2026 ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯೋಗದ ಸಮಗ್ರ ಪರಿಚಯದೊಂದಿಗೆ ಅದರ ಉದ್ದೇಶಗಳು. ಉಪಯೋಗಗಳು ಎಲ್ಲವನ್ನೂ ತಮ್ಮ ವಿಶೇಷ ಲೇಖನದ ಮೂಲಕ ಹಿರಿಯಬರಹಗಾರರಾದ ಕುಮಾರಕವಿ ಬಿ.ಎನ್.ನಟರಾಜ್ ಓದುಗರ ಮುಂದೆ ತೆರೆದಿಟ್ಟಿದ್ದಾರೆ.. ಓದುವ ಸರದಿ ನಿಮ್ಮದು…
‘ಯೋಗ” ಎಂದರೆ ಜೀವನದ ಪರಿಪೂರ್ಣ ಅನುಭವ. ಭೌತಪೂರ್ಣ ಅಭ್ಯಾಸ, ಬೌದ್ಧಪೂರ್ಣ ಹವ್ಯಾಸ. ಮನುಷ್ಯನ ಸಂಪೂರ್ಣ (ವಿ)ಜ್ಞಾನದ ವಿಕಸನ (ಪ್ರ)ಕ್ರಿಯೆ! ‘ಯೋಗ’ ಸಂಸ್ಕೃತದ ‘ಯುಜ್’ ಎಂಬ ಧಾತುವಿನಿಂದ ಉಗಮವಾಗಿದೆ. ಯೋಗ ಮತ್ತು ಆಯುರ್ವೇದ ಇವೆರಡೂ [ವಿ]ಜ್ಞಾನಗಳು ಮೊಟ್ಟ ಮೊದಲು ಪ್ರಾರಂಭವಾದುದು ಭಾರತದಲ್ಲಿ. ಶತಮಾನಗಳಷ್ಟು ಹಿಂದೆ ಸಂತ ಪತಂಜಲಿ ಗುರುವರೇಣ್ಯರಿಂದ ನಾಡಿ, ಚಕ್ರ ಹಾಗೂ ಕುಂಡಲಿನೀ ವಿದ್ಯೆ ಮೂಲದ ‘ಯೋಗಶಾಸ್ತ್ರ’ ಭಾರತದಲ್ಲಿ ಜನ್ಮತಾಳಿತು. ಪತಂಜಲಿಯೋಗದ ಅನ್ವರ್ಥ “ಯೋಗ ಚಿತ್ತ ವೃತ್ತಿ ನಿರೋಧಃ”! ಆಸನ, ಬಂಧ, ಪ್ರಾಣಾಯಾಮ ಒಳಗೊಂಡಂತೆ ಇನ್ನಷ್ಟು ಸಾಕಾರ ರೂಪ ಧರಿಸಿ ಸಾವಧಾನವಾಗಿ ಅಸ್ತಿತ್ವಕ್ಕೆ ಬಂತು.

ವರ್ಷಗಳು ಉರುಳಿದಂತೆ ಯೋಗಶಾಸ್ತ್ರ ಪರಿಷ್ಕೃತಗೊಳ್ಳುತ್ತ ಸಂಸ್ಕಾರಗೊಂಡು ವಿಶ್ವದಾದ್ಯಂತ ವಿಸ್ತರಿಸಿತು. ಅಸಂಖ್ಯಾತ ಯೋಗಶಾಸ್ತ್ರಜ್ಞರ ಜಪ ತಪ ಧ್ಯಾನ ಪರಿಶ್ರಮ ಕೊಡುಗೆ ಹಾಗೂ ತ್ಯಾಗ ಇದರಲ್ಲಿ ತುಂಬಿಕೊಂಡಿದೆ. ಪ್ರಪಂಚದೆಲ್ಲೆಡೆ ವಿವಿಧ ಧರ್ಮ ವರ್ಣ ಭಾಷೆ ಸಂಸ್ಕೃತಿ ನಾಗರಿಕತೆಯ ನೂರಾರು ರಾಷ್ಟ್ರಗಳಲ್ಲಿ ಯೋಗವು ವ್ಯಾಪಕವಾಗಿ ಹರಡಿ ಜಗತ್ಪ್ರಸಿದ್ಧಿಯಾಗಲು ಅನೇಕ ಯೋಗ[ಪಟು]ಗುರುಗಳು ಕಾರಣ. ಅಂಥವರಲ್ಲಿ ಪ್ರಮುಖರು ಇತ್ತೀಚೆಗೆ ದೈವಾಧೀನರಾದ ಬಿ.