ಸರಳ ಸಜ್ಜನಿಕೆಯ “ಎಸ್ ಜಾನಕಿ” ಅವರ ಗಾನ ಮಾಧುರ್ಯಕೆ ಸಾಟಿ ಇಲ್ಲ… ಇವರ ಸಾಧನೆಯ ದಾಖಲೆ ಮೀರಿಸುವವರಿಲ್ಲ!
ಏ.23, ಎಸ್ ಜಾನಕಿ ಅವರ ಜನ್ಮದಿನ.. ಅವರಿಗೆ ಅಕ್ಷರಗಳ ಶುಭಾಶಯ

ಎಸ್. ಜಾನಕಿ!. ಎಸ್!!. (ಹೌದು) ಈ ಹೆಸರು ಕೇಳಿದೊಡನೆ ಅವರ ಸುಮಧುರ ಗಾನಸುಧೆ, ಕಿವಿಗೆ ಇಂಪು, ಹಾಡುಗಳ ಧ್ವನಿಯಲ್ಲಿನ ಚಮತ್ಕಾರ, ನವ ನವೀನ್ಯತೆ, ಮಾಧುರ್ಯತೆ ಎಲ್ಲವೂ ಕೂಡ ಕ್ಷಣಮಾತ್ರದಲ್ಲಿ ನೆನಪಾಗುತ್ತದೆ. ಚಲನಚಿತ್ರ ಹಿನ್ನೆಲೆ ಗಾಯಕಿಯಾಗಿ ಇವರ ಸಾಧನೆ ಅನುಪಮವಾದದ್ದು. ಏ.23 ಅವರ ಜನ್ಮದಿನ ಈ ಸಂದರ್ಭದಲ್ಲಿ ಅವರ ಹಾಡುಗಾರಿಕೆ ಮತ್ತು ಅದರಾಚೆಗಿನ ಬದುಕಿನ ಕುರಿತಂತೆ ಬರಹಗಾರರಾದ ಕಾಳಿಹುಂಡಿ ಶಿವಕುಮಾರ್ ಮೆಲುಕು ಹಾಕಿದ್ದಾರೆ..
ಈ ದಿನ ಅಂದರೆ ಏಪ್ರಿಲ್- 23 ಖ್ಯಾತ ಗಾಯಕಿ; ಎಸ್ ಜಾನಕಿ ಅಮ್ಮನವರ ಹುಟ್ಟುಹಬ್ಬದ ದಿನ. ಇತ್ತೀಚಿಗೆ ತಾನೇ ಅವರು ತಮ್ಮ ಮಗನನ್ನು ಕಳೆದುಕೊಂಡರು. ಈ ಬಾರಿ ಹುಟ್ಟುಹಬ್ಬ ಅವರಿಗೆ ನೋವನ್ನು ತಂದಿದೆ. ಕನ್ನಡದ ಹಲವಾರು ಗೀತೆಗಳು ಇಂದಿಗೂ ಕೂಡ ನಮ್ಮ ಮನೆ- ಮನ ತಲುಪುವೆ ಎಸ್ ಪಿ ಬಾಲಸುಬ್ರಮಣ್ಯ ಮತ್ತು ಎಸ್ ಜಾನಕಿ ಇವರ ಯುಗಳ ಗೀತೆಗಳು ಕನ್ನಡಿಗರ ಮನಸೂರೆಗೊಂಡಿವೆ. ಅವು ನಿತ್ಯ ಹರಿದ್ವರ್ಣದಂತೆ!. ಒಮ್ಮೊಮ್ಮೆ ಕೇಳಿದರೆ ಒಂದೊಂದು ರೀತಿಯ ಭಾವ ನಮ್ಮ ಮನದಲ್ಲಿ ಮೂಡುತ್ತದೆ!.
ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಹಿಂದಿ, ಸಿಂಹಳ, ತುಳು, ಬಡಗ, ಬಂಗಾಳಿ, ಉರ್ದು, ಪಂಜಾಬಿ, ಕೊಂಕಣಿ, ಮರಾಠಿ, ಸಿಂಧಿ ಮುಂತಾದ 17ಕ್ಕೂ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಇವರು ಸರಾಗವಾಗಿ ಹಾಡುವ ಸಾಮರ್ಥ್ಯವನ್ನು ಹೊಂದಿರುವ ಅಪರೂಪದ ಗಾಯಕಿ ಇವರು. ಇದೊಂದು ವಿಶೇಷ!. ಅಲ್ಲದೆ 48,000 ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿರುವುದು ಒಂದು ದಾಖಲೆಯೇ ಸರಿ!.

ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆಗಾಯಕಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಜಾನಕಿ ರವರು ವಿವಿಧ ರಾಜ್ಯಗಳಿಂದ 28ಕ್ಕೂ ಹೆಚ್ಚಿನ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರೆ ಅವರ ಗಾನಲಹರಿಯ ವಿಸ್ತಾರತೆಯ ಅರಿವಾಗುತ್ತದೆ. ಅವರು ಹೆಚ್ಚಿನ ಹಾಡುಗಳನ್ನು ಕ್ರಮವಾಗಿ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲಿ ಎಸ್. ಜಾನಕಿ ಯವರು ಹಾಡದೆ ಇದ್ದಿದ್ದರೆ ಅವರ ಮೇರು ಗಾನ ಸುಧೆಯನ್ನು ಕಳೆದುಕೊಂಡು ಬಿಡುತ್ತಿದ್ದೆವು!. ಈ ವಿಷಯದಲ್ಲಿ ನಾವು ಪುಣ್ಯವಂತರು!.
23.04.1938 ರಲ್ಲಿ ರೆಪಲ್ಲೇ ಯಲ್ಲಿ (ಗುಂಟೂರು ಜಿಲ್ಲೆ, ಆಂಧ್ರ ಪ್ರದೇಶ.) ಜಾನಕಿ ರವರು ತಮ್ಮ ಮೂರನೆಯ ವಯಸ್ಸಿನಲ್ಲಿ, ಪೈಡಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. 1956 ನೇ ವರ್ಷದಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಬಹುಮಾನ ಸ್ವೀಕರಿಸಿದ್ದೇ ಅವರ ಸಂಗೀತ ಪಯಣಕ್ಕೆ ಹೊಸ ನಾಂದಿಯನ್ನುoಟು ಮಾಡಿತು.
ಜಾನಕಿ ರವರು ಮುಂದೆ ಚೆನ್ನೈಗೆ ಬಂದು ಸಂದರ್ಶನವೂಂದರಲ್ಲಿ ಲತಾ ಮಂಗೇಶ್ಕರ್ ಅವರ ‘ರಸಿಕ್ ಬಲಮಾ’ ಎಂಬ ಗೀತೆಯನ್ನು ಹಾಡಿ ಪ್ರಸಿದ್ಧ ಎವಿಎಮ್ ಸಂಸ್ಥೆಯವರ ಕಾಂಟ್ರಾಕ್ಟ್ ಪಡೆದರು. 1957 ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ.ಚಲಪತಿ ರಾವ್ ಅವರ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ ಅವರು ಹಾಡಿದ ಪ್ರಥಮ ಚಿತ್ರ. ಮುಂದೆ ತೆಲುಗಿನ ಚಿತ್ರ ಎಂ.ಎಲ್.ಎ, ಕನ್ನಡದ ಕೃಷ್ಣಗಾರುಡಿ ಇವೆಲ್ಲಾ ಒಂದಾದ ನಂತರ ಪ್ರಾರಂಭವಾದುವು. ಮಲಯಾಳಂ ಚಿತ್ರಗಳಲ್ಲಿ ಕೂಡಾ ಹಾಡಲು ಪ್ರಾರಂಭಿಸಿದರು. ಹೀಗೆ ಅವರು ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಗಾಯಕಿಯಾಗಿ ಎಲ್ಲರ ಮನೆ- ಮನಗಳಲ್ಲಿ ನೆಲೆಸಿದ್ದಾರೆ.

ಜೊತೆಗೆ ಹಿಂದಿಯನ್ನೊಳಗೊಂಡಂತೆ ಭಾರತದ ಬಹಳಷ್ಟು ಭಾಷೆಗಳಲ್ಲಿ ತಮ್ಮ ಗಾನಮಾಧುರ್ಯದ ಸವಿಯನ್ನು ತಮಿಳಿನಲ್ಲಿ 1958ರ ಸುಮಾರಿನಲ್ಲಿ ಅವರು ಹಾಡಿದ ‘ಸಿಂಗಾರವೇಲನೆ ದೇವ’ ಎಂಬ ಮಹಾನ್ ನಾದಸ್ವರ ವಿದ್ವಾನ್ ಅರುಣಾಚಲಂ ಅವರ ನಾದ ಸ್ವರ ದೊಂದಿಗೆ ಮೇಳೈಸಿ ಹಾಡಿದ ಗೀತೆ ಪ್ರಾರಂಭದ ವರ್ಷಗಳಲ್ಲೇ ಅವರನ್ನು ಅಪ್ರತಿಮ ಗಾಯಕಿ ಎಂದು ಇಡೀ ದೇಶ ಗುರುತಿಸುವಂತೆ ಮಾಡಿತು. ಇದೊಂದು ದಾಖಲೆಯಾಗಿ ಮುನ್ನುಡಿಯಾಯಿತು.
