LatestMysore

ಮುದ್ದನಹಳ್ಳಿ -ಕೆಸ್ತೂರು ಸಂಪರ್ಕ ರಸ್ತೆ ಅಭಿವೃದ್ಧಿ ಯಾವಾಗ? ಶಾಸಕರೇ ಇತ್ತ ಗಮನಹರಿಸಿ!

 ಹೊಸೂರು(ಸಂಘಟನೆ ಮಂಜುನಾಥ್): ಈ ರಸ್ತೆ ಗ್ರಾಮದ ಜನರ ಪ್ರಮುಖ ಸಂಚಾರದ ಕೊಂಡಿಯಾಗಿದೆ. ಆದರೆ ಯಾವುದೇ ರೀತಿಯ ಅಭಿವೃದ್ಧಿ ಕಾಣದ ಶಿಲಾಯುಗದಲ್ಲಿದ್ದ ರಸ್ತೆಯಂತೆ ಗೋಚರಿಸುತ್ತಿದೆ.. ನಮ್ಮ ಜನಪ್ರತಿನಿಧಿಗಳಿಗೆ ಈ ರಸ್ತೆಯನ್ನು ಅಭಿವೃದ್ಧಿ ಮಾಡಬೇಕೆಂಬ ಮನಸ್ಸು ಬಂದಂತೆ ಕಾಣುತ್ತಿಲ್ಲ.. ಹಾಗಾದರೆ ಯಾವುದು ಈ ರಸ್ತೆ ಎಂದು ಯೋಚಿಸುತ್ತಿದ್ದೀರಾ? ಇದುವೇ     ಸಾಲಿಗ್ರಾಮ ತಾಲೂಕಿನ ಮುದ್ದನಹಳ್ಳಿ ಗ್ರಾಮದಿಂದ ಕೆ.ಅರ್.ನಗರ ತಾಲೂಕಿನ ಕೆಸ್ತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ.. ಇದರಲ್ಲೊಮ್ಮೆ ಸಂಚರಿಸಿದರೆ  ನಮ್ಮ ವ್ಯವಸ್ಥೆಗೆ ಹಿಡಿಶಾಪ ಹಾಕುವುದರಲ್ಲಿ ಎರಡು ಮಾತಿಲ್ಲ.

ನಮ್ಮ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದೆ.. ಅದನ್ನು ದುರಸ್ತಿ ಮಾಡಿಕೊಡಿ ಎಂದು ಶಾಸಕ ಡಿ.ರವಿಶಂಕರ್ ಅವರಲ್ಲಿ ಮನವಿ ಮಾಡಿಕೊಂಡಿರುವ ಗ್ರಾಮಸ್ಥರು ಇದಕ್ಕೆ ಸ್ಪಂದಿಸದಿದ್ದರೆ, ಮುಂದೆ ಬರಲಿರುವ ಜಿಪಂ, ತಾಪಂ ಸೇರಿದಂತೆ ಎಲ್ಲ  ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಬೇರೆಡೆ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡುವ ರಾಜ್ಯ ಸರ್ಕಾರ ಇಲ್ಲಿ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಯನ್ನೇಕೆ  ಮರೆತು ಕುಳಿತಿದೆ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.     ಮುದ್ದನಹಳ್ಳಿ ಗ್ರಾಮದಿಂದ ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು ನಾಲ್ಕು ಕಿಲೋ ಮೀಟರ್ ದೂರ ಮಾತ್ರ ಹಲವಾರು ದಶಕಗಳಿಂದ ಸರ್ಕಾರದ ನಿರ್ಲಕ್ಷದಿಂದ ಅಭಿವೃದ್ಧಿ ಮಾತ್ರ ಕಂಡಿಲ್ಲ ಇದರಿಂದ ರಸ್ತೆ ತನ್ನ ಮೂಲ ಸ್ವರೂಪವನ್ನೇ ಕಳೆದು ಕೊಳ್ಳುತ್ತಿದೆ. ಪರಿಣಾಮ ಇದರಲ್ಲಿ ಸಂಚರಿಸುವವರು ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ.

