ಮಾನಸಗಂಗೋತ್ರಿ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನೆನಪಿನ ನಿನಾದ ಮೂಡಿಸುವ ಸ್ಥಳ!. ಅದರಲ್ಲೂ ವಿಶ್ವ ವಿಖ್ಯಾತ ಮೈಸೂರು ದಸರಾ ಬಂತೆಂದರೆ ಅಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳ ನೃತ್ಯ ಲೋಕದ ವೈಭವ ತೆರೆದುಕೊಳ್ಳುತ್ತದೆ.
ಒಂದಲ್ಲ ಒಂದು ರೀತಿಯಲ್ಲಿ ವಿವಿಧ ಥೀಮ್ ಗಳೊಂದಿಗೆ ಆಕರ್ಷಕ ಶೈಲಿಯ ವರ್ಣ ರಂಜಿತ ನೃತ್ಯ ವೈಭವವನ್ನು ನೋಡಲು ಎರಡು ಕಣ್ಣು ಸಾಲದು. ನೃತ್ಯಕ್ಕೆ ತಕ್ಕಂತೆ ಸಂಗೀತ….. ಸಂಗೀತಕ್ಕೆ ತಕ್ಕಂತೆ ನೃತ್ಯ…… ಇವೆರಡು ಒಂದು ನಾಣ್ಯದ ಎರಡು ಮುಖಗಳಂತೆ. ಇವೆಲ್ಲವುಗಳ ಜೊತೆಗೆ ವೇದಿಕೆ ಮುಂಭಾಗದಲ್ಲಿ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಕುಣಿತ ಎಲ್ಲವೂ ಕೂಡ ಮತ್ತಷ್ಟು ರೀತಿಯಲ್ಲಿ ಮುನ್ನುಡಿ ಬರೆದು ಇಡೀ ಕಾರ್ಯಕ್ರಮವನ್ನು ಸ್ವರ್ಗ ಲೋಕದ ದರ್ಶನ ಮಾಡಿಸಿಬಿಡುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದರೆ ಮೈಸೂರು ದಸರಾ…… ಮೈಸೂರು ದಸರಾ ಎಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸುಗ್ಗಿ!. ನೂರಾರು ವೇದಿಕೆಯಲ್ಲಿ ದಸರಾದ ನೆಪದಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ದಸರಾ ಒಂದು ಆದರೂ ಕಾರ್ಯಕ್ರಮಗಳು ನೂರಾರು!!. ಇದಕ್ಕೆಲ್ಲ ಮೊದಲ ಸಾಕ್ಷಿ ಎನ್ನುವಂತೆ ಮೈಸೂರು ದಸರಾ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ “ಯುವ ಸಂಭ್ರಮ” ದಸರಾ ಗೆ ಮುನ್ನುಡಿ ಬರೆಯುತ್ತದೆ!.
ಅದಕ್ಕೂ ಮುಂಚೆ ಈಗಾಗಲೇ ಮೈಸೂರಿಗೆ ಎರಡು ತಂಡಗಳಾಗಿ ಆನೆಗಳು ಆಗಮಿಸಿವೆ. ಈಗ ತಯಾರಿ ನಡೆಸುತ್ತಿವೆ. ಜೊತೆಗೆ ಮೈಸೂರು ದಸರಾ ಉದ್ಘಾಟನೆ ಮಾಡಲು ಉದ್ಘಾಟಕರ ಹೆಸರನ್ನು ಕೂಡ ಘೋಷಣೆ ಮಾಡಲಾಗಿದೆ.

ಇನ್ನೇನಿದ್ದರೂ ವಿಶ್ವವಿಖ್ಯಾತ ದಸರಾ ದ ವೈಭವದ ದಿನಗಳ ಕ್ಷಣಗಣನೆ ಆರಂಭವಾಗಿದೆ, ಉದ್ಯಾನ ನಗರಿ, ಅರಮನೆಗಳ ನಗರಿ ಮೈಸೂರಿನಲ್ಲಿ ರಸ್ತೆಯ ಎರಡು ಕಡೆ ವಿದ್ಯುತ್ ದೀಪಗಳಿಂದ ಅಲಂಕಾರ ನಡೆಯುತ್ತಿದೆ. ಪಾರಂಪರಿಕ ಕಟ್ಟಡಗಳು ಕೂಡ ವರ್ಣರಂಜಿತ ವಿದ್ಯುತ್ ನಿಂದಾಗಿ ತನ್ನ ವೈಭವವನ್ನು ಹೆಚ್ಚಿಸಿಕೊಳ್ಳುತ್ತಿವೆ.
