ಕೊಡಗಿನ ಮಣ್ಣಿನ ಮಕ್ಕಳ ಕಣ್ಣೀರು…. ಒಂಟಿಯಾದ ಜೀವಗಳಿಗೆ ಜೊತೆಯಾಗೋಣ…
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-3

ಒಂದು ಕಾಲದಲ್ಲಿ ಕೊಡಗಿನ ಮನೆಗಳು ಜನರಿಂದ ಗಿಜಿಗುಡುತ್ತಿದ್ದವು.. ಕೂಡು ಕುಟುಂಬಗಳು ಒಟ್ಟಾಗಿದ್ದ ಕಾಲ.. ಮದುವೆಗಳು ಸಕಾಲಕ್ಕೆ ನಡೆಯುತ್ತಿದ್ದವು. ಹಬ್ಬ ಹರಿದಿನಗಳು, ಕೆಲಸ ಕಾರ್ಯಗಳು ಹೀಗೆ ಎಲ್ಲದರಲ್ಲೂ ಸಂಭ್ರಮಿತ್ತು. ಬದಲಾದ ಕಾಲಘಟ್ಟದಲ್ಲಿ ನಿಂತು ಒಮ್ಮೆ ತಿರುಗಿನೋಡಿದರೆ ಇವತ್ತಿನ ಬದಲಾವಣೆ ಆತಂಕಕ್ಕೆ ಕಾರಣವಾಗಿದೆ.. ಆ ಬದಲಾವಣೆ ಮತ್ತು ಅದು ತಂದೊಡ್ಡಲಿರುವ ಆಪತ್ತಿನ ಕುರಿತಂತೆ ಲೇಖಕ ಕಾಯಪಂಡ ವಿಷ್ಣುನಾಚಪ್ಪ ಅವರು ಇಲ್ಲಿ ಬರೆದಿದ್ದಾರೆ…
ಕೊಡಗಿನ ಹಸಿರು ಬೆಟ್ಟಗಳ ನಡುವೆ ಇವತ್ತು ಒಂದು ಮೌನ ಕಣ್ಣೀರು ಹರಿಯುತ್ತಿದೆ. ಅಂಕಿ-ಅಂಶ ಹೇಳುತ್ತೆ – ಕೊಡಗಿನ ಶೇಕಡ 25ರಷ್ಟು ಹುಡುಗರು ಮದುವೆಯಾಗದೆ ಒಂಟಿಯಾಗಿದ್ದಾರೆ. 30 ದಾಟಿದವರು, 40 ದಾಟಿದವರು ಮಾತ್ರ ಅಲ್ಲ, 45 ರಿಂದ 50 ವರ್ಷ ತಲುಪಿದವರೂ ಇದ್ದಾರೆ. ಇವರು ಕುಡುಕರಲ್ಲ, ಕೆಲಸ ಇಲ್ಲದವರಲ್ಲ. ಇವರು ಕಾಫಿ ತೋಟ ನಂಬಿದವರು, ತಾತ-ಮುತ್ತಾತನ ಕಾಲದ ಮಣ್ಣನ್ನು ಕಾಯುತ್ತಿರುವವರು. ಆದ್ರೆ ಇವತ್ತಿನ ಸಮಾಜದಲ್ಲಿ ‘ವರ’ ಆಗಲು ಅನರ್ಹರು.

