಪದಪ್ಪ ಪುಸ್ತಕಗಳನ್ನು ಕೊಟ್ಟು ಅವಳ ಕನಸಿಗೆ ಗರುಡನ ರೆಕ್ಕೆಗಳನ್ನು ಕಟ್ಟಿದರು. “ಕೆಸರಿನಲ್ಲಿದ್ದರೂ ವಜ್ರದ ಹೊಳಪು ಕಮ್ಮಿಯಾಗುವುದಿಲ್ಲ” ಎಂಬ ಸತ್ಯ ಅವಳಿಗೆ ಅರ್ಥವಾಯಿತು.
ಯುಪಿಎಸ್ಸಿ ಫಲಿತಾಂಶ ಹೊರಬಿದ್ದು ಲಕ್ಷ್ಮಿ 34ನೇ ಶ್ರೇಣಿಯಲ್ಲಿ ಪಾಸಾಗುತ್ತಿದ್ದಂತೆ, ಹೂವಳ್ಳಿಯ ಜನರ ಮತ್ತು ನೆಂಟರ ಬಣ್ಣ ಬದಲಾಯಿತು! ನಿನ್ನೆವರೆಗೆ ಅವಳನ್ನು ‘ಕಾಗೆ’ ಎಂದು ಜರೆದಿದ್ದ ಹಳ್ಳಿಗರು, ಇಂದು ಅವಳ ಯಶಸ್ಸಿನ ಸೂರ್ಯನ ಬೆಳಕನ್ನು ಕಂಡು ಸೂರ್ಯಕಾಂತಿ ಹೂವುಗಳಂತೆ ಮುಖ ತಿರುಗಿಸಿದರು. ಅವಳ ನೆರಳನ್ನೂ ಅಸ್ಪೃಶ್ಯವೆಂದು ದೂರವಿಟ್ಟಿದ್ದ ನೆಂಟರು, ಈಗ ತಾವೇ ಅವಳಿಗೆ ಹತ್ತಿರದ ರಕ್ತಸಂಬಂಧಿಗಳೆಂದು ಜಗತ್ತಿಗೆ ಸಾರಲು ಸಿಹಿ ತಿಂಡಿಗಳ ಬುಟ್ಟಿ ಹಿಡಿದು ಓಡಿಬಂದರು.

ಹಿಂದೆ ಕಣ್ಣೀರು ಹಾಕಿಸಿದ್ದ ಆ ಬಾಯಿಗಳು ಇಂದು ಹೊಗಳಿಕೆಯ ಜೇನು ಸುರಿಸತೊಡಗಿದವು. ಅವಳ ಬಡತನವನ್ನು ಕಂಡು ಕಲ್ಲಾಗಿದ್ದ ಜಮೀನ್ದಾರರ ಹೃದಯಗಳು, ಇಂದು ಹೂವಿನ ಹಾರಗಳೊಂದಿಗೆ ಅದ್ದೂರಿ ಜೀಪ್ ಹತ್ತಿ ಅವಳ ಪಾದದಡಿ ಶರಣಾದವು. ಕಾಲದ ಚಕ್ರ ತಿರುಗಿದಾಗ ಹೀಯಾಳಿಸಿದ ಹಳ್ಳಿಗರೇ ಹೆಮ್ಮೆಯ ಜಯಘೋಷ ಮೊಳಗಿಸಿದರು!
ಲಕ್ಷ್ಮಿ ಆ ಹೂವಿನ ಹಾರಗಳನ್ನು ದಾಟಿ, ವಿಐಪಿ ಕುರ್ಚಿಗಳನ್ನು ನಿರಾಕರಿಸಿ, ದೂರದಲ್ಲಿ ಅಳುತ್ತಾ ನಿಂತಿದ್ದ ತನ್ನ ತಾಯಿಯ ಕೈಗಳನ್ನು ಹಿಡಿದು ಮೈಕ್ ಮುಂದೆ ಬಂದು ನಿಂತಳು. ಇಡೀ ಜನಸ್ತೋಮ ಸದ್ದಿಲ್ಲದೆ ಕಾಯುತ್ತಿದ್ದಾಗ ಲಕ್ಷ್ಮಿ ಸಿಂಹಿಣಿಯಂತೆ ಮಾತನಾಡಲು ಆರಂಭಿಸಿದಳು:
ನನ್ನ ಪ್ರೀತಿಯ ಹಳ್ಳಿಯ ಜನರೇ ಮತ್ತು ನೆಂಟರೇ, ಇವತ್ತು ನೀವು ನನಗೆ ಕೆಂಪು ಹಾಸಿನ ಸ್ವಾಗತ ನೀಡಿದ್ದೀರಾ. ಆದರೆ ಈ ಹಾಸಿನಲ್ಲಿ ನನಗೆ ನನ್ನ ತಾಯಿ ನಿಮ್ಮ ಗದ್ದೆಯಲ್ಲಿ ಚೆಲ್ಲಿದ ರಕ್ತದ ಬಣ್ಣ ಕಾಣಿಸುತ್ತಿದೆ! ನನ್ನ ತಾಯಿ ನನ್ನ ಔಷಧಿಗೆ ನೂರು ರೂಪಾಯಿ ಕೇಳಿ ನಿಮ್ಮ ಮನೆ ಬಾಗಿಲಿಗೆ ಬಂದಾಗ ಬಾಗಿಲು ಹಾಕಿಕೊಂಡ ಉದಾತ್ತ ಜನ ನೀವೇ ಅಲ್ವೇ?

