ಹುಣಸೂರು(ನಂಜಾಪುರ ಮನುಕುಮಾರ್): ಕನ್ನಡ ಚಲನಚಿತ್ರ ಸಾಹಿತ್ಯ, ವಚನ ಸಾಹಿತ್ಯ, ಭಾವಗೀತೆಗಳು ಮುಂತಾದವು ಕನ್ನಡ ಸಾರಸ್ವತ ಲೋಕದ ಅದ್ಭುತ ಮುತ್ತುಗಳಾಗಿವೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಹಾಗೂ ಗಾಯಕ ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಲೇಜಿನ ಐಕ್ಯೂಎಸಿ ವಿಭಾಗ ಹಾಗೂ ಮೈಸೂರಿನ ಹಂಸಧ್ವನಿ ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಗೀತ ಸೌಂದರ್ಯ ಮಾಧುರ್ಯ ಗಾಯನ ಕೇಂದ್ರಿತ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಸಾರಸ್ವತ ಲೋಕ ಮತ್ತಷ್ಟು ಬೆಳಗಲು, ಕನ್ನಡಿಗರ ಮನಸು ಗೆಲ್ಲಲು ಕನ್ನಡ ಚಲನಚಿತ್ರ ಸಾಹಿತ್ಯದ ಕೊಡುಗೆ ಕಡಿಮೆಯೇನಲ್ಲ.
ಮುಗ್ಧ, ಸುಂದರ ಪ್ರೀತಿಯನ್ನು ವ್ಯಕ್ತಪಡಿಸುವ, ಬದುಕಿನ ಬವಣೆ ತೋರುವ, ಜತೆಯಲ್ಲಿ ಕನ್ನಡ ಕವಿಗಳ ಹಾಡುಗಳನ್ನು ಚಲನಚಿತ್ರಗಳಲ್ಲಿ ಬಳಸಿಕೊಂಡು ಹಾಡಿಗೆ ಮೆರುಗು ನೀಡಿದ ಹೆಮ್ಮೆ ಚಲನಚಿತ್ರ ಕ್ಷೇತ್ರಕ್ಕೆ ಇದೆ ಎಂದರು. ಎಲೆಮರೆ ಕಾಯಿಯಂತೆ ಪ್ರತಿಭೆಯನ್ನು ಅಕ್ಷರಗಳಲ್ಲಿ ಇಳಿಸಿ ಸುಮ್ಮನೆ ಇದ್ದ ಕವಿಗಳನ್ನು ನಾಡಿನ ಕನ್ನಡಿಗರ ನಾಲಿಗೆ ಯಲ್ಲಿ ಹರಿದಾಡುವಂತೆ ಮಾಡಿದ್ದು ಭಾವಗೀತೆಗಳ ಸಂಯೋಜಕರು, ಗಾಯಕರು ಮತ್ತು ಸಂಗೀತಗಾರರು. ಇನ್ನು ಯಾವುದೇ ಭಾಷೆಯಲ್ಲೂ ಕಾಣಸಿಗದ ವಚನ ಪ್ರಾಕಾರ ಕನ್ನಡದ ಮತ್ತೊಂದು ಹೆಮ್ಮೆ. ಇದಕ್ಕೂ ರಾಗ, ತಾಳಗಳನ್ನು ಜೋಡಿಸಿ ಗಾಯನ ಮಾಡಿದ ಖ್ಯಾತಿ ಕನ್ನಡ ಮನಸುಗಳದ್ದಾಗಿದೆ. ಹೀಗಾಗಿ ಸಾಹಿತ್ಯದ ಸೌಂದರ್ಯ ಗಾಯನದ ಮಾಧುರ್ಯದೊಂದಿಗೆ ಮಿಳಿತವಾಗಿ ಕನ್ನಡ ಸಾರಸ್ವತ ಲೋಕವನ್ನು ಎತ್ತರ ಕ್ಕೇರಿಸಿದೆ ಎಂದರು.

ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್.ರಾಶಿ ಮಾತ ನಾಡಿ, ಕನ್ನಡ ಸಾಹಿತ್ಯ ಸತ್ವ ಮತ್ತು ಸಂಸ್ಕೃತಿ ತತ್ವ ಪ್ರಧಾನವಾದ ಜನಪದ ಗೀತೆ, ಭಾವಗೀತೆ, ವಚನ, ಕೀರ್ತನೆ, ಚಿತ್ರಗೀತೆ ಗಳು ಜನರ ನಿತ್ಯಬದುಕಿನಲ್ಲಿ ಹಾಸುಹೊಕ್ಕಾ ಗಿದೆ. ಕನ್ನಡ ಭಾಷೆಯ ಹಿರಿಮೆ, ಗರಿಮೆಯನ್ನು ಜಗತ್ತಿಗೆ ತೋರಿಸಿವೆ. ಕನ್ನಡ ಭಾಷೆ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಕನ್ನಡದ ವಿಸ್ತಾರವಾದ ವಿವಿಧ ವಿಭಾಗ ಗಳನ್ನೂ ಸೂಕ್ಷ್ಮವಾಗಿ ಗಮನಿಸಿದಲ್ಲಿ ಇಂತಹ ವಿಶೇಷತೆ ಗಳನ್ನು ಕಾಣಲು ಹೆಮ್ಮೆಪಡಲು ಸಾಧ್ಯ ಎಂದರು.
ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಗಾಯಕ ಪ್ರೊ.ಎಸ್.ಮಲ್ಲಣ್ಣ, ಗಾಯಕಿ ದಿವ್ಯಾ ಸಚ್ಚಿದಾನಂದ ಕನ್ನಡದ ಚಲನಚಿತ್ರಗೀತೆ, ಕೀರ್ತನೆ, ವಚನಗಳು, ಜನಪದಗೀತೆ ಮತ್ತು ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ವಿದ್ಯಾರ್ಥಿಗಳ ಮನಗೆದ್ದರು. ಮೈಸೂರು ಕೃಷ್ಣಮೂರ್ತಿ ಗೀತೆಗೊಂದು ಮಾತಿನ ಮೂಲಕ ವ್ಯಾಖ್ಯಾನ ಮಾಡಿದರು. ಪ್ರಾಂಶುಪಾಲ ಡಾ.ಸ್ವಾಮಿ, ಹಂಸಧ್ವನಿ ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ ಪ್ರೊ.ಕೆ. ಆರ್.ಪ್ರೇಮಲೀಲಾ, ಸಹಾಯಕ ಪ್ರಾಧ್ಯಾಪಕ ಆರ್. ಕುಮಾರ್, ಡಾ.ಬೋರಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವಡ್ಡಂಬಾಳು ರಮೇಶ್ ಹರ್ಷವರ್ಧನ್, ವಿದ್ಯಾರ್ಥಿಗಳು ಇದ್ದರು.