ಕೆ.ಎಸ್.ಅಯ್ಯಂಗಾರ್ ಇವರು ಹಲವಾರು ಕೃತಿಗಳನ್ನೂ ಬರೆದಿದ್ದಾರೆ. ವಿವಿಧ ಶಾಸ್ತ್ರದಲ್ಲಿರುವಂತೆ ಯೋಗಶಾಸ್ತ್ರದಲ್ಲೂ ಲಿಖಿತ ಮತ್ತು ಪ್ರಾಯೋಗಿಕ ಪಠ್ಯಕ್ರಮಗಳಿವೆ. ಯೋಗಶಾಸ್ತ್ರ ವಿದ್ಯಾಭ್ಯಾಸದಲ್ಲಿ ದೈಹಿಕ ಮತ್ತು ಮಾನಸಿಕ ಅಭ್ಯಾಸಕ್ಕೆ ಸರಿಸಮಾನ ಪ್ರಾಧಾನ್ಯತೆ ನೀಡಲಾಗಿದೆ.
ಆಧುನಿಕತೆ ಹೆಸರಲ್ಲಿ ಅನುಕೂಲಕ್ಕೆ ತಕ್ಕಂತೆ ದೇವ ದೆವ್ವ ಶಾಸ್ತ್ರ ಸಂಪ್ರದಾಯ ಸಂಸ್ಕೃತಿ ನಾಗರಿಕತೆ ಪರಿಸರ ಮುಂತಾದ ಎಲ್ಲವನ್ನು ಮಾರ್ಪಾಡು ಮಾಡಿಕೊಂಡ ಮನುಷ್ಯನು ಕಲಿಯುವವರಿಗೆ ಸುಲಭವಾಗಲೆಂದು ಯೋಗ ಕಲೆಯಲ್ಲಿ ಮಾನಸಿಕ ಅಭ್ಯಾಸಕ್ಕಿಂತ ದೈಹಿಕ ಅಭ್ಯಾಸವನ್ನು ಹೆಚ್ಚು ಜನಪ್ರಿಯಗೊಳಿಸಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶದ ಕಾರ್ಮಿಕವರ್ಗಕ್ಕೂ ಶ್ರೀಸಾಮಾನ್ಯರಿಗೂ ಅರ್ಥ ಮಾಡಿಸಲು “ನೋಡಿ ತಿಳಿಯುವ, ಮಾಡಿ ಕಲಿಯುವ” ಸುಲಭ ಅಭ್ಯಾಸವನ್ನು ರೂಢಿಗೊಳಿಸಲಾಯಿತು.

ಸರಳತೆ ಮತ್ತು ಆರ್ಥಿಕ ತುಟ್ಟಿಯಿಲ್ಲದ ಹಾಗೂ ರೋಗ ನಿವಾರಣಾ ಯೋಜನೆ ಮತ್ತು ಯೋಚನೆ ಇದಾಗಿದೆ. ಇದೇ ಕಾರಣದಿಂದ ವಿದ್ಯಾವಂತರಿಗಿಂತ ಅವಿದ್ಯಾವಂತ ಯೋಗಾಭ್ಯಾಸ ಪಟುಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರೋಗ್ಯದ ಹಿತದೃಷ್ಟಿಯಿಂದ ಕಾಯಕ ಸಮುದಾಯಕ್ಕೆ ಓದು-ಬರಹಕ್ಕಿಂತ ‘ಯೋಗ’ದಲ್ಲಿ ತೀವ್ರ ಆಸಕ್ತಿ ಉಂಟಾಗಿದೆ. ತತ್ಪರಿಣಾಮ ಎಲ್ಲ ವಯಸ್ಸಿನವರಿಗೆ ಲಿಂಗ ತಾರತಮ್ಯವಿಲ್ಲದ ಒಂದು ಅತ್ಯುತ್ತಮ ವ್ಯಾಯಾಮ ಎನಿಸಿಕೊಂಡಿದೆ ಯೋಗದ ಅಭ್ಯಾಸ!
