ArticlesLatestMysore

ಎನ್‌ ಎಸ್‌ ಎಸ್‌ ನ ಮಿನುಗುತಾರೆ ಮಾನಸ ಸಿ.ಆರ್…  ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯ ವಿದ್ಯಾರ್ಥಿನಿ!

ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ (ಎನ್‌ಎಸ್‌ಎಸ್) ಘಟಕದ ಸಂಘಟನಾ ಕಾರ್ಯದರ್ಶಿ ಮಾನಸ ಸಿ.ಆರ್ ಅವರು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

ಮೈಸೂರು ದಸರಾ ಕುರಿತ ಲೇಖನಗಳಿಗೆ ಇದರ ಮೇಲೆ ಕ್ಲಿಕ್ ಮಾಡಿ… ಓದಿ

ಪ್ರಸ್ತುತ ಅಂತಿಮ ವರ್ಷದ ಬಿ.ವೊಕ್ ವ್ಯಾಸಂಗ ಮಾಡುತ್ತಿರುವ ಇವರು, ತಮ್ಮ ಎನ್‌ ಎಸ್‌ ಎಸ್ ತಂಡದೊಂದಿಗೆ ಗ್ರಾಮೀಣ ಹಾಗೂ ಹಾಡಿ ಭಾಗಗಳಿಗೆ ತೆರಳಿ ಅನೇಕ ಕಾರ್ಯಕ್ರಮಗಳನ್ನು ಮಾಡಿ ಗಮನಸೆಳೆದಿದ್ದಾರೆ.

ಮಾರಕ ರೋಗಗಳ ಬಗ್ಗೆ ಅರಿವು, ತಂಬಾಕು ಮತ್ತು ಮದ್ಯಪಾನ ಬಗ್ಗೆ ಜಾಗೃತಿ, ನಶಾ ಮುಕ್ತ ಭಾರತ, ಪಲ್ಸ್ ಪೋಲಿಯೋ, ಮಹಿಳಾ ಶಿಕ್ಷಣ, ಹಾಡಿಯ ಹೆಣ್ಣುಮಕ್ಕಳಿಗೆ ಪೋಷಣ್ ಅಭಿಯಾನ, ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಹಾಗೂ ವಿತರಣೆ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಸಿರಿಧಾನ್ಯ ಫೌಡರ್‌ಗಳ ವಿತರಣೆ, ಹಾಡಿಯ ಹೆಣ್ಣುಮಕ್ಕಳಿಗೆ ಪ್ರೌಢಶಾಲಾ ವ್ಯಾಸಂಗಕ್ಕಾಗಿ ಸೈಕಲ್‌ಗಳ ವಿತರಣೆ, ಸ್ವಯಂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ, ಜೇನು ಕೃಷಿ, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸದ್ಬಳಕೆ, ಏಡ್ಸ್ ಮತ್ತು ಕ್ಯಾನ್ಸರ್ ಬಗ್ಗೆ ಜಾಗೃತಿ ಜಾಥಾ, ನಾಟಕಗಳು ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿದ್ದಾರೆ.

30ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ದತ್ತು ಹಾಗೂ ಸಮಗ್ರ ಅಭಿವೃದ್ಧಿ…

ವಿಶೇಷವಾಗಿ ಹುಣಸೂರು ತಾಲೂಕು, ಮಂಡ್ಯ ತಾಲೂಕು, ಹೆಚ್.ಡಿ. ಕೋಟೆ ತಾಲೂಕು ಹಾಗೂ ಗಡಿನಾಡಿನ ಭಾಗವಾದ ಹನೂರು ತಾಲೂಕುಗಳ 30ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆದು ಬಣ್ಣ ಹಚ್ಚಿ ಹೊಸ ರೂಪ ನೀಡಿದ್ದಾರೆ. ಅಗತ್ಯವಿರುವ ಶಾಲೆಗಳಿಗೆ ಕಂಪ್ಯೂಟರ್, ಸ್ಮಾರ್ಟ್ ಟಿವಿ, ಪ್ರಿಂಟರ್, ಕುಡಿಯುವ ನೀರಿನ ವ್ಯವಸ್ಥೆ, ಕಲಿಕಾ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸುವುದಲ್ಲದೆ, ಬಿಡುವಿನ ವೇಳೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಇಂಗ್ಲಿಷ್ ತರಗತಿ ಹಾಗೂ ಸಹಪಠೇತರ ಚಟುವಟಿಕೆಗಳನ್ನು ರೂಪಿಸುತ್ತಿದ್ದಾರೆ.