ಈಗಾಗಲೇ ಅನೇಕ ರಸ್ತೆಗಳು ವಿದ್ಯುತ್ ಸಂಪರ್ಕ ಪಡೆದಿವೆ. ವರ್ಣ ರಂಜಿತ ದೀಪಗಳ ನಡುವೆ ಮರಗಳ ಚಿತ್ತಾರ ಹೃದಯಸ್ಪರ್ಶಿಯಾಗಿದೆ. ಪೂರ್ವ ತಯಾರಿ ಯೊಂದಿಗೆ ಈಗಾಗಲೇ ಅನೇಕ ಮೂಲಭೂತ ಸೌಕರ್ಯಗಳನ್ನು ಕೂಡ ಮಾಡಲಾಗುತ್ತಿದೆ. ವಿಶ್ವಮಟ್ಟದಲ್ಲೇ ಮೈಸೂರು ದಸರಾ ಪ್ರಖ್ಯಾತಿ. ಈ ಸಂದರ್ಭದಲ್ಲಿ ಯುವ ಸಂಭ್ರಮದ ಕಾರ್ಯಕ್ರಮಗಳು ದಿನದಿಂದ ದಿನಕ್ಕೆ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ.

ಸೋಮವಾರದಿಂದ (28.09.2026) ಯುವ ಸಂಭ್ರಮ ಉದ್ಘಾಟನೆಗೊಂಡಿದೆ. ಪ್ರಾರಂಭದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇವರನ್ನು ವಿದ್ಯಾರ್ಥಿಗಳ ಸಮೂಹ, ನಮ್ಮ ಯುವಜನತೆ ಕೇಕೆ, ಶಿಳ್ಳೆ, ಚಪ್ಪಾಳೆ, ಜೊತೆಗೆ ಮೊಬೈಲ್ ಟಾರ್ಚ್ ಬೆಳಕಿನ ನಡುವೆ ಗಾಯಕನ ಹಾಡಿಗೆ ಸ್ಪಂದಿಸಿದರು. ಅಪ್ಪು ನಟಿಸಿರುವ ರಾಜಕುಮಾರ ಚಿತ್ರದ “ಬೊಂಬೆ ಹೇಳುತೈತೆ ಹಾಡು……..” ರಿಷಬ್ ಶೆಟ್ಟಿ ನಟಿಸಿರುವ “ಕಾಂತಾರ” ಚಿತ್ರದ ಸಿಂಗಾರ ಸಿರಿಯೇ ……ಈ ಹಾಡುಗಳನ್ನು ಯಾವುದೇ ವೇದಿಕೆಯಲ್ಲಿ ಹಾಡಿದರೂ ಕೂಡ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾರೆ. ಇಲ್ಲಿ ಆದದ್ದು ಇದೇ ಸಂಭ್ರಮ!.
ಇವರ ಜೊತೆ ನಟಿ ಸಪ್ತಮಿ ಗೌಡ ಕೂಡ ಬಂದಿದ್ದರು. ಅವರು ಕೂಡ ಯುವ ಸಂಭ್ರಮಕ್ಕೆ ಸಾಕ್ಷಿಯಾದರು. ಜೊತೆಗೆ ಕಳೆದ ಬಾರಿಯ ದಸರಾದ ಸವಿ ಸವಿ ನೆನಪಿನ ಚಿತ್ತಾರವನ್ನು ನೆನಪಿಸಿಕೊಂಡರು. ಇವರುಗಳ ಜೊತೆಗೆ ಅನೇಕ ಗಣ್ಯರು ವೇದಿಕೆಯಲ್ಲಿ ನೆರೆದಿದ್ದರು.