ಕಾಲಕ್ರಮೇಣ, ಯೋಗವು ಜೀವನದ ಕಲೆಗಳಲ್ಲಿ ಒಂದೆನಿಸಿ ಆಕರ್ಷಣೆಗೆ ಒಳಗಾಯಿತು. ಸ್ವಾಮಿವಿವೇಕಾನಂದ, ಮಹಾತ್ಮಗಾಂಧೀಜಿ, ವೀರ್ ಸಾವರ್ಕರ್, ದೀನದಯಾಳ್ ಉಪಾಧ್ಯಾಯ, ಅಮಿತಾಬ್‌ಬಚ್ಚನ್, ಡಾ.ರಾಜ್‌ಕುಮಾರ್, ಬಾಬಾರಾಮ್‌ದೇವ್, ಇನ್ಫೋಸಿಸ್ ನಾರಾಯಣಮೂರ್ತಿ, ಮುಂತಾದ ಗಣ್ಯಾತಿಗಣ್ಯರು ಸದಭಿಪ್ರಾಯ ತಳೆದರು. ಇಂಥ ದಿಗ್ಗಜರು ಯೋಗದ ಬಗ್ಗೆ ಉತ್ಸಾಹದ ಪ್ರೋತ್ಸಾಹದ ಕೈಂಕರ್ಯ ಕೈಗೊಂಡರು. ಯೋಗವು ಎಷ್ಟರಮಟ್ಟಿಗೆ ಪ್ರಯೋಜನಕಾರಿ ಮತ್ತು ಆರೋಗ್ಯಕಾರಿ ಎಂಬುದಕ್ಕೆ ಮುಖ್ಯ ಉದಾಹರಣೆ..

2015ರಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಹೇಳಿದ್ದು ಹೀಗೆ… “ಯೋಗದಲ್ಲಿ ಧರ್ಮದ ಕಟ್ಟುಪಾಡಿಲ್ಲ ರಾಜಕೀಯವಿಲ್ಲ ಯೋಗ ಕಲಿಯಲು ತಾರತಮ್ಯ ಸರಿಯಲ್ಲ ಯಾರು ಬೇಕಾದರು ಕಲಿಯಬಹುದು ನಾನೂ ಕೆಲವೊಂದು ಯೋಗಾಸನ ಮಾಡಿದೆ. ಅದರಿಂದ ನನಗೆ ತೃಪ್ತಿ ಸಿಕ್ಕಿದೆ ನನ್ನ ಮೊದಲ ಪ್ರಯತ್ನದಲ್ಲೆ ಯೋಗದ ಮಹತ್ವ ಅರಿತುಕೊಂಡೆ, ಪ್ರಥಮ ಬಾರಿ ಕಲಿಯುವವರಿಗೆ ವೃಕ್ಷಾಸನವು ಉತ್ತಮ, ಯೋಗಾಭ್ಯಾಸದ ಪರಿಣಾಮವಾಗಿ ವಿವಿಧ ಬಗೆಯ ರೋಗ ಮತ್ತು ನೋವು ಉಪಶಮನವಾಗುತ್ತದೆ”
ಎಂಬ ಘನತೆಯ ಅಭಿಪ್ರಾಯ ನುಡಿದಿದ್ದಾರೆ. ಯಾವುದೇ ಕಟ್ಟುಪಾಡಿಗೆ ಒಳಪಡಿಸದೆ, ಕಾನೂನು ಕಟ್ಟಳೆಗೆ ಬಲಿಯಾಗಿಸದೆ, ನಿತ್ಯಜೀವನಕ್ಕೆ ತೊಡಕಾಗದಂತೆ, ಪ್ರತಿಯೊಬ್ಬರೂ ಯೋಗವನ್ನು ಅಳವಡಿಸಿಕೊಂಡು ಬದುಕುವಂತೆ ಗಂಭೀರದ ಸಲಹೆ ನೀಡಿದ್ದಾರೆ.
ಅಷ್ಠಾಂಗ ಯೋಗ
[1]ಯಮ [2]ನಿಯಮ [3]ಆಸನ [4]ಪ್ರಾಣಾಯಾಮ [5]ಪ್ರತ್ಯಾಹಾರ [6]ಧಾರಣ [7]ಧ್ಯಾನ [8]ಸಮಾಧಿ.
