LatestMysore

ದರ ಕುಸಿತದಿಂದ ಕಂಗಾಲಾಗಿದ್ದ ತಂಬಾಕು ಬೆಳೆಗಾರರಿಗೆ ತಂಬಾಕು ಮಂಡಳಿಯಿಂದ ಬರೆ

ರಾಜ್ಯದಲ್ಲಿ 5.6 ಕೋಟಿ ಕೆ.ಜಿ ತಂಬಾಕನ್ನಷ್ಟೇ ಉತ್ಪಾದಿಸಲು ಸೂಚನೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಈಗ ತಂಬಾಕು ಕೃಷಿಯ ಆರಂಭದ ಕಾಲವಾಗಿದ್ದು, ಕೃಷಿಗೆ ಬೇಕಾದ ಸಿದ್ಧತೆಗಳನ್ನು ಬೆಳೆಗಾರರು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ತಂಬಾಕು ಬೆಳೆದ ಬೆಳೆಗಾರರು ಉತ್ತಮ ದರ ಸಿಗದೆ ಸಂಕಷ್ಟದಲ್ಲಿದ್ದಾರೆ. ಆದರೂ ತಂಬಾಕು ಬೆಳೆಯದೆ ತೆಪ್ಪಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅದರತ್ತ ಗಮನಹರಿಸುತ್ತಿದ್ದಾರೆ. ತಂಬಾಕನ್ನು ಬೆಳೆಯುತ್ತಾ ಬಂದಿರುವ ಬಹುತೇಕ ಬೆಳೆಗಾರರು ಅದರಿಂದ ವಿಮುಖರಾಗಲು ಸಾಧ್ಯವಾಗುತ್ತಿಲ್ಲ. ಇದೀಗ ತಂಬಾಕು ಕೃಷಿ ಮಾಡುವವರಿಗೆ ಮಿತಿಯನ್ನು ನಿಗದಿ ಪಡಿಸಿರುವುದು ತಂಬಾಕು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೇಂದ್ರ ತಂಬಾಕು ಮಂಡಳಿಯು 2026-27ನೇ ಸಾಲಿನಲ್ಲಿ 5.6 ಕೋಟಿ ಕೆ.ಜಿ ತಂಬಾಕನ್ನಷ್ಟೇ ರಾಜ್ಯದಲ್ಲಿ ಉತ್ಪಾದಿಸಬೇಕೆಂದು ನಿಗದಿಪಡಿಸಿದ್ದು, ಇದು ರಾಜ್ಯದ 66 ಸಾವಿರ ತಂಬಾಕು ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 9.9 ಕೋಟಿ ಕೆ.ಜಿ ತಂಬಾಕು ಉತ್ಪಾದಿಸಲು ಅವಕಾಶವಿತ್ತು. (ಕಳೆದ ವರ್ಷ 100 ಮಿಲಿಯನ್ ಬೆಳೆಯಲು ಅವಕಾಶವಿದ್ದು ಈ ವರ್ಷ 56 ಮಿಲಿಯನ್ ಗೆ  ಮಿತಿಗೊಳಿಸಿದೆ) ಭಾರತದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಮಾತ್ರ ತಂಬಾಕು ಬೆಳೆಯಲಾಗುತ್ತಿದೆ.

ಹಾಗೆನೋಡಿದರೆ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ತಂಬಾಕು ಬೆಳೆಯುವುದಿಲ್ಲ ಕೇವಲ ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಎಚ್ ಡಿ. ಕೋಟೆ, ಕೆ ಆರ್. ನಗರ ಹಾಗೂ ಹಾಸನ ಜಿಲ್ಲೆಯ ಏಕೈಕ ತಾಲೂಕು ರಾಮನಾಥಪುರ ತಾಲೂಕುಗಳಲ್ಲಿ ಮಾತ್ರ ತಂಬಾಕು ಬೆಳೆಯಲಾಗುತ್ತದೆ.  ಮೈಸೂರು ಭಾಗದ ಪ್ರಮುಖ ವಾಣಿಜ್ಯ ಬೆಳೆ ವರ್ಜೀನಿಯ ತಂಬಾಕು. ಕಳೆದ ಮೂರು ದಿನಗಳ ಹಿಂದೆ ಅಂಧ್ರಪ್ರದೇಶದ ಗುಂಟೂರಿನಲ್ಲಿ ತಂಬಾಕು ಖರೀದಿ ಕಂಪನಿಗಳೊಂದಿಗೆ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ತಂಬಾಕು ಬೆಳೆ ಮೇಲೆ ಮಿತಿ ಹೇರಲು ತೀರ್ಮಾನಿಸಲಾಗಿದೆ.

