ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಿಂದ ಮೈಸೂರಿನ ಕಡೆಗೆ ಬರುತ್ತಿದ್ದ ಬಸ್ ನ ಮುಂದಿನ ಚಕ್ರ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ- ದೊಡ್ಡಿಂದುವಾಡಿ ಮಾರ್ಗದಲ್ಲಿ ಸಿಡಿದು ಪಲ್ಟಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿ 40 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಅಪಘಾತದಲ್ಲಿ ಕೊಳ್ಳೇಗಾಲ ಪಟ್ಟಣದ ಪುಟ್ಟನಂಜಮ್ಮ (60) ಮತ್ತು ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ನಿವಾಸಿ ಮಹೇಶ್ (55) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದಂತೆ ಗಾಯಗೊಂಡ 40 ಮಂದಿಗೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇಷ್ಟಕ್ಕೂ ಈ ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ನೋಡಿದ್ದೇ ಆದರೆ KA 57 F 3964 ಸಂಖ್ಯೆಯ ಕೆ.ಎಸ್ ಆರ್ ಟಿ .ಸಿ ಬಸ್ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುವಾಗ ಮಧುವನಹಳ್ಳಿ- ದೊಡ್ಡಿಂದುವಾಡಿ ಮಾರ್ಗದಲ್ಲಿ ಬಸ್ ಮುಂಭಾಗದ ಚಕ್ರ ಸಿಡಿದು ಚಾಲಕನ ನಿಯಂತ್ರಣಕ್ಕೆ ಸಿಗದೇ ರಸ್ತೆಬದಿಯ ಹಳ್ಳಕ್ಕೆ ಪಲ್ಟಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ ಇಬ್ಬರು ಮೃತಪಟ್ಟರೆ, ಸುಮಾರು 40 ಮಂದಿ ಗಾಯಗೊಂಡಿದ್ದಾರೆ.
ಹುಣ್ಣಿಮೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಮಂದಿ ತೆರಳಿದ್ದು, ವಿಶೇಷ ಪೂಜಾ ಉತ್ಸವದಲ್ಲಿ ಭಾಗಿಯಾಗಿ ಆ ನಂತರ ದೇವರ ದರ್ಶನ ಪಡೆದು ಬಸ್ ನಲ್ಲಿ ವಾಪಸ್ ಬರುತ್ತಿದ್ದವರು ಎನ್ನಲಾಗಿದೆ. ಸಾಮರ್ಥ್ಯಕ್ಕೂ ಮೀರಿದ ಸುಮಾರು 67 ಮಂದಿಯಷ್ಟು ಪ್ರಯಾಣಿಕರು ಬಸ್ ನಲ್ಲಿದ್ದರು ಎಂದು ಹೇಳಲಾಗಿದೆ.

ಅಪಘಾತ ನಡೆದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್, ಕೊಳ್ಳೇಗಾಲ ತಹಸಿಲ್ದಾರ್ ಬಸವರಾಜು, ಇತರ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಮುತ್ತುರಾಜ್ ಆಸ್ಪತ್ರೆಗೂ ತೆರಳಿ ಗಾಯಾಳುಗಳನ್ನು ವಿಚಾರಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.
ವಿಶೇಷ ದಿನಗಳಂದು ಈ ಮಾರ್ಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಸ್ ಗಳಲ್ಲಿ ತೆರಳುತ್ತಿದ್ದು ಬಸ್ ಗಳ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ಕರೆದೊಯ್ಯುವುದು ಅನಿವಾರ್ಯವಾಗಿದೆ. ಸರ್ಕಾರ ವಿಶೇಷ ದಿನಗಳಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಬಸ್ ಗಳ ಮೇಲೆ ಆಗುತ್ತಿರುವ ಹೊರೆಯನ್ನು ಕಡಿಮೆ ಮಾಡಿ ಅಪಘಾತಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ.