ಕಾರ್ಯಕ್ರಮ ಯಶಸ್ವಿಯಾಗಿ ಉದ್ಘಾಟನೆಗೊಂಡಿತು. ಸುಮಾರು 19 ಕಾಲೇಜುಗಳ ತಂಡದಿಂದ ನೃತ್ಯ ಪ್ರದರ್ಶನದ ವೈಭವ ತೆರೆದುಕೊಂಡಿತು. ಹಾಡಿನೊಂದಿಗೆ….. ನೃತ್ಯದೊಂದಿಗೆ….. ಬಾನಂಗಳದಲ್ಲಿ ಬೆಳಕಿನ ನಡುವೆ ಜಿಟಿಜಿಟಿ ಮಳೆಯು ಕೂಡ ಆಗಮಿಸಿ ದಸರಾ ಯುವ ಸಂಭ್ರಮಕ್ಕೆ ಸ್ವಾಗತ ಕೋರಿತು!. ಡ್ರೋನ್ ಹೊತ್ತು ತಂದ ಎಲ್ಇಡಿ ಪರದೆ ಜನರಿಗೆ ಸ್ವಾಗತ ಕೋರುವ ವಿಡಿಯೋ ಪ್ರದರ್ಶನ ಮನ ಸೆಳೆಯಿತು.
ಕಾರ್ಯಕ್ರಮದ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಯಿತು. ಒಂದೊಂದು ಕಾಲೇಜು ತಂಡದ ನೃತ್ಯವೂ ಕೂಡ ಒಂದೊಂದು ರೀತಿಯಲ್ಲಿ ಮನಸೂರೆಗೊಂಡಿತು. ಕಾರ್ಯಕ್ರಮ ತಡವಾಗಿ ಆರಂಭಗೊಂಡರೂ ಕೂಡ ಪ್ರೇಕ್ಷಕರ ಕಾತುರತೆಗೆ ಕಡಿಮೆ ಏನು ಇರಲಿಲ್ಲ. ಸೋಮವಾರದಿಂದ ಪ್ರಾರಂಭವಾದ ಈ ಸಂಭ್ರಮ ಅಕ್ಟೋಬರ್ 5 ರವರೆಗೂ ಕೂಡ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಪ್ರತಿದಿನ ಸಂಜೆ 5:30 ರಿಂದ ರಾತ್ರಿ 10 ರವರೆಗೆ ನೃತ್ಯ ವೈಭವದ ಹೆಜ್ಜೆ ಗುರುತುಗಳು ತೆರೆದುಕೊಳ್ಳುತ್ತಿವೆ!.

ಈ “ಯುವ ಸಂಭ್ರಮ” ದಸರಾ ಪ್ರಾರಂಭವಾಗುವುದಕ್ಕಿಂತ ಮುಂಚೆ ಮುಗಿದುಹೋಗುತ್ತದೆ. ನಿಜ ಆದರೆ ಮತ್ತೆ ಅಕ್ಟೋಬರ್ 13 ರಿಂದ 17ರ ವರೆಗೆ “ಯುವದಸರಾ”ಮತ್ತೊಂದು ಯುವ ಸಮೂಹವನ್ನು ಸೆಳೆಯುವ ಪರಿ ಮತ್ತಷ್ಟು ರಂಗು ಮೂಡಿಸುತ್ತದೆ. ಐದು ದಿನಗಳ ಕಾಲ ಪ್ರತಿದಿನ ಸಂಜೆ ಹೊಸತನದ ಸಂಗೀತದ ರಸವನ್ನು ನೀಡುತ್ತದೆ. ಈ ಬಾರಿ ಯುವ ದಸರವನ್ನ ಪ್ರಭುದೇವ್ ಪ್ರಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಉದ್ಘಾಟಿಸುವರು. ಜೊತೆಗೆ ಪ್ರತಿದಿನ ಅನೇಕ ಸಂಗೀತ ಕಾರ್ಯಕ್ರಮದ ಜೊತೆಗೆ ನಟ- ನಟಿ, ಇನ್ನಿತರ ಕಲಾವಿದರು ಕೂಡ ಯುವದ ದಸರಾಗೆ ಸಾಕ್ಷಿಯಾಗಲಿದ್ದಾರೆ.