ಇವುಗಳ ವಿವರ ಹೀಗಿದೆ.. ಸ್ವಾಸ್ಥ್ಯ ರಹಸ್ಯ, ಆಹಾರ ನಿಯಮ, ಸ್ಥೂಲತಾ ಹರಣ, ಕ್ರಿಯೆ, ಬಂಧ, ಯೋಗ ಮುದ್ರೆ, ಸತ್ಯ, ಅಹಿಂಸೆ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯೆ, ಶೌಚ, ಸಂತಸ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ, ಮುಂತಾದವುಗಳನ್ನೂ ಪ್ರತಿದಿನ ಕಲಿಯಬಹುದು. ವಿಶೇಷವಾಗಿ ಸೂರ್ಯ-ನಮಸ್ಕಾರವನ್ನು ಯಾವ ಋತು ವಿನಲ್ಲಾದರೂ ಯಾವ ಸ್ಥಳದಲ್ಲಾದರೂ ಸುಲಭವಾಗಿ ಯಾರು ಬೇಕಾದರೂ ಕೈಗೊಳ್ಳಬಹುದು.
ಈ ಮೇಲಿನ ಎಂಟು ಬಗೆಯ ಯೋಗದ ಜತೆಗೆ 9ನೇದು ನವರತ್ನದಂಥ ಸೂರ್ಯ ನಮಸ್ಕಾರ(SALUTE TO THE 🌞 SUN). ಇದೊಂದು ಸರ್ವ ಸಮ್ಮತದ ಸರ್ವಾಂಗ ಪ್ರಯೋಜನದ ಉತ್ತಮ ದೈಹಿಕ ಮತ್ತು ಮಾನಸಿಕ ವ್ಯಾಯಾಮ.ಪ್ರತಿಯೊಬ್ಬ ಮನುಷ್ಯರಲ್ಲಿ 72000 ನರ-ನಾಡಿಗಳು ಇದ್ದು ಇವೆಲ್ಲಕ್ಕೂ ಜೀವ ತುಂಬುತ್ತದೆ! ತೂಕ ಇಳಿಸುವ ಅತ್ಯಂತ ಸುಲಭಸಾಧನ ಈ ಸೂರ್ಯ ನಮನಾಸನ ಯೋಗವಿಧಾನ! ಏಕೆಂದರೆ ಸೂರ್ಯನಮಸ್ಕಾರ ಒಂದರಲ್ಲೆ 12 ಬಗೆಯ ಆಸನಗಳ ವಿವಿಧ ಭಂಗಿಇದ್ದು ಅವುಗಳ ವಿವರ ಹೀಗಿದೆ:-

- ಪ್ರಣಾಮಆಸನ (PRAYER POSE)
- ಹಸ್ತಉತ್ಥಾನಆಸನ (Raised ARMS POSE)
- ಹಸ್ತಪಾದಆಸನ (standing forward bend pose)
- ಅಶ್ವಸಂಚಲನಆಸನ (LUNGE POSE left leg)
- ಚತುರ್ ಅಂಗ ದಂಡಾಸನ (PLANK POSE)
- ಅಷ್ಠಾಂಗ ನಮಸ್ಕಾರಾಸನ (8 LIMBED POSE)
- ಭುಜಂಗಆಸನ (COBRA POSE)
8.ಅಧೋಮುಖಶ್ವಾನಾಸನ (Downfacing DogPOSE)
- ಅಶ್ವಸಂಚಲನಆಸನ (LUNGE POSE right leg)
10.ಹಸ್ತಪಾದಆಸನ (standing forward bend pose)
11.ಹಸ್ತಉತ್ಥಾನಆಸನ (Raised ARMS POSE)
12.ಪ್ರಣಾಮ ಆಸನ (PRAYER POSE)

‘ತಾಡಾಸನ’ದಿಂದ ಮೊದಲ್ಗೊಂಡು ‘ಶವಾಸನ’ದವರೆಗೆ ೭೪ ಪ್ರಮುಖ ಆಸನಗಳಿವೆ. ಬೇರೆ ಬೇರೆ ರೀತಿಯ ರೋಗ ಮತ್ತು ನೋವು ಉಪಶಮನಕ್ಕೆ ತಕ್ಕುದಾದ ವಿವಿಧ ಬಗೆಯ ಯೋಗಾಸನಗಳು ಇದ್ದು ಬಾಧೆಗೆ ತಕ್ಕಂತೆ ಪ್ರತಿಯೊಂದನ್ನು ಸರಿಯಾಗಿ ತಿಳಿದುಕೊಂಡು ಅರ್ಥ ಮಾಡಿಕೊಂಡು ಆನಂತರ ಅಪಾಯವಾಗದಂತೆ ಎಚ್ಚರಿಕೆಯಿಂದ ನಿಧಾನವಾಗಿ ಅಭ್ಯಾಸವನ್ನು ನಿರಂತರ ಮಾಡಬೇಕು.ಯೋಗಾಭ್ಯಾಸದ ಪ್ರಯೋಜನ, ಲಾಭಗಳು ಇವು: ಏಕಾಗ್ರತೆ, ಜ್ಞಾನವೃದ್ಧಿ, ನೆನಪಿನಶಕ್ತಿ ಹೆಚ್ಚಳ, ಸಹನೆ, ಆವಾಹನೆ, ತಾಳ್ಮೆ, ಶಾಂತಿ, ನೆಮ್ಮದಿ!