50 ರ ಹೊಸ್ತಿಲಲ್ಲಿ ಒಂಟಿತನದ ಶಾಪ
30ರಲ್ಲಿ ಮದುವೆ ಆಗಲಿಲ್ಲ ಅಂದ್ರೆ ‘ಇನ್ನೂ ಟೈಮ್ ಇದೆ’ ಅಂತ ಸಮಾಧಾನ ಮಾಡಿಕೊಳ್ಳಬಹುದು. ಆದ್ರೆ 45-50 ವರ್ಷಕ್ಕೆ ಬಂದರೂ ಹೆಣ್ಣು ಸಿಗದೆ ಹೋದರೆ? ಮನೆಯಲ್ಲಿ 80ರ ತಂದೆ-ತಾಯಿಗೆ ‘ಮಗನಿಗೆ ಸಂಸಾರ ಕಟ್ಟಿಕೊಡಲಾಗಲಿಲ್ಲ’ ಅನ್ನೋ ಕೊರಗು. ಮಗನಿಗೆ ‘ನನ್ನ ತಪ್ಪೇನು?’ ಅನ್ನೋ ಪ್ರಶ್ನೆ. ಹಬ್ಬ-ಹರಿದಿನ ಬಂದರೆ ‘ನಿನ್ನ ಮದುವೆ ಯಾವಾಗಪ್ಪಾ’ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲ. ‘ಇನ್ನು ಯಾರು ಕೊಡ್ತಾರೆ?’ ಅನ್ನೋ ಹತಾಶೆ. ಇದು ಕೇವಲ ಒಂಟಿತನ ಅಲ್ಲ, ಬದುಕಿನುದ್ದಕ್ಕೂ ಕಾಡುವ ಸಾಮಾಜಿಕ ನೋವು.
ಸಮಸ್ಯೆಯ ಮೂಲ ಎಲ್ಲಿದೆ?
ನಮ್ಮ ಹೆಣ್ಣು ಮಕ್ಕಳು ಬೆಂಗಳೂರು, ಮೈಸೂರು, ಸಿಟಿಯಲ್ಲಿ ಸಾಫ್ಟ್‌ವೇರ್ ಕೆಲಸ, ಸರ್ಕಾರಿ ನೌಕರಿ ಇರುವ ಹುಡುಗರನ್ನು ಮಾತ್ರ ಹುಡುಕುತ್ತಿದ್ದಾರೆ. ‘ತಿಂಗಳಿಗೆ ಸಂಬಳ ಬರಬೇಕು, ವೀಕೆಂಡ್ ಮಾಲ್‌ಗೆ ಹೋಗಬೇಕು, ಸಿಟಿ ಲೈಫ್ ಬೇಕು’ ಅನ್ನುವ ಕನಸು ತಪ್ಪಲ್ಲ. ಆದ್ರೆ ಆ ಕನಸಿನಲ್ಲಿ ಕೊಡಗಿನ ಮಣ್ಣು, ತೋಟ, ಐನ್‌ಮನೆ, ಊರ ಸಂಸ್ಕೃತಿ ಮರೆಯಾಗುತ್ತಿದೆ. ಕಾಫಿ ತೋಟ ಇರುವ ಹುಡುಗ ಅಂದ್ರೆ ‘ಹಳ್ಳಿ ಗುಗ್ಗು’ ಅನ್ನೋ ಹಣೆಪಟ್ಟಿ. ಬೆಳಗ್ಗೆ 5 ಗಂಟೆಗೆ ತೋಟಕ್ಕೆ ಹೋಗುವವನು, ಮಳೆಗಾಲದಲ್ಲಿ ಕೆಸರು ಮೆಟ್ಟುವವನು – ಇವನಿಗೆ ಇವತ್ತು ಮಾರ್ಕೆಟ್ ಇಲ್ಲ. ಪರಿಣಾಮ? ಹಳ್ಳಿ ಹಳ್ಳಿಗಳಲ್ಲಿ 35, 40, 45, 50 ವರ್ಷದ ಅವಿವಾಹಿತ ಯುವಕರು.

ಕಾಫಿ ತೋಟವೆಂದರೆ ಕೇವಲ ಕೃಷಿ ಅಲ್ಲ, ಅದು ಸಂಸ್ಕೃತಿ
ಬೆಂಗಳೂರಿನಲ್ಲಿ 1 ಲಕ್ಷ ಸಂಬಳ ತರುವ ಹುಡುಗನಿಗಿಂತ, ಕೊಡಗಿನಲ್ಲಿ 10 ಎಕರೆ ಕಾಫಿ ತೋಟ ನೋಡಿಕೊಳ್ಳುವ ಹುಡುಗನ ಆರ್ಥಿಕತೆ ಕಡಿಮೆ ಇಲ್ಲ. ಆದ್ರೆ ವ್ಯತ್ಯಾಸ ಇರೋದು ‘ಲೈಫ್‌ಸ್ಟೈಲ್’ನಲ್ಲಿ. ಇಲ್ಲಿ ಪಬ್ ಇಲ್ಲ, ಮಲ್ಟಿಪ್ಲೆಕ್ಸ್ ಇಲ್ಲ. ಆದ್ರೆ ಇಲ್ಲಿ ಸ್ವಚ್ಛ ಗಾಳಿ ಇದೆ, ಸ್ವಂತ ಮನೆ ಇದೆ, ಸ್ವಾಭಿಮಾನದ ಬದುಕಿದೆ.
ಈ ಹುಡುಗರು ಕೊಡಗು ಉಳಿಸೋಕೆ ಹೋರಾಡುತ್ತಿರುವ ಸೈನಿಕರು. ಇವರು ತೋಟ ಬಿಟ್ಟು ಸಿಟಿಗೆ ಹೋದರೆ, ನಾಳೆ ಕೊಡಗಿನ ಕಾಫಿ ತೋಟ ಯಾರ ಪಾಲಾಗುತ್ತೆ? ನಮ್ಮ ಐನ್‌ಮನೆಗಳು ಹೊಟೇಲ್ ಆಗುತ್ತೆ. ಕೊನೆಗೆ ‘ಕೊಡಗು’ ಅನ್ನೋದು ಪುಸ್ತಕದಲ್ಲಷ್ಟೇ ಉಳಿಯುತ್ತೆ.