ಈ ರಸ್ತೆಯ  ಇನ್ನೊಂದು ವಿಶೇಷ ಏನೆಂದರೆ  ರಸ್ತೆ ನಿರ್ಮಾಣವಾದ ಕಾಲದಿಂದ  ಇಲ್ಲಿವರೆಗೂ ಡಾಂಬರೀಕರಣವನ್ನೇ ಕಂಡಿಲ್ಲ.  ರಸ್ತೆಗೆ ಹಾಕಲಾಗಿದ್ದ ಜಲ್ಲಿ ಕಲ್ಲುಗಳು ಎಲ್ಲಿ ನೋಡಿದರಲ್ಲಿ  ಕಿತ್ತು ಬಂದು ಗುಂಡಿ, ಹೊಂಡಗಳಿಂದ ಕೂಡಿದೆ. ಇವುಗಳನ್ನು ತಪ್ಪಿಸಿಕೊಂಡು ಮುನ್ನಡೆಯುವುದು ಒಂದು ಸಾಹಸ ಅಷ್ಟೇ  ಅಲ್ಲದೆ ಯಾವುದೇ ತೊಂದರೆಯಾಗದೆ ಮನೆ ಸೇರಿದರೆ ಅದೇ ನೆಮ್ಮದಿ.

ಈ ರಸ್ತೆಯು ಮುದ್ದನಹಳ್ಳಿ ಕೆರೆ ಏರಿಯ ಮೇಲೆ ಹಾದು ಹೋಗಿದ್ದು, ಇಲ್ಲಿಯು ಗುಂಡಿಗಳು ಬಿದ್ದು ಮಳೆಗಾಲದಲ್ಲಿ ನೀರು ತುಂಬಿಕೊಂಡು ರಸ್ತೆ ಎಲ್ಲಿ ಎಂಬುವುದನ್ನು ಹುಡುಕಿ ಸರ್ಕಸ್ ಮಾಡಿ ವಾಹನ ಓಡಿಸ ಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ  ಬಿದ್ದು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು ಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಇನ್ನು ಕೆರೆ ಏರಿ ಬಳಿ ತಡೆ ಗೋಡೆ ನಿರ್ಮಾಣವಾಗದ ಕಾರಣ ಎರಡು ವಾಹನಗಳು ಎದುರು -ಬದುರು ಸಂಚರಿಸಿದರೆ ಜೀವ ಭಯದಿಂದ ವಾಹನ ಸಂಚರಿಸಬೇಕಾದ ಪರಿಸ್ಥಿತಿ ಇದೆ.   ಈ ರಸ್ತೆ ಅಭಿವೃದ್ದಿಯಾದರೆ ಮುದ್ದನಹಳ್ಳಿ ಗ್ರಾಮಸ್ಥರು ಕೆ.ಆರ್.ನಗರಕ್ಕೆ ತೆರಳಲು ಹತ್ತಿರವಾಗಲಿದ್ದು ಇದರಿಂದ ಗ್ರಾಮಸ್ಥರಿಗೆ ಉಪಯೋಗವಾಗಲಿದೆ. ಈ ರಸ್ತೆಯನ್ನು ಅಭಿವೃದ್ದಿ ಪಡಿಸಿ ಎಂದು ನಮ್ಮನ್ನಾಳುವ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಈ ರಸ್ತೆ ಅಭಿವೃದ್ಧಿ ಕಂಡಿಲ್ಲ ಎನ್ನುವುದೇ ಬೇಸರದ ಸಂಗತಿ..

ಈ ಬಗ್ಗೆ ಮಾತನಾಡಿರುವ ಮುದ್ದನಹಳ್ಳಿ ನಿವಾಸಿ   ಕೃಷ್ಣೆಗೌಡ  ಅವರು ಮುದ್ದನಹಳ್ಳಿ-ಕೆಸ್ತೂರು ರಸ್ತೆ ಅಭಿವೃದ್ದಿ ಪಡಿಸುವಂತೆ ಹಲವಾರು ಬಾರಿ ಚುನಾಯಿತ ಜನಪ್ರತಿನಿಧಿಗಳು ಮತ್ತು ಜಿ.ಪಂ.ಇಲಾಖೆಯವರಿಗೆ ಮನವಿ ಮಾಡಿದರೂ ಈ ರಸ್ತೆಯ ಅಭಿವೃದ್ದಿಗೆ ಗಮನಹರಿಸುತ್ತಿಲ್ಲ ಈ ರೀತಿ ಅಸಡ್ಡೆ- ನಿರ್ಲಕ್ಷ್ಯ ತೋರಿದರೆ ಮುಂದಿನ ಜಿ.ಪಂ.ತಾ.ಪಂ.ಚುನಾವಣೆ ಬಹಿಷ್ಕಾರ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನಾದರೂ ಮುದ್ದನಹಳ್ಳಿ ಮತ್ತು ಕೆಸ್ತೂರು ಗ್ರಾಮದ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು  ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಹಾಗೂ ಜಿ.ಪಂ. ಇಲಾಖೆಯ ಅಧಿಕಾರಿಗಳು ಮುಂದಾಗುತ್ತಾರಾ? ಎಂಬುವುದನ್ನು ಕಾದು ನೋಡಬೇಕಿದೆ.

admin
the authoradmin

Leave a Reply

Translate to any language you want