ವಿಶ್ವದಲ್ಲಿ ಅತಿ ಹೆಚ್ಚು ತಂಬಾಕು ಬೆಳೆಯುವ ಬ್ರೆಜಿಲ್, ಜಿಂಬಾಬೈ, ನೈಜೀರಿಯಾ ದೇಶಗಳಲ್ಲಿ ಬೆಳೆ ಜಾಸ್ತಿ ಆಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕುಸಿದಿದೆ. ರಾಜ್ಯದಲ್ಲಿಯೂ ಉತ್ಪಾದನೆ ಹೆಚ್ಚಿದರೆ, ಬೇಡಿಕೆಯು ಮತ್ತಷ್ಟು ತಗ್ಗಿ ದರ ಕುಸಿಯಬಹುದು ಎಂದು ಕಂಪನಿಗಳು ನೀಡಿದ ಸಲಹೆಯನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಸಿಂಗಲ್ ಬ್ಯಾರನ್‌ಗೆ 0.85 ಹೆಕ್ಟೇರ್: ‘ಮುಂಬರುವ ಸಾಲಿನಲ್ಲಿ ಸಿಂಗಲ್ ಬ್ಯಾರನ್‌ಗೆ 0.85 ಹೆಕ್ಟೇ‌ರ್ ಪ್ರದೇಶದಲ್ಲಿ ಗರಿಷ್ಠ 1,017 ಕೆ.ಜಿಯಷ್ಟೇ ತಂಬಾಕು ಉತ್ಪಾದಿಸಬೇಕೆಂದು ನಿಗದಿಗೊಳಿಸಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಅವರು, ಇಷ್ಟು ವರ್ಷ 2.5 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯಲು ಅವಕಾಶವಿತ್ತು. ಅನಧಿಕೃತವಾಗಿ ಬೆಳೆಯುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದು ನೆರೆಯ ಆಂಧ್ರಪ್ರದೇಶಕ್ಕೂ ಅನ್ವಯಿಸುವಂತೆ ಮಂಡಳಿ ಕ್ರಮ ವಹಿಸಬೇಕು. ಇಲ್ಲದಿದ್ದರೆ, ರಾಜ್ಯದ ಬೆಳೆಗಾರರ ಪರವಾನಗಿಯನ್ನು ಹಿಂಪಡೆದು ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಆಗ ಪರ್ಯಾಯ ಬೆಳೆ ಬೆಳೆಯುತ್ತೇವೆ’ ಎಂದು ಹೇಳಿದ್ದಾರೆ.

ಎನ್‌ ಐಆರ್‌ ಸಿಎ ಮುಖ್ಯಸ್ಥ ಎಸ್.ರಾಮಕೃಷ್ಣನ್  ಪ್ರತಿಕ್ರಿಯೆ ನೀಡಿದ್ದು, ಕಡಿಮೆ ಪ್ರದೇಶದಲ್ಲಿ ಕಡಿಮೆ ಇಳುವರಿ ಎಂಬ ನೀತಿಯನ್ನು ತಂಬಾಕಿಗೆ ಅನ್ವಯಿಸುವುದು ಕಷ್ಟಕರವಾಗಿದೆ ಎಂದಿದ್ದಾರೆ.