ಇನ್ನೂ ಸಮಯವಿದೆ… ಜೊತೆಯಾಗಿ ಬದುಕು ಕಟ್ಟೋಣ
ಈ ಸಮಸ್ಯೆಗೆ ಪರಿಹಾರ ಒಂದೇ – ಮನಸ್ಸು ಮಾಡುವುದು. ಇಲ್ಲಿ ಗಂಡು ಮಕ್ಕಳು ಮಾತ್ರ ಒಂಟಿಯಾಗಿಲ್ಲ. ನಮ್ಮ ಸಮಾಜದಲ್ಲಿ ಇನ್ನೂ ಕೆಲವು ಜೀವಗಳಿವೆ, ಅವರಿಗೂ ಜೊತೆಯ ಬೇಕು. ಮದುವೆಯಾಗದೆ ಉಳಿದಿರುವ ಅವಿವಾಹಿತ ಹೆಣ್ಣು ಮಕ್ಕಳಲ್ಲಿ ಮನವಿ: ವಯಸ್ಸು 30 ದಾಟಿತು ಅಂತ ಕುಗ್ಗಬೇಡಿ. ನಿಮ್ಮ ಕನಸಿನ ಬದುಕು ಕೊಡಗಿನ ತೋಟದ ಮನೆಯಲ್ಲೂ ಸಿಗಬಹುದು. ಗುಣವಂತ, ದುಡಿಮೆಯ ಹುಡುಗನಿಗೆ ಮನಸು ಕೊಡಿ. ವಯಸ್ಸಿನ ಅಂತರ ದೊಡ್ಡ ವಿಷಯವಲ್ಲ, ಹೊಂದಾಣಿಕೆ ಮುಖ್ಯ.
ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆದ ಸಹೋದರಿಯರಲ್ಲಿ ಮನವಿ ಒಂದು ಸಂಬಂಧ ಮುರಿದರೆ ಬದುಕು ಮುಗಿಯುವುದಿಲ್ಲ. ಮತ್ತೊಂದು ಅವಕಾಶಕ್ಕೆ ನಿಮ್ಮ ಮನಸಿನ ಬಾಗಿಲು ತೆರೆಯಿರಿ. ಕೊಡಗಿನ ಮಣ್ಣನ್ನು ನಂಬಿದ, ಕಷ್ಟ-ಸುಖ ಅರಿತ, 40-45ರ ಹರೆಯದ ಹುಡುಗನಿಗೆ ನೀವು ಹೊಸ ಬದುಕು ಕೊಡಬಹುದು. ಅವನು ನಿಮಗೆ ಆಸರೆಯಾಗಬಲ್ಲ.

ಚಿಕ್ಕ ವಯಸ್ಸಿನಲ್ಲಿ ವಿಧವೆಯಾದ ತಾಯಂದಿರಲ್ಲಿ ಮನವಿ ವಿಧಿ ನಿಮ್ಮ ಬದುಕಿನ ಒಂದು ಅಧ್ಯಾಯ ಮುಗಿಸಿರಬಹುದು, ಆದ್ರೆ ಪುಸ್ತಕ ಮುಗಿದಿಲ್ಲ. ಸಮಾಜದ ‘ಏನೆಂದುಕೊಂಡಾರು’ ಎಂಬ ಭಯ ಬಿಟ್ಟು, ಮತ್ತೊಮ್ಮೆ ಮನಸು ಮಾಡಿ. ನಿಮ್ಮ ಮಗುವಿಗೆ ತಂದೆಯ ಪ್ರೀತಿ ಕೊಡಬಲ್ಲ, ನಿಮ್ಮ ಬದುಕಿಗೆ ಆಧಾರವಾಗಬಲ್ಲ ಯುವಕರು ಕೊಡಗಿನಲ್ಲಿದ್ದಾರೆ. ಮದುವೆಯಾಗದೆ ವಯಸ್ಸು ಮೀರಿದ ಅವರು ನಿಮಗೆ ಜೀವನ ಕೊಡಲು ಕಾಯುತ್ತಿದ್ದಾರೆ.
ವಯಸ್ಸು ಮೀರಿದ ಹುಡುಗರಿಗೆ ಕರೆ ನಿಮಗೂ ಜವಾಬ್ದಾರಿ ಇದೆ. ‘ನಗೆ ಯಾರೂ ಸಿಗಲ್ಲ’ ಅಂತ ಕೈಕಟ್ಟಿ ಕೂರಬೇಡಿ. ನಿಮ್ಮ ತೋಟ, ನಿಮ್ಮ ದುಡಿಮೆ, ನಿಮ್ಮ ಗುಣವೇ ನಿಮ್ಮ ಆಸ್ತಿ. ಸಮಾಜದ ಮುಂದೆ ಬನ್ನಿ. ವಧು-ವರ ಸಮಾವೇಶಗಳಲ್ಲಿ ಭಾಗವಹಿಸಿ. ವಯಸ್ಸು ಒಂದು ಸಂಖ್ಯೆ ಅಷ್ಟೇ, ಮನಸ್ಸು ಮುಖ್ಯ.
ಸಮಾಜವಾಗಿ ನಾವೇನು ಮಾಡಬೇಕು?
ತಂದೆ-ತಾಯಿಯರಲ್ಲಿ ಹಾಗೂ ಬಂಧು ಬಳಗದವರಲ್ಲಿ ಮನವಿ ‘ಸಿಟಿ ಕೆಲಸ’ ಮಾತ್ರ ನೋಡಬೇಡಿ. ಹುಡುಗನ ಗುಣ, ಕುಟುಂಬ ನೋಡಿ. ವಿಚ್ಛೇದಿತರು, ವಿಧವೆಯರ ಮರುಮದುವೆಗೆ ಪ್ರೋತ್ಸಾಹಿಸಿ. ಇದು ತಪ್ಪಲ್ಲ, ಪುಣ್ಯದ ಕೆಲಸ.