2026ರ ವಿಶ್ವವಿಖ್ಯಾತ “ಮೈಸೂರು ದಸರಾ” ದ ದಿನಗಣನೆ ಪ್ರಾರಂಭವಾಗಿದೆ. ಮೈಸೂರು ನಗರಕ್ಕೆ ಆನೆಗಳು ಆಗಮಿಸಿದಾಗಲೇ…….. ದಸರಾ ಉದ್ಘಾಟನೆ ಮಾಡುವವರ ಹೆಸರು ಘೋಷಣೆ ಮಾಡಿದಾಗಲೇ……. ದಸರಾದ ಎಲ್ಲಾ ಪ್ರಕ್ರಿಯೆಗಳು ಪ್ರಾರಂಭವಾಗುತ್ತವೆ!. ಈಗಾಗಲೇ ಆನೆಗಳು ತಯಾರಿ ನಡೆಸುತ್ತಿವೆ. ಬೆಳಿಗ್ಗೆ ಮತ್ತು ಸಂಜೆಯ ಆ ಒಂದು ಚಿತ್ರಣವನ್ನು ಮೈಸೂರಿಗೆ ಕಂಡುಂಬಿಸಿಕೊಳ್ಳುತ್ತಿದ್ದಾರೆ. ಸರತಿಯ ಸಾಲಿನಲ್ಲಿ ಆನೆಗಳು ಹೋಗುತ್ತಿದ್ದರೆ ರಸ್ತೆಯ ಎಡಬಲದಲ್ಲಿ ಎಲ್ಲರೂ ಫೋಟೋ ಕ್ಲಿಕ್ಕಿಸಿ, ಸೆಲ್ಫಿ ತೆಗೆದುಕೊಂಡು, ವಿಡಿಯೋ ಮಾಡಿ ಆ ಒಂದು ಕ್ಷಣವನ್ನ ಸವಿಯುತ್ತಾರೆ.

ಮೈಸೂರು ದಸರಾ ಎಂದರೆ ಸಾಕು, ಮೈ- ಮನಗಳಿಗೆ ಏನೋ ಒಂದು ರೀತಿಯಲ್ಲಿ ರೋಮಾಂಚನ! ದಸರಾದ ನೆಪದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿ!!. ಈಗಾಗಲೇ ನಿಗದಿಪಡಿಸಿರುವಂತೆ ಮೈಸೂರಿನ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ವಿಶ್ವ ವಿಖ್ಯಾತ ದಸರಾ ವನ್ನ ಬೆಟ್ಟದ ತಾಯಿ ಚಾಮುಂಡಿ ಬೆಟ್ಟದಲ್ಲಿ ವಿದ್ಯುಕ್ತವಾಗಿ ಉದ್ಘಾಟನೆಗೊಂಡ ನಂತರ ಎಲ್ಲಾ ಕಾರ್ಯಕ್ರಮಗಳಿಗೂ ಕೂಡ ಚಾಲನೆ ಸಿಗುತ್ತದೆ. ಇದು ಒಂದು ರೀತಿಯ ಸಂಪ್ರದಾಯ. ಈಗಾಗಲೇ ವಿಶ್ವವಿಖ್ಯಾತ ದಸರವನ್ನ ಅನೇಕ ಗಣ್ಯರು ಉದ್ಘಾಟಿಸಿದ್ದಾರೆ.

ಸಾಹಿತ್ಯ, ಸಂಗೀತ, ನಾಟಕ, ಚಲನಚಿತ್ರೋತ್ಸವ, ಜಾನಪದ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಗ್ರಾಮೀಣ ದಸರಾ, ರೈತರ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಕವಿಗೋಷ್ಠಿ, ಬೊಂಬೆ ಪ್ರದರ್ಶನ, ಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ ಹೀಗೆ ಒಂದೇ ಎರಡೇ? ದಸರಾ ಒಂದಾದರೂ ಕಾರ್ಯಕ್ರಮಗಳು ನೂರಾರು! ಹೊಸ ವರ್ಷವೂ ಹಲವು ಕಾರ್ಯಕ್ರಮಗಳು ಸೇರ್ಪಡೆಗೊಳ್ಳುತ್ತವೆ.
