ಸರಗೂರು(ದಾಸೇಗೌಡ): ಮೈಸೂರು ಜಿಲ್ಲೆಯ ಸರಗೂರು, ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಹುಲಿಗಳು ಕಾಣಿಸಿಕೊಂಡು ಜನರ ಮೇಲೆ ದಾಳಿ ಮಾಡುತ್ತಿರುವುದರಿಂದ ಈ ಭಾಗದ ಗ್ರಾಮೀಣ ಜನರು ಭಯದಲ್ಲಿಯೇ ದಿನಕಳೆಯುವಂತಾಗಿದೆ.
ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರು ಮನೆಯಿಂದ ಹೋದರೆ ಸುರಕ್ಷಿತವಾಗಿ ಮನೆ ತಲುಪುತ್ತೇವೆ ಎನ್ನುವ ನಂಬಿಕೆಯೇ ಇಲ್ಲದಾಗಿದೆ. ಯಾವಾಗ ಯಾವ ಪ್ರಾಣಿಗಳು ನಮ್ಮ ಮೇಲೆ ಹಾಗೂ ಜಾನುವಾರಗಳ ಮೇಲೆ ದಾಳಿ ಮಾಡಿ ಬಿಡುತ್ತವೆಯೋ ಎಂಬ ಭಯದಲ್ಲಿಯೇ ಓಡಾಡುವಂತಾಗಿದೆ.
ದನಕರು, ಮೇಕೆ, ನಾಯಿ ಮೊದಲಾದ ಸಾಕುಪ್ರಾಣಿಗಳ ಮೇಲೆ ಹುಲಿ, ಚಿರತೆಗಳು ದಾಳಿ ಮಾಡುತ್ತಿದ್ದು, ಕೆಲವೊಮ್ಮೆ ಜನರ ಮೇಲೆಯೇ ದಾಳಿ ಮಾಡಿ ಪ್ರಾಣ ತೆಗೆಯುತ್ತಿವೆ. ಇನ್ನು ಇವುಗಳನ್ನು ಸೆರೆಹಿಡಿಯುವುದೇ ಸವಾಲ್ ಆಗುತ್ತಿವೆ. ಕೆಲವೊಮ್ಮೆ ಕಾರ್ಯಾಚರಣೆ ಸಂದರ್ಭ ಸಿಬ್ಬಂದಿಗಳ ಮೇಲೆ ದಾಳಿ ಮಾಡುತ್ತಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಗೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಮುಳ್ಳೂರು ಗ್ರಾಮದ ರೈತ ಕಿರಣ್ ಅವರ ಮೇಲೆ ಹುಲಿ ದಾಳಿ ಮಾಡಿತ್ತು. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಹಾಗೂ ಹುಲಿ ಸೆರೆ ಕಾರ್ಯಾಚರಣೆಗಾಗಿ ತೆರಳಿದ್ದ ಅರಣ್ಯ ಇಲಾಖೆ ಮತ್ತು ಎಸ್‌ಟಿಎಫ್ ಸಿಬ್ಬಂದಿಗಳ ಮೇಲೆ ಮತ್ತೆ ಹುಲಿ ದಾಳಿ ನಡೆಸಿರುವ ಘಟನೆ ನಡೆದಿದ್ದು, ಈ ವಿಚಾರ ತಿಳಿದ ನಂತರ ಈ ವ್ಯಾಪ್ತಿಯ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಸೋಮವಾರ ಸಂಜೆ ಮುಳ್ಳೂರು ಗ್ರಾಮದ ಸಮೀಪ ಪರಿಶೀಲನೆ ನಡೆಸುತ್ತಿದ್ದ ವೇಳೆ ಎಸ್‌ಟಿಎಫ್ ಗಾರ್ಡ್ ಕುಮಾರ್ (37) ಅವರ ಮೇಲೆ ಏಕಾಏಕಿ ಎರಗಿದ ಹುಲಿ, ಅವರ ಎಡಗೈ ತೋಳಿನ ಭಾಗಕ್ಕೆ ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡ ಕುಮಾರ್ ಅವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ವೇಳೆ ಜಿಲ್ಲಾ ಅರಣ್ಯಾಧಿಕಾರಿ (ಡಿಸಿಎಫ್) ನಂದೀಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಪರಮೇಶ್ ಡಿ., ಎಸ್‌ಟಿಎಫ್ ಎಸಿಎಫ್ ಮಂಜುನಾಥ್, ನುಗು ವಲಯದ ಅರಣ್ಯಾಧಿಕಾರಿ ಅನಿತ್ ರಾಜ್, ಕಲ್ಕೆರೆ ವಲಯದ ಅರಣ್ಯಾಧಿಕಾರಿ ರಾಜೇಶ್ ಸೇರಿದಂತೆ ಅರಣ್ಯ ಇಲಾಖೆ ಹಾಗೂ ಹ್ಯಾಂಡ್ ಪೋಸ್ಟ್ ನ ಎಸ್‌ಟಿಎಫ್ ಸಿಬ್ಬಂದಿ ಸ್ಥಳದಲ್ಲಿದ್ದರು. ಸ್ಥಳದಲ್ಲಿ ಡ್ರೋನ್ ಕ್ಯಾಮರಾ ಮೂಲಕ ಕಾರ್ಯಾಚರಣೆ ನಡೆಯುತ್ತಿದ್ದು, ಕೊಬಿಂಗ್ ಗಾಗಿ ಸಾಕಾನೆಗಳಾದ ಅಭಿಮನ್ಯು,ಮಹೇಂದ್ರ ಆನೆಗಳನ್ನು ಕರೆಯಿಸಿಕೊಂಡು ಹುಲಿಯನ್ನು ಸೆರೆಹಿಡಿಯಲು ಶ್ರಮವಹಿಸಲಾಗುತ್ತಿದೆ.
ಇನ್ನು ಘಟನೆಯಿಂದ ಆತಂಕಗೊಂಡಿರುವ ಮುಳ್ಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು, ಹುಲಿಯನ್ನು ಕೂಡಲೇ ಸೆರೆಹಿಡಿದು ಜನ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಅರಣ್ಯ ಇಲಾಖೆ ಹುಲಿಯ ಚಲನವಲನದ ಮೇಲೆ ನಿಗಾ ವಹಿಸಿದ್ದು, ಬೋನು ಅಳವಡಿಕೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಸೆರೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.