ಸಂಘ-ಸಂಸ್ಥೆಗಳಿಗೆ ಮನವಿ
35+ ವಯಸ್ಸಿನ ವಧು-ವರರು, ವಿಚ್ಛೇದಿತರು, ವಿಧವೆಯರಿಗಾಗಿ ವಿಶೇಷ ಸಮಾವೇಶ ಮಾಡಿ. ಯಾರನ್ನೂ ಮೂಲೆಗುಂಪು ಮಾಡಬೇಡಿ. ಕೊನೆಯದಾಗಿ ಒಂದು ಕಳಕಳಿಯ ಮನವಿ… ಕೊಡಗಿನ ಮೂಲ ನಿವಾಸಿಗಳಾದ ನಾವು ಜಾತಿಭೇದಗಳನ್ನು ಬದಿಗಿರಿಸಿ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ನಾವೆಲ್ಲ ಈ ಮಣ್ಣಿನ ಮಕ್ಕಳು. ಮದುವೆ ವಿಷಯದಲ್ಲಿ ‘ನಮ್ಮ ಜಾತಿ, ಅವರ ಜಾತಿ’ ಅಂತ ಗೋಡೆ ಕಟ್ಟಿಕೊಂಡರೆ, ನಮ್ಮ ಮುಂದಿನ ಪೀಳಿಗೆಯೇ ಇಲ್ಲವಾಗುತ್ತೆ. ಗುಣ ನೋಡಿ, ಮನಸ್ಸು ನೋಡಿ, ಹೊಂದಾಣಿಕೆ ನೋಡಿ. ಜಾತಿ ಅಲ್ಲ, ಜೀವ ಮುಖ್ಯ. ಕೊಡಗು ಉಳಿಯಬೇಕಾದರೆ, ಕೊಡಗಿನವರು ಒಂದಾಗಬೇಕು.
ಕೊಡಗಿನ 25% ಹುಡುಗರ ಕಣ್ಣೀರು ಒರೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮದುವೆ ಎಂದರೆ ಜಾತಕ-ಹೊಂದಾಣಿಕೆ ಮಾತ್ರ ಅಲ್ಲ, ಎರಡು ಒಂಟಿ ಜೀವಗಳ ಬೆಸುಗೆ. 50ರ ಹೊಸ್ತಿಲಲ್ಲಿರುವವನಿಗೂ, ಬದುಕಿನಲ್ಲಿ ಎಡವಿದವಳಿಗೂ ‘ಇದು ನನ್ನ ಸಂಸಾರ’ ಅಂತ ಹೇಳಿಕೊಳ್ಳುವ ಹಕ್ಕಿದೆ. ಕೊಡಗಿನ ಮಣ್ಣಿಗಾಗಿ ಬದುಕುವ ಹುಡುಗನಿಗೆ, ಕೊಡಗಿನ ಮಗಳೇ ಜೀವನ ಸಂಗಾತಿಯಾಗಲಿ. ಒಂಟಿತನ ಮರೆಯಾಗಲಿ, ಐನ್‌ಮನೆಗಳಲ್ಲಿ ಮತ್ತೆ ನಗೆ ಹಬ್ಬಲಿ. ಇನ್ನೂ ಸಮಯವಿದೆ, ಮನಸು ಮಾಡಿ.

ಕಾವೇರಿಯ ತವರಿನಲ್ಲಿ ಬರದ ಛಾಯೆ….. ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ…