ಕನ್ನಡ ಚಿತ್ರ ‘ಹೇಮಾವತಿ’ಯಲ್ಲಿ ಅವರು ಹಾಡಿರುವ “ಶಿವ ಶಿವ ಎನ್ನದ ನಾಲಿಗೆ ಏಕೆ?” ಎಂಬ ಅನನ್ಯಗೀತೆಯು ಇಡೀ ಭಾರತ ದೇಶದ ಅತ್ಯಂತ ತ್ರಾಸದಾಯಕ ಗೀತೆ ಎನಿಸಿದೆ. ಜಾನಕಿಯವರು ‘ಈ ಹಾಡು ನನ್ನ ಸಂಗೀತ ಜೀವನದಲ್ಲಿ ಭಯಪಟ್ಟು ಹಾಡಿದ ಹಾಡು, ಮತ್ತೆ ಹಾಡಲೂ ಆಗದ ಹಾಡು’ ಎಂದು ಕೂಡಾ ಹೇಳಿದ್ದಾರೆ. ಆ ನಂತರದಲ್ಲಿ ಅವರು ಹಾಡಿದ ಪ್ರತಿಯೊಂದು ಗೀತೆಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ಮೈ- ಮನಗಳಿಗೆ ಮುದ ನೀಡಿವೆ. ಈಗಲೂ ಕೂಡ ಇವರು ಹಾಡಿರುವ ಹಳೆಯ ಚಿತ್ರಗೀತೆಗಳು ರೆಡಿಯೋದಲ್ಲಿ (ಆಕಾಶವಾಣಿಯಲ್ಲಿ) ಪ್ರಸಾರವಾದಾಗ ವರ್ಣಿಸಲಸದಳ ಅನುಭವ ನೀಡುತ್ತವೆ. ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಇದು ಅವರ ಹಾಡಿಗಿರುವ ಮಾಧುರ್ಯತೆ!.
ಒಮ್ಮೆ ಒಂದು ಸಂದರ್ಶನದಲ್ಲಿ ಅವರೊಂದಿಗೆ ಬಹಳಷ್ಟು ವರ್ಷಗಳವರೆಗೆ ಹಾಡುತ್ತ ಬಂದಿರುವ ಡಾ. ಎಸ್. ಪಿ. ಬಾಲಸುಬ್ರಮಣ್ಯಂ ಹೇಳುತ್ತಿದ್ದರು, “ನಮ್ಮ ಜಾನಕಮ್ಮ ಇದ್ದಾರಲ್ಲ ಅವರು ಯಾವುದೇ ಗೀತೆಯನ್ನಾಗಲೀ ಒಂದೇ ಪ್ರಾರಂಭದಲ್ಲಿ ತೆಗೆದುಕೊಳ್ಳುವ ರೀತಿ, ತಮ್ಮ ಉಸಿರನ್ನು ಅತ್ಯಂತ ಆಳವಾಗಿ ಗಾನಲಯದಲ್ಲಿ ಸುಲಲಿತವಾಗಿ ಬೆರೆಸುವ ರೀತಿ ಇದೆಯೆಲ್ಲಾ ಅದೊಂದು ಅಸಾಮಾನ್ಯವಾದ ಸಂಗತಿ” ಹಾಡುವ ಪ್ರಾರಂಭದಲ್ಲಿ ಯಾವುದೇ ಹಮ್ಮು, ಬಿಮ್ಮುಗಳ, ಕೆಮ್ಮಿನ ಸಣ್ಣ ಆಚೆ ಈಚೆಗಿನ ಧ್ವನಿಯನ್ನು ಕೂಡಾ ಅವರು ಎಲ್ಲಿಯೂ ಉಂಟು ಮಾಡುವುದಿಲ್ಲ ಎಂಬ ಸತ್ಯವನ್ನು ಅವರನ್ನು ಹತ್ತಿರದಿಂದ ಕಂಡ ಅನೇಕರು ವ್ಯಕ್ತಪಡಿಸುತ್ತಾರೆ.

ಎಸ್. ಜಾನಕಿರವರು ಹೇಳುತ್ತಾರೆ- ‘ನಾನು ಯಾವುದೇ ವಿಶೇಷ ತಯಾರಿಯನ್ನಾಗಲೀ ಆರೈಕೆಯನ್ನಾಗಲಿ ನನ್ನ ಧ್ವನಿಗೆ ಮಾಡಿಕೊಳ್ಳುವುದಿಲ್ಲ.” ಅವರ ಈ ಮಾತು ಅವರ ಎಲ್ಲಾ ಸಾಧನೆಗಳಿಗೆ ಹಿಡಿದ ಕನ್ನಡಿಯಾಗಿದೆ.ಪರಮಾತ್ಮ ಶ್ರೀಕೃಷ್ಣ ಮತ್ತು ಶಿರಡಿ ಸಾಯಿಬಾಬಾ ಅವರ ಭಕ್ತರಾದ ಜಾನಕಿಯವರು ಕೇಳುತ್ತಾರೆ “ನಾನು ಹೇಗೆ ಹಾಡುತ್ತೇನೆ ಗೊತ್ತೇ?”, “ಸತ್ಯ ಹೇಳಬೇಕೆಂದರೆ, ನಾನು ಹಾಡುವುದೇ ಇಲ್ಲ. ಶ್ರೀಕೃಷ್ಣ, ಆ ನನ್ನ ಅಂತರಂಗದ ದೈವನಾದ ಆತನ ಕಾಯಕವದು”
ಎಸ್. ಜಾನಕಿಯವರ ಹಾಡುಗಳ ಬಗ್ಗೆ ಹೇಳುವುದಾದರೆ……. ಈ ಕ್ಷಣದಲ್ಲಿ ಅವರು ಹಾಡಿರುವ ಹಲವು ಗೀತೆಗಳು ನೆನಪಿಗೆ ಬರುತ್ತವೆ…….