ಯೋಗಾಭ್ಯಾಸದಿಂದ(ಉಪ)ಶಮನ ವಾಗುವ ರೋಗ… ಬೊಜ್ಜು ಕರಗುವಿಕೆ, ಅಜೀರ್ಣ, ಹುಳಿತೇಗು, ವಾಕರಿಕೆ ವಾಂತಿ, ಕಫ಼ಾ ವಾತಾ ಪಿತ್ತ ತೊಂದರೆ ಪಾರ್ಶ್ವ/ಪೂರ್ಣ ವಾಯುರೋಗ ಹೊಟ್ಟೆಯುರಿ, ಹೊಟ್ಟೆನೋವು, ಮಲಬದ್ಧತೆ, ಮೂತ್ರಕೋಶದ ತೊಂದರೆ ಮೂಗು ಕಟ್ಟುವುದು, ಉಸಿರಾಟದ ತೊಂದರೆ ಗಂಟಲುಬೇನೆ, ಗಂಟಲಲ್ಲಿ ರಕ್ತಸ್ರಾವ, ದಂತ ಮತ್ತು ದವಡೆಯಲ್ಲಿ ರಕ್ತಸ್ರಾವ ಬಾಯಿ ನೋವು ಉರಿ-ಊತ, ಕಣ್ಣು ಕಿವಿ ಮೂಗು, ಉರಿಊತ, ಕೈಕಾಲು ಮಂಡಿಕೀಲು ನೋವು, ಸಣ್ಣಕರುಳಿನ, ದೊಡ್ಡಕರುಳಿನ ಹುಣ್ಣು, ಒತ್ತಲೆ ನೋವು, ಪೂರ್ಣತಲೆ ನೋವು, ಮುಂದಲೆ ಅಥವ ಕಿವಿಯಲ್ಲಿ ಕೀವು, ದಮ್ಮುಕೆಮ್ಮು, ರಕ್ತದೊತ್ತಡ(ಬಿ.ಪಿ.) ಮಧುಮೇಹ (ಡಯಾಬಿಟೀಸ್)

ಜಠರ, ಶ್ವಾಸಕೋಶ, ವಾಯುಬಾಧೆ, ಮುಂತಾದ ರೋಗಗಳು. ಅಸಹನೆ, ಆತಂಕ, ಮುಂಗೋಪ, ದುಡುಕು, ಸ್ವಭಾವಗಳು ನಿದ್ರಾಹೀನತೆ, ದುಸ್ವಪ್ನ, ಭಯ-ಭೀತಿ, ಪುಕ್ಕಲುತನ ಅಥವ ಹೇಡಿತನ ಇಂಥವುಗಳಲ್ಲದೇ ದುರ್ಬುದ್ಧಿ, ದುರ್ನಡತೆ ಉಳ್ಳವರು, ದುಷ್ಟಶಕ್ತಿ ಆವಾಹನೆ ಮಾಡಿಕೊಂಡವರು, ಗರ್ಭಕೋಶದ ತೊಂದರೆ, ಬಂಜೆತನ, ನಿರ್ವೀರ್ಯತೆ, ಅಶಕ್ತ-ವೀರ್ಯಾಣು, ನಪುಂಸಕತ್ವ ಅಕಾಲಿಕ ಮುಟ್ಟು ರಕ್ತಸ್ರಾವ ಬಿಳಿಸೆರಗು ಮುಂತಾದವು ಖಂಡಿತ (ಉಪ)ಶಮನ ಆಗುತ್ತದೆ? ಆದರೆ, ನಿಖರವಾಗಿ ಸರಿಯಾಗಿ ಯೋಗ ಸತತಾಭ್ಯಾಸ ಮಾಡಿದರೆ ಮಾತ್ರ!