ವೈವಿಧ್ಯಮಯ ವೇದಿಕೆಗಳಲ್ಲಿ ಇವುಗಳನ್ನೆಲ್ಲ ಕಣ್ತುಂಬಿಸಿಕೊಳ್ಳುವುದೇ ಸೋಜಿಗ!. ಇವೆಲ್ಲವುಗಳ ನಡುವೆ ಮೈಸೂರು “ನವ ವಧುವಿನಂತೆ” ಸಿಂಗಾರ ಗೊಳ್ಳುತ್ತಿದೆ!. ರಸ್ತೆಯ ಇಕ್ಕಡೆಗಳಲ್ಲಿ ಸಾಲಂಕೃತ ವರ್ಣ ರಂಜಿತ ವಿದ್ಯುತ್ ದೀಪಗಳ ಅಲಂಕಾರ ಕಣ್ಮನ ಸೆಳೆಯುತ್ತದೆ. ದಸರಾದ ನೆಪದಲ್ಲಿ ಇಡೀ ನಗರವೇ ಸ್ವಚ್ಛವಾಗುತ್ತಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ.

ಈಗಾಗಲೇ ನಗರಕ್ಕೆ ಆಗಮಿಸಿರುವ ಗಜ ಪಡೆಗಳು ದಿನಾಲು ಬೆಳಿಗ್ಗೆ ಮತ್ತು ಸಂಜೆ ಬನ್ನಿಮಂಟಪದವರೆಗೆ ತರಬೇತಿ ಪಡೆಯುತ್ತಿವೆ. ಆ ದೃಶ್ಯವನ್ನು ನೋಡುವುದೇ ಒಂದು ರೀತಿಯಲ್ಲಿ ಕಣ್ಮನಗಳಿಗೆ ದಸರಾದ ವೈಭವ ನೆನಪು ಮೂಡಿಸುತ್ತದೆ. ಎಂದು ಹಲವರು ಅಭಿಪ್ರಾಯ ಪಡುತ್ತಾರೆ.
ಮೈಸೂರಿಗೆ ಆಗಲೇ ನೆಂಟರಿಷ್ಟರೆಲ್ಲ ಆಗಮಿಸುತ್ತಿದ್ದಾರೆ. ಶಾಲಾ- ಕಾಲೇಜುಗಳಿಗೂ ಈಗ ಪರೀಕ್ಷೆ ಶುರುವಾಗಿದೆ ಇನ್ನೇನು ಮುಗಿಯುವ ಹಂತದಲ್ಲಿದೆ. ದಸರಾ ರಜೆ ಸಿಗುತ್ತದೆ. ಇದರಿಂದ ಮಕ್ಕಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಅವರು ತಮ್ಮ ದಸರಾ ರಜೆಯ ಸಂಭ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಮೈಸೂರು ದಸರಾದಲ್ಲಿ ಒಂದು ಸುತ್ತು ಸುತ್ತಿಕೊಂಡು ಬರೆದಿದ್ದರೆ ಸಮಾಧಾನವಾಗುವುದಿಲ್ಲ. ಟಾಪಿಕ್ ಕಿರಿಕಿರಿ ಇದ್ದದ್ದೇ!. ಇವೆಲ್ಲವನ್ನ ಮೀರಿ ಮೈಸೂರಿನ ಸೊಬಗನ್ನ ಸವಿಯುತ್ತಾರೆ.
ದಸರಾದ ಸಂದರ್ಭದಲ್ಲಿ ಅನೇಕ ಕ್ರೀಡೆಗಳು ನಡೆಯುತ್ತವೆ. ದಸರಾ ಕುಸ್ತಿ, ವಸ್ತು ಪ್ರದರ್ಶನ, ಅಲ್ಲದೆ ಹಲವು ಬಡಾವಣೆಗಳಲ್ಲೂ ಕೂಡ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಪರ್ಧೆಗಳು ನಡೆಯುತ್ತವೆ.

ಮೊದಲೇ ಹೇಳಿದಂತೆ ದಸರಾಕ್ಕೆ “ಮುನ್ನುಡಿ” ಎನ್ನುವಂತೆ “ಯುವ ಸಂಭ್ರಮ!” ಯುವ ಮನಸ್ಸುಗಳ ಪಿಸು ಮಾತಾಗಿ, ವೈವಿಧ್ಯಮಯ ನೃತ್ಯಗಳೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ರಂಗೇರಿಸುವ ಉತ್ಸವ ವಾಗುತ್ತಿದೆ.