ನೋಡು ಬಾ ನೋಡು ಬಾ ನಮ್ಮೂರ’
‘ತಾಯೆ ಬಾರ ಮೊಗವ ತೋರೆ ಕನ್ನಡಿಗರ ಮಾತೆಯೇ’,
‘ಯುಗ ಯುಗಾದಿ ಕಳೆದರೂ’,
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು’,
ದೋಣಿ ಸಾಗಲಿ ಮುಂದೆ ಹೋಗಲಿ’,
‘ಮೂಡಣ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ’,
ಜಯ ಗೌರಿ ಜಗದೀಶ್ವರೀ’,
‘ಆಡೋಣ ಬಾ ಬಾ ಗೋಪಾಲ’,
‘ನಂಬಿದೆ ನಿನ್ನ ನಾದ ದೇವತೆಯೇ ಅಭಿಮಾನ ತಳೆದ ತಾಯೆ ಭಾರತಿಯೇ’,
‘ಭಾರತ ಭೂಶಿರ ಮಂದಿರ ಸುಂದರಿ’,
‘ಶರಣು ವಿರೂಪಾಕ್ಷ ಶಶಿಶೇಖರ’,
‘ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ’,
‘ಬಾನಲ್ಲೂ ನೀನೆ ಭುವಿಯಲ್ಲೂ ನೀನೆ’,
‘ಬಿಸಿಲಾದರೇನು ಮಳೆಯಾದರೇನು’,
‘ಪೋಗದಿರೆಲೋ ರಂಗ’,
‘ಕರೆಯೇ ಕೋಗಿಲೆ ಮಾಧವನ’,
‘ಗಗನವು ಎಲ್ಲೋ ಭೂಮಿಯು ಎಲ್ಲೋ’,
‘ಪಂಚಮ ವೇದ ಪ್ರೇಮದ ನಾದ’,
‘ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ’,
‘ಕಂಗಳು ತುಂಬಿರಲು ಕಂಬನಿ ಧಾರೆ’,
‘ತುಂಬಿತು ಮನವಾ ತಂದಿತು ಸುಖವಾ’,
‘ಪೂಜಿಸಲೆಂದೇ ಹೂಗಳ ತಂದೆ’,
‘ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ’,
‘ದೇವರ ಆಟ ಬಲ್ಲವರಾರು’,
‘ಹೂವೂಂದು ಬೇಕು ಬಳ್ಳಿಗೆ’,
‘ರಾಘವೇಂದ್ರ ನೀ ಮೌನವಾದರೆ ನನ್ನ ಗತಿ ಏನು’,
‘ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ’,
‘ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ’,
‘ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ’,
‘ಮೂಕ ಹಕ್ಕಿಯು ಹಾರುತಿದೆ’ ಹೀಗೆ ಹೇಳುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಅವರು ಹಾಡಿರುವ ಭಕ್ತಿಗೀತೆಗಳು ಒಂದೇ ಎರಡೇ? ಅಲ್ಲೂ ಕೂಡ ಕ್ರಾಂತಿಯನ್ನು ಉಂಟು ಮಾಡಿದರು. ಭಕ್ತಿ- ಭಾವ ಮೂಡಿಸಿದರು. ನಾವು ಬಾಲ್ಯದಲ್ಲಿ ಕೇಳುತ್ತಿದ್ದ, ಅಲ್ಲದೆ ಗಣಪತಿಯ ಪ್ರತಿ ಹಬ್ಬದಲ್ಲೂ ಕೂಡ ನೆನಪಿಗೆ ಬರುವ

‘ಗಜಮುಖನೆ ಗಣಪತಿಯೇ’, ಮರೆಯಲುಂಟೆ?!. ಇನ್ನು ಮುಂದುವರೆದು ಹೇಳುವುದಾದರೆ…..
ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರಿ’,
ಇವಳೇ ವೀಣಾಪಾಣಿ’ ಯಂತಹ ಹಾಡುಗಳಂತೂ ಎಲ್ಲೆಲ್ಲೂ ಭಕ್ತಿ ತುಂಬಿ ತುಳುಕಿದೆ!.
ಡಾ. ಎಸ್. ಜಾನಕಿಯವರ ಸಿರಿಕಂಠದಲ್ಲಿ ಮೂಡಿಬಂದ ಕೆಲವು ಗೀತೆಗಳ ಸಾಲುಗಳು ನಿಮಗಾಗಿ…….