ಯೋಗಾಭ್ಯಾಸ ವಿಧಿವಿಧಾನ, ಸಮಯ.. ಅರುಣೋದಯ ಅಥವಾ ಗೋಧೂಳಿ ಸಮಯವು ಪ್ರಶಸ್ತವಾದುದು. ಪ್ರಾತಃಕಾಲ ಆಹಾರ ತೆಗೆದುಕೊಳ್ಳುವ ಮುಂಚೆ ಅಥವಾ ಆಹಾರ ತೆಗೆದುಕೊಂಡ ಮೇಲೆ ಕನಿಷ್ಟ ೩ಗಂಟೆಯ ನಂತರ ಯೋಗಅಭ್ಯಾಸ ಪ್ರಾರಂಭ ಮಾಡುವ ಮುನ್ನ ೨ಲೋಟ ನೀರು ಕುಡಿದಿರಲೇಬೇಕು. ಅಭ್ಯಾಸಕ್ಕೆ ಮುನ್ನ ಮತ್ತು ಅಭ್ಯಾಸದ ನಂತರ ಸ್ನಾನ ಮಾಡಬೇಕು. ಕಡೇ ಆಸನದ ಅಭ್ಯಾಸ ಮುಗಿದು ಹೊರಡುಮುನ್ನ ಅಂತ್ಯದಲ್ಲಿ ಕನಿಷ್ಟ ೫ ನಿಮಿಷ ಶವಾಸನವನ್ನು ಕಡ್ಡಾಯವಾಗಿ ಮಾಡಲೇಬೇಕು.

ಯೋಗಾಭ್ಯಾಸವನ್ನ ಯಾರು, ಯಾವಾಗ ಮಾಡಬಾರದು
*ನುರಿತ ಶಿಕ್ಷಕರ ಮಾರ್ಗದರ್ಶನವಿಲ್ಲದೆ ಮಾಡಬಾರದು
*ಯಾವುದೇ ಆಸನ ಕಷ್ಟಕರ ಎನಿಸಿದಾಗ ಅಥವ ದಾಕ್ಷಿಣ್ಯಕ್ಕೆ ಅಥವ ಬಲವಂತದಿಂದ ಮಾಡಬಾರದು
*7 ವರ್ಷ ಒಳಪಟ್ಟ ಮಕ್ಕಳು ಮಾಡಬಾರದು
*ಗರ್ಭಿಣಿಯರು, ಬಾಣಂತಿಯರು ಮಾಡಬಾರದು
*ಮಾಸಿಕ ರಜದ ಸ್ತ್ರೀಯರು-ಯುವತಿಯರು ಮಾಡಬಾರದು
*ಸಾಂಕ್ರಾಮಿಕ ರೋಗ ಪೀಡಿತರು ಮಾಡಬಾರದು
*ವಿಕಲಚೇತನರು/ಅಂಗವಿಕಲರು ಮಾಡಬಾರದು
*ತಂಬಾಕು ವ್ಯಸನಿಗಳು/drugs addicts ಮಾಡಬಾರದು
*ಮದ್ಯಪಾನ ಮಾಡಿ(ದ್ದಾಗ)ದವರು ಮಾಡಬಾರದು
*ಅಸ್ತಿಚಿಕಿತ್ಸೆಗೆ/ಶಸ್ತ್ರಚಿಕಿತ್ಸೆಗೆ ಒಳಪಟ್ಟವರು ಮಾಡಬಾರದು
*ಅನಾರೋಗ್ಯ(ಪೀಡಿತರು)ದಿಂದ ಬಳಲುತ್ತಿರುವವರು ಮತ್ತು *ಬುದ್ಧಿ(ಮಾಂದ್ಯರು)ಹೀನರು ಮಾಡಬಾರದು
*ವಿಚಲಿತ/ವಿಕೃತ ಮನಸ್ಸುಳ್ಳವರು ಮಾಡಬಾರದು.