ಹುಣಸೂರು ತಾಲೂಕಿನ ಸರ್ಕಾರಿ ಕನ್ನಡ ಶಾಲೆಗಳಾದ ಕುಟ್ಟವಾಡಿ ಬಿ, ಬಸವನಹಳ್ಳಿ, ದೇವಾಪುರ, ದೇವಗಳ್ಳಿ, ಸಂಜೀವ ನಗರ, ಹೊಸಪುರ, ಕೆಂಡಗಣ್ಣಪುರ, ಕುಡಿನೀರು ಮುದ್ದನಹಳ್ಳಿ, ಅಸ್ಸಾಳು, ಶಾಂತಿಪುರ, ಮಲಗನಕೆರೆ, ಸಿಂಗಾರ ಮಾರನಹಳ್ಳಿ, ಅಂಬೇಡ್ಕ‌ರ್ ನಗರ ಹಾಗೂ ಸಂತೆಕೆರೆ ಕೋಡಿ ಶಾಲೆಗಳು; ಹೆಚ್.ಡಿ. ಕೋಟೆಯ ಹಾಡಿ ಮಕ್ಕಳಿಂದ ಕೂಡಿರುವ ಮಂಟಿಹಾಡಿ, ಚಾಮನಹಳ್ಳಿ ಹುಂಡಿ ಹಾಗೂ ಪಡುಕೋಟೆ; ಮಂಡ್ಯ ತಾಲೂಕಿನ ಸಂತೆಕೆಸಲಗೆರೆ; ಹನೂರು ತಾಲೂಕಿನ ಇಂದಿರಾ ಹಿರಿಯ ಪ್ರಾಥಮಿಕ ಶಾಲೆ, ರಾಮಪುರ, ದೊಮ್ಮನಗದ್ದೆ ಶಾಲೆಗಳಿಗೆ ಬಣ್ಣ ಹಚ್ಚಿ ಅಗತ್ಯವಿರುವ ಸೌಲಭ್ಯಗಳನ್ನು ನೀಡಿದ್ದಾರೆ.

ಒಂದು ವರ್ಷದ ಹಿಂದೆ ಮುಚ್ಚಿದ್ದ ಹುಣಸೂರು ತಾಲೂಕಿನ ಮಲಗನಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಹಚ್ಚಿ, ಹೊಸ ರೂಪ ನೀಡಿ, ಅಗತ್ಯ ಸೌಲಭ್ಯಗಳನ್ನು ಒದಗಿಸಿ ಮತ್ತೆ ಪುನರಾರಂಭ ಮಾಡಿರುವುದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

ಪರಿಶ್ರಮದ ಸಾಧನೆಗೆ ಪ್ರಶಸ್ತಿಗಳ ಗರಿ

ಗ್ರಾಮೀಣ ಪ್ರದೇಶಗಳ ಹಾಗೂ ಶಾಲೆಗಳ ಆವರಣದಲ್ಲಿ ಶ್ರಮದಾನ, ನದಿಗಳ ಸ್ವಚ್ಛತೆ ಕೈಗೊಂಡಿರುವ ಅವರು, ಮೈಸೂರಿನ ಸಸ್ಯಧಾಮದ ಸಹಯೋಗದೊಂದಿಗೆ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಸಂರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಕೇಂದ್ರ ಸರ್ಕಾರದ ಕಾರ್ಯಕ್ರಮಗಳಾದ ಸ್ವಚ್ಚ ಭಾರತ ಅಭಿಯಾನ, ಸ್ವಚ್ಛ ಭಾರತ್ ಪಖ್ವಾಡ, ‘ಸ್ವಚ್ಚತಾ ಹೀ ಸೇವಾ’ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕೆ.ಎಸ್. ಗದ್ದಿಗೆ ಸಮೀಪದ ಗ್ರಾಮಗಳನ್ನು ದತ್ತು ಪಡೆದು ನಿಗದಿಯಾದ ಕಾರ್ಯಗಳನ್ನು ನಡೆಸಿದ್ದಾರೆ. ಇದಲ್ಲದೆ ಸ್ಥಳೀಯ ಸ್ಮಾರಕಗಳ ಸಂರಕ್ಷಣೆ ಸೇರಿದಂತೆ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ದಾನಿಗಳ ಸಹಾಯದಿಂದ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

ಸೆಪ್ಟೆಂಬರ್ 20ರಂದು ತಮ್ಮ ಹುಟ್ಟುಹಬ್ಬದಂದು ಕೆಂಡಗಣ್ಯಪುರದ ಅಂಗನವಾಡಿ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದು ತಮ್ಮ ತಂಡದೊಂದಿಗೆ ಬಣ್ಣ ಹಚ್ಚಿ, ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ಮೂಲಕ ಹುಟ್ಟುಹಬ್ಬವನ್ನು ಸಮಾಜಮುಖಿಯಾಗಿ ಆಚರಿಸಿದ್ದಾರೆ. ಇವರ ಈ ಕಾರ್ಯಗಳಿಗೆ ನಟ ರಿಷಬ್ ಶೆಟ್ಟಿ ಅವರು ‘ಎಕ್ಸ್’ (ಟ್ವಿಟರ್) ತಾಣದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.