ಕಂಗಳು ತುಂಬಿರಲು – ಚಂದನದ ಗೊಂಬೆ,
ಕರೆಯೆ ಕೋಗಿಲೆ ಮಾಧವನ – ನವಜೀವನ,
ಸುಖದ ಸ್ವಪ್ನಗಾನಾ – ಮರೆಯದ ಹಾಡು,
ಗಗನವು ಎಲ್ಲೋ ಭೂಮಿಯು ಎಲ್ಲೋ- ಗೆಜ್ಜೆಪೂಜೆ,
ನಾ ಮೆಚ್ಚಿದ ಹುಡುಗನಿಗೆ – ನಾ ಮೆಚ್ಚಿದ ಹುಡುಗ,
ಬಂದಾ ಬಂದಾ ಮೇಘರಾಜ – ಸಿಪಾಯಿ,
ಹೂವೂಂದು ಬೇಕು ಬಳ್ಳಿಗೆ – ಪಾವನ ಗಂಗಾ,
ಒಲವಿನ ಗೆಳೆಯನೆ ನಿನಗೆ – ನಾನಿರುವುದೇ ನಿನಗಾಗಿ,
ಅರಳಿದೆ ಮುದುಡಿದ ತಾವರೆ ಅರಳಿದೆ- ಮುದುಡಿದ ತಾವರೆ ಅರಳಿತು,
ಕೇಳಿದ್ದು ಸುಳ್ಳಾಗಬಹುದು – ರಾಮ ಲಕ್ಷ್ಮಣ,
ಏಕೋ ಈ ಕೋಪ ಶಂಕರಾ – ಭಕ್ತ ಸಿರಿಯಾಳ,
ಜ್ಯೋತಿ ಯಾವ ಜಾತಿಯಮ್ಮ – ಕಾವೇರಿ,
ಶಿವ ಶಿವ ಎನ್ನದ ನಾಲಿಗೆಯೇಕೆ – ಹೇಮಾವತಿ,
ಏನನೋ ಕೇಳುತಿದೆ – ಗಲಾಟೆ ಸಂಸಾರ,

ತಾಯಿಯ ತಂದೆಯ ಮಮತೆ – ಮಧುರ ಸಂಗಮ,
ಬಾನಲ್ಲೂ ನೀನೆ ಭುವಿಯಲ್ಲೂ ನೀನೆ – ಬಯಲುದಾರಿ,
ಹೊಸ ಬಾಳು ನಿನ್ನಿಂದ – ಆಟೊ ರಾಜ,
ನನ್ನ ಆಸೆ ಹಣ್ಣಾಗಿ – ಆಟೊ ರಾಜ,
ಹೀಗೆ ಹಲವು ಚಿತ್ರಗಳಲ್ಲಿ ಎಲ್ಲಾ ನಟಿಯರಿಗೂ ಕೂಡ ಹಾಡಿದ್ದಾರೆ.
ಇವರ ಯುಗಳ ಗೀತೆಗಳನ್ನ ಮರೆಯಲು ಸಾಧ್ಯವೇ?.
‘ಒಲಿದ ಜೀವ ಜೊತೆಯಲಿರಲು ಬಾಳು ಸುಂದರ…..
ಪಿ.ಬಿ.ಎಸ್ ಅವರೊಂದಿಗೆ ಕನ್ಯಾರತ್ನ ಚಿತ್ರದಲ್ಲಿ ‘ಸುವ್ವಿ ಸುವ್ವಿ ಸುವ್ವಾಲೆ……
ಹೊಂಬಿಸಲು ಚಿತ್ರದ ‘ಜೀವ ವೀಣೆ ನೀಡು ಮಿಡಿತದ ಸಂಗೀತ’…..

ಗಂಧದ ಗುಡಿ ಚಿತ್ರದಲ್ಲಿ ಪಿ. ಬಿ. ಶ್ರೀನಿವಾಸ್ ಅವರೊಂದಿಗೆ ಪುಟ್ಟ ಹುಡುಗಿಯಂತೆ ‘ಎಲ್ಲೂ ಹೋಗೋಲ್ಲಾ ಮಾಮ……’ ಎಂದು ಹಾಡುವ ಧಾಟಿ ಏಷ್ಟೋ ಜನರಿಗೆ ಗೊತ್ತಾಗೋದಿಲ್ಲ.
ದೇವರಗುಡಿಯ ‘ಕಣ್ಣು ಕಣ್ಣು ಒಂದಾಯಿತು’…..j
ಮುಗಿಯದ ಕಥೆ ಚಿತ್ರದ ‘ಕಂಗಳು ವಂದನೆ ಹೇಳಿದೆ…. ಹೃದಯವು ತುಂಬಿ ಹಾಡಿದೆ’…..
ಧರ್ಮಸೆರೆ ಚಿತ್ರದ ‘ಈ ಸಂಭಾಷಣೆ’…..