ಈ ಆರೋಗ್ಯಪವಿತ್ರ ಅಂಗಾಂಗದ ಯಾವುದೇ ಭಂಗಿಯ ಯೋಗಾಭ್ಯಾಸವನ್ನು ಮಾಡುವಂತಿಲ್ಲ, ಮಾಡಕೂಡದು!? ಯೋಗವೇ ಜೀವನ… ಎಂದು ತಿಳಿದು ನಾವೆಲ್ಲರೂ ಒಗ್ಗಟ್ಟು ಒಮ್ಮತದಿಂದ, ಜನಹಿತ ದೃಷ್ಟಿಯಿಂದ ಹಾಗೂ ಆಧುನಿಕ ವೈಜ್ಞಾನಿಕತೆಯ ಜಾಗತೀಕರಣದ ದೃಷ್ಟಿಕೋನದಿಂದ ಉತ್ತಮವಾಗಿರುವಂಥ ಮತ್ತು ಮಾನವನಿಗೋಸ್ಕರ ಮಾನವನೇ ಕಂಡುಕೊಂಡು ಸಾವಿರಾರು ವರ್ಷಗಳಿಂದ ಮಾಡುತ್ತಿರುವ ಅತಿಶ್ರೇಷ್ಠವಾದ ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಇಂದಿನಿಂದಲೆ ಆಚರಣೆಗೆ ತರೋಣ.
ವಿಶ್ವಾಸಾರ್ಹ ಸ್ವಾಸ್ಥ್ಯವನ್ನು ಅಂತ್ಯಕಾಲದ ವರೆಗು ನಿರ್ವಹಣೆ ಮಾಡೋಣ ಎಲ್ಲರಿಗೂ ಯೋಗವನ್ನು ಕಲಿಸೋಣ, ಕಲಿಯಲು ತಿಳಿಸೋಣ, ಜಗದೋದ್ಧಾರ ಮಾಡೋಣ. ಸಧೃಢ ಆರೋಗ್ಯಕ್ಕೆ ಜೈ ಯೋಗಾಯೋಗ! ಸರ್ವೇಜನ ಸುಖಿನೋಭವಂತು! ಸದಾ ಆರೋಗ್ಯ ಸಿದ್ಧಿರಸ್ತು! ಸದ್ಬುದ್ಧಿ ಪ್ರಾಪ್ತಿರಸ್ತು!
ಕುಮಾರಕವಿ ನಟರಾಜ್ ಅವರು ಬರೆದಿರುವ ಇನ್ನಷ್ಟು ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ..










“Yoga Shastra also education” emphasized by Legendary author Natraj sir is 100% ✅. I proudly present that this is one of the best articles in my lifetime ❤. Thank you very much JANAMANA KANNADA. B. BRUNDA RAGHAVAN, Indira Nagar, 2nd stage, Bengaluru