ಈ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿವಿಧ ಸಂಸ್ಥೆಗಳಿಂದ 30ಕ್ಕೂ ಹೆಚ್ಚು ಪ್ರಶಸ್ತಿ ಹಾಗೂ ಗೌರವಗಳು ಅವರಿಗೆ ಲಭಿಸಿವೆ.

ಮಾನಸ ಸಾಧನೆಗೆ ರಿಷಬ್ ಶೆಟ್ಟಿ ಸಿನಿಮಾ ಪ್ರೇರಣೆ…

ಈ ಸಂದರ್ಭದಲ್ಲಿ ಮಾತನಾಡಿದ ಮಾನಸ ಸಿ.ಆರ್ ಅವರು, “ಸರ್ಕಾರಿ ಕನ್ನಡ ಶಾಲೆ ಉಳಿಸಿ-ಬೆಳೆಸಿ ಅಭಿಯಾನ ಪ್ರಾರಂಭಿಸಲು ರಿಷಬ್ ಶೆಟ್ಟಿ ಅವರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಪ್ರೇರಣೆ ನೀಡಿತು. ಚಿಕ್ಕಂದಿನಿಂದಲೂ ನನ್ನ ತಂದೆ-ತಾಯಿ ಸಮಾಜ ಸೇವೆ ಮಾಡುವಂತೆ ಪ್ರೋತ್ಸಾಹ ನೀಡಿದರು.

ಪದವಿ ಹಂತದಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ವಿ. ಸಾಂಬಶಿವಯ್ಯ, ಮೈಸೂರು ವಿಶ್ವವಿದ್ಯಾನಿಲಯದ ಸಂಯೋಜನಾಧಿಕಾರಿ ಡಾ. ಎಂ.ಬಿ.ಸುರೇಶ್ ಹಾಗೂ ಕಾಲೇಜಿನ ಕಾರ್ಯಕ್ರಮಾಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿದರು. ದಾನಿಗಳು ಹಾಗೂ ಎನ್‌ಎಸ್‌ಎಸ್ ತಂಡದ ಸಹಕಾರದಿಂದ ಸರ್ಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು.

ತೀರಾ ಹಿಂದುಳಿದಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕೆಂಬ ಗುರಿ ಹೊಂದಿದ್ದು, ಇದಕ್ಕಾಗಿ ಎನ್ ಜಿಒ (NGO) ಪ್ರಾರಂಭಿಸಬೇಕೆಂಬ ಆಸೆ ಇದೆ ಎಂದು ತಮ್ಮ ಕನಸನ್ನು ಬಿಚ್ಚಿಟ್ಟರು.

ಮಳವಳ್ಳಿ ತಾಲೂಕಿನ ಚೋಟನಹಳ್ಳಿ ಗ್ರಾಮದ ಕೃಷಿಕ ಕುಟುಂಬದವರಾದ ಇವರ ತಂದೆ ರವಿಕುಮಾ‌ರ್ ಹಾಗೂ ತಾಯಿ ಅನಿತಾ. ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ ಸಮಾಜ ಸೇವೆ ಮಾಡುತ್ತಾ ಆದರ್ಶ ಸಮಾಜ ರೂಪಿಸುವತ್ತ ಹೆಜ್ಜೆ ಇಟ್ಟಿರುವ ಮಾನಸ ಅವರ ಮುಂದಿನ ಗುರಿಗಳಿಗೆ ವ್ಯಾಪಕ ಮೆಚ್ಚುಗೆ ಹಾಗೂ ಶುಭಹಾರೈಕೆಗಳು ವ್ಯಕ್ತವಾಗಿವೆ.

ವಿದ್ಯಾರ್ಥಿನಿ ಮಾನಸ ಅವರ ಸಮಾಜಮುಖಿ ಕಾರ್ಯಗಳ ಇನ್ನಷ್ಟು ಚಿತ್ರಗಳು..

 

 

 

 

admin
the authoradmin

ನಿಮ್ಮದೊಂದು ಉತ್ತರ