ಹುಡುಗಾಟದ ಹುಡುಗಿ ಚಿತ್ರದ ‘ಬೆಳ್ಳಿಯ ತೆರೆಯ ಮೋಡದ ಮರೆಯ……
ವಾಣಿ ಜಯರಾಂ ಅವರ ಜೊತೆಯಲ್ಲಿ ವಿಜಯವಾಣಿ ಚಿತ್ರದ ‘ಮಧುಮಾಸ ಚಂದ್ರಮ’….
ರಾಜ್ ಅವರ ಜೊತೆಯಲ್ಲಿ ಶ್ರೀನಿವಾಸ ಕಲ್ಯಾಣದ ‘ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ’……
ಬಂಗಾರದ ಹೂವು ಚಿತ್ರದ ‘ ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ’…. ಹೀಗೆ ಹಲವು ಗಾಯಕ- ಗಾಯಕಿ ಯರೊಂದಿಗೆ ತಮ್ಮ ಹಾಡಿನ ಪಯಣ ಮಾಡಿದ್ದಾರೆ.
ಇನ್ನು ಇತರ ಭಾಷೆಗಳಲ್ಲಿ ಪದಿನಾರು ವಯದಿನಿಲೆ ಚಿತ್ರದ ‘ಸಿಂಧೂರ ಪೂವೆ’, ಶಂಕರಾಭರಣಂ ಚಿತ್ರದ ‘ಸಾಮಜವರಗಮನ’, ‘ಶಂಕರಾಭರಣಮು’; ಸಾಗರಸಂಗಮಂ ಚಿತ್ರದ ‘ಬಾಲ ಕನಕಮಯ ಚೇಲ ಸುಜನಪರಿಪಾಲ’, ‘ಓಂ ನಮಃ ಶಿವಾಯ ಚಂದ್ರ ಕಳಾಧರ ಸಹೃದಯ’ ಮರೆಯಲುಂಟೆ. ವಾದ್ಯ ನಾದದೊಡನೆ ಇವರ ಗಾನ ಇಂಪು!.

ತಮಿಳಿನಲ್ಲಿ ಕರೈಕುರುಚ್ಚಿ ಅರುಣಾಚಲಂ ಅವರ ನಾದಸ್ವರದೊಂದಿಗೆ ತಮ್ಮ ಸ್ವರ ಮೇಳೈಸಿ ಅದ್ಭುತವಾಗಿ ಮೂಡಿಸಿದ ಸಿಂಗಾರವೇಲನೆ ದೇವ ಹಾಡಿನಂತೆ, ಕನ್ನಡದಲ್ಲಿ ಬಿಸ್ಮಿಲ್ಲಾ ಖಾನ್ ಅವರ ಶಹನಾಯ್ ಜೊತೆ ತಮ್ಮ ಗಾನವನ್ನು ಮೇಳೈಸಿ ಹೊರತಂದ ‘ಕರೆದರು ಕೇಳದೆ’ ಗೀತೆ. ಇಂತಹದ್ದೇ ರೀತಿಯಲ್ಲಿ ಎಸ್ ಜಾನಕಿ ಅವರು ಎಂ.ಎಸ್. ಗೋಪಾಲಕೃಷ್ಣನ್ ಅವರ ಪಿಟೀಲು ವಾದನ, ನಾಮಗಿರಿ ಪೇಟೆ ಕೃಷ್ಣನ್ ನಾದಸ್ವರ ಮತ್ತು ಹರಿಪ್ರಸಾದ್ ಚೌರಾಸಿಯಾ ಅವರ ವೇಣುವಾದನದ ಜೊತೆ ಕೂಡಾ ತಮ್ಮ ಗಾನ ಮಾಧುರ್ಯತೆ ಸವಿಯನ್ನು ನೀಡಿದ್ದಾರೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ರವರು ಬಾಲ್ಯದಲ್ಲಿದ್ದಾಗ ಇವರು ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಎಸ್ ಜಾನಕಿ ರವರೆ ತೀರ್ಪುಗಾರರಾಗಿದ್ದರು. ಆಗ ಬಾಲು ರವರ ವಿಶೇಷ ಗಾಯನವನ್ನು ಗಮನಿಸಿ ಉತ್ತಮ ಭವಿಷ್ಯ ಇದೆ ಎಂದು ನುಡಿದಿದ್ದರು ನಂತರದಲ್ಲಿ ಅವರೇ ಎಸ್ಪಿ ಬಾಲಸುಬ್ರಹ್ಮಣ್ಯಂ ಜೊತೆಯಲ್ಲಿ ಸಾವಿರಾರು ಹಾಡುಗಳನ್ನು ಹಾಡಿದರು. ಜೊತೆಗೆ ಅನೇಕ ಟಿವಿ ಕಾರ್ಯಕ್ರಮಗಳಲ್ಲೂ ಕೂಡ ತೀರ್ಪುಗಾರರಾಗಿ ಅನೇಕ ಪ್ರತಿಭೆಗಳನ್ನು ಕೂಡ ಬೆಳಕಿಗೆ ತಂದಿದ್ದಾರೆ. ಸರಳ ಸಜ್ಜನಿಕೆಯಿಂದ ತಮ್ಮ ಬದುಕಿನ ಪಯಣವನ್ನ ಮಾಡುತ್ತಿರುವ ಎಸ್ ಜಾನಕಿ ರವರು ಮೈಸೂರನ್ನು
ತುಂಬಾ ಇಷ್ಟಪಡುತ್ತಾರೆ ಅದರಿಂದಾಗಿ ಅವರು ಮೈಸೂರಿನಲ್ಲಿ ನೆಲೆಸಲು ತೀರ್ಮಾನಿಸಿದ್ದಾರೆ. ಜೊತೆಗೆ ಅವರು ಅಂತಿಮವಾಗಿ ಹಾಡು ಇನ್ನು ಮುಂದೆ ಹಾಡುವುದಿಲ್ಲ ಎಂದು ಘೋಷಣೆ ಮಾಡಿದ್ದು ಕೂಡ ಮೈಸೂರಿನ ಗಂಗೋತ್ರಿ ಯ ಬಯಲು ರಂಗಮಂದಿರದಲ್ಲಿ.