ವಿಶ್ವ ಯೋಗ ದಿನಾಚರಣೆ ಕುರಿತು ಕುಮಾರಕವಿ ನಟರಾಜ ರವರ ಲೇಖನ ಓದಿದ ನನಗೆ ಅತೀವ ಆನಂದ ಉಂಟಾಯಿತು. ಏಕೆಂದರೆ ಕಳೆದ 28 ವರ್ಷಗಳಿಂದ ಸದರಿ ಯೋಗ ಶಾಸ್ತ್ರ ಅಥವ ಯೋಗ ವಿಜ್ಞಾನ ಹಾಗೂ ಯೋಗಾಭ್ಯಾಸ ಮತ್ತು ಯೋಗಮುದ್ರೆ ಆಸನಗಳ ಬಗ್ಗೆ ವಿದೇಶಗಳಲ್ಲೂ, ನಮ್ಮ ದೇಶದ ಅನೇಕ ನಗರಗಳಲ್ಲೂ ಸಹ ತರಬೇತಿ ಶಿಬಿರ ನಡೆಸಿದ್ದೇನೆ. ಸಾವಿರಾರು ಯೋಗಪಟುಗಳನ್ನು ತಯಾರಿಮಾಡಿರುವೆ. ಇವತ್ತಿಗೂ ನಿರಂತರವಾಗಿ ನಮ್ಮ ಸೇವೆ ನಡೆಯುತ್ತಲೇ ಬಂದಿದೆ. ಈ ಕಾರಣಕ್ಕೆ ಈ ಲೇಖನ ಮತ್ತು ಲೇಖಕರ ಬಗ್ಗೆ ನನ್ನ ಅಭಿಪ್ರಾಯ ತಿಳಿಸುವ ಪ್ರಯತ್ನ ಮಾಡಿರುವೆ. ಸಮಾಜ ಪೂರಕವಾದ ಆರೋಗ್ಯ ವೃದ್ಧಿಸುವ ಎಲ್ಲರಿಗೂ ಉಪಯುಕ್ತವಾಗುವ ಇಂತಹ ಲೇಖಕನಗಳು ಈಗಿನ ಕಾಲದಲ್ಲಿ ಬಹಳ ಅಪರೂಪ. ಹೀಗಿರುವಾಗ ಜನಮನ ಪತ್ರಿಕೆಯ ಎಲ್ಲರಿಗೂ ನನ್ನ ಮನಃಪೂರ್ವಕ ಕೃತಜ್ಞತೆಗಳು, ಧನ್ಯವಾದಗಳು, ಪುರೂರವ್ ಮತ್ತು ಭುವನಜ್ಯೋತಿ, ಯೋಗ ಶಿಕ್ಷಕರು, ಬೆಂಗಳೂರು/ಟೆನ್ನೇಸೀ, ಯು.ಎಸ್.ಎ.
ವಿಶ್ವ ಯೋಗ ದಿನಾಚರಣೆ ಕುರಿತು ಕುಮಾರಕವಿ ನಟರಾಜ ರವರ ಲೇಖನ ಓದಿದ ನನಗೆ ಅತೀವ ಆನಂದ ಉಂಟಾಯಿತು. ಏಕೆಂದರೆ ಕಳೆದ 28 ವರ್ಷಗಳಿಂದ ಸದರಿ ಯೋಗಶಾಸ್ತ್ರ, ಯೋಗವಿಜ್ಞಾನ ಹಾಗೂ ಯೋಗಾಭ್ಯಾಸ, ಯೋಗಮುದ್ರೆ ಆಸನಗಳ ಬಗ್ಗೆ ವಿದೇಶಗಳಲ್ಲೂ, ನಮ್ಮ ದೇಶದ ನಗರಗಳಲ್ಲೂ ತರಬೇತಿ ಶಿಬಿರ ನಡೆಸಿ ಸಾವಿರಾರು ಯೋಗಪಟುಗಳನ್ನು ತಯಾರಿಮಾಡಿರುವೆ. ಇವತ್ತಿಗೂ ನಿರಂತರವಾಗಿ ನಮ್ಮಸೇವೆ ನಡೆಯುತ್ತಲೇಇದೆ. ಈಕಾರಣಕ್ಕೆ ಈಲೇಖನ ಮತ್ತು ಲೇಖಕರ ಬಗ್ಗೆ ನನ್ನ ಅಭಿಪ್ರಾಯ ತಿಳಿಸುವ ಪ್ರಯತ್ನ ಮಾಡಿರುವೆ. ಸಮಾಜಪೂರಕವಾದ ಆರೋಗ್ಯವೃದ್ಧಿಸುವ ಎಲ್ಲರಿಗೂ ಉಪಯುಕ್ತವಾಗುವ ಇಂತಹ ಲೇಖಕನಗಳು ಈಗಿನ ಕಾಲದಲ್ಲಿ ಬಹಳ ಅಪರೂಪ. ಹೀಗಿರುವಾಗ ಜನಮನ ಪತ್ರಿಕೆಯ ಎಲ್ಲರಿಗೂ ನನ್ನ ಮನಃಪೂರ್ವಕ ಕೃತಜ್ಞತೆಗಳು, ಪುರೂರವ್ ಮತ್ತು ಭುವನಜ್ಯೋತಿ, ಯೋಗ ಶಿಕ್ಷಕರು, ಬೆಂಗಳೂರು/ಟೆನ್ನೇಸೀ, ಯು.ಎಸ್.ಎ.