CrimeLatest

ನಾಯಿಗಳ ಮೇಲೆ ಜೀಪು ಹರಿಸಿದ ಚಾಲಕ… ಇದೆಂಥ ವಿಕೃತ ಮನಸ್ಸು… ಈಗ ಪೊಲೀಸರ ಅತಿಥಿ!

ಕುಶಾಲನಗರ: ರಸ್ತೆಯಲ್ಲಿದ್ದ  ನಾಯಿಗಳನ್ನು ಹಾರ್ನ್ ಮಾಡಿ ಓಡಿಸದೆ ಅವುಗಳ ಮೇಲೆ ಉದ್ದೇಶಪೂರ್ವಕವಾಗಿ ಜೀಪು ಹರಿಸಿ ವಿಕೃತಿ ಮೆರೆದ ಚಾಲಕನನ್ನು  ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾದಾಪಟ್ಟಣ ನಿವಾಸಿ ಬಾಪುಟ್ಟಿ ಎಂಬವರ ಪುತ್ರ ಅಲಿ ಎಂಬಾತನೇ ನಾಯಿಗಳ ಮೇಲೆ ಜೀಪು ಹರಿಸಿ ವಿಕೃತಿ ಮೆರೆದವನು. ಈತ ಕುಶಾಲನಗರದ ಮಾದಾಪಟ್ಟಣದ ಕಾಶಿ ವಿಶ್ವನಾಥ ದೇವಾಲಯ ಬಳಿ ರಸ್ತೆಯಲ್ಲಿ‌‌ ಮಲಗಿದ್ದ 5 ನಾಯಿಗಳ ಮೇಲೆ ಜೀಪು ಹರಿಸಿಕೊಂಡು ಹೋಗಿದ್ದನು. ಪರಿಣಾಮ ಮೂರು ನಾಯಿಗಳಿಗೆ ಗಂಭೀರ ಗಾಯಗಳಾಗಿದ್ದು, ಸಾವು ಬದುಕಿನ ಮಧ್ಯೆ ಹೊರಳಾಡುತ್ತಿದ್ದವು.

ಕರುಣಾಜನಕ ಸ್ಥಿತಿಯಲ್ಲಿದ್ದ ನಾಯಿಗಳನ್ನು ನೋಡಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ದಿಲೀಪ್ ಎಂಬವರು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ  ಕೃತ್ಯದ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ  ಒಂದು ಸಾಕು ನಾಯಿ ಜೊತೆಗೆ ಇತರೆ 4 ಬೀದಿ ‌ನಾಯಿಗಳು ರಸ್ತೆಯಲ್ಲಿರುವುದು ಕಂಡು ಬಂದಿದ್ದು ಆದರೂ  ಹಾರ್ನ್ ಮಾಡದೆ ಉದ್ದೇಶಪೂರ್ವಕವಾಗಿ  ಅವುಗಳ ಮೇಲೆ ಜೀಪು ಹರಿಸಿರುವುದು  ಕಂಡು ಬಂದಿದೆ.

ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು  ಜೀಪು ಚಾಲಕ ಅಲಿ ಎಂಬಾತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಯಾರೇ ಆಗಲಿ ಇಂತಹ ವಿಕೃತಿಯನ್ನು ಮೆರೆಯಬಾರದು ಎಂಬುದೇ ಜನಮನದ ಕಳಕಳಿಯಾಗಿದೆ.

admin
the authoradmin

Leave a Reply

Translate to any language you want