ಅವರ ಹಾಡುಗಳ ವಿಷಯದ ಬಗ್ಗೆ ಬರೆಯುತ್ತಾ ಹೋದರೆ ಪುಟಗಳು ಸಾಲದು!. ಹಲವು ಸವಿ ಸವಿ ನೆನಪುಗಳನ್ನ ನಮಗೆ ನೀಡಿದ್ದಾರೆ. ಅವರ ಹಾಡುಗಳನ್ನ ಇವತ್ತು ಕೂಡ ಕೇಳಿ ಸಂಭ್ರಮಿಸುವುದೇ ನಮಗೆ ಒದಗಿರುವ ಸೌಭಾಗ್ಯ!. ಅವರ ಹಾಡುಗಳು ಮತ್ತಷ್ಟು ಗಾಯಕಿಯರಿಗೆ ಸ್ಪೂರ್ತಿಯ ಸೆಲೆಯಾಗಿವೆ. ಇವತ್ತಿಗೂ ಕೂಡ ನಿತ್ಯ ನೂತನವಾಗಿ ನಮ್ಮ ಮೈ-ಮನಗಳಿಗೆ ಮುದ ನೀಡುತ್ತವೆ.
ನಮಗೆ ಕಳೆದ (2024)ವರ್ಷದ ದಸರಾ ಸಂದರ್ಭದಲ್ಲಿ ಅವರನ್ನು ಕಾಣುವ ಸೌಭಾಗ್ಯ ದೊರೆಯಿತು! ಅಂದು ಅವರೊಟ್ಟಿಗೆ ಫೋಟೋ ತೆಗೆದುಕೊಂಡು, ಒಂದಿಷ್ಟು ಮಾತನಾಡಿ ಖುಷಿ ಪಟ್ಟೆವು! ಎಷ್ಟೇ ಎತ್ತರಕ್ಕೆ ಬೆಳೆದಿರುವ ಜಾನಕಿ ರವರು ಅಂದು ಸರಳತನ ಮೆರೆದರು!. ತಾಳ್ಮೆಯಿಂದ ಮಾತನಾಡಿದರು. ಜೊತೆಗೆ ಸೆಲ್ಫಿ ತೆಗೆದುಕೊಂಡಾಗಲೂ ಕೂಡ ಸ್ಪಂದಿಸಿದರು. ಅಲ್ಲದೆ ನೀವು ಏನು ಮಾಡುತ್ತಿದ್ದೀರಿ ಎಂಬ ಕುಶಲೋಪರಿಯ ಜೊತೆಗೆ ಅವರ ಚಿತ್ರಗಳ ಬಗ್ಗೆ ನಾವು ಮಾತನಾಡಿ ಹಲವು ಗಾಯಕಿಯರು ಇದ್ದ ಒಂದು ಅಪರೂಪದ ಫೋಟೋವನ್ನು ಅವರಿಗೆ ತೋರಿಸಿದಾಗ ಅದನ್ನು ನೋಡಿ ವಾಹ್! ಎಂದು ನಸುನಕ್ಕೂ ಫೋಟೋ ತೆಗೆಸಿಕೊಂಡ ದಿನವನ್ನು ಮೇಲುಕು ಹಾಕಿದರು. ಇವೆಲ್ಲವೂ ಕೂಡ ನಮ್ಮ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡು ಬಿಡುತ್ತವೆ.