ಹಿರೀಕ್ಯಾತನಹಳ್ಳಿ ತಂಬಾಕು ಬೆಳೆಗಾರ ಹರೀಶ್  ಅವರು ಮಾತನಾಡಿ, ತಂಬಾಕು ಮಂಡಳಿ ರೈತರ ಸಲಹೆ ಸೂಚನೆ ಕೇಳದೆ ಏಕ ಪಕ್ಷಿಯವಾಗಿ ನಿರ್ಣಯ ಕೈಗೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ತಂಬಾಕು ನೆಚ್ಚಿಕೊಂಡು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತಂಬಾಕು ಬೆಳೆ ಸಾಲ ಹಾಗೆಯೇ ಉಳಿದಿದೆ ತೀರಿಸುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ತಂಬಾಕು ಬೆಳೆಯುವುದಕ್ಕೆ ಮಿತಿ ಹೇರಿರುವ ಕುರಿತು ತಂಬಾಕು ಮಂಡಳಿಯ ಮೈಸೂರು ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ್  ಮಾಹಿತಿ ನೀಡಿ ಕಳೆದ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಸಿದರೂ, ಉತ್ತಮ ದರ ಸಿಗದೆ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಸಮಸ್ಯೆ ಮರುಕಳಿಸ ಬಾರದು ಎಂಬ ಉದ್ದೇಶದಿಂದ ಮಿತಿ ಹೇರಲಾಗಿದೆ’ ಎಂದು ತಿಳಿಸಿದ್ದಾರೆ.

ಈಗಾಗಲೇ ತಂಬಾಕು ಬೆಳೆದು ಆರ್ಥಿಕವಾಗಿ ಹಲವು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಆದರೂ ಮುಂದಿನ ವರ್ಷವಾದರೂ ತಂಬಾಕು ಕೈಹಿಡಿಯ ಬಹುದು ಎಂಬ ನಿರೀಕ್ಷೆಯಲ್ಲಿ ಕೃಷಿ ಮಾಡುತ್ತಾ ಬಂದಿದ್ದಾರೆ. ಇದೀಗ  ತಂಬಾಕು ಮಂಡಳಿ ಹೊಸ ತೀರ್ಮಾನ ಬೆಳೆಗಾರರಲ್ಲಿ ಅಸಮಾಧಾನ ತಂದಿದೆ. ಈಗಾಗಲೇ ಹಣ ನೀಡಿ ಜಮೀನು ಮಾಡಿಕೊಂಡಿರುವ ರೈತರಿಗೆ ಜಮೀನು ಮಾಲೀಕರು ಹಣ ವಾಪಸ್ ನೀಡುತ್ತಿಲ್ಲ.

ಕಳೆದ ವರ್ಷ ಉತ್ತಮ ತಂಬಾಕು ದರ ಇದ್ದರೂ ಈ ವರ್ಷ ಕುಸಿತ ಕಂಡಿದ್ದರೂ ಈ ವರ್ಷವೂ ಕೂಲಿ ಮಾತ್ರ ಅಷ್ಟೇ ಇದೆ.  ಈ ವರ್ಷ ತಂಬಾಕು ಬೆಳೆಯಲು ಗುತ್ತಿಗೆ ಆಧಾರದಲ್ಲಿ ಪಡೆದಿರುವ ಜಮೀನಿಗೆ ದುಡ್ಡು ನೀಡಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ ವರ್ಷದಷ್ಟೇ ಈ ವರ್ಷಕ್ಕೆ ತಂಬಾಕು ಮಂಡಳಿ ರಸಗೊಬ್ಬರ ನೀಡಲು ಹಣ ಹಿಡಿದಿದೆ ಇದೆಲ್ಲವೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದೇನು? ಎಂಬ ಚಿಂತೆಯಲ್ಲಿ ತಂಬಾಕು ಬೆಳೆಗಾರರು ದಿನದೂಡುತ್ತಿದ್ದಾರೆ.

 

 

admin
the authoradmin

Leave a Reply

Translate to any language you want