ಈಗಾಗಲೇ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಯುವಕ ಯುವತಿಯರ ನಾಡಿ-ಮಿಡಿತದಂತೆ ಕಣ್ಮನ ಸೆಳೆಯುವ ಯುವ ಸಂಭ್ರಮ ಪ್ರಾರಂಭವಾಗಿದೆ. ಕಳೆದ ಈ ಬಾರಿಯೂ ಕೂಡ ಮಳೆರಾಯನ ಆಗಮನವಾಗಿತ್ತು.
ಈ ಕಾರ್ಯಕ್ರಮದಲ್ಲಿ ದಾಖಲೆ ರೀತಿಯಲ್ಲಿ 400 ರಿಂದ 500 ಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ!. ವರ್ಷದಿಂದ ವರ್ಷಕ್ಕೆ ಕಾಲೇಜು ತಂಡಗಳು ಭಾಗವಹಿಸುವುದು ಹೆಚ್ಚಾಗುತ್ತಿದೆ. ಸಿಕ್ಕ ವೇದಿಕೆಯನ್ನ ಕಾಲೇಜು ಮಕ್ಕಳು ಉಪಯೋಗಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಕಾಲೇಜು ತಂಡಗಳು ಭಾಗವಹಿಸುತ್ತಿವೆ. ಉದ್ಯಾನಗರ ಮೈಸೂರಿನಲ್ಲೇ ಹಲವು ಕಾಲೇಜು ತಂಡಗಳಿವೆ. ಅದಲ್ಲದೆ ನಮ್ಮ ರಾಜ್ಯದ ಹಲವು ಜಿಲ್ಲೆಗಳಿಂದಲೂ ಕೂಡ ತಂಡಗಳು ಆಗಮಿಸಿವೆ. 9 ದಿನಗಳ ಕಾಲ ಸಾಂಸ್ಕೃತಿಕ ಸಂಭ್ರಮ ಮೈಸೂರಿನಲ್ಲಿ ಕಳೆಗಟ್ಟಲಿದೆ.
ಈ ಕಾರ್ಯಕ್ರಮದ ನಗರದ ಹಲವು ಕಚೇರಿಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಪೊಲೀಸರು ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ವಿದ್ಯಾರ್ಥಿಗಳು ಎಲ್ಲರನ್ನೂ ಕೂಡ ನಿಯೋಜಿಸಲಾಗಿದೆ.

ಈ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರತಿಭೆಗೆ ಒಂದು ಸುಮಧುರ ವೇದಿಕೆಯಾಗಿದೆ. ಕಳೆದ ಬಾರಿಯ ಯುವ ಸಂಭ್ರಮ ಅತ್ಯಂತ ಯಶಸ್ವಿಯಾಗಿ ಯುವ ಮನಸ್ಸುಗಳ ಮನ ಸೆಳೆದಿತ್ತು. ನಾವೂ ಕೂಡ ದಸರಾ ಯುವ ಸಂಭ್ರಮದಲ್ಲೀ ಹತ್ತಿರದಿಂದ ಭಾಗವಹಿಸಿದ ಸಂಭ್ರಮ ಕಣ್ಣಿಗೆ ಕಟ್ಟಿದಂತಿದೆ. ಈ ಬಾರಿಯೂ ಕೂಡ ಮತ್ತಷ್ಟು ವಿನೂತನವಾಗಿ ಕಾರ್ಯಕ್ರಮ ರಂಗೇರಲಿದೆ.
ಪ್ರತಿವರ್ಷದಂತೆ ಈ ಬಾರಿಯೂ ಕೂಡ ಪ್ರಚಲಿತ ವಿಷಯಗಳನ್ನು ಒಳಗೊಂಡಂತೆ ಹಲವು ವಸ್ತು ವಿಷಯಗಳು ಯುವ ಸಂಭ್ರಮದಲ್ಲಿ ಸೇರ್ಪಡೆಯಾಗಿವೆ.
ಇವೆಲ್ಲವುಗಳ ನಡುವೆ ಜನಪದದ ಸೊಗಡು, ಚಿತ್ರಗೀತೆಗಳಿಗೆ ತಕ್ಕಂತೆ ಕುಣಿತ….. ಒಟ್ಟಾರೆ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಎಲ್ಲೆಲ್ಲಿ ನೋಡಿದರೂ ಯುವ ಸಮೂಹವನ್ನೇ ಕಾಣಬಹುದಾಗಿದೆ!. ನಾವು ಶಾಲಾ- ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದ ನೆನಪು ಮನದಲ್ಲಿ ಮೂಡುತ್ತದೆ!. ಬಾಲ್ಯ ಮತ್ತೆ ಮರುಕಳಿಸುತ್ತದೆ!!.

ಒಟ್ಟಿನಲ್ಲಿ ನಮ್ಮ ಯುವಜನತೆಯ ನೃತ್ಯ ದ ಪರಿಕಲ್ಪನೆ ಯೊಂದಿಗೆ ತಮ್ಮ ಪ್ರತಿಭೆಯನ್ನು ಮೆರೆಯುತ್ತಾರೆ ಒಂದು ಕಾಲೇಜು ತಂಡ ಮತ್ತೊಂದು ಕಾಲೇಜು ತಂಡವನ್ನು ಗೆಲ್ಲಬೇಕು ಎನ್ನುವ ಸ್ಪರ್ಧಾಮನವೂ ಕೂಡ ಹೆಚ್ಚುತ್ತಿದೆ. ನಮ್ಮ ನಾಡು- ನುಡಿ- ಸಂಸ್ಕೃತಿಯ ವೈಭವವನ್ನು ಮತ್ತೆ ಮರಿಕಳಿಸುವಂತೆ ಮಾಡುತ್ತಿದ್ದಾರೆ.
“ಯುವ ಸಂಭ್ರಮ” ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಎಲ್ಲರ ಮನಸ್ಸನ್ನು ಸೂರೆಗೊಂಡು ಆಬಾಲರುದ್ಧರಾದಿಯಾಗಿ ಒಂದಲ್ಲ ಒಂದು ರೀತಿಯಲ್ಲಿ ಮುದ ನೀಡುತ್ತಿದೆ.
ದಸರಾದ ನೆಪದಲ್ಲಿ ಮೈಸೂರು ಹಲವಾರು ಕಾರ್ಯಕ್ರಮಗಳೊಂದಿಗೆ ಮೈಸೂರಿಗರಿಗೆ ಅಷ್ಟೇ ಅಲ್ಲದೆ, ಹೊರ ಜಿಲ್ಲೆ, ರಾಜ್ಯ, ವಿದೇಶಗಳಿಂದಲೂ ಕೂಡ ಎಲ್ಲರ ಮೆಚ್ಚುಗೆ ಪಾತ್ರವಾಗುತ್ತಿದೆ.

ಮೈಸೂರು ಪೇಟ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ವೀಳ್ಯದೆಲೆ, ಮೈಸೂರು ಗಂಧದ ಗಮ, ಅರಮನೆಯ ನಗರಿ, ಮೈಸೂರು ಸಿಲ್ಕ್, ಇವೆಲ್ಲದರ ಜೊತೆಗೆ “ಮೈಸೂರು ದಸರಾ” ಕೂಡ ತನ್ನತನವನ್ನು ಕಾಯ್ದುಕೊಂಡು, ಮೈಸೂರನ್ನು ವಿಶ್ವ ಮಟ್ಟದೆಡೆಗೆ ಕೊಂಡೊಯ್ಯುತ್ತಿದೆ.
ಈ ಸಂದರ್ಭದಲ್ಲಿ ಮೈಸೂರಿಗರಾದ ನಾವು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಟ್ಟು, ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿ, ಮೈಸೂರಿನಲ್ಲಿ ನಡೆಯುವ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಂದರೆ ಆಗದಂತೆ ನೋಡಿಕೊಂಡು, ಮೈಸೂರಿನ ಹೆಸರನ್ನು ಉಳಿಸೋಣ.
ಎಲ್ಲರಿಗೂ ಮುಂಚಿತವಾಗಿ ಬರಲಿರುವ ವಿಶ್ವವಿಖ್ಯಾತ “ಮೈಸೂರು ದಸರಾದ” ಹಾರ್ದಿಕ ಶುಭಾಶಯಗಳು.

ಎನ್ ಎಸ್ ಎಸ್ ನ ಮಿನುಗುತಾರೆ ಮಾನಸ ಸಿ.ಆರ್… ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯ ವಿದ್ಯಾರ್ಥಿನಿ!