ಅವರು ಯಾವತ್ತೂ ಕೂಡ ಪ್ರಶಸ್ತಿ ಸನ್ಮಾನಗಳಿಗೆ ಮುಂದೆ ಬಂದವರೇ ಅಲ್ಲ. ಅವರು ಕನ್ನಡದಲ್ಲಿ ಹಾಡಿರುವ ಒಂದೊಂದು ಹಾಡುಗಳು ಕೂಡ ಅವರಿಗೆ ಪ್ರಶಸ್ತಿ ಸಮವೆ ಆಗಿದೆ. ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅಲ್ಲಿನ ಪ್ರಸ್ತುತ ಬಗ್ಗೆ ಬೆಳಕು ಚೆಲ್ಲಿ, ಎರಡು ಮಾತನಾಡಿ, ಫೋಟೋ ತೆಗೆಸಿಕೊಳ್ಳುವ ಅಭಿಮಾನಿಗಳಿಗೂ ಕೂಡ ನಿರಾಸೆ ಮಾಡದೆ, ಅವರೊಂದಿಗೆ ಕೈ ಬೀಸಿ, ಬೆನ್ನು ತಟ್ಟಿ, ನಸುನಕ್ಕು, ಪರಿಚಯ ಇದ್ದವರ ರೀತಿ ಮಾತನಾಡಿ ಮುಂದೆ ಸಾಗುವುದು ಇವರ ಒಂದು ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಇತ್ತೀಚೆಗೆ ಅವರು ಮಗನನ್ನು ಕಳೆದುಕೊಂಡರು. ಆ ದುಃಖದಿಂದ ಅವರು ಹೊರ ಬಂದಿಲ್ಲ.

ಇಂತಹ ಮೇರು ಪ್ರತಿಭೆಯ ಹುಟ್ಟುಹಬ್ಬ ಈ ದಿನದಂದು ಅವರಿಗೆ ಭಗವಂತ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ, ಆಯುರಾರೋಗ್ಯ ಎಲ್ಲವನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಇಳಿ ವಯಸ್ಸಿನಲ್ಲಿ ದುಃಖದ ವಿಚಾರವೇನೆಂದರೆ ಅವರ ಪುತ್ರ ಇತ್ತೀಚೆಗೆ ನಿಧನರಾಗಿರುವುದು. ಅವರಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎನ್ನುವುದೇ ನಮ್ಮ ಹಾರೈಕೆ.
ನಾವು 2024 ರಲ್ಲಿ ಅವರನ್ನು ಭೇಟಿ ಮಾಡಿದ್ದೆವು!. ಸಾಂಸ್ಕೃತಿಕ ನಗರಿ ಉದ್ಯಾನ ನಗರಿ ಮೈಸೂರಿನಲ್ಲಿ!!.
ನಿಜಕ್ಕೂ ಆ ದಿನ ದಸರೆಯ ಸಂದರ್ಭವಾಗಿತ್ತು. ಆಯುಧ ಪೂಜೆಯ ಸುದಿನ. ಅವರ ಜೊತೆ ಫೋಟೋ ತೆಗೆಸಿಕೊಂಡು, ಅರ್ಧ ಗಂಟೆ ಕಳೆದೆವು. ಅವರ ನಗು…… ಹೃದಯ ತುಂಬಿದ ಕನ್ನಡದ ಮಾತು…… ಎಲ್ಲರೊಟ್ಟಿಗೆ ಬೆರೆಯುತ್ತಿದ್ದ ಆ ಕ್ಷಣ……. ಈ ದಿನ ನೆನಪಾಯಿತು!. ಅವರನ್ನು ಯಾರೇ ಭೇಟಿ ಮಾಡಿದರೂ ಅವರು ಕೈಯಿಂದ ಬೆನ್ನನ್ನು ಸವರುತ್ತಾ, ಫೋಟೋ ತೆಗೆಸಿಕೊಳ್ಳುತ್ತಾರೆ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಸರಳ ಸಜ್ಜನಿಕೆಯ ಸ್ವಭಾವ ಅವರದಾಗಿತ್ತು.

ಆ ದಿನ ಅವರ ಮಗನನ್ನು ಕೂಡ ಭೇಟಿ ಮಾಡಿದ್ದೆವು. ಸವಿ ಸವಿ ನೆನಪಿನ ಖಜಾನೆ ನಮ್ಮದಾಯಿತು!. ಇದಕ್ಕೆಲ್ಲ ಕಾರಣ ನಮ್ಮ ಆತ್ಮೀಯರು, ಮಾರ್ಗದರ್ಶಕರು ಆದ ಕಣ್ಣೂರು ವಿ ಗೋವಿಂದಾಚಾರಿರವರು. ಅವರು ಕೂಡ ಎಸ್ ಜಾನಕಿ ಅಮ್ಮನವರ ಜೊತೆ ಇದ್ದಾರೆ. ನಾವು ನಿಮ್ಮ ಚಿತ್ರಗೀತೆಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಕೇಳುತ್ತಿರುತ್ತೇವೆ…….. ಆಕಾಶವಾಣಿಯ ಬಳಗದವರು……. ಮೈಸೂರಿನವರು….. ಎಂದೆಲ್ಲಾ ನಾವು ಹೇಳಿದಾಗ ತುಂಬಾ ಖುಷಿಪಟ್ಟರು!.
ಕಾಳಿಹುಂಡಿ ಶಿವಕುಮಾರ್ ಅವರು ಬರೆದಿರುವ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ!