ಕುಡುಕನ ಮಗಳು ಕೆಸರಲ್ಲೇ ಇರಬೇಕು, ಹೆಣ್ಣುಮಕ್ಕಳು ಕಸ ಗುಡಿಸಬೇಕು ಎಂದು ನೀವು ತೀರ್ಪು ಕೊಟ್ಟಿದ್ದಿರಿ. ಆದರೆ ಇವತ್ತು ನೋಡಿ, ಶ್ರೀಮಂತರ ಸ್ವತ್ತು ಅಂದುಕೊಂಡಿದ್ದ ಆ ಐಎಎಸ್ ಕುರ್ಚಿಯ ಮೇಲೆ ಇವತ್ತು ಈ ಬಡವನ ಮಗಳ ಸಹಿ… ಅಂದರೆ ಈ ಹೂವಳ್ಳಿಯ ಮಣ್ಣಿನ ಮಗಳ ಸಹಿ ಬೀಳಲಿದೆ.
ಇನ್ಮೇಲಾದರೂ ಹೆಣ್ಣುಮಕ್ಕಳ ರೆಕ್ಕೆಗಳನ್ನು ಮುರಿಯಬೇಡಿ. ಹೆಣ್ಣಿಗೆ ಕಸಪೊರಕೆ ಕೊಟ್ಟರೆ ಮನೆ ಸ್ವಚ್ಛ ಮಾಡ್ತಾಳೆ, ಅದೇ ಒಂದು ಪೆನ್ನು ಕೊಟ್ಟರೆ ಇಡೀ ಜಿಲ್ಲೆಯ ಚರಿತ್ರೆಯನ್ನೇ ಬರೆಯಬಲ್ಲಳು! ನೆನಪಿಟ್ಟುಕೊಳ್ಳಿ, ನಮ್ಮ ಬಡತನ ಕೇವಲ ನಮ್ಮ ಪರಿಸ್ಥಿತಿಯಷ್ಟೇ, ಅದು ನಮ್ಮ ಆಲೋಚನೆಗಳ ಬಡತನವಾಗಬಾರದು. ಕೆಸರಿದ್ದ ಕಡೆಯೇ ಕಮಲ ಅರಳೋದು ಎಂಬುದನ್ನು ಮರೆಯಬೇಡಿ.”
ಲಕ್ಷ್ಮಿಯ ಈ ನಿಷ್ಠುರ ಮಾತುಗಳನ್ನು ಕೇಳಿ ಅಲ್ಲಿದ್ದ ಪ್ರತಿಯೊಬ್ಬ ಹಳ್ಳಿಗನೂ ತಲೆ ತಗ್ಗಿಸಿ ನಿಂತಿದ್ದ. ಅದು ಗೌರವದಿಂದಲ್ಲ, ಬದಲಿಗೆ ತಮ್ಮೊಳಗಿನ ತಾರತಮ್ಯದ ಅರಿವಾಗಿ ಉಂಟಾದ ನಗ್ನ ನಾಚಿಕೆಯಿಂದ! ಲಕ್ಷ್ಮಿ ವೇದಿಕೆಯಿಂದ ಕೆಳಗಿಳಿದು ತನ್ನ ತಾಯಿಯನ್ನು ಅಪ್ಪಿಕೊಂಡು ಆ ಸಣ್ಣ ಮಣ್ಣಿನ ಮನೆ ಕಡೆಗೆ ಹೆಜ್ಜೆಯಿಟ್ಟಳು. ಅವಳು ಕೇವಲ ಅಧಿಕಾರಿಯಾಗಿರಲಿಲ್ಲ, ಒಣಗಿಹೋಗಿದ್ದ ಆ ಹಳ್ಳಿಯ ಭೂಮಿಗೆ ಜೀವ ನೀಡಲು ಬಂದ ಮಹಾ ಮಳೆಯಾಗಿದ್ದಳು!
ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಅವರು ಜನಮನಕನ್ನಡದಲ್ಲಿ ಬರೆದಿರುವ